ಪರಿಷ್ಕೃತ ಪಠ್ಯಪುಸ್ತಕಕ್ಕೆ ತೀವ್ರ ವಿರೋಧ; #RejectRSSTextBooks #RejectBrahmin TextBooks ಅಭಿಯಾನ; ಸಚಿವ ಬಿ.ಸಿ.ನಾಗೇಶ್ ರಾಜೀನಾಮೆಗೂ ಒತ್ತಾಯ

Source: Vb | By I.G. Bhatkali | Published on 23rd May 2022, 11:08 AM | State News |

ಬೆಂಗಳೂರು: 'ರಾಜ್ಯ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕಗಳಲ್ಲಿ ಬ್ರಾಹ್ಮಣೀಕರಣ, ಆರೆಸ್ಸೆಸ್ ಅಜೆಂಡಾ, ನಾಡಿನ ಸಮಾಜ ಸುಧಾರಕರ, ಚಿಂತಕರ ವಿಷಯಗಳನ್ನು ಕೈಬಿಟ್ಟಿರುವ ಕ್ರಮ ಖಂಡಿಸಿ ಕರೆ ನೀಡಿದ್ದ 'ಟ್ವಿಟರ್ ಅಭಿಯಾನ'ಕ್ಕೆ ಭಾರೀ ಸಹಮತ ವ್ಯಕ್ತವಾಗಿದ್ದು, ಆರೆಸ್ಸೆಸ್ ಪಠ್ಯಪುಸ್ತಕ ತಿರಸ್ಕರಿಸಿ ಕೂಗು ಭುಗಿಲೆದ್ದಿದೆ.

ರವಿವಾರ ಸಂಜೆ 5 ಗಂಟೆಗೆ ಆರಂಭವಾದ #RejectRSS TextBooks #RejectBrahminTextBooks ಅಭಿಯಾನವನ್ನು ಸಾವಿರಾರು ಜನರು ಬೆಂಬಲಿಸಿ, ಟ್ವಿಟರ್‌ನಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಲಪಂಥೀಯ ಲೇಖಕ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪಠ್ಯಪುಸ್ತಕಗಳನ್ನು ಬ್ರಾಹ್ಮಣೀಕರಣ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರಕಾರವು ಶಿಕ್ಷಣವನ್ನು ಬ್ರಾಹ್ಮಣೀಕರಣ ಮಾಡುವ ಮೂಲಕ ಶಾಲಾ ಮಕ್ಕಳ ತಲೆಗೆ ಆರೆಸ್ಸೆಸ್ ಅಜೆಂಡಾವನ್ನು ತುರುಕುತ್ತಿದೆ. ವೈವಿಧ್ಯತೆಯನ್ನು ನಾಶಮಾಡಿ ಕೇವಲ ಬ್ರಾಹ್ಮಣ ಲೇಖಕರನ್ನು ವೈಭವೀಕರಿಸಿ ಅವರ ಲೇಖನಗಳನ್ನೇ ಪಠ್ಯವನ್ನಾಗಿ ರೂಪಿಸಿದೆ. ಸಮಿತಿಯಲ್ಲಿ ಬಹುಪಾಲು ಬ್ರಾಹ್ಮಣ ಸಮುದಾಯದವರೇ ಇದು, ಪಠ್ಯದಲ್ಲೂ ಬ್ರಾಹ್ಮಣ್ಯವನ್ನು ವಿಜೃಂಭಿಸುವ ಅಂಶಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಒಂಭತ್ತು ಜನ ಬ್ರಾಹ್ಮಣ ಲೇಖಕರ ಪಠ್ಯ ಸೇರಿಸಲಾಗಿದೆ. ಆರು ಮಂದಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಲೇಖಕರ ಪಠ್ಯ ಕೈಬಿಡಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಅಲ್ಲದೆ, ತನ್ನ ಭಾಷಣಗಳಿಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತ ಟ್ರೋಲ್‌ಗೆ ಒಳಗಾಗುತ್ತಿರುವ ಚಕ್ರವರ್ತಿ ಸೂಲಿಬೆಲೆಯ ಲೇಖನವನ್ನೂ ಪಠ್ಯದಲ್ಲಿ ಅಳವಡಿಸಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.

