ಹಣ ಹೆಚ್ಚು ಕೊಡ್ತೀವಂದ್ರೂ ಬೇಕಾದಷ್ಟು ಸಿಗ್ತಿಲ್ಲ 5 ರೂ. ಮಾಸ್ಕ್‍ಗೆ ಈಗ 25 ರೂ.!!

Source: S O News Service | By Office Staff | Published on 18th February 2020, 10:00 PM | Coastal News |

ಕಾರವಾರ: ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‍ಗೆ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಸಣ್ಣಗೆ ನೆಗಡಿ ಬಂದರೂ ಹೆದರಿಕೊಳ್ಳುವಷ್ಟು ಜನರನ್ನು ಈ ಕೊರೊನಾ ವೈರಸ್ ಕಂಗೆಡಿಸಿಬಿಟ್ಟಿದೆ. ಈ ಕೊರೊನಾ ವೈರಸ್ ಭೀತಿಯಿಂದ ಜನ ಈಗ ಮಾಸ್ಕ್‍ನ ಮೊರೆ ಹೋಗಿದ್ದಾರೆ.
ಚೀನಾದಲ್ಲಿನ ಕೊರೊನಾ ವೈರಸ್‍ನ ಭೀತಿಯಿಂದ ಜಿಲ್ಲೆಯಲ್ಲಿ ಮಾಸ್ಕ್‍ಗಳು ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದೆ. 5 ರೂಪಾಯಿಗೆ ಸಿಗುತ್ತಿದ್ದ ಮಾಸ್ಕ್‍ಗಳ ಬೆಲೆ ಈಗ 25 ರೂಪಾಯಿ ಆಗಿದೆ. ಇನ್ನು 25 ರೂಪಾಯಿ ಕೊಟ್ಟು ತೆಗೆದುಕೊಳ್ಳುವುದಕ್ಕೆ ಜನ ರೆಡಿ ಇದ್ದರೂ, ಮೆಡಿಕಲ್ ಶಾಪ್‍ನಲ್ಲಿ ಈ ಮಾಸ್ಕ್‍ಗಳ ಸ್ಟಾಕ್ ಕೂಡ ಇಲ್ಲವಾಗಿದೆ.
ಜನರನ್ನು ಭಯಭೀತರನ್ನಾಗಿಸಿದ ಈ ಕೊರೊನಾ ವೈರಸ್‍ನ ಕಾರಣದಿಂದ ಈಗ ಎಲ್ಲರೂ ಮುಸುಕುಧಾರಿಗಳಾಗುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಜನರು ಹೆಚ್ಚೆಚ್ಚು ಈ ಮಾಸ್ಕ್‍ನ ಮೊರೆ ಹೋಗುತ್ತಿದ್ದಾರೆ. ಅದೂ ಅಲ್ಲದೇ, ಹೆಚ್ಚಿನ ಮಾಸ್ಕ್‍ಗಳು ಚೀನಾಕ್ಕೆ ರಫ್ತಾಗುತ್ತಿದೆಯಂತೆ. ಆ ಕಾರಣದಿಂದ ಈಗ ಮಾಸ್ಕ್‍ಗಳು ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆÉ.
ಈ ಬಗ್ಗೆ ‘ನುಡಿಜೇನು’ ಪತ್ರಿಕೆಯೊಂದಿಗೆ ಮಾತನಾಡಿದ ಕಾರವಾರದ ಮೆಡಿಕಲ್ ಶಾಪ್‍ವೊಂದರ ಮಾಲೀಕರು, ‘ಜೆನೆರಿಕ್ ಮೆಡಿಸಿನ್ ಸೆಂಟರ್‍ಗಳಲ್ಲಿ ಮಾಸ್ಕ್‍ಗೆ 2 ರೂ. ಇತ್ತು. ಆದರೆ, ಈಗ ಈ ಮಳಿಗೆಗಳಲ್ಲಿ ಮಾಸ್ಕ್‍ಗಳು ಖಾಲಿಯಾಗಿವೆ. ಇಂಡಿಯನ್ ಎಂಬಾಸಿಯಿಂದ ಜೆನೆರಿಕ್ ಮೆಡಿಸಿನ್ ಸೆಂಟರ್‍ಗಳಿಗೆ ಕರೆ ಬಂದಿದ್ದು, ಸುಮಾರು 2 ಲಕ್ಷ ಮಾಸ್ಕ್‍ಗಳನ್ನು ನೀಡುವಂತೆ ಕೇಳಿದ್ದರು. ಆದರೆ, ಎಲ್ಲಿಯೂ ಸಿಗುತ್ತಿಲ್ಲ’ ಎಂದರು.
‘ಇನ್ನು, ಖಾಸಗಿ ಮೆಡಿಕಲ್ ಶಾಪ್‍ಗಳಲ್ಲಿ 5 ರೂ. ಇದ್ದ ಮಾಸ್ಕ್ ಇದೀಗ 25 ರೂ. ಆಗಿದೆ. ಈ ಮೊದಲೆಲ್ಲ ಎಲ್ಲೋ ಅಪರೂಪಕ್ಕೆ ಈ ಮಾಸ್ಕ್‍ಗಳನ್ನು ಖರೀದಿ ಮಾಡುತ್ತಿದ್ದರು. ಇದೀಗ ಟ್ಯಾಬ್ಲೆಟ್, ಔಷಧಿಗಿಂತಲೂ ಹೆಚ್ಚು ಈ ಮಾಸ್ಕ್‍ಗಳ ಮಾರಾಟ ನಡೆಯುತ್ತಿದೆ. ಅದರಲ್ಲೂ ತ್ರಿಬಲ್ ಲೇಯರ್ ಮಾಸ್ಕ್‍ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ’ ಎನ್ನುತ್ತಾರೆ ಅವರು. 
ಒಟ್ಟಾರೆ, ಕೊರೊನಾ ವೈರಸ್‍ನ ಪರಿಣಾಮ ಜನರ ಮೇಲಷ್ಟೇ ಅಲ್ಲ. ಮಾರುಕಟ್ಟೆಯ ವ್ಯಾಪಾರ- ವಹಿವಾಟಿನ ಮೇಲೂ ಬೀರಿದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...