'ಸಸಿಕಾಂತ್ ಸೆಂಥಿಲ್ ಮೇಲಿನ ಸಂಘಟಿತ ದಾಳಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳಿಸುವ ಫ್ಯಾಸಿಸ್ಟ್ ಷಡ್ಯಂತ್ರ'

Source: sonews | By Staff Correspondent | Published on 11th September 2019, 5:28 PM | Coastal News | Special Report | Don't Miss |

ಮಂಗಳೂರು: 'ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯಕ್ಕೊಳಗಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿ ಭಾರತ ಆಡಳಿತ ಸೇವೆಯ ಹುದ್ದೆಗೆ ರಾಜೀನಾಮೆ ನೀಡಿರುವ  ದ.ಕ. ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಮೇಲೆ ಬಿಜೆಪಿಯ ಸಂಸತ್ ಸದಸ್ಯರು, ಶಾಸಕರು,  ಸಂಘಪರಿವಾರದ ಸಂಘಟನೆಗಳು ಸಂಘಟಿತ ದಾಳಿ ನಡೆಸಿ ಅವರನ್ನು ದೇಶದ್ರೋಹಿಯಾಗಿ ಬಿಂಬಿಸುತ್ತಿದೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ, ಸಾಂವಿಧಾನಿಕ‌ ಸಂಸ್ಥೆಗಳನ್ನು ನಾಶಗೊಳಿಸುವ ಫ್ಯಾಸಿಸ್ಟ್ ಷಡ್ಯಂತ್ರದ ಭಾಗ ಎಂದು ಮಂಗಳೂರಿನ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜ್ಞಾವಂತ ಜನತೆ ಎಚ್ಚರದಿಂದ ಇಂತಹ ಶಕ್ತಿಗಳನ್ನು ಹಿಮ್ಮೆಟಿಸಲು ಒಂದಾಗಬೇಕು ಎಂದು ಅವರು ವಿನಂತಿಸಿದ್ದಾರೆ.

ಸಸಿಕಾಂತ್ ಸೆಂಥಿಲ್ ಈ ದೇಶದ ಗೌರವಾನ್ವಿತ ಪ್ರಜೆಯಾಗಿ ಎತ್ತಿರುವ ಪ್ರಶ್ನೆಗಳು ಸರಿಯಾಗಿವೆ. ಭಾರತ ಸರಕಾರದ ನೇತೃತ್ವ ವಹಿಸುವವರು ಈ ದೇಶದ ಸಂವಿಧಾನದ ಮೂಲಭೂತ ಆಶಯಗಳಿಗೆ ಬದ್ಧರಾಗಿರಬೇಕಾಗುತ್ತದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಸರಕಾರ ಪದೇ ಪದೆ ಈ ನಿಯಮವನ್ನು ಉಲ್ಲಂಘಿಸುತ್ತಿದೆ. ದೇಶದ ಬಹುತ್ವವನ್ನು ತಿರಸ್ಕರಿಸುವ, ಅಲ್ಪ ಸಂಖ್ಯಾತ ಸಮುದಾಯಗಳ ನಾಗರಿಕ ಹಕ್ಕುಗಳನ್ನು ನಿರಾಕರಿಸುವ, ಸಂಸತ್ತಿನ ಪರಮಾಧಿಕಾರವನ್ನು ಏಕಪಕ್ಷೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ನಾಗರಿಕ ಸಮಾಜವನ್ನು ಸದಾ ಉದ್ವಿಗ್ನತೆಯಲ್ಲೇ ಇರಿಸಿ, ಅದರ ಮರೆಯಲ್ಲಿ ಸಾಂವಿಧಾನಿಕ‌ ಸಂಸ್ಥೆಗಳನ್ನು, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಫ್ಯಾಸಿಸ್ಟ್ ನೀತಿಯನ್ನು ಅನುಸರಿಸಲಾಗುತ್ತಿದೆ. ಇ‌ಂತಹ ಜನವಿರೋಧಿ, ಸಂವಿಧಾನಗಳ ಆಶಯಕ್ಕೆ ವ್ಯತಿರಿಕ್ತವಾದ ಕ್ರಮಗಳನ್ನು ಪ್ರಶ್ನಿಸಿದ ವಿರೋಧ ಪಕ್ಷಗಳ ನಾಯಕರ ಸಹಿತ ಬರಹಗಾರರು, ಕಲಾವಿದರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ತಕ್ಷಣವೇ "ದೇಶದ್ರೋಹಿ" ಎಂದು ಕರೆದು ಏಕಾಂಗಿಯಾಗಿ ಮಾಡಲಾಗುತ್ತದೆ. ವ್ಯವಸ್ಥಿತವಾಗಿ ಅವರ ತೇಜೋವಧೆ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಷರಷ ಬೇಟೆಯಾಡಲಾಗುತ್ತದೆ‌. ಆ ಮೂಲಕ ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ ಮತ್ತು ಸಮಾಜದಲ್ಲಿ ಭೀತಿಯ ವಾತಾವರಣವನ್ನು ಮೂಡಿಸಲಾಗುತ್ತದೆ ಎಂದು ಹೇಳಿದರು.

