ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸ್ಥಾಪನೆಗೆ ಒತ್ತಾಯ

Source: so news | By MV Bhatkal | Published on 16th June 2019, 7:39 PM | Coastal News | Don't Miss |

ಕಾರವಾರ: ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ‌ ಸೆಂಟರ್ ಹಾಗೂ ಪ್ರತಿ ತಾಲ್ಲೂಕಿಗೆ ತಲಾ ಒಂದರಂತೆ ಸುಸಜ್ಜಿತ ಆಂಬುಲೆನ್ಸ್ ಸೌಲಭ್ಯವನ್ನು ತುರ್ತಾಗಿ ಒಗಿಸಬೇಕು’ ಎಂದು ಆಗ್ರಹಿಸಿ, ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕೆಲವು ಯುವಕರು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಕಾರವಾರದ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ, ‘ಜಿಲ್ಲೆಯಲ್ಲಿ ಎಲ್ಲೂ ಸುಸಜ್ಜಿತ ಆಸ್ಪತ್ರೆ ಇಲ್ಲ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇದ್ದೂ ಇಲ್ಲದಂತಾಗಿದೆ. ಅಪಘಾತಗಳು ಸಂಭವಿಸಿದಾಗ ಅಥವಾ ತುರ್ತ ಸಂದರ್ಭದಲ್ಲಿ ಜಿಲ್ಲೆಯ ಜನರು ನೂರಾರು ಕಿ.ಮೀ. ದೂರದ ಬಾಂಬೋಲಿಯಮ್, ಮಂಗಳೂರು, ಹುಬ್ಬಳ್ಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಆಸ್ಪತ್ರೆ ತಲುಪುವುದರ ಒಳಗೇ ಅದೆಷ್ಟೋ ಮಂದಿ ಸಾವನ್ನಪ್ಪಿರುವ ಉದಾಹರಣೆ ಇದೆ. ಹೀಗಾಗಿ, ಇದನ್ನು ನಿವಾರಿಸಲು ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಳಂಬವಾಗುವುದರಿಂದ, ಅದಕ್ಕೂ ಮುನ್ನ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಅನುಕೂಲ ಆಗುವಂತೆ ತುರ್ತಾಗಿ ಎರಡು ಟ್ರಾಮಾ ಸೆಂಟರ್‌ಗಳನ್ನು ಸ್ಥಾಪಿಸಲೇಬೇಕು. ಇದರೊಂದಿಗೆ, ಪ್ರತಿ ತಾಲ್ಲೂಕಿಗೆ ತಲಾ ಒಂದರಂತೆ ಸುಸಜ್ಜಿತ ವೆಂಟಿಲೇಟರ್ ಹೊಂದಿರುವ ಆಂಬುಲೆನ್ಸ್ ಅನ್ನೂ ಒದಗಿಸಬೇಕು. ಜತೆಗೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ತಜ್ಞ ವೈದ್ಯರನ್ನು ನೇಮಕ ಮಾಡಿ, ಅದನ್ನು ಿನ್ನಷ್ಟು ಅಭಿವೃದ್ಧಿಪಡಿಸಬೇಕು’ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮನವಿ ಸ್ವೀಕರಿಸಿದ ಸಚಿವರು, ಆಸ್ಪತ್ರೆಗಾಗಿ ಇತ್ತೀಚಿಗೆ ಯುವಕರು ನಡೆಸಿದ ಟ್ವಿಟರ್ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಯುವಕರು ಮುನ್ನೆಲೆಗೆ ಬಂದು, ಅಭಿವೃದ್ಧಿ ಪರವಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ’ ಎಂದ ಅವರು, ‘ಆಸ್ಪತ್ರೆ ಸ್ಥಾಪನೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು’ ಎಂದೂ ಭರವಸೆ ನೀಡಿದರು.

ಈ ವೇಳೆ ಪ್ರಶಾಂತ್ ಕರ್ಕಿ, ಮಂಜು ದೀವಗಿ, ಗಜೇಂದ್ರ ಪಟಗಾರ, ಸಿದ್ದಾರ್ಥ ನಾಯಕ, ಶಿವಾನಂದ ಪಟಗಾರ, ಪ್ರೇಮ ಭಂಡಾರಿ
ವಿಶ್ವನಾಥ ಹೊದ್ಕೆ, ಗಜೇಂದ್ರ ಬಿಣಗೇಕರ್, ಅಭಿಶೇಕ ಕಳಸ, ರಾಹುಲ್ ಶೆಟ್ಟಿ ಇದ್ದರು.
ಪಕ್ಷಾತೀತವಾಗಿ ರಾಜಕಾರಣಿಗಳ ಒತ್ತಾಯ
ಇತ್ತ ಕುಮಟಾದ ಶಾಸಕ ದಿನಕರ ಶೆಟ್ಟಿ, ಜೆಡಿಎಸ್ ಮುಖಂಡರಾದ ಪ್ರದೀಪ ನಾಯಕ, ಸೂರಜ್ ನಾಯ್ಕ ಸೋನಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಗಾಯತ್ರಿ ಗೌಡ ಸೇರಿದಂತೆ ಅನೇಕ ರಾಜಕಾರಣಿಗಳೂ ಆಸ್ಪತ್ರೆ ಸ್ಥಾಪನೆಯ ಬಗ್ಗೆ ಸಚಿವರಿಗೆ ಪಕ್ಷಾತೀತವಾಗಿ ಮನವಿ ಸಲ್ಲಿಸಿ ಒತ್ತಾಯಿಸಿದರು.

‘ದಕ್ಷಿಣ ಕನ್ನಡ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿವೆ. ಆದರೆ, ನಮ್ಮಲ್ಲೇ ಇಲ್ಲ. ತುರ್ತು ಚಿಕಿತ್ಸೆಗೂ ಜೀವ ಹಿಡಿದುಕೊಂಡು ಮಣಿಪಾಲ, ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ’ ಎಂದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...