ಮಾಧ್ಯಮಗಳು ಯಾರಿಗೆ ಜವಾಬುದಾರರಾಗಿರಬೇಕು?

Source: sonews | By Staff Correspondent | Published on 10th September 2019, 10:04 PM | Special Report | Interview | Don't Miss |

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ತನ್ನ ಹೊಣೆಗಾರಿಕೆ ಹಾಗೂ ಉದ್ದೇಶಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು.

ಮಾಧ್ಯಮಗಳು ತಮ್ಮ ಕಿವಿಗಳನ್ನು ನೆಲಕ್ಕೆ ಆನಿಸಿಕೊಂಡಿರಬೇಕಿರುವುದು ಮಾತ್ರವಲ್ಲದೆ, ತಳಮಟ್ಟದಲ್ಲಿರುವ ಜನರಿಗೆ ಅತ್ಯಂತ ಸಮೀಪವೂ ಇರಬೇಕಿರುವುದು ಎಷ್ಟು ಅಗತ್ಯವೆಂಬುದನ್ನು ಭಾರತದ ಮಾಧ್ಯಮರಂಗದಲ್ಲಿ ಇತ್ತೀಚೆಗೆ ನಡೆದ ಎರಡು ಪ್ರಸಂಗಗಳು ಸಾಬೀತುಪಡಿಸುತ್ತವೆ. ಎಷ್ಟೇ ಆದರೂ ಒಂದು ಪ್ರಜಾಸತ್ತಾತ್ಮಕ ಸರ್ಕಾರದ ತಳಹದಿಯೇ ಚುನಾವಣೆಯಂಥ ಮೂಲಭೂತ ಪ್ರಕ್ರಿಯೆಗಳ ಮೂಲಕ ಹಾಗೂ ಇನ್ನಿತರ ಸಾಧನಗಳ ಮೂಲಕ ವ್ಯಕ್ತಪಡಿಸುವ ಅಭಿಪ್ರಾಯವೇ ಆಗಿದೆ. ಹೀಗಾಗಿ ಮಾಧ್ಯಮಗಳು ತಮ್ಮ ಧ್ವನಿಯ ಋಜುತ್ವವನ್ನು ಕಾಪಾಡಿಕೊಳ್ಳಬೇಕೆಂದರೆ ಸರ್ಕಾರ ಮತ್ತು ಆಡಳಿತ ಯಂತ್ರಾಂಗದಿಂದ ಒಂದು ವಿಮರ್ಶಾತ್ಮಕ ಅಂತರವನ್ನು ಕಾದುಕೊಳ್ಳುವುದು ಕೂಡಾ ಅತ್ಯಗತ್ಯ. ಉತ್ತರಪ್ರದೇಶದ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟದ ಭಾಗವಾಗಿ ಶಾಲಾ ಮಕ್ಕಳಿಗೆ ರೋಟಿಯ ಜೊತೆಗೆ ಉಪ್ಪನ್ನು ನೀಡುತ್ತಿರುವುದನ್ನು ವರದಿ ಮಾಡಿದ್ದಕ್ಕಾಗಿ ಪತ್ರಕರ್ತನ ಮೇಲೆ ಉತ್ತರಪ್ರದೇಶದ ಮಿರ್ಜಾಪುರ್ ಪೊಲೀಸರು ಸರ್ಕಾರದ ವಿರುದ್ಧ ಸಂಚು ನಡೆಸಿದ ಪ್ರಕರಣವನ್ನು ದಾಖಲಿಸಿ ಬಂಧಿಸಿದರು. ಅದಕ್ಕೆ ಮುಂಚೆ ಕಾಶ್ಮೀರದ ಪತ್ರಕರ್ತರೊಬ್ಬರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪರ್ಕ-ಸಂವಹನದ ಮೇಲೆ ವಿಧಿಸಲಾಗಿರುವ ನಿರ್ಬಂಧದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ  ದಾಖಲಿಸಿದ ಪ್ರಕರಣದಲ್ಲಿ ಮಾಜಿ ನ್ಯಾಯಾಧೀಶರೂ ಆಗಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ (ಪಿಸಿಐ) ಅಧ್ಯಕ್ಷರು ಸರ್ಕಾರದ ಪರವಾಗಿ ಮಧ್ಯಪ್ರವೇಶ ಮಾಡಿದರು.