ದೇಶದ ಇಂತಹ ಅಪಾಯಕಾರಿ ಪರಿಸ್ಥಿತಿ, ಫ್ಯಾಸಿಸ್ಟ್ ಮಾದರಿಯ ಆಡಳಿತದ ಕುರಿತು ಆತಂಕಗೊಂಡು ಅಪಾರ ಅನುಕೂಲಗಳನ್ನು ಒದಗಿಸುವ, ಐಷಾರಾಮಿ ಬದುಕಿನ ಸವಲತ್ತುಗಳುಲ್ಲ 'ಭಾರತ ಆಡಳಿತ ಸೇವೆ' ಯ ಉದ್ಯೋಗಕ್ಕೆ ಸಸಿಕಾಂತ್ ಸೆಂಥಿಲ್ ರಾಜಿನಾಮೆ ನೀಡಿದ್ದಾರೆ. ಆ ಮೂಲಕ‌ ಜನತೆಯ ಗಮನವನ್ನು ದೇಶದಲ್ಲಿ ನಡೆಯುತ್ತಿರುವ ಅಪಾಯಕಾರಿ ಬೆಳವಣಿಗೆಯ ಕಡೆಗೆ ಸೆಳೆಯಲು ಯತ್ನಿಸಿದ್ದಾರೆ. ಓರ್ವ ದಕ್ಷ, ಭ್ರಷ್ಟಾಚಾರದ ಕಳಂಕವಿಲ್ಲದ ಅಧಿಕಾರಿಯ, ಅಪಾರ ಬದ್ದತೆ ಬೇಡುವ ಇಂತಹ ಕ್ರಮವನ್ನು ನಾಗರಿಕ ಸಮಾಜ ಗೌರವಿಸಬೇಕು. ಅವರು ಎತ್ತಿದ ಪ್ರಶ್ನೆಗಳತ್ತ ಗಮನ ಹರಿಸಬೇಕು. ಆಳುವ ಜನಗಳು, ಅವರ ಪರವಾಗಿರುವವರು ತಮ್ಮ ಆಡಳಿತದ ತಪ್ಪುಗಳು ಉದ್ದೇಶ ಪೂರ್ವಕವಲ್ಲದಿದ್ದರೆ ಅದನ್ನು ಸರಿ ಪಡಿಸಬೇಕು, ಅಥವಾ ಸಸಿಕಾಂತ್ ಸೆಂಥಿಲ್ ಎತ್ತಿರುವ ಪ್ರಶ್ನೆಗಳು, ಮಾಡಿರುವ ಆರೋಪಗಳು ಹೇಗೆ ತಪ್ಪು ಎಂಬುದನ್ನು ಆಧಾರ ಸಹಿತವಾಗಿ ನಿರೂಪಿಸಬೇಕು ಎಂದರು.

 "ಪ್ರಶ್ನೆ ಮಾಡುವುದೆ ಅಪರಾಧ, ದೇಶದ್ರೋಹ ಎಂಬ ಪರಿಸ್ಥಿತಿ ದೇಶದಲ್ಲಿದೆ" ಎಂಬ ಸಸಿಕಾಂತ್ ಸೆಂಥಿಲ್ ಅವರ ಆರೋಪವನ್ನು ಸಾಕ್ಷಿ ಸಮೇತ ನಿರೂಪಿಸುವಂತೆ ಅವರ ಮೇಲೆ  ಬಿಜೆಪಿ ಪಕ್ಷ, ಜನಪ್ರತಿನಿಧಿಗಳು ಸಂಘಟಿತ ದಾಳಿಯನ್ನು ನಡೆಸಿದ್ದಾರೆ.  ಸಾಮಾಜಿಕ‌ ಜಾಲತಾಣದಲ್ಲಿರುವ ತಮ್ಮ ಟ್ರೋಲ್ ಪಡೆಗಳ ಮೂಲಕ ಅವರ ತೇಜೋವಧೆಯನ್ನು ಅಸಹ್ಯಕರವಾಗಿ ನಡೆಸಲಾಗುತ್ತಿದೆ‌. ಭ್ರಷ್ಟಾಚಾರದ ಆಧಾರ ರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ದೇಶದ್ರೋಹಿ, ನಕ್ಸಲೈಟ್ ಎಂದು ಸಂಸತ್ ಸದಸ್ಯರು, ಶಾಸಕರಂತಹ ಉನ್ನತ ಸ್ಥಾನದಲ್ಲಿರುವವರು ಆರೋಪಿಸುತ್ತಿದ್ದಾರೆ‌. ಶಾಸಕ ಸುನಿಲ್ ಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಆತ್ಮಹತ್ಯೆಯ ಸ್ಥಿತಿ ನಿರ್ಮಿಸುತ್ತೇವೆ" ಎಂದು ಬಹಿರಂಗವಾಗಿ ಬೆದರಿಕೆಯೊಡ್ಡಿದ್ದಾರೆ‌. 

