ಬೆಳೆ ಪರಿಹಾರ ಪಾವತಿ ವಿಳಂಬಕ್ಕೆ ಕಾರಣವಾದ ತಾಂತ್ರಿಕ ಅಂಶಗಳನ್ನು ಸರಿಪಡಿಸಿ ರೈತರ ಖಾತೆಗಳಿಗೆ ಪರಿಹಾರ ಜಮೆ ಮಾಡಲು ಕ್ರಮ ಕೈಗೊಳ್ಳಿ - ಸಚಿವ ಜಗದೀಶ ಶೆಟ್ಟರ್

Source: SO News | By Laxmi Tanaya | Published on 23rd January 2021, 10:24 PM | State News | Don't Miss |

ಧಾರವಾಡ : ರೈತರ ಹಿತಕಾಯಲು ಸರ್ಕಾರ ಅನುಷ್ಠಾನಕ್ಕೆ ತಂದಿರುವ ಬೆಳೆ ಪರಿಹಾರವನ್ನು ಸಕಾಲದಲ್ಲಿ ರೈತ ಸಮುದಾಯಕ್ಕೆ ತಲುಪಿಸಲು ಕೃಷಿ,ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳು ಆದ್ಯತೆಯಡಿ ದತ್ತಾಂಶವನ್ನು ಪರಿಹಾರ್ ತಂತ್ರಾಂಶದಲ್ಲಿ ದಾಖಲಿಸಬೇಕು , ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಬೃಹತ್, ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು 2020-21 ನೇ ಸಾಲಿನಲ್ಲಿ ಡಿಸೆಂಬರ್ 2020 ರ ಅಂತ್ಯಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

2019 ರಲ್ಲಿ ಬೆಳೆಹಾನಿಗೀಡಾದ ರೈತರಿಗೆ ಪರಿಹಾರ ಹಣ ತಾಂತ್ರಿಕ ಕಾರಣಗಳಿಂದ ಈವರೆಗೆ ಕೆಲವರಿಗೆ ದೊರೆತಿಲ್ಲ. ಇದನ್ನು ಆದ್ಯತೆಯಡಿ ಕೈಗೆತ್ತಿಕೊಂಡು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪರಿಹರಿಸಬೇಕು.ರೈತರ ಬೆಳೆ ಪರಿಹಾರ ಹಣವನ್ನು ಯಾವುದೇ ಕಾರಣಕ್ಕೂ ಅವರ ಸಾಲದ ಖಾತೆಗಳಿಗೆ ಜಮೆ ಮಾಡಬಾರದು. ಈ ಕುರಿತು ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ಉಲ್ಲಂಘಿಸುವ ಬ್ಯಾಂಕುಗಳ ವಿವರಗಳನ್ನು ಒದಗಿಸಬೇಕು ಎಂದು ಸಚಿವರು ಸೂಚಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ತಲಾ ಒಂದು ಮಣ್ಣು ಪರೀಕ್ಷಾ ವಾಹನ ಪೂರೈಸಬೇಕು. ಕಲಘಟಗಿ ತಾಲೂಕಿನ  ಸರ್ಕಾರಿ ಕಂದಾಯ ಭೂಮಿಯಲ್ಲಿ ಒತ್ತುವರಿ ಮಾಡಿರುವ ಬಗ್ಗೆ ಅಲ್ಲಿನ ಸ್ಥಳೀಯ ಶಾಸಕರು ಮಾಹಿತಿ  ನೀಡಿದ್ದಾರೆ, ಉಪವಿಭಾಗಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸಬೇಕು. ಕೇಂದ್ರ ಸರ್ಕಾರವು ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಮಾವು ಬೆಳೆಯನ್ನು ಆಯ್ಕೆ ಮಾಡಿದೆ, ಜಿಲ್ಲೆಯ ಮಾವು ಬೆಳೆಗಾರರಿಗೆ ಇದರ ಪ್ರಯೋಜನಕ್ಕೆ ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆಗೆ ಸ್ಥಾಪಿಸಿರುವ ಆರ್.ಓ.ಘಟಕಗಳನ್ನು ಸುಸ್ಥಿತಿಯಲ್ಲಿರುವಂತೆ ಸಂಬಂಧಿಸಿದ ಇಂಜನಿಯರುಗಳು ನಿರಂತರವಾಗಿ ಪರಿಶೀಲನೆ ಮಾಡಬೇಕು . ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯನ್ನು ಆರು ಪಥಗಳ ರಸ್ತೆಯಾಗಿ ಅಭಿವೃದ್ಧಿಗೊಳಿಸುವವರೆಗೂ ಅಪಘಾತವಲಯದಲ್ಲಿ ರಸ್ತೆ ಸುರಕ್ಷತೆಗೆ ಹೆಚ್ಚು ಜಾಗರೂಕತಾ ಕ್ರಮವಹಿಸಬೇಕು ಎಂದು ಸಚಿವ ಶೆಟ್ಟರ್ ಸೂಚಿಸಿದರು.

ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಬೆಳೆ ಸಮೀಕ್ಷೆ,ಆಣೆವಾರಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿವರವಾದ ಮಾಹಿತಿ ನೀಡಬೇಕು.ಎಂ.ಎ.ಪಿಹೆಚ್‍ಡಿ ಪಡೆದ ವಿದ್ಯಾವಂತ ಯುವಕರು ನವಲಗುಂದ ತಾಲ್ಲೂಕಿನ ಹಲವೆಡೆ ರೇಷ್ಮೆ ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ ಅವರಿಗೆ ಉತ್ತೇಜನ ಬೇಕು . ಜಿಲ್ಲೆಯಲ್ಲಿ ಬಹಳಷ್ಟು ದನ-ಕರುಗಳಿವೆ ಆದರೆ ಸಾಕಷ್ಟು ಪ್ರಮಾಣದಲ್ಲಿ ಪಶುವೈದ್ಯರು ಇಲ್ಲ.ಇರುವಷ್ಟು ಪಶುವೈದ್ಯಾಧಿಕಾರಿಗಳು ಗ್ರಾಮೀಣ ಜನರಿಗೆ ಸಮರ್ಪಕ ಸೇವೆ ನೀಡಬೇಕು ಎಂದರು.

ಧಾರವಾಡ ಶಾಸಕ ಅಮೃತ ದೇಸಾಯಿ ಮಾತನಾಡಿ, ಜಿಲ್ಲೆಯು ಈ ಮೊದಲು ಆಪೂಸ್ ಮಾವಿನ ಫಸಲಿಗೆ ಹೆಸರಾಗಿತ್ತು, ರೋಗಗಳ ಹಾವಳಿಯಿಂದ ಮಾವಿನ ಗಿಡಗಳು ನಿರೀಕ್ಷಿತ ಫಲ ನೀಡುತ್ತಿಲ್ಲ ,ಈ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆ ಮೂಲಕ ಪರಿಹಾರ ಹುಡುಕಬೇಕು. ಜಿಲ್ಲೆಯಾದ್ಯಂತ ಬಹಳಷ್ಟು ರೈತರು ಇದೀಗ ರೇಷ್ಮೆ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ. ರೇಷ್ಮೆಇಲಾಖೆಗೆ ಜಿಲ್ಲಾಡಳಿತ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ ಮಾತನಾಡಿ, ರೈತರಿಗೆ ಸ್ಪಂದನೆ ನೀಡದ ನವಲಗುಂದ ಹಾಗೂ ಕುಂದಗೋಳ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಬೇರೆಡೆ ವರ್ಗಾಯಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಮಾತನಾಡಿ, ಜಿಲ್ಲೆಯ ಕೆಲವೆಡೆ ರೈತರು ಉತ್ತಮವಾಗಿ ಸ್ಟ್ರಾ ಬೆರ್ರಿ ಬೆಳೆ ಬೆಳೆದು ಎಕರೆಗೆ ಸುಮಾರು ಆರು ಲಕ್ಷ ರೂ.ಲಾಭ ಪಡೆಯುತ್ತಿದ್ದಾರೆ, ತೋಟಗಾರಿಕೆ ಇಲಾಖೆ ಇಂತಹ ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಜಿ.ಪಂ.ಉಪಾಧ್ಯಕ್ಷ ಶಿವಾನಂದ ಕರಿಗಾರ,ಹುಬ್ಬಳ್ಳಿ ಧಾರವಾಡ ನಗರ ಪೆÇಲೀಸ್ ಆಯುಕ್ತ ಲಾಭೂರಾಮ್ , ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ,ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾ ಯೋಜನಾ ಸಮಿತಿ ಸದಸ್ಯರು, ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಜಿಪಂ ಉಪಕಾರ್ಯದರ್ಶಿ ಎಸ್.ವೈ.ಕುಂದೂರ, ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ,ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...