ಎರಡೂ ಪ್ರಕರಣಗಳಲ್ಲಿರುವ ವಿಪರ್ಯಾಸಗಳು ಕಣ್ಣಿಗೆ ರಾಚುವಂತಿದೆಯಲ್ಲದೆ ಚಿಂತೆಗೀಡು ಮಾಡುವಂತಿದೆ. ಮೊದಲನೆ ಪ್ರಕರಣದಲ್ಲಿ ವರದಿಯು ಬಯಲು ಮಾಡಿದ ಸತ್ಯಸಂಗತಿಗಳ ಬಗ್ಗೆ ಕ್ರಮತೆಗೆದುಕೊಳ್ಳುವ ಬದಲಿಗೆ ವರದಿಗಾರನ ಮೇಲೆ ಕ್ರಮತೆಗೆದುಕೊಳ್ಳಗಿದೆ. ಎರಡನೇ ಪ್ರಕರಣದಲ್ಲಿ ಯಾವ ಉದ್ದೇಶ ಮತ್ತು ಹೊಣೆಗಾರಿಕೆಗಳಿಗಾಗಿ ಪ್ರೆಸ್ ಕೌನ್ಸಿಲ್ ಅನ್ನು ರಚಿಸಲಾಯಿತೋ ಅದಕ್ಕೆ ತದ್ವಿರುದ್ಧವಾಗಿ ಸಂಸ್ಥೆ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವದರ ಪರವಾಗಿ ವಕಾಲತ್ತು ವಹಿಸಲು ಹೊರಟಿದೆ.