'ಪಠ್ಯ ಪುಸ್ತಕವನ್ನು ಬಿಜೆಪಿಯ ಪುಸ್ತಕವನ್ನಾಗಿ ಮಾಡಿ, ಹಿಂಬಾಗಿಲ ಮೂಲಕ ಮನುಸೃತಿಯನ್ನು ತರಲಾಗುತ್ತಿದೆ ಎಂದೂ ದೂರಿ, ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಲಪಂಥೀಯ ಚಿಂತಕರಿಗೆ ಬಹಿರಂಗವಾಗಿಯೇ ಬೆಂಬಲಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ನಾಡಿನ ಹಲವು ಚಿಂತಕರು, ಶಿಕ್ಷಣ ತಜ್ಞರು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಅರ್ಹತೆಯನ್ನೇ ಪ್ರಶ್ನಿಸಿದ್ದು, ಸಮಿತಿಯ ನೇತೃತ್ವ ವಹಿಸಿರುವ ಚಕ್ರತೀರ್ಥರಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಷ್ಟು ಶೈಕ್ಷಣಿಕ ಯೋಗ್ಯತೆ ಮತ್ತು ದಕ್ಷತೆ ಇಲ್ಲ ಎಂದು ಹೇಳಿದ. ರೋಹಿತ್ ಚಕ್ರತೀರ್ಥ ಶಿಕ್ಷಣ ತಜ್ಞರೇ ಅಲ್ಲ, ಅವರ ನೇತೃತ್ವದಲ್ಲಿ ಪರಿಷ್ಕರಣೆಗೊಂಡಿರುವ ಪುಸ್ತಕಗಳು ಮಕ್ಕಳಿಗೆ ಪಾಠ ಮಾಡಲು ಯೋಗ್ಯವೂ ಅಲ್ಲ ಎಂದು ಶಿಕ್ಷಕರ ನಡುವೆಯೂ ಚರ್ಚೆಗಳಾಗುತ್ತಿವೆ. ಸದ್ಯ, ಈ ಪಠ್ಯ ಪುಸ್ತಕಗಳನ್ನು ನಿರಾಕರಿಸಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವಾಗುತ್ತಿದ್ದು, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ ಮೊದಲಾದ ಚಿಂತಕರೂ ಈ ಅಭಿಯಾನದಲ್ಲಿ

ಭಾಗಿಯಾಗಿದ್ದಾರೆ. “ಪಿ.ಲಂಕೇಶ್, ಅರವಿಂದ್ ಮಾಲಗತ್ತಿ, ಸಾರಾ ಅಬೂಬಕರ್, ಎಲ್.ಬಸವರಾಜು, ಕೆ.ನೀಲಾ ಮತ್ತು ಬಿಟಿ ಲಲಿತಾ ನಾಯಕ್ ಅವರಂತಹ ಧೀಮಂತ ಲೇಖಕರನ್ನು ಕೈಬಿಟ್ಟಿದ್ದಾರೆ. ಈ ಲೇಖಕರು ತಮ್ಮ ಕೃತಿಗಳಿಂದ ಸಮಾಜಕ್ಕೆ ಕೊಡುಗೆ ನೀಡಿದ್ದಲ್ಲದೆ ಹಲವರಲ್ಲಿ ಸ್ವಾಭಿಮಾನದ ಭಾವನೆಯನ್ನು ಮೂಡಿಸಿದ್ದಾರೆ” ಎಂದು ಅಜಯ್ ರಾಜ್ ಎಂಬವರು ಟೀಟ್ ಮಾಡಿದ್ದಾರೆ.

