ಹೊಸದಿಲ್ಲಿ: ಮೀಸಲಾತಿ ಎಷ್ಟು ತಲೆಮಾರುಗಳಿಗೆ ಮುಂದುವರಿಯಲಿದೆ?

Source: VB | By S O News | Published on 21st March 2021, 9:10 PM | National News |

ಹೊಸದಿಲ್ಲಿ: ಶುಕ್ರವಾರ ಮರಾಠಾ ಮೀಸಲಾತಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಇನ್ನೂ ಎಷ್ಟು ತಲೆಮಾರುಗಳಿಗೆ ಮೀಸಲಾತಿ ಮುಂದುವರಿಯಲಿದೆ ಎಂದು ಪ್ರಶ್ನಿಸಿತಲ್ಲದೆ, ಮೀಸಲಾತಿಯ ಶೇ.50ರ ಗರಿಷ್ಠ ಮಿತಿಯನ್ನು ತೆಗೆದುಹಾಕಿದರೆ ಉದ್ಭವಿಸುವ ಅಸಮಾನತೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿತು.

ಬದಲಾಗಿರುವ ಪರಿಸ್ಥಿತಿಗಳಲ್ಲಿ ಮೀಸಲಾತಿಯ ಮೇಲಿನ ಗರಿಷ್ಠ ಮಿತಿ ಕುರಿತು ಮಂಡಲ್ ತೀರ್ಪಿನ ಪುನರ್ ಪರಿಶೀಲನೆಯ ಅಗತ್ಯವಿದೆ ಎಂದು ಮಹಾರಾಷ್ಟ್ರ ಪರ ಹಿರಿಯ ವಕೀಲ ಮುಕುಲ್ ರೋಹಟ್ಟಿ ಅವರು ಬಲವಾಗಿ ವಾದಿಸಿದರು. ಮಹಾರಾಷ್ಟ್ರ ಸರಕಾರವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಾ ಸಮುದಾಯಕ ಮೀಸಲಾತಿಯನ್ನು ಒದಗಿಸಿರುವುದನ್ನು ಎತ್ತಿ ಹಿಡಿದಿರುವ ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ  ಮೇಲ್ಮನವಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.

ಮರಾಠಾ ಸಮುದಾಯಕ್ಕೆ ಮೀಸಲಾತಿ ಯನ್ನು ಒದಗಿಸಿರುವ ಮಹಾರಾಷ್ಟ್ರ ಕಾನೂನಿನ ಪರವಾಗಿ ನ್ಯಾ.ಅಶೋಕ್ ಭೂಷಣ್‌ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ವಾದವನ್ನು ಮಂಡಿಸಿದ ರೋಹಟಗಿ , ಬದಲಾದ ಪರಿಸ್ಥಿತಿಗಳು ಮತ್ತು ಮಂಡಲ್ ತೀರ್ಪು 1931ರ ಜನಗಣತಿಯನ್ನು ಆಧರಿಸಿತ್ತು ಎನ್ನುವುದನ್ನು ಗಣನೆಗೆ ತೆಗೆದುಕೊಂಡು ಮೀಸಲಾತಿಯನ್ನು ನಿಗದಿಗೊಳಿಸುವುದನ್ನು ರಾಜ್ಯಗಳಿಗೇ ಬಿಡಬೇಕು. ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ಒದಗಿಸುವ ಕೇಂದ್ರದ ನಿರ್ಧಾರವೂ ಶೇ.50ರ ಮಿತಿಯನ್ನು ಉಲ್ಲಂಘಿಸಿದೆ ಎಂದು ಹೇಳಿದರು.

ನೀವು ಹೇಳುವಂತೆ ಶೇ.50ರಷ್ಟು ಮಿತಿ ಅಥವಾ ಮಿತಿಯೇ ಇಲ್ಲದಿದ್ದರೆ ಆಗ ಸಮಾನತೆಯ ಪರಿಕಲ್ಪನೆ ಏನಾಗುತ್ತದೆ? ಅಂತಿಮವಾಗಿ ಅದನ್ನು ನಾವೇ ನಿರ್ವಹಿಸಬೇಕಾಗುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಉದ್ಭವಿಸಬಹುದಾದ ಅಸಮಾನತೆಯ ಬಗ್ಗೆ ಏನು ಹೇಳುತ್ತೀರಿ? ಈ ಮೀಸಲಾತಿ ಇನ್ನೂ ಎಷ್ಟು ತಲೆಮಾರುಗಳಿಗೆ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಎಸ್.ಅಬ್ದುಲ್ ನಝೀರ್, ಹೇಮಂತ್ ಗುಪ್ತಾ ಮತ್ತು ಎಸ್.ರವೀಂದ್ರ ಭಟ್ ಅವರನ್ನೂ ಒಳಗೊಂಡ ಪೀಠವು ಪ್ರಶ್ನಿಸಿತು.