ಒಂದು ಪ್ರಜಾತಾಂತ್ರಿಕ ಸಮಾಜದಲ್ಲಿ ಮಾಧ್ಯಮವು ಮುಕ್ತವೂ ಆಗಿರಬೇಕು ಮತ್ತು ಜವಾಬ್ದಾರಿಯುತವಾಗಿಯೂ ನಡೆದುಕೊಳ್ಳುವಂತಿರಬೇಕು ಎನ್ನುವ ಚಿಂತನೆಯ ಆಧಾರದ ಮೇಲೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಜನ್ಮ ತಾಳಿದೆ. ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರಶ್ನೆಯೇನೆಂದರೆ ಅಂತಿಮವಾಗಿ ಮಾಧ್ಯಮಗಳು ಯಾರಿಗೆ ಜವಾಬುದಾರರಾಗಿರಬೇಕು? ದೇಶದ ಜನತೆಗೇ ಜವಾಬುದಾರರಾಗಿರಬೇಕೆಂಬುದು ಇದಕ್ಕೆ ದೊರೆಯುವ ಸ್ಪಷ್ಟವಾದ ಉತ್ತರ. ಕುತೂಹಲದಾಯಕ ವಿಷಯವೇನೆಂದರೆ, ಪಿಸಿಐ ಸ್ಥಾಪನೆಯ ಕಾರಣಗಳನ್ನು ವಿಷದೀಕರಿಸುತ್ತಾ ನೀಡಲಾಗಿರುವ ಒಂದು ಕಾರಣವೇನೆಂದರೆ ಸರ್ಕಾರದ ಅಥವಾ ಸರ್ಕಾರಿ ಅಧಿಕಾರಿಗಳ ನಿಯಂತ್ರಣವು ಮಾಧ್ಯಮ ಸ್ವಾತಂತ್ರ್ಯಕ್ಕೆ ಮಾರಕ ಎಂಬುದಾಗಿದೆ. ಹೀಗಾಗಿ ಅದರ ಬದಲಿಗೆ ಮಾಧ್ಯಮ ವೃತ್ತಿಯಲ್ಲಿರುವವರೇ ಸೂಕ್ತವಾದ ಸಂರಚನೆಯಿಂದ ಕೂಡಿರುವ, ಪ್ರಾತಿನಿಧಿಕವಾಗಿರುವ ಮತ್ತು ಪಕ್ಷಪಾತ ಮುಕ್ತ ಸಂಸ್ಥೆಯನ್ನು ರಚಿಸಿಕೊಂಡು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲೆಂದೇ ಪಿಸಿಐ ಸ್ಥಾಪನೆಯಾಯಿತು. ಕಳೆದ ಹಲವಾರು ದಶಕಗಳಿಂದ ಪಿಸಿಐ ಅನ್ನು ಅಧಿಕಾರವಿಲ್ಲದ ಸಂಸ್ಥೆಯೆಂದು ದೂರುತ್ತಾ ಬರಲಾಗಿದೆ. ಆದರೆ ಹಲವಾರು ಸಂದರ್ಭಗಳಲ್ಲಿ ಅದರ ಕೊಡುಗೆಯನ್ನು ಸಹ ಗುರುತಿಸಿ ಪ್ರಶಂಸಿಸಲಾಗಿದೆ. ೧೯೯೦ರ ದಶಕದಲ್ಲಿ ಪಂಜಾಬು ಮಿಲಿಟೆನ್ಸಿಗೆ ತುತ್ತಾಗಿದ್ದ ಸಂದರ್ಭದಲ್ಲಿ ಮಾಧ್ಯಮದ ಸ್ವಾತಂತ್ರ್ಯದ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದ್ದಕ್ಕಾಗಿ ಪಿಸಿಐ ಅಪಾರ ಪ್ರಶಂಸೆಗೆ ಭಾಜವಾಗಿದ್ದು ಅಂಥಾ ಪ್ರಕರಣಗಳಲ್ಲಿ ಒಂದು. ಆಯೋಧ್ಯಾ ದೇವಸ್ಥಾನದ ಹೋರಾಟದ ಸಂದರ್ಭದಲ್ಲೂ ಪತ್ರಿಕೆಗಳು ಒಂದು ಸಮುದಾಯದ ಪರವಾಗಿ ಪೂರ್ವಗ್ರಹದಿಂದ ವರದಿ ಮಾಡಿ ಕೋಮು ಧೃವೀಕರಣಕ್ಕೆ ಕಾರಣವಾಗಿದ್ದರ ಬಗ್ಗೆಯೂ ಪಿಸಿಐ ಪತ್ರಿಕೆಗಳನ್ನು ಬಲವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಕಾಶ್ಮೀರದ ಪ್ರಕರಣದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಮಗ್ರತೆಯ ದೃಷ್ಟಿಯಿಂದ ತಾನು ಸುಪ್ರೀಂ ಕೋರ್ಟಿನಲ್ಲಿ ಮಧ್ಯಪ್ರವೇಶ ಮಾಡಿದ್ದೇನೆಂದು ಪಿಸಿಐನ್ ಅಧ್ಯಕ್ಷರು ಸಮರ್ಥಿಸಿಕೊಂಡಿದ್ದಾರೆ. ಕಾಶ್ಮೀರ್ ಟೈಮ್ಸ್ ಕಾರ್ಯನಿರ್ವಾಹಕ ಸಂಪಾದಕರು ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿರುವ ಅಹವಾಲಿನಲ್ಲಿ ಕಳೆದ ಆಗಸ್ತ್ ರಿಂದ ಕಾಶ್ಮೀರದಲ್ಲಿ ಸರ್ಕಾರವು ಸಂಪರ್ಕ ಸಂವಹನ ಮತ್ತು ಪತ್ರಕರ್ತರ ಓಡಾಟಗಳ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆರೆವು ಮಾಡಬೇಕೆಂದು ಮನವಿ ಮಾಡಿದ್ದಾರೆ. ನಿರ್ಬಂಧದಿಂದಾಗಿ ಕಾಶ್ಮೀರವನ್ನು ಸಂಪೂರ್ಣವಾಗಿ ಪ್ರತ್ಯೇಕಗೊಳಿಸಿ ಮಾಧ್ಯಮವನ್ನು ನಿರ್ಬಲಗೊಳಿಸಲಾಗಿದೆ. ಆದ್ದರಿಂದ ತಮ್ಮ ಬದುಕಿನ ಮೇಲೆ ಪ್ರಭಾವ ಬೀರುವ ತೀರ್ಮಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಹಕ್ಕಿನಿಂದ ಜನರು ವಂಚಿತರಾಗುತ್ತಿದ್ದಾರೆ ಎಂದು ಅಹವಾಲಿನಲ್ಲಿ ಹೇಳಲಾಗಿದೆ. ಅಸಲಿ ವಿಷಯವಿರುವುದೇ ಇಲ್ಲಿ. ಒಂದು ನಿರ್ದಿಷ್ಟ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅದರ ಬಗ್ಗೆ  ಜನರು ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವಂತೆ ಮಾಡುವುದರಲ್ಲಿ ರಾಷ್ಟ್ರೀಯ ಹಿತಾಸಕ್ತಿಯಿಲ್ಲವೇಮತದಾರರು ಇನ್ನು ಹೇಗೆ ತಾನೆ ತಮ್ಮ ನಿರ್ಣಯಗಳನ್ನು ರೂಪಿಸಿಕೊಳ್ಳುತ್ತಾರೆ? ಭಾರತದ ಮಾಧ್ಯಮಗಳ ಮೂಲಕ ಕಾಶ್ಮೀರದಲ್ಲಿ ಏನು ನಡೆಯುತ್ತಿದೆಯೆಂಬ ವಾಸ್ತವ ಚಿತ್ರಣ ಸಿಗುವುದಿಲ್ಲ ಎಂಬುದಂತೂ ಸುಸ್ಪಷ್ಟ.

