ದೇಶದಾದ್ಯಂತ ಹಲವು ಶಿಕ್ಷಣ ಸಂಸ್ಥೆಗಳ ಪೋಷಕರಾಗಿದ್ದ ಉದ್ಯಮಿ ಮುಝಪ್ಫರ್ ಕೋಲಾ ನಿಧನ

Source: sonews | By Staff Correspondent | Published on 23rd July 2020, 4:18 PM | Coastal News | Don't Miss |

ಭಟ್ಕಳ: ದೇಶದಾದ್ಯಂತ ಹಲವು ಶಿಕ್ಷಣ ಸಂಸ್ಥೆಗಳ ಪೋಷಕರಾಗಿದ್ದ ಭಟ್ಕಳದ ಖ್ಯಾತ ಉದ್ಯಮಿ ಮುಹಮ್ಮದ್ ಮುಝಪ್ಫರ್ ಕೋಲಾ(70) ಬುಧವಾರ ರಾತ್ರಿ ಹೃದಯಸ್ಥಂಬನ ನಿಂತು ಹೋದ ಕಾರಣ ಮಂಗಳೂರಿನ ಯನ್ನಪೋಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 

ಅನಾರೋಗ್ಯದ ನಿಮಿತ್ತ ಕಳೆದ ಎರಡು ವಾರಗಳ ಹಿಂದೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬುಧವಾರ ರಾತ್ರಿ 11ಗಂಟೆ ಸುಮಾರಿಗೆ ಅವರ ಹೃದಯಘಾತ ಸಂಭವಿಸಿದ ಸಾವನ್ನಪ್ಪಿರುವುದಾಗಿ ಕುಟುಂಬ ಮೂಲಗಳು ದೃಢಪಡಿಸಿವೆ. ಬುಧವಾರ ರಾತ್ರಿಯೆ ಮೃತದೇಹವನ್ನು ಮಂಗಳೂರಿನಿಂದ  ಭಟ್ಕಳಕ್ಕೆ ತಂದು ಗುರುವಾರ ಬೆಳಗಿನ ಜಾವ ಅವರ ಅಳಿಯ ಮೌಲಾನ ಷವೂರ್ ನದ್ವಿಯವರು ಮೈಯ್ಯತ್ ನಮಾಝ್ ನೆರವೇರಿಸುವುದರ ಮೂಲಕ ಧಫನ್ ಕಾರ್ಯವನ್ನು ಪೂರ್ಣಗೊಳಿಸಿದರು. 
ಮೃತರು ನಾಲ್ಕು ಪುತ್ರರು, ನಾಲ್ಕು ಪುತ್ರಿಯರು, ಅಪಾರ ಕುಟುಂಬ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ. ಅಲ್ಲಾಹನು ಇವರಿಗೆ ಮಗ್ಫಿರತ್ ನೀಡಲಿ. 

1975 ರಿಂದ 2000 ಇಸ್ವಿಯ ವರೆಗೆ ಸುಮಾರು 25 ವರ್ಷಗಳ ಕಾಲ ಗಲ್ಫ್ ರಾಷ್ಟ್ರಗಳಲ್ಲಿ ಪ್ರಮುಖ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮುಝಪ್ಫರ್ ಕೋಲಾ ದೇಶ ವಿದೇಶಗಳಲ್ಲಿ ಖ್ಯಾತಿಯನ್ನು ಗಳಿಸಿದ್ದರು. ದೇಶದ ಮಂಗಳೂರು, ಬೆಂಗಳೂರು, ಮುಂಬೈಗಳಲ್ಲಿ ತಮ್ಮ ಉದ್ಯಮಗಳನ್ನು ಸ್ಥಾಪಿಸಿ ಸಮುದಾಯದ ನಿರೂದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದರು. ಅಲ್ಲದೆ ಬಹರೈನ್, ದುಬೈ, ಮಸ್ಕತ್, ಕುವೈತ್, ಖತರ್ ರಾಷ್ಟ್ರದಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಂಡಿದ್ದರು. ಅಲ್ಲದೆ ಭಟ್ಕಳದಲ್ಲಿ ಮೊತ್ತಮೊದಲ ಶಾಪಿಂಗ್ ಕಾಂಪ್ಲೆಕ್ಸ್ ‘ಆಯೀಶಾ ಪ್ಲಾಝಾ’ ಆರಂಭಿಸಿದ ಹೆಗ್ಗಳಿಕೆ ಇವರದ್ದು.