ಮುಂದುವರಿಯಲಿದೆ?

1931ರ ಜನಗಣತಿಯನ್ನು ಆಧರಿಸಿದ್ದ ಮಂಡಲ್ ತೀರ್ಪಿನ ಪುನರ್ ಪರಿಶೀಲನೆಗೆ ಹಲವಾರು ಕಾರಣಗಳಿವೆ, ಅಲ್ಲದೆ ಜನಸಂಖ್ಯೆಯೂ ಹಲವಾರು ಪಟ್ಟುಗಳಷ್ಟು ಹೆಚ್ಚಿ  135 ಕೋಟಿಗೆ ತಲುಪಿದೆ ಎಂದು
ರೋಹಟ್ಟಿ ಹೇಳಿದರು.

'ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿವೆ. ರಾಜ್ಯ ಗಳು ಅಷ್ಟೊಂದು ಅಭಿವೃದ್ದಿ ಕಾರ್ಯಕ್ರಮಗಳನ್ನು ತರುತ್ತಲೇ ಇವೆ. ಹೀಗಿರುವಾಗ ಯಾವುದೇ ಅಭಿವೃದ್ದಿಯಾಗಿಲ್ಲ ಮತ್ತು ಯಾವುದೇ ಹಿಂದುಳಿದ ಜಾತಿಯು ಮುಂದುವರಿದಿಲ್ಲ ಎನ್ನುವು ದನ್ನು ನಾವು ಒಪ್ಪಿಕೊಳ್ಳಲಾದೀತೇ ಎಂದು ಪ್ರಶ್ನಿಸಿದ ಪೀಠವು, ಹಿಂದುಳಿದಿರುವಿಕೆ ಯಿಂದ ಹೊರಗೆ ಬಂದಿರುವವರನ್ನು ಮೀಸಲಾತಿಯಿಂದ ಹೊರಗಿ ಡಬೇಕು ಎನ್ನುವುದು ಮಂಡಲ್ ತೀರ್ಪಿನ ಪುನರ್‌ಪರಿಶೀಲನೆಯ ಉದ್ದೇಶವಾಗಿದೆ ಎಂದು ಅಭಿಪ್ರಾಯಿಸಿತು.

“ನಾವು ಮುಂದುವರಿದಿದ್ದೇವೆ ನಿಜ, ಆದರೆ ಅದರರ್ಥ ಹಿಂದುಳಿದ ವರ್ಗಗಳು ಶೇ.50ರಿಂದ ಶೇ.20ಕ್ಕೆ ಇಳಿದಿವೆ ಎಂದಲ್ಲ. ಈಗಲೂ ಈ ದೇಶದಲ್ಲಿ ಹಸಿವೆಯಿಂದ ಸಾವುಗಳು ಸಂಭವಿಸುತ್ತಿವೆ. ಮಂಡಲ್ ತೀರ್ಪು ಸಂಪೂರ್ಣವಾಗಿ ತಪ್ಪಾಗಿತ್ತು, ಅದನ್ನು ಕಸದ ಬುಟ್ಟಿಗೆ ಹಾಕಿ ಎಂದು ನಾನು ಹೇಳುತ್ತಿಲ್ಲ. ಕಾನೂನು ಬದಲಾಗಿ 30 ವರ್ಷಗಳು ಕಳೆದಿವೆ, ಜನಸಂಖ್ಯೆಯು ಹೆಚ್ಚಾಗಿದೆ, ಹಿಂದುಳಿದವರ ಸಂಖ್ಯೆಯೂ ಹೆಚ್ಚಾಗಿರಬಹುದು ಎನ್ನುವುದನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ' ಎಂದು ರೋಹಟ್ಟಿ ಹೇಳಿದರು. ಪ್ರಕರಣದಲ್ಲಿ ವಾದಗಳು ಅಪೂರ್ಣವಾಗಿದ್ದು, ಮಾ.22ರಂದು ವಿಚಾರಣೆ ಮುಂದುವರಿಯಲಿದೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...