ಇಲ್ಲಿ ಗುರುತಿಸಬೇಕಾದ ಮತ್ತೊಂದು ಸಂಗತಿಯೆಂದರೆ ಭಾರತದ ಮಾಧ್ಯಮಕ್ಕೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯಕ್ಕೆ ಪೂರ್ವದಿಂದಲೂ ಒಂದು ಉಜ್ವಲವಾದ ಇತಿಹಾಸವಿದೆ. ೧೯ನೇ ಶತಮಾನದ ಅಂತ್ಯದಿಂದ, ಹಾಗೂ ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಭಾರತದ ಮಾಧ್ಯಮದ ಇತಿಹಾಸವು ಕೆಚ್ಚೆದೆಯಿಂದ ಕೂಡಿದ, ಅಪಾಯಗಳನ್ನು ಅರಿತೂ ಸಾಹಸಕ್ಕೇ ಮುಂದಾದ ಹಾಗೂ ನಿಸ್ವಾರ್ಥದ ಕಥನಗಳಿಂದ ತುಂಬಿಹೋಗಿದೆ. ಬಗೆಯ ಹಲವಾರು ಪತ್ರಕರ್ತರು ಸ್ವಯಂ ಸಾಮಾಜಿಕ ಸುಧಾರಕರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿರುತ್ತಿದ್ದರು. ಅಷ್ಟು ಮಾತ್ರವಲ್ಲ, ಬ್ರಿಟಿಷ ಸರ್ಕಾರದಿಂದ ಕ್ರೂರ ದಂಡನೆಗಳಿಗೆ ಗುರಿಯಾಗಬೇಕಾಗುತ್ತದೆಂದು ಗೊತ್ತಿದ್ದರೂ ತಮ್ಮಲ್ಲಿದ್ದ ಅಲ್ಪಸ್ವಲ್ಪ ಸಂಪನ್ಮೂಲಗಳನ್ನೂ ವ್ಯಯಮಾಡಿ ಇಂಗ್ಲೀಷ ಭಾಷೆಯನ್ನು ಒಳಗೊಂಡಂತೆ ಇತರ ಹಲವಾರು ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು.