ಹೆಚ್ಚಿನ ವಿದ್ಯಾಭ್ಯಾಸ ಪಡೆಯದ ಇವರು ಭಟ್ಕಳದಲ್ಲಿ ನೌನಿಹಾಲ್ ಸೆಂಟ್ರಲ್ ಸ್ಕೂಲ್ ಎಂಬ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕುವುದರ ಮೂಲಕ ಔಪಚಾರಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣದ ವ್ಯವಸ್ಥೆ ಮಾಡಿ ಸಮುದಾಯದ ವಿದ್ಯಾರ್ಥಿಗಳಲ್ಲಿ ನೈತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಿದ್ದರು. ಭಟ್ಕಳದಲ್ಲಿ ಯಾವುದೇ ಆರೋಗ್ಯಸೇವೆ ಇಲ್ಲದ ಆಗಿನ ಸಂದರ್ಭದಲ್ಲಿ ಕೊಲಾಕೋ ಆಸ್ಪತ್ರೆ ( ಈಗಿನ ವೆಲ್ಫೇರ್ ಆಸ್ಪತ್ರೆ) ಸ್ಥಾಪಿಸಿ ಕಡಿಮೆ ವೆಚ್ಚದಲ್ಲಿ ಬಡವರಿಗೆ ಆರೋಗ್ಯ ಸೇವೆ ನೀಡುವ ವ್ಯವಸ್ಥೆಯನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. 

ದೇಶದ ವಿವಿಧ ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಹಾಗೂ ಧಾರ್ಮಿಕ ವಿದ್ವಾಂಸರ ಕುರಿತು ಅಪಾರ ಗೌರವನ್ನು ಹೊಂದಿದ್ದ ಇವರು ಬಹುತೇಕ ಶಿಕ್ಷಣ ಸಂಸ್ಥೆಗಳಿಗೆ ಉದಾರವಾಗಿ ಧನಸಹಾಯ ನೀಡುವುದರ ಮೂಲಕ ಸಂಸ್ಥೆಯ ಪೋಷಕರಾಗಿದ್ದರು. ಧಾರ್ಮಿಕ ವಿದ್ವಾಂಸರು, ಉಲೆಮಾಗಳಿಗೆ ಹೆಚ್ಚಿನ ಸಹಾಯವನ್ನೂ ಒದಗಿಸುತ್ತಿದ್ದರು. 

