ಗಡಿ ಪ್ರದೇಶದ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿ: ಡಾ|| ಸಿ.ಸೋಮಶೇಖರ್

Source: SO News | By Laxmi Tanaya | Published on 5th July 2022, 10:05 PM | State News | Don't Miss |

ಬೆಂಗಳೂರು : ನಮ್ಮ ರಾಜ್ಯದ ಗಡಿ ಪ್ರದೇಶಗಳಲ್ಲಿ ಭಾಷೆ, ಸಂಸ್ಕ್ರತಿ, ಜಲ, ಪ್ರದೇಶಗಳ ಸಂಘರ್ಷವಿದ್ದು ಈ ಸಮಸ್ಯೆಗಳ ನಿವಾರಣೆಗಾಗಿ, ಕನ್ನಡದ ಅಸ್ಮಿತೆ ಉಳಿಸಲು, ಗಡಿ ಪ್ರದೇಶದ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ|| ಸಿ.ಸೋಮಶೇಖರ್ ಅವರು ತಿಳಿಸಿದರು.

   ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ  ನಡೆದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳು, ಕಾಮಗಾರಿಗಳು ಮತ್ತು ಗಡಿ ಭಾಗದಲ್ಲಿನ ವಿವಿಧ ಯೋಜನೆಗಳ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. 

   ನಮ್ಮ ರಾಜ್ಯದ 19 ಜಿಲ್ಲೆಗಳ 63 ತಾಲ್ಲೂಕುಗಳಲ್ಲಿನ 998 ಹಳ್ಳಿಗಳು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು, ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ಒಟ್ಟು 299 ಹಳ್ಳಿಗಳಿದ್ದು, 9 ಹಳ್ಳಿಗಳು ಗಡಿ ಹಳ್ಳಿಗಳಾಗಿದ್ದು, ಗಡಿ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದೆ. ಹೊಸಕೋಟೆ ತಾಲ್ಲೂಕು ಅಭಿವೃದ್ಧಿಗಾಗಿ 2012-13 ರಿಂದ 2021-22 ರವರೆಗೆ ