ಹಾಸ್ಯ ಮತ್ತು ಸಿಟ್ಟು ಒಟ್ಟಿಗೆ ವಾಸಿಸಬಲ್ಲವೇ?

Source: sonews | By Staff Correspondent | Published on 13th November 2017, 11:46 PM | National News | Special Report | Public Voice | Don't Miss |

ಒಂದು ಒಳ್ಳೆಯ ವ್ಯಂಗ್ಯಚಿತ್ರ ನಗುವಿಗಿಂತ ಜಾಸ್ತಿ ಅಲೋಚನೆಯನ್ನು ಪ್ರಚೋದಿಸಬೇಕು.

ಎನ್. ಪೊನ್ನಪ್ಪ ಬರೆಯುತ್ತಾರೆ:

ಇದೇ ಅಕ್ಟೋಬರ್ ೨೯ರಂದು ತಮಿಳುನಾಡಿನ ವ್ಯಂಗ್ಯಚಿತ್ರಕಾರ ಜಿ. ಬಾಲಾ ಅವರನ್ನು ಪೊಲೀಸರು ಬಂಧಿಸಿದರು. ಏಕೆಂದರೆ ಇತ್ತೀಚೆಗೆ ಅವರು ಒಂದು ವ್ಯಂಗ್ಯಚಿತ್ರವನ್ನು ರಚಿಸಿದ್ದರು. ಅದರಲ್ಲಿ ಅವರು ಮೂರು ಬೆತ್ತಲೆ ಪುರುಷರನ್ನು ಚಿತ್ರಿಸಿದ್ದರು. ಆ ಮೂವರಲ್ಲಿ ಒಬ್ಬರು ಟೈ ಅನ್ನು ಮತ್ತೊಬ್ಬರು ಟೋಪಿಯನ್ನು ಧರಿಸಿದ್ದರು ಮತ್ತು ಮೂವರೂ ತಮ್ಮ ಮರ್ಮಾಂಗಗಳನ್ನು ನೋಟುಗಳ ಕಂತೆಯಿಂದ ಮುಚ್ಚಿಕೊಂಡಿದ್ದರು. ಅವರ ಕಾಲುಗಳ ಬಳಿ ಸುಟ್ಟು ಕರಕಲಾಗಿರುವ ಮಗುವೊಂದು ಮುಖ ಅಡಿಯಾಗಿ ಬಿದ್ದಿತ್ತು ಮತ್ತು ಅದರ ಬೆನ್ನ ಮೇಲಿದ್ದ ಬೆಂಕಿ ಇನ್ನೂ ಉರಿಯುತ್ತಿರುವಂತಿತ್ತು. ಆ ಮಗುವು ನೋಡಲು ಹೆಚ್ಚೂ ಕಡಿಮೆ ೨೦೧೫ರಲ್ಲಿ ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಬಂದು ಬಿದ್ದಿದ್ದ ಅಯ್ಲಾನ್ ಕುರ್ದಿ ಎಂಬ ನಿರಾಶ್ರಿತ ಮಗುವನ್ನೇ ಹೋಲುತ್ತಿತ್ತು. ಆದರೆ ಅದಕ್ಕಿಂತ ಭೀಕರವಾಗಿತ್ತು. ಈ ವ್ಯಂಗ್ಯಚಿತ್ರವು ತಿರುನಲ್ವೇಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಕೂಲಿ ಕಾರ್ಮಿಕನೊಬ್ಬ ತನ್ನ ಇಬ್ಬರು ಮಕ್ಕಳನ್ನು ಮತ್ತು ಹೆಂಡತಿಗೂ ಬೆಂಕಿಹಚ್ಚಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆಯನ್ನು ಆಧರಿಸಿತ್ತು. ಆ ಕೂಲಿ ಕಾರ್ಮಿಕ ತಾನು ಸಾಲ ತೆಗೆದುಕೊಂಡಿದ್ದ ಬಡ್ಡಿ ವ್ಯಾಪಾರಿ ತಮಗೆ ಕೊಡುತ್ತಿದ್ದ ಕಿರುಕುಳವನ್ನು ತಡೆಯಲಾರದೆ ಆರು ಬಾರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದ. ಅದರಿಂದ ಏನು ಪ್ರಯೋಜನವಾಗದೆ ಹೋದಾಗ ಆತ  ಅಂತಿಮವಾಗಿ ಈ ನಿರ್ಧಾರಕ್ಕೆ ಬಂದಿದ್ದ.

ಬಾಲಾ ಅವರು ತಮ್ಮ ವ್ಯಂಗ್ಯಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಾರೆ ಮತ್ತು ಆ ತಾಣಗಳಲ್ಲಿ ಅವರು ಅತ್ಯಂತ ಜನಪ್ರಿಯರೂ ಆಗಿದ್ದಾರೆ. ಆ ವ್ಯಂಗ್ಯಚಿತ್ರದ ಕೆಳಗೆ ಅವರು ಹಾಕಿರುವ ತಮಿಳು ಟಿಪ್ಪಣಿಯ ಎರಡು ಅನುವಾದಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು. ಅದರಲ್ಲಿ ಒಂದು: ನಿಜ.. ಈ ವ್ಯಂಗ್ಯಚಿತ್ರವು ಆಕ್ರೋಶದ ಅಭಿವ್ಯಕ್ತಿಯ ಉತ್ತುಂಗವಾಗಿದೆ ಎಂದಿದ್ದರೆ ಮತ್ತೊಂದು: ನಿಜ..ನಾನು ಈ ವ್ಯಂಗ್ಯಚಿತ್ರವನ್ನು ಅತ್ಯಂತ ಕೋಪದಲ್ಲಿ ರಚಿಸಿದ್ದೇನೆ ಎಂದೂ ಹೇಳುತ್ತದೆ. ಎರಡು ಅನುವಾದಗಳು ಭಿನ್ನವಾಗಿದ್ದು ಅದರ ಧ್ವನಿಗಳೂ ಭಿನ್ನವಾಗಿವೆ. ಅದೇನೇ ಇದ್ದರೂ ಒಂದು ಉತ್ತಮ ವ್ಯಂಗ್ಯಚಿತ್ರವು ತನ್ನ ಓದುಗರಲ್ಲಿ ಕೇವಲ ನಗುವನ್ನು ಮಾತ್ರವಲ್ಲದೆ ಒಂದು ಆಲೋಚನೆಯನ್ನೂ ಹುಟ್ಟುಹಾಕಬೇಕು. ಹಾಸ್ಯಕ್ಕೆ ಹಲವು ಮುಖಗಳಿದ್ದು ಖಂಡಿತಾ ಸಿಟ್ಟು ಅದರಲ್ಲಿ ಒಂದಲ್ಲ. ಹಾಸ್ಯ ಮತ್ತು ಸಿಟ್ಟು ಎಂದಿಗೂ ಜೊತೆಗೆ ಸಾಗುವುದಿಲ್ಲ. ವ್ಯಂಗ್ಯಚಿತ್ರದಲ್ಲೂ ಸಹ. ಆದರೆ ಇದನ್ನು ಬರೆದ  ವ್ಯಂಗ್ಯಚಿತ್ರಕಾರ ಸಿಟ್ಟಿನಲ್ಲಿ ಬರೆದೆ ಎಂದು ಒಪ್ಪಿಕೊಳ್ಳುತ್ತಾರೆ.

