ಬೆಂಗಳೂರು; ಅಶ್ಲೀಲ ಸಿಡಿ ಪ್ರಕರಣ, ಯುವತಿ, ಪತ್ರಕರ್ತ ಸಹಿತ ಐವರು ವಶಕ್ಕೆ

Source: VB | By S O News | Published on 13th March 2021, 1:44 PM | State News | National News |

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ಅಶ್ಲೀಲ ಸಿಡಿ ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದ ಅಧಿಕಾರಿಗಳ ತಂಡವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕಟಿಸಿದ್ದಾರೆ.

ವಿಶೇಷ ತನಿಖಾ ತಂಡ(ಎಸ್‌ಐಟಿ)ದಲ್ಲಿ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್, ಅಪರಾಧ ವಿಭಾಗದ ಡಿಸಿಪಿ ರವಿ ಕುಮಾರ್ ಇರಲಿದ್ದಾರೆ. ಸಿಸಿಬಿ ಎಸಿಪಿ ಧರ್ಮೇಂದ್ರ ಪ್ರಕರಣದ ತನಿಖಾಧಿಕಾರಿಯಾಗಿದ್ದು, ಇವರ ಜೊತೆಗೆ ಸಿಸಿಬಿ ಇನ್‌ಸ್ಪೆಕ್ಟರ್‌ ಪ್ರಶಾಂತ್ ಬಾಬು, ಕಬ್ಬನ್‌ಪಾರ್ಕ್ ಇನ್‌ಸ್ಪೆಕ್ಟರ್‌ ಮಾರುತಿ ಸಹ ವಿಶೇಷ ತನಿಖಾ ತಂಡದಲ್ಲಿದ್ದಾರೆ.

ರಚನೆಯಾಗಿರುವ ಎಸ್‌ಐಟಿ ತನಿಖೆ ಶುರು ಮಾಡಿದೆ. ಈಗಾಗಲೇ ಪ್ರಾಥಮಿಕ ಮಾಹಿತಿಯನ್ನೂ ಕಲೆ ಹಾಕಿದೆ.

ಕಾಫಿನಾಡಿನನಂಟು? ಆಲ್ಲೂರು ಮೂಲದ ಪತ್ರಕರ್ತ ಎಸ್‌ಐಟಿ ವಶಕ್ಕೆ

ಚಿಕ್ಕಮಗಳೂರು: ರಾಜ್ಯ ಸರಕಾರದ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರದೆನ್ನಲಾದ ಅಶ್ಲೀಲ ಸಿಡಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸ್‌ಐಟಿ ತನಿಖಾಧಿಕಾರಿಗಳ ತಂಡ ಶುಕ್ರವಾರ ತಾಲೂಕಿನ ಆಲ್ಲೂರು ಪಟ್ಟಣದಲ್ಲಿ ಪತ್ರಕರ್ತರೊಬ್ಬರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ. ಶುಕ್ರವಾರ ಬೆಳಗ್ಗೆ ತಾಲೂಕಿನ ಆಲ್ಲೂರು ಪಟ್ಟಣಕ್ಕೆ ಆಗಮಿಸಿದ್ದ ಎಸ್‌ಐಟಿ ತನಿಖಾ ತಂಡದ ಅಧಿಕಾರಿಗಳು ಪಟ್ಟಣ ಸಮೀಪದಲ್ಲಿರುವ ದೋಣಗುಡಿಗೆ  ಗ್ರಾಮದಲ್ಲಿ ಭವಿತ್ ದೋಣಗುಡಿಗೆ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಭವಿತ್ ದೋಣಗುಡಿಗೆ ಈ ಹಿಂದೆ ಪಬ್ಲಿಕ್ ಟಿವಿ, ಸಮಯ ಟಿವಿ, ಬಿಟಿವಿ ಸೇರಿದಂತೆ ಹಲವು ಖಾಸಗಿ ಸುದ್ದಿವಾಹಿನಿಗಳಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದು, ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದರು. ಎಂದು ತಿಳಿದು ಬಂದಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ ಪ್ರಕರಣವಾಗಿದ್ದು, ಸಿಡಿ ಬಿಡುಗಡೆಯಾದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಇತ್ತೀಚೆಗೆ ಎಸ್‌ಐಟಿಗೆ ನೀಡಿದ್ದು, ತನಿಖಾ ಸಂಸ್ಥೆಯ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ ಪತ್ರಕರ್ತ ಭವಿತ್ ಬೆಂಗಳೂರಿನಿಂದ ಆಲ್ಲೂರಿನ ದೋಣಗುಡಿಗೆ ಗ್ರಾಮದಲ್ಲಿರುವ ತನ್ನ ಮನೆಗೆ ಎರಡು ದಿನಗಳ ಹಿಂದೆ ಬಂದಿದ್ದರು ಎಂದು ತಿಳಿದು ಬಂದಿದೆ.

