ಹೃದಯಘಾತದಿಂದ ವ್ಯಕ್ತಿ ಸಾವು; ಕೊರೋನಾ ಭಯದಿಂದ ಚಿಕಿತ್ಸೆ ನೀಡದ ಹೃದಯಹೀನ ವೈದ್ಯರು

Source: sonews | By Staff Correspondent | Published on 3rd August 2020, 4:17 PM | Coastal News | Don't Miss |

ಎರಡು ಗಂಟೆ ಅಲೆದು ಕೊನೆಗೂ ಆಟೋ ರಿಕ್ಷಾದಲ್ಲೇ ದೇಹತ್ಯಾಗ ಮಾಡಿದ ಹುಕ್ಮರಾಂ

ಭಟ್ಕಳ:ಜೀವನವನ್ನು ರಕ್ಷಿಸುವ ವೈದ್ಯರೇ ತಮ್ಮ ಜೀವಭಯದಿಂದ ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡಲು ನಿರಾಕರಿಸಿ ತಮ್ಮ ಹೃದಯಹೀನತೆಯನ್ನು ಮೆರೆದಿದ್ದು ಹೃದಯಘಾತವಾಗಿ ಎರಡು ತಾಸುಗಳ ಬಳಿಕ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಮುರುಡೇಶ್ವರದಲ್ಲಿ ಸೋಮವಾರ ನಡೆದಿದೆ. 

ಮೃತ ವ್ಯಕ್ತಿಯನ್ನು ರಾಜಸ್ಥಾನ ಮೂಲದ ಮುರುಡೇಶ್ವರದ ಬೇಕರಿ ಉದ್ಯಮ ನಡೆಸುತ್ತಿರುವ ಉಕ್ಮಾರಾಮ್ ಬೊರಾನ (65) ಎಂದು ಗುರುತಿಸಲಾಗಿದ್ದು   ಮುರುಢೇಶ್ವರದ ಸರ್ಕಾರಿ ಹಾಗೂ ಅಲ್ಲಿನ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದಾಗಿ ವ್ಯಕ್ತಿಯ ಸಾವು ಸಂಭವಿಸಿದೆ ಎಂದು ಸ್ಥಳಿಯರು ಹಾಗೂ ಅವರ ಕುಟುಂಬದವರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.

ಚಿಕಿತ್ಸೆ ನೀಡಿದರೆ ಬದುಕುಳಿಯುತ್ತಿದ್ದರು: ರಾಜಸ್ಥಾನ ಮೂಲದ ಉಕ್ಮರಾಂ ಕಳೆದ 35 ವರ್ಷಗಳಿಂದ ಮುರುಡೇಶ್ವರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ರೂಪಾಲಿ ಬೇಕರಿಯನ್ನು  ನಡೆಸುತ್ತಿದ್ದು, ಸೋಮವಾರ ಮುಂಜಾನೆ ಎದೆನೋವಿನಿಂದಾಗಿ ಖಾಸಗಿ ಕ್ಲಿನಿಕ್ ಗೆ ತೆರಳಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮರಳುವಾಗ ಮೂರ್ಚೆ ಹೋಗಿದ್ದಾರೆ. ತಕ್ಷಣವೇ 108 ಅಂಬ್ಯಲನ್ಸ್ ಗೆ ಕರೆ ಮಾಡಿದರೆ ಅವರು ನಾವು ಕೋವಿಡ್ ಸೇವೆಯಲ್ಲಿದ್ದೇವೆ ಬರಲು ಆಗುವುದಿಲ್ಲ ಎಂದು ಉತ್ತರಿಸಿದ್ದಾರೆ. ಆಟೋರಿಕ್ಷಾದವರು ಕೂಡ ವ್ಯಕ್ತಿಯನ್ನು ಸಾಗಿಸಲು ಹೆದರಿಕೊಳ್ಳುತ್ತಾರೆ. ಕೊನೆಗೆ ಮಾನವೀಯತೆಯುಳ್ಳ ಓರ್ವ ಆಟೋರಿಕ್ಷಾ ಚಾಲಕ ಅಸ್ವಸ್ಥ ಹುಕ್ಮರಾಂ ರನ್ನು ತಮ್ಮ ಆಟೋರಿಕ್ಷಾದಲ್ಲಿ ಹಾಕಿಕೊಂಡು ಆರ್.ಎನ್.ಎಸ್. ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿನ ವೈದ್ಯರು ಕೋವಿಡ್ ಪರೀಕ್ಷಾ ವರದಿ ಇಲ್ಲದೆ ನಾವು ರೋಗಿಯನ್ನು ನೋಡುವುದಿಲ್ಲ ಎಂದು ಹೇಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿನ ಕರ್ತವ್ಯದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಲ್ಲದೆ ವ್ಯಕ್ತಿ ಇನ್ನೂ ಜೀವಂತ ಇರುವಾಗಲೆ ಮೃತದೇಹವನ್ನು ಇಲ್ಲಿಂದ ತೆಗೆದುಕೊಂಡು ಹೋಗಿ ಇಲ್ಲವಾದರೆ ಪೊಲೀಸರಿಗೆ ದೂರು ನೀಡುವೆ ಎಂದು ಬೆದರಿಕೆ ಹಾಕಿದ್ದಾಗಿ ಮೃತ ವ್ಯಕ್ತಿಯ ಮಗ ಹಿತೇಶ ಎಂಬುವವರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.  