ಒಂದು ದುರಂತವನ್ನು ವ್ಯಂಗ್ಯಚಿತ್ರದಲ್ಲಿ ಅಭಿವ್ಯಕ್ತಿಸುವುದು ಅತ್ಯಂತ ಕಷ್ಟದ ಕೆಲಸ. ಹಾಗೊಮ್ಮೆ ಅಭಿವ್ಯಕ್ತಿಸಿದರೂ ಅದನ್ನು ಅತ್ಯಂತ ನವಿರಾಗಿ ಮಾಡಬೇಕು. ಈಗ ವಿವಾದದಲ್ಲಿರುವ ಬಾಲಾ ಅವರ ವ್ಯಂಗ್ಯಚಿತ್ರವು ಅಂಥ ಸೂಕ್ಷ್ಮಗಳಿಲ್ಲದ ನೇರಾನೇರಾ ಅಭಿವ್ಯಕ್ತಿಯಾಗಿದೆ. ಅವರು ಮಗುವನ್ನು, ದುರಂತದ ಬಲಿಪಶುವನ್ನು, ಸುಟ್ಟಂತೆ ತೋರಿಸಿದ್ದಾರೆ. ಆ ವ್ಯಂಗ್ಯಚಿತ್ರದಲ್ಲಿ ಮೂರೂ ಅಧಿಕಾರಿಗಳನ್ನೂ ನಗ್ನವಾಗಿಯೂ ತಮ್ಮ ಮರ್ಮಾಂಗಗಳನ್ನು ಪ್ರಾಯಶಃ ಹೊಸ ನೋಟುಗಳ ಕಂತೆಯಿಂದಲೂ ಮುಚ್ಚಿಕೊಂಡಿರುವಂತೆ ತೋರಿಸಿದ್ದಾರೆ. ಹೀಗಾಗಿ ಯಾವುದೇ ರೀತಿಯಲ್ಲಿ ನೋಡಿದರೂ ಇದು ವ್ಯಂಗ್ಯಚಿತ್ರದ ಭೂಮಿಕೆಗೆ ಹೊಂದುವುದಿಲ್ಲ.

ಬಡ್ಡಿವ್ಯಾಪಾರವೆಂಬುದು ಅತ್ಯಂತ ದುಬಾರಿ ಬಡ್ಡಿಗೆ ಸಾಲ ಕೊಡುವ ಕಲೆಯಾಗಿದೆ. ಆ ಬಡ್ಡಿವ್ಯಾಪಾರಿಯು ನೀಡುತ್ತಿದ್ದ ಕಿರುಕುಳವೇ ಈ ದುರದೃಷ್ಟಕರ ಘಟನೆಗಳಿಗೂ ಮತ್ತು ಈ ವ್ಯಂಗ್ಯಚಿತ್ರಕ್ಕೂ ಕಾರಣವಾಗಿದೆ. ಆದರೂ ಆ ಬಡ್ಡಿವ್ಯಾಪಾರಿ ಮಾತ್ರ ಆ ವ್ಯಂಗ್ಯಚಿತ್ರದಲ್ಲೆಲ್ಲೂ ಕಾಣುವುದೇ ಇಲ್ಲ. ಒಂದು ವೇಳೆ ಈ ಕಲಾವಿದ ಇನ್ನಷ್ಟು ಸಮಯ ಕೊಟ್ಟು ಅಲೋಚನೆ ಮಾಡಿ ಚಿತ್ರಿಸಿದ್ದರೆ ಪ್ರಾಯಶಃ ಕೆಲವು ಗೆರೆಗಳೆನ್ನೆಳೆದು ಆ ಕ್ರೂರಿಯನ್ನು ಚಿತ್ರದ ಚೌಕಟ್ಟಿನೊಳಗೆ ತರಬಹುದಿತ್ತು. ಆಗ ವಿವಸ್ತ್ರವಾಗಿ ನಿಂತ ಅಧಿಕಾರಶಾಹಿಗೆ ಸರಿಯಾದ ಸಮತೋಲನ ಚಿತ್ರದಲ್ಲಿರುತ್ತಿತ್ತು. ಪ್ರಾಯಶಃ ಹಾಗೆ ಮಾಡಿದ್ದರೆ ಅಧಿಕಾರಶಾಹಿಗೂ ಸ್ವಲ್ಪ ಸಮಾಧಾನವೆನಿಸಿ ಬಾಲಾ ಅವರು ರಾತ್ರೋರಾತಿ ಬಂಧನಕ್ಕೊಳಗಾಗಿ ಕತ್ತಲಕೋಣೆಯ ಪಾಲಾಗುವ ಗತಿ ಬರುತ್ತಿರಲಿಲ್ಲ. ಏಕೆಂದರೆ ವ್ಯಂಗ್ಯಚಿತ್ರವೊಂದರಲ್ಲಿ ಹೀಗೆ ತಮ್ಮನ್ನು ನಗ್ನವಾಗಿ ಚಿತ್ರಿಸಲಾಗಿದೆ ಎಂಬುದು ಅಧಿಕಾರಶಾಹಿಗಳ ಗಮನಕ್ಕೆ ಬಂದದ್ದೇ ಅದು ಪ್ರಕಟವಾಗಿ ಭರ್ತಿ ಮೂರುವಾರಗಳ ನಂತರ.

ಈ ವ್ಯಂಗ್ಯಚಿತ್ರವಂತೂ ಯಾವ ಅಂಕೆಗೂ ಒಳಪಡದೆ ಅಭಿವ್ಯಕ್ತಿಯ ಸ್ವಾತಂತ್ರ್ಯವು ಸ್ವೈರವಿಹಾರ ಮಾಡುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿತು. ಸಾಮಾಜಿಕ ಜಾಲತಾಣಗಳಿಗೂ ಅಂಥಾ ಸಾಮಗ್ರಿಗಳೇ ಬೇಕು. ಮುದ್ರಣ ಮಾಧ್ಯಮದಲ್ಲಿ ಸಂಪಾದಕರು ವಹಿಸುವ ಯುಕ್ತಯುಕ್ತ ವಿವೇಚನೆಯ ಎಚ್ಚರಗಳು ಸಾಮಾಜಿಕ ಜಾಲತಾಣದಲ್ಲಿ ಇರುವುದಿಲ್ಲ. ಬದಲಿಗೆ ಇಲ್ಲಿ ಏನನ್ನು ಬೇಕಾದರೂ ಪ್ರಕಟಿಸಬಹುದೆಂಬ ಬೇಫಿಕರ್ ಮನೋಭಾವವೇ ಚಾಲ್ತಿಯಲ್ಲಿರುತ್ತದೆ. ಬಾಲಾ ಅವರೇ ಸ್ವತಃ ಒಪ್ಪಿಕೊಂಡಂತೆ ಅವರು ಈ ವ್ಯಂಗ್ಯಚಿತ್ರವನ್ನು ಸಿಟ್ಟಿನಲ್ಲಿ ರಚಿಸಿದ್ದು ಸಭ್ಯತೆಯ ಎಲ್ಲೆಗಳನ್ನು ದಾಟಿದ್ದಾರೆ. ಅಭಿವ್ಯಕ್ತಿಯ ಸ್ವಾತಂತ್ರ್ಯವು ತನ್ನ ಮಿತಿಯಲ್ಲಿ ಎಷ್ಟೇ ಮುಖ್ಯವೆಂದು ಒಪ್ಪಿಕೊಂಡರೂ ಈ ವ್ಯಂಗ್ಯಚಿತ್ರ ರಚನೆಯಲ್ಲಿ ಅವ್ಯಾವುದೂ ಮುಖ್ಯಪಾತ್ರವನ್ನು ವಹಿಸಿಲ್ಲವೆಂಬುದು ಸ್ಪಷ್ಟ.

