ಮಲ್ಪೆ, ಮಂಗಳೂರಿನಲ್ಲಿ ನಿರೀಕ್ಷಿತವಾಗಿ ಆಗದ ಮೀನುಗಾರಿಕೆ

Source: SO News | By Laxmi Tanaya | Published on 29th September 2020, 7:57 PM | Coastal News | Don't Miss |

ಮಂಗಳೂರು  : ಪ್ರತಿಕೂಲ ಪರಿಸ್ಥಿತಿಯಿಂದ ತಡವಾಗಿ ಆರಂಭವಾದ ಮೀನುಗಾರಿಕೆ ಋತುವಿಗೆ ಮಿಶ್ರಫಲ ದೊರೆತಿದೆ. ಮಂಗಳೂರಿನಲ್ಲಿ ಕೆಂಪು ಸಿಗಡಿ, ಬಂಗುಡೆ, ಕಲ್ಲೂರು, ಅಂಜಲ್ ಉತ್ತಮ ಪ್ರಮಾಣದಲ್ಲಿ ಸಿಕ್ಕಿದ್ದು, ಮೀನುಗಾರರು ಸ್ವಲ್ಪ ನಿರಾಳತೆ ಅನುಭವಿಸಿದ್ದಾರೆ. ಆದರೆ ಉಡುಪಿಯಲ್ಲಿ ಮೀನುಗಾರರಿಗೆ ಲಾಭ ತರುವ ಮೀನುಗಳು ವಾಡಿಕೆ ಪ್ರಮಾಣದಲ್ಲಿ ದೊರೆಯದಿರುವುದು ನಿರಾಶೆಗೆ ಕಾರಣವಾಗಿದೆ.

ಕಳೆದ ವರ್ಷ ನಿರಂತರ ಚಂಡಮಾರುತ, ವ್ಯತಿರಿಕ್ತ ಹವಾಮಾನದಿಂದ ಮೀನುಗಾರಿಕೆ ನಡೆಸಲು ಹೆಚ್ಚಿಗೆ ಅವಕಾಶ  ದೊರೆತಿರಲಿಲ್ಲ. ಕೊರೊನಾ ಸಂಬಂಧ ಮಾರ್ಚ್ 25ರಂದು ಘೋಷಣೆಯಾದ ಲಾಕ್‌ಡೌನ್, ಜೂನ್ ಮತ್ತು ಜುಲೈಯಲ್ಲಿ ವಾರ್ಷಿಕ ಮೀನುಗಾರಿಕೆ ರಜೆ, ಆಗಸ್ಟ್‌ನಲ್ಲಿ ಪ್ರಕ್ಷುಬ್ಧ ವಾತಾವರಣ ಮೀನುಗಾರರು ಹಾಗೂ ಅವರ ಬದುಕನ್ನು ಕಟ್ಟಿ ಹಾಕಿತ್ತು.

ಮಂಗಳೂರು ಭಾಗದಲ್ಲಿ ಕಡಲಿಗಿಳಿದ ಬೋಟುಗಳಲ್ಲಿ ಎರಡು ದಿನಗಳಿಂದ ಕೆಂಪು ಸಿಗಡಿ, ಮಾಂಜಿ, ಅಂಜಲ್ ಒಳ್ಳೆಯ ಪ್ರಮಾಣದಲ್ಲಿ ಬಂದಿದೆ. ಮಂಗಳೂರಿನಿಂದ ಹೊರಟ ಕೆಲ ಬೋಟುಗಳು 1000 ಟನ್‌ನಷ್ಟು ಕೆಂಪು ಸಿಗಡಿ ಜತೆ ವಾಪಸ್ ಬಂದಿವೆ. ಮಂಗಳೂರಿಗೆ ಹೋಲಿಸಿದರೆ ಮಲ್ಪೆಯಲ್ಲಿ ಕ್ಲಾಥಿ ಎನ್ನುವ ಮೀನು ಗರಿಷ್ಠ ಪ್ರಮಾಣದಲ್ಲಿ ಬಂದಿದ್ದು, ಕೆಲವೆಡೆ ಈ ಮೀನುಗಳನ್ನು ಇಡಲು ಸ್ಥಳಾವಕಾಶದ ಕೊರತೆ ಉಂಟಾಗಿದೆ. ವಿದೇಶಗಳಿಗೆ ರಫ್ತು ಆಗುತ್ತಿದ್ದರೂ ಮಾರುಕಟ್ಟೆಯಲ್ಲಿ ಈ ಮೀನುಗಳಿಗೆ ಬೆಲೆ ಕಡಿಮೆ. ಕರ್ನಾಟಕ, ಕೇರಳದಲ್ಲಿ ಈ ಮೀನು ತಿನ್ನುವವರಿಲ್ಲ ಎನ್ನುತ್ತಾರೆ ಮೀನುಗಾರರು.

ಅಧಿಕ ಆದಾಯದ ಮೀನುಗಳು ಕಡಿಮೆ
ಮಳೆಗಾಲದ ವಾರ್ಷಿಕ ಎರಡು ತಿಂಗಳ ಮೀನುಗಾರಿಕೆ ರಜೆ ಕಳೆದು ಮೀನುಗಾರಿಕೆ ಆರಂಭವಾಗುವ ಸಂದರ್ಭ ಮೀನುಗಾರರಿಗೆ ಅಧಿಕ ಆದಾಯ ತರುವ ಕಪ್ಪೆ ಬೊಂಡಾಸ್, ರಿಬ್ಬನ್ ಫಿಶ್, ಮದಿಮಾಲ್ ಮೀನುಗಳು ಉಡುಪಿಯಲ್ಲಿ ಈ ಬಾರಿ ಸಿಗಲಿಲ್ಲ. 

ಕರಾವಳಿಯ ಆಳಸಮುದ್ರ ಮೀನುಗಾರಿಕೆಯಲ್ಲಿ ಕಾರ್ಮಿಕರಾಗಿ ದುಡಿಯುವರಲ್ಲಿ ಶೇ.95 ಜನ ಆಂಧ್ರಪ್ರದೇಶ, ತಮಿಳುನಾಡು, ಛತ್ತೀಸ್‌ಗಡ ಮುಂತಾದ ರಾಜ್ಯದವರು. ಲಾಕ್‌ಡೌನ್ ಸಂದರ್ಭ ನಾಡಿಗೆ ತೆರಳಿದ್ದ ಈ ಮೀನುಗಾರರಲ್ಲಿ ಶೇ.70 ಮಂದಿ ವಾಪಸಾಗಿದ್ದು, ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಾರಿಕೆ ಆಗದಿರುವುದು ಕಡಲ ಮಕ್ಕಳನ್ನ ಕಂಗೆಡಿಸಿದೆ.

Read These Next

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...