ಅಸ್ವಸ್ಥ ಹುಕ್ಮಾರಾಂರನ್ನು  ಅದೇ ಆಟೊರಿಕ್ಷಾದಲ್ಲಿ ಹಾಕಿಕೊಂಡು ಅಲ್ಲಿಂದ ಸ್ಥಳಿಯ ಕ್ಲಿನಿಕ್ ವೈದ್ಯರ ಬಳಿಗೆ ಓಡುತ್ತಾರೆ. ಅವರು ಪರೀಕ್ಷಿಸಿ ಇನ್ನೂ ಜೀವ ಇದೆ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಜೀವ ಉಳಿದೀತು ಎಂಬ ಸಲಹೆಯನ್ನು ನೀಡುತ್ತಾರೆ. ಇದೆಲ್ಲ ಆಗುವವರೆಗೆ ಸುಮಾರು 2-3ಗಂಟೆ ಸಮಯ ವ್ಯರ್ಥವಾಗುತ್ತದೆ. ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ  ಎರಡು ತಾಸುಗಳ ಕಾಲ ಜೀವ ಹಿಡಿದುಕೊಂಡಿಟ್ಟಿದ್ದ ತುಕರಾಂ ಕೊನೆಗೆ ಈ ಲೋಕದ ಜಂಜಾಟವೇ ಬೇಡವೆಂದು ದಾರಿ ಮಧ್ಯದಲ್ಲೇ  ದೇಹತ್ಯಾಗ ಮಾಡಿದ್ದಾರೆ. ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಅಧಿಕೃತವಾಗಿ ವ್ಯಕ್ತಿಯು ಸಾವನ್ನಪ್ಪಿರುವುದಾಗಿ ಘೋಷಿಸಲಾಗಿದೆ. 

ವೈದ್ಯರ ಹೃದಯಹೀನತೆಯಿಂದಾಗಿ ಬದುಕುಳಿಯಬೇಕಾಗಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಭಾರಿ ಆಕ್ರೋಶವನ್ನುಂಟು ಮಾಡಿದೆ. ಮುರುಡೇಶ್ವದ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಆಗ್ರಹಿಸಿದ್ದಾರೆ. 

ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ತಮ್ಮ ತಂದೆಯನ್ನು ಕಳೆದುಕೊಳ್ಳುವಂತಾಯಿತು ಎಂದು ಮೃತ ವ್ಯಕ್ತಿಯ ಮಗ ಹಿತೇಶ ಆರೋಪಿಸಿದ್ದಾರೆ.

ಕೋವಿಡ್ ವರದಿ ನೆಗೆಟಿವ್: ಮೃತ ವ್ಯಕ್ತಿಯ ಕೊರೋನಾ ಸೋಂಕು ಪರೀಕ್ಷೆಯನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ನಡೆಸಿದ್ದು ವರದಿ ನಗೆಟಿವ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಯಾವ ಭಯದಿಂದ ವೈದ್ಯರು ಹದಯಘಾತಕ್ಕೊಳಗಾದ ವ್ಯಕ್ತಿಯನ್ನು ಮುಟ್ಟಲು ಹೆದರಿದ್ದರೂ  ಆ ವ್ಯಕ್ತಿಯ ಕೊರೊನಾ ವರದಿಯು ನೆಗೆಟಿವ್ ಬಂದಿದೆ. ವೈದ್ಯರು ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲನೆ ಮಾಡಿದ್ದಲ್ಲಿ ಓರ್ವ ವ್ಯಕ್ತಿಯ ಜೀವ ಉಳಿಯುತ್ತಿತ್ತು. ಇದಕ್ಕೆ ರಾಜ್ಯಸರ್ಕಾರದ ನೀತಿಗಳೇ ಕಾರಣವಾಗಿದ್ದು ತಮ್ಮ ತಂದೆಯ ಸಾವಿಗೆ ಮುರುಡೇಶ್ವರದ ಸರ್ಕಾರಿ, ಖಾಸಗಿ ಹಾಗೂ ಸರ್ಕಾರವೇ ನೇರ ಹೋಣೆಯಾಗಿದೆ ಎಂದು ಮೃತ ವ್ಯಕ್ತಿಯ ಪುತ್ರ ಹಿತೇಶ್ ಆರೋಪಿಸಿದ್ದಾರೆ.  

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...