ಪಿಸಿಐನ ಅಧ್ಯಕ್ಷರ ಮೇಲಿನ ಕ್ರಮವನ್ನು ಹಲವಾರು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಬಹಿರಂಗವಾಗಿ ಖಂಡಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಸುಪ್ರೀಂಕೋರ್ಟಿನಲ್ಲಿ ಪಿಸಿಐನ ಅಧ್ಯಕ್ಷರು ತಮ್ಮ ಅಹವಾಲನ್ನು ದಾಖಲು ಮಾಡುವ ಮುನ್ನ ಅವರು ಸಂಸ್ಥೆಯ ಕೆಲವು ಸದಸ್ಯರ ಜೊತೆ ಸಮಾಲೋಚನೆಯನ್ನೇ ಮಾಡಿರಲಿಲ್ಲವೆಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ. ಸಂಸ್ಥೆಯ ಅಧ್ಯಕ್ಷರು ತಮ್ಮ ಕ್ರಮದ ಬಗ್ಗೆ ಕೇವಲ ಪತ್ರಕರ್ತ ಸಮುದಾಯದ ಮುಂದೆ ಮಾತ್ರವಲ್ಲದೆ ಸಾರ್ವಜನಿಕರ ಮುಂದೆಯೂ ಬಹಿರಂಗ ವಿವರಣೆಯನ್ನು ನೀಡಬೇಕೆಂದು ಪತ್ರಕರ್ತರು ಆಗ್ರಹಿಸಬೇಕು.

ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮಾಧ್ಯಮವೊಂದು ಎರಡು ಕರ್ತವ್ಯಗಳನ್ನು ನಿರ್ವಹಿಸಬೇಕಿರುತ್ತದೆ. ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಜನರು ತೀರ್ಮಾನಕ್ಕೆ ಬರಲು ಸಹಾಯವಾಗುವಂತೆ ಮಾಹಿತಿಗಳನ್ನು ತಲುಪಿಸುವುದು ಮತ್ತು ಜನರ ಅದರಲ್ಲೂ ತಮ್ಮ ಧ್ವನಿ ದುರ್ಬಲ ಎಂದು ಭಾವಿಸುವ ಜನವರ್ಗದ ದುಮಾನಗಳಿಗೆ  ಮತ್ತು ಸಲಹೆಗಳಿಗೆ ವೇದಿಕೆಯಾಗುವುದುರಾಷ್ಟ್ರದ ಸಮಗ್ರತೆಯನ್ನು ಸಾಧಿಸಲು ಇವು ಅತ್ಯಂತ ಕೀಲಕವಾದ ಅಂಶಗಳಲ್ಲವೇ

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯ ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯಿಂದ ಶೇ.20ರಷ್ಟು ಮುಸ್ಲಿಮರ ಹೆಸರು ನಾಪತ್ತೆ!

ಅಬುಸಲೇಹ್ ಶರೀಫ್ ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು 2005ರಲ್ಲಿ ...

ಕೈಗೆ ರಕ್ತದ ಕಲೆಯೂ ಆಗಿಲ್ಲ, ಕತ್ತಿ ರಕ್ತದಿಂದ ತೊಯ್ದೂ ಇಲ್ಲ… ಈ ಅಪಾಯಕಾರಿ ರಾಜಕಾರಣದ ಕುತಂತ್ರವನ್ನು ಅರಿತು ಮತದಾರರು ಮತ ಚಲಾಯಿಸಬೇಕು..

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಅವರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ...

ವಿವೇಕಾನಂದರ ಹಿಂದೂ ಧರ್ಮಕ್ಕೂ, ಗೋಡ್ಸೆ ಹಿಂದೂ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸ -ಡಾ.ರಾಮ್ ಪುನಿಯಾನಿ

ಓದು, ತಲೆ ಬುಡ ಯಾವುದೂ ಇಲ್ಲದೇ ಅಂಗಡಿ ಮುಂಗಟ್ಟಿನಲ್ಲಿ ನಿಂತು ಇತರರನ್ನು ಹೀಯಾಳಿಸಿ ಸುಖ ಪಡುವ, ಕನಸುಗಳಲ್ಲಿಯೇ ತೇಲಾಡಿ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...