ಈ ಎಲ್ಲಾ ವ್ಯವಸ್ಥಿತ ದಾಳಿಗಳು ದೇಶದಲ್ಲಿ ಉದ್ಭವಿಸಿರುವ ಭಯಾನಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸಸಿಕಾಂತ್ ಸೆಂಥಿಲ್ ಮೇಲಿನ ಫ್ಯಾಸಿಸ್ಟ್ ಮಾದರಿಯ ಈ ರೀತಿಯ ನಾಚಿಕೆಗೇಡು ದಾಳಿಯನ್ನು ದಕ್ಷಿಣ ಕ‌ನ್ನಡ ಜಿಲ್ಲೆಯ ನಾಗರಿಕ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಸಸಿಕಾಂತ್ ಸೆಂಥಿಲ್ ಅವರಿಗೆ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅವರು ಒಂಟಿಯಲ್ಲ, ಅವರ ಜೊತೆಗೆ ನಾವೆಲ್ಲ ಇರುತ್ತೇವೆ. ಹಿಂದೆಯೂ ಈ ರೀತಿಯ ದಾಳಿಗಳು ಸಾಹಿತಿಗಳು, ಬರಹಗಾರರು, ಕಲಾವಿದರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮೇಲೆ ವ್ಯವಸ್ಥಿತವಾಗಿ ನಡೆದಿದೆ. ಈಗ ಸಸಿಕಾಂತ್ ಸೆಂಥಿಲ್ ರನ್ನು ಬಲಿ ಪೀಠದಲ್ಲಿ ನಿಲ್ಲಿಸಲಾಗಿದೆ. ಆ ಮೂಲಕ ಇನ್ನುಳಿದ ಪ್ರತಿರೋಧದ ಧ್ವನಿಗಳನ್ನು ಮೌನವಾಗಿಸುವ ಸಂಚು ನಡೆದಿದೆ. ಇದು ದೇಶದ ಪ್ರಜಾಪ್ರಭುತ್ವ, ಜಾತ್ಯಾತೀತತೆ, ಗಣತಂತ್ರ ವ್ಯವಸ್ಥೆ ಅಗ್ನಿಪರೀಕ್ಷೆಗೆ ಒಳಗಾಗಿರುವ ಕಾಲ. ನಾವೆಲ್ಲ ಜೊತೆಯಾಗಿ ಇಂತಹ ಪರಿಸ್ಥಿತಿಯ ವಿರುದ್ಧ ಸೆಣಸಬೇಕಿದೆ. ನಾವು ನಮ್ಮ ಈ ಜವಾಬ್ದಾರಿಯ ಭಾಗವಾಗಿಯೇ ಸಸಿಕಾಂತ್ ಸೆಂಥಿಲ್ ಜೊತೆಗೆ ನಿಲ್ಲುತ್ತೇವೆ. ಮುನ್ನಡೆಯುತ್ತೇವೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

ಈ ಸಂದರ್ಭ  ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಖಿಲ ಭಾರತ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ ನರೇಂದ್ರ ನಾಯಕ್, ಬರಹಗಾರ, ನಿವೃತ್ತ ಪ್ರಾಂಶುಪಾಲರಾದ ಚಂದ್ರಕಲಾ ನಂದಾವರ, ಹಿರಿಯ ದಲಿತ ಮುಖಂಡರಾದ ಎಮ್ ದೇವದಾಸ್, ಫಾರಂ ಫಾರ್ ಜಸ್ಟೀಸ್ ಅಧ್ಯಕ್ಷ ದಯಾನಾಥ ಕೋಟ್ಯಾನ್ , ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷ ಯಶವಂತ ಮರೋಳಿ, ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆಯ ಸಂಯೋಜಕರಾದ ವಿದ್ಯಾದಿನಕರ್, ಡಾ. ರಾಜೇಂದ್ರ ಉಡುಪ, ಐ ಕೆ ಬೊಳವಾರು, ವಾಸುದೇವ ಉಚ್ಚಿಲ, ದಿನೇಶ್ ಹೆಗ್ಡೆ ಉಳೇಪಾಡಿ, ಮೋಹನ ಚಂದ್ರ, ಚಂದ್ರಹಾಸ ಉಳ್ಳಾಲ್, ಎನ್ ಇಸ್ಮಾಯಿಲ್, ಡಾ‌ ಕೃಷ್ಣಪ್ಪ ಕೊಂಚಾಡಿ, ರಘು ಎಕ್ಕಾರು, ವಿಲ್ಫ್ರೆಡ್ ಡಿಸೋಜ, ಪ್ರಭಾಕರ ಕಾಪಿಕಾಡ್, ಶ್ಯಾಮ ಸುಂದರ ರಾವ್, ಎನ್ ರಾಘವ, ವಿಲ್ಸನ್ ಕಟೀಲ್ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...