ಈ ಕುರಿತಂತೆ ಮುಝಪ್ಫರ್ ಕೋಲಾ ರವರ ಅಳಿಯ ಹಾಗೂ ನೌನಿಹಾಲ್ ಶಿಕ್ಷಣಸಂಸ್ಥೆಯ ಪ್ರಮುಖ ಮೌಲಾನ ಮೂಸಾ ನದ್ವಿ ಮಾಧ್ಯಮಗಳೊಂದಿಗೆ ಮಾತನಾಡಿ, ದಿವಂಗತ ಮುಝಪ್ಫರ್ ಕೋಲಾರವರು ಉತ್ತಮ ಗುಣಗಳ ಕಣಜವಾಗಿದ್ದರು. ಅವರು ಸದಾ ಹಿರಿಯರನ್ನು ಗೌರವಿಸುತ್ತಿದ್ದರು. ವಿಶೇಷವಾಗಿ ಹಿರಿಯ ಧಾರ್ಮಿಕ ವಿದ್ವಾಂಸರೊಂದಿಗೆ ತುಂಬಾ ಆತ್ಮೀಯತೆಯಿಂದ ಇರುತ್ತಿದ್ದು ಜಗತ್ವಿಖ್ಯಾತ ಮೌಲಾನ ಅಲಿಮಿಯಾ ನದ್ವಿ(ರ) ರೊಂದಿಗೆ ತುಂಬ ಒಡನಾಟ ಇಟ್ಟುಕೊಂಡಿದ್ದರು. ಅಲ್ಲದೆ ನದ್ವತುಲ್ ಉಲೆಮಾ, ದೇವಬಂದ್ ಸಂಸ್ಥೆಯ ವಿದ್ವಾಂಸರೊಂದಿಗೆ ಕೂಡ ಉತ್ತಮ ಬಾಂಧ್ಯವನ್ನು ಇಟ್ಟುಕೊಂಡಿದ್ದರು. ಬಡವರ ಕುರಿತಂತೆ ಅತ್ಯಂತ ಕಾಳಜಿಯುಳ್ಳವರಾಗಿದ್ದು ಅಪರಾ ಪ್ರಮಾಣದಲ್ಲಿ ಝಕಾತ್ ಮತ್ತು ಸದ್ಕಾಗಳನ್ನು ನೀಡುತ್ತಿದ್ದರು. ಹಜ್ ಮತ್ತು ಉಮ್ರಾ ನಿರ್ವಹಿಸಲು ಆಗದ ಬಹಳಷ್ಟು ಜನರಿಗೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಹಜ್ ಮತ್ತು ಉಮ್ರಾದ ಖರ್ಚುವೆಚ್ಚಗಳನ್ನು ಭರಿಸುತ್ತಿದ್ದರು. ಅಲ್ಲದೆ ಮಕ್ಕಾದಲ್ಲಿ ಒಂದು ಮನೆಯನ್ನು ಬಾಡಿಗೆ ಪಡೆದು ಬಡ ಯಾತ್ರಿಗಳಿಗೆ ಉಳಿಯಲು ಅವಕಾಶ ಮಾಡಿಕೊಡುತ್ತಿದ್ದರು. ಕೊನೆಯ ದಿನಗಳಲ್ಲಿ ಇವರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ ಒಂದು ದಿನವೂ ತಮಗೆ ಇಂತಹ ತೊಂದರೆಯಿದೆ ಎಂದು ಹೇಳಿಕೊಳ್ಳುತ್ತಿರಲಿಲ್ಲ ಎಂದು ಮಾಹಿತಿ ನೀಡಿದರು. 

ಹಲವು ಗಣ್ಯರು ಹಾಗೂ ಸಂಘಸಂಸ್ಥೆಗಳಿಂದ ಸಂತಾಪ: ಮುಝಪ್ಫರ್ ಕೋಲಾ ಸಮುದಾಯದ ಆಸ್ತಿಯಾಗಿದ್ದು ಇವರ ಅಗಲಿಕೆಯು ಅತ್ಯಂತ ಶೋಕಭರಿತವಾಗಿದೆ ಅಲ್ಲಾಹನು ಇವರಿಗೆ ಮಗ್ಫಿರತ್ ನೀಡಲಿ ಮತ್ತು ಇವರ ಕುಟುಂಬಕ್ಕ ಇವರ ಅಗಲಿಕೆಯನ್ನು ಸಹಿಸುವ ಧೈರ್ಯ ನೀಡಲಿ ಎಂದು ಪ್ರಾರ್ಥಿಸಿರುವ ಭಟ್ಕಳದ ಹಲವರು ಗಣ್ಯರು ಹಾಗೂ ಸಂಘಸಂಸ್ಥೆಗಳ ಮುಖಂಡರು ಮತ್ತು ಶಿಕ್ಷಣ ಸಂಸ್ಥೆಗಳ ಮುಖಂಡರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...