ವ್ಯಂಗ್ಯಚಿತ್ರವೊಂದನ್ನು ನೇರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಡುವುದು ಮತ್ತೊಂದು ಬಗೆಯ ಸಮಸ್ಯೆ. ಅಂಥ ಕಡೆಗಳಲ್ಲಿ ಗಂಭೀರವಾದ ಹಾಗೂ ಮತಿಹೀನವಾದ ಎರಡೂ ಬಗೆಯ ಟೀಕೆಗಳು, ಎದುರು ಜವಾಬುಗಳು. ವಿಮರ್ಶೆಗಳು ಕೂಡಲೇ ದಾಖಲಾಗುತ್ತವೆ. ಅದನ್ನು ನೋಡುವವರೆಲ್ಲಾ ಮೆಚ್ಚಿಕೊಳ್ಳುತ್ತಾರಂತೇನಲ್ಲ. ಯಾವ ಎಗ್ಗೂ ಸಿಗ್ಗೂ ಇಲ್ಲದಂತೆ  ಎಲ್ಲಾ ಬಗೆಯ ಪ್ರತಿಕ್ರಿಯೆಗಳು ಅಲ್ಲಿ ನುಗ್ಗಿ ಬರುತ್ತವೆ. ಒಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಮುದ್ರಣ ಮಾಧ್ಯಮಕ್ಕಿಂತೆ ಹೆಚ್ಚಿನ ಸ್ವಾತಂತ್ರ್ಯವಿರುವುದು ನಿಜವೇ ಆದರೂ, ಸಕಾರಣವಾಗಿಯೇ ಒಬ್ಬ ವಿವೇಚನಾರಹಿತ ವ್ಯಂಗ್ಯಚಿತ್ರಕಾರರಿಗೆ ಸಾಕಷ್ಟು ಅಪಾಯಗಳು ಎದುರಾಗುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಹಿಂದೆ ಮುದ್ರಣ ಮಾಧ್ಯಮದಲ್ಲಿ ಈಗಿರುವುದಕ್ಕಿಂತ ಹೆಚ್ಚಿನ ಮುಕ್ತತೆಯೂ ಮತ್ತು ವ್ಯಂಗ್ಯವನ್ನು ಒಪ್ಪಿಕೊಳ್ಳುವುದರಲ್ಲಿ ಹೆಚ್ಚಿನ ಸಹನಶೀಲತೆಯೂ ಇತ್ತೆಂದು ಹೇಳಬಹುದು. ಕಳೆದ ಕೆಲವು ವರ್ಷಗಳ ಹಿಂದೆ ಪ್ರಕಟವಾದ ವ್ಯಂಗ್ಯಚಿತ್ರಗಳನ್ನು ಈಗ ಮರುಮುದ್ರಣ ಮಾಡಬೇಕೆಂದರೂ ಹಿಂದೆಮುಂದೆ ನೋಡಬೇಕಾದ ಸಂದರ್ಭವಿದು. ಪರಸ್ಪರ ವಿರುದ್ಧ ವೈಚಾರಿಕ ಧ್ರುವಗಳನ್ನಷ್ಟೇ ಗಮನಿಸದೇ ವಿಶಾಲ ಓದುಗ ಸಮುದಾಯವನ್ನೂ ಅಂಥ ಸಂಧರ್ಭಗಳಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಿರುತ್ತದೆ. ಇಂದು ಈ ದೇಶದ ಜನಸಮುದಾಯವು ಮೊದಲಿಗಿಂತ ಸಣ್ಣಸಣ್ಣ ತುಂಡುಗಳಾಗಿ ವಿಭಜಿತಗೊಂಡಿದ್ದು ನಮ್ಮ ಕ್ರಿಯೆ-ಪ್ರತಿಕ್ರಿಯೆಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾವುದಾದರೂ ಒಂದು ಸಮುದಾಯದ ಭಾವನೆಗಳಿಗೆ ಘಾಸಿ ಮಾಡಿಬಿಡುವ ಸಂಭವನೀಯತೆ ಹೆಚ್ಚಿದೆ.