ವಿಚಾರಣೆ ವೇಳೆ ಅಗತ್ಯಬಿದ್ದರೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಿದ್ದೇವೆ. ಈ ಮೂಲಕ ಸಿಡಿ ಪ್ರಕರಣ ಸಂಬಂಧ ಆದಷ್ಟು ಬೇಗ ತನಿಖೆ ನಡೆಸಿ  ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ಯುವತಿ ಸೇರಿ ಐವರು ವಶಕ್ಕೆ: ಎಸ್‌ಐಟಿ ತಂಡ ರಚಿಸಿದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿರುವ ಪೊಲೀಸ್ ಅಧಿಕಾರಿಗಳು ಯುವತಿ, ಪತ್ರಕರ್ತರು ಸೇರಿ ಐವರನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಆಲ್ಲೂರು ಗ್ರಾಮದಲ್ಲಿ ಓರ್ವ ಯುವಕನನ್ನು ವಶಕ್ಕೆ ಪಡೆದರೆ, ಇನ್ನು ನಾಲ್ವರನ್ನು ರಾಮನಗರ, ಚಾಮರಾಜಪೇಟೆ ಹಾಗೂ ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಇವರನ್ನು ಸಿಐಡಿ ಕಚೇರಿಯಲ್ಲಿಯೇ ಎಸ್‌ಐಟಿ ಅಧಿಕಾರಿಗಳ ತಂಡ ವಿಚಾರಣೆ ನಡೆಸಲಿದೆ.

ಎಫ್ಐಆರ್ ದಾಖಲಿಸಿಲ್ಲ : ಸರಕಾರದ ಆದೇಶದಂತೆ ಪೊಲೀಸ್ ಇಲಾಖೆ ಎಸ್‌ಐಟಿಯನ್ನು ರಚಿಸಿದ್ದು , ಈ
ತಂಡದಲ್ಲಿ ಏಳು ಮಂದಿ ಅಧಿಕಾರಿಗಳು ಇರಲಿದ್ದಾರೆ. ಈ ತಂಡವು ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಬಳಿಕ ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ.

ಕಾಲ್ ರೆಕಾರ್ಡ್ಸ್ ಆಧಾರದಲ್ಲಿ ವಶಕ್ಕೆ : ಐವರನ್ನು ಕಾಲ್ ರೆಕಾರ್ಡ್ಸ್ ಹಾಗೂ ಹಣದ ವಹಿವಾಟಿನ ಆಧಾರದ ಮೇಲೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪೊಲೀಸರ ವಶದಲ್ಲಿರುವ ಯುವತಿಯೇ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಅಶ್ಲೀಲ ವೀಡಿಯೊ ಕೊಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಿಬಿಐ ತನಿಖೆಗೆ ನೀಡಬೇಕಿತ್ತು':  'ಸಿಡಿ ಪ್ರಕರಣವನ್ನು ವಿಶೇಷ ತನಿಖಾ ತಂಡ(ಸಿಟ್)ಕ್ಕೆ ನೀಡಿದ್ದು, ಸಮಂಜಸವಲ್ಲ. ಆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕಿತ್ತು. ಎಸ್‌ಐಟಿ ಮೇಲೆ ಪ್ರಭಾವ ಬೀರಬಹುದು. ಆದರೆ, ಸಿಬಿಐ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು' ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಿಡಿ ತಯಾರಿಸುವ ಗ್ಯಾಂಗ್‌ಗಳಿವೆ. ಈ ಗ್ಯಾಂಗ್‌ಗಳು ರಾಜಕೀಯ ವಿರೋಧಿಗಳಿಗೆ ಆ ಸಿಡಿಗಳನ್ನು ನೀಡಿ ಹಣ ಪಡೆಯುವುದನ್ನು ಮಾಡುತ್ತವೆ. ಈ ಗ್ಯಾಂಗ್‌ಗಳಿಗೆ ಬ್ಲ್ಯಾಕ್‌ಮೇಲ್ ಮಾಡುವುದೇ ಕೆಲಸ ಎಂದರು.

ಯುವರಾಜ ಎಂಬವನ ಬಂಧನವೂ ಆಗಿದ್ದು, ಆತ ಎಂಪಿ, ರಾಜ್ಯಸಭೆ ಸದಸ್ಯರಾಗಲು, ಸಚಿವರಾಗಲು ಕೋಟ್ಯಂತರ ರೂ. ಪಡೆಯುತ್ತಿದ್ದ. ಆತ ಸಿಎಂ ಮನೆಯಲ್ಲಿಯೇ ಇರುತ್ತಿದ್ದ 50ಕೋಟಿ ರೂ.ಮನೆ ನಿರ್ಮಿಸಿದ್ದು, ಆತನ ಮನೆಗೆ ಹೋದ ಅತಿಥಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಊಟ ನೀಡುತ್ತಿದ್ದ. ಈತನ ಜೊತೆಗೆ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆಗಿನ ಫೋಟೊಗಳು ವೈರಲ್ ಆಗಿವೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಜೊತೆಗಿನ ಒಂದೂ ಫೋಟೊ ಯಾಕೆ ಹೊರಬರಲಿಲ್ಲ. ಎಂದು ಯತ್ನಾಳ್ ಪ್ರಶ್ನಿಸಿದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...