ರಾಮಚಂದ್ರ ಕಲ್ಲರ್ ಎಂಬವರು, ಧಾರ್ಮಿಕ ದ್ವೇಷ ಮತ್ತು ಜಾತಿ ಆಧಾರಿತ ತಾರತಮ್ಯವನ್ನು ಪ್ರಚೋದಿಸುವ ಎಲ್ಲವನ್ನೂ ತಿರಸ್ಕರಿಸಿ ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕನ್ನಡ ಹಾಗೂ ಕನ್ನಡಿಗರನ್ನು ಅವಮಾನಿಸಿದ್ದಾರೆಂಬ ಆರೋಪವಿರುವ ರೋಹಿತ್ ಚಕ್ರತೀರ್ಥರ ವಿರುದ್ಧ ಕನ್ನಡ ಸಂಘಟನೆಗಳೂ ಈ ಅಭಿಯಾನದಲ್ಲಿ ಪಾಲ್ಗೊಂಡಿದೆ. ನಾಡ ಧ್ವಜವನ್ನು ತನ್ನ ಹಾರಾಡುವ ಒಳಚಡ್ಡಿಗೆ ಹೋಲಿಸಿದ್ದ ರೋಹಿತ್ ಚಕ್ರತೀರ್ಥನನ್ನು ಪಠ್ಯಪುಸ್ತಕ ರಚನಾ ಸಮಿತಿಗೆ ಆಯ್ಕೆ ಮಾಡಿದ ಬಿಜೆಪಿ ಸರಕಾರಕ್ಕೆ ಕನ್ನಡ ನಾಡ ಧ್ವಜದ ಬಗ್ಗೆ ಗೌರವ ಇದೆಯೇ?” ಎಂದು ಎಂ.ಆರ್. ಕೃಷ್ಣ ಎಂಬವರು ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿಗಳು ಕಲಿಯುವ ಇತಿಹಾಸದ ಪಠ್ಯ ಪುಸ್ತಕಗಳು ನಾಡಿನ ಭವಿಷ್ಯಕ್ಕೆ ಮಾರಕವಾಗಬಾರದು ಪೂರಕವಾಗಿರಬೇಕು. ಹಿಂಸೆ, ದ್ವೇಷ, ಅಸೂಯೆಗಳ ಪುಷ್ಟಿಕರಿಸುವ ವೈದಿಕೀಕರಣವನ್ನು ಖಂಡಿಸಬೇಕಿದೆ. ಕನ್ನಡದ ಅಸ್ಮಿತೆಗೆ ಧಕ್ಕೆ ತರುವ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆಗೆ ಸರಕಾರ ತಡೆ ನೀಡಬೇಕು.
#RejectRSSTextBooks
ಬಿ ಕೆ ಹರಿಪ್ರಸಾದ್ ವಿ.ಪರಿಷತ್ ವಿಪಕ್ಷ ನಾಯಕ
ಆರೆಸ್ಸೆಸ್ ಮತ್ತು ನಕಲಿ ದೇಶಪ್ರೇಮಿಗಳನ್ನು ಪಠ್ಯದೊಳಗೆ ಸೇರಿಸಿ ಅವರ ವಿಷಕಾರಿ ನೀತಿಗಳನ್ನು ಮಕ್ಕಳ ತಲೆಗೆ ತುಂಬಲು ಹೊರಟಿರುವ ಸರಕಾರಕ್ಕೆ ಯಾವುದರ ಬಗ್ಗೆಯೂ ಸ್ಪಷ್ಟ ತಿಳುವಳಿಕೆ ಇಲ್ಲ. ಇಂತಹ ಅಪದ್ಧಗಳಿಗೆ ಕಾರಣವಾಗಿರುವ ಸಚಿವ ಬಿ.ಸಿ.ನಾಗೇಶ್ ಅಸಮರ್ಥರಾಗಿದ್ದು, ಸಮಾಜ ವಿರೋಧಿ ಶಕ್ತಿಗಳನ್ನು ಉತ್ತೇಜಿಸುತ್ತಿದ್ದಾರೆ. #RejectRSSTextBooks
ಡಾ.ಎಚ್.ಸಿ. ಮಹಾದೇವಪ್ಪ, ಮಾಜಿ ಸಚಿವ
ಕರ್ನಾಟಕಕ್ಕೆ ಆಧುನಿಕ ಶಿಕ್ಷಣವನ್ನು ತಂದುಕೊಟ್ಟವರು ಕ್ರಿಶ್ಚಿಯನ್ನರು. ಕರ್ನಾಟಕವನ್ನು ಜಾಗತಿಕ ಭೂಪಟಕ್ಕೆ ಸೇರಿಸಿದವರು ಮುಸ್ಲಿಮರು, ಕರ್ನಾಟಕದ ಮೂಲನಿವಾಸಿಗಳು ದಲಿತರು, ಪಠ್ಯಪುಸ್ತಕ ರಚನೆ ಮಾಡುವಾಗ ಸಮಿತಿಯಲ್ಲಿ ಇವರು ಇರಬೇಕಾದ್ದು ಅಗತ್ಯ. ಮಕ್ಕಳಿಗೆ ಜನಾಂಗ ದ್ವೇಷ ಕಲಿಸಬಾರದು.
#RejectRSSTextBooks
ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ, ಚಿಂತಕ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...