ಸಾರಾಂಶದ ವಿಷಯವೇನೆಂದರೆ ಒಬ್ಬ ವ್ಯಂಗ್ಯಚಿತ್ರಕಾರ ತನ್ನ ಕೃತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂದು ಬಯಸುತ್ತಾನೋ ಅದಕ್ಕಿಂತ ಸಾಕಷ್ಟು ಭಿನ್ನಭಿನ್ನ ರೀತಿಯಲ್ಲಿ ಅದನ್ನು ಅರ್ಥಮಾಡಿಕೊಳ್ಳಬಹುದು ಅಥವಾ ಅಂಥಾ ಸಾಧ್ಯತೆ ಇರುತ್ತದೆ. ಸರಳವಾಗಿ ಹೇಳಬೇಕೆಂದರೆ ಒಂದು ವ್ಯಂಗ್ಯಚಿತ್ರವನ್ನು ರಚಿಸುವಾಗ ಮೊದಲಿಗಿಂತಲೂ ಈಗ ಹೆಚ್ಚಿನ ಪೂರ್ವಾಲೋಚನೆಯ ಅಗತ್ಯವಿದೆ. ಯಾರು ಬೇಕಾದರೂ ಒಂದು  ವ್ಯಂಗ್ಯಚಿತ್ರದ ಪ್ರಕಟಣೆಯನ್ನು ತಡೆಹಿಡಿಯಬಹುದು. ಮುದ್ರಣ ಮಾಧ್ಯಮದಲ್ಲಿ ಸಂಪಾದಕರು ಅಂಥ ಒಬ್ಬರು ಇರುವುದರಿಂದ ವ್ಯಂಗ್ಯಚಿತ್ರಕಾರ ಇದ್ದಿದ್ದರಲ್ಲಿ ಸುರಕ್ಷಿತ. ಏಕೆಂದರೆ ಸಂಪಾದಕರು ಯಾವುದೇ ಆಕ್ಷೇಪಣೀಯ ವ್ಯಂಗ್ಯಚಿತ್ರವನ್ನು ತಡೆಹಿಡಿಯಬಹುದು. ಹಲವು ದಶಕಗಳ ಹಿಂದೆ ತಮಿಳಿನ ಆನಂದ ವಿಗಡನ್ ಎಂಬ ಪತ್ರಿಕೆಯ ಸಂಪಾದಕರು ತಮ್ಮ ಪತ್ರಿಕೆಯಲ್ಲಿ ಶಾಸಕರನ್ನು ಕೆಟ್ಟ ರೀತಿಯಲ್ಲಿ ಅಭಿವ್ಯಕ್ತಿಸಿದ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ ಕಾರಣಕ್ಕೆ ಹಲವು ಕಷ್ಟಗಳನ್ನು ಅನುಭವಿಸಬೇಕಾಗಿ ಬಂದಿತ್ತು. ಅದನ್ನು ರಚಿಸಿದ ವ್ಯಂಗ್ಯಚಿತ್ರಕಾರ ಬಚಾವಾಗಿದ್ದರು. ಹೀಗಾಗಿ ಒಬ್ಬ ಒಳ್ಳೆಯ ಸಂಪಾದಕರ ಅಗತ್ಯವಂತೂ ತುಂಬಾ ಇದೆ.

ಎನ್. ಪೊನ್ನಪ್ಪ ಅವರು ಪ್ರಖ್ಯಾತ ವ್ಯಂಗ್ಯಚಿತ್ರಕಾರರಾಗಿದ್ದು ಇಪಿಡಬ್ಲ್ಯೂ ಪತ್ರಿಕೆಗೂ ವ್ಯಂಗ್ಯಚಿತ್ರಗಳನ್ನು ರಚಿಸುತ್ತಾರೆ.

ಕೃಪೆ: Economic and Political Weekly                                                    

ಅನು: ಶಿವಸುಂದರ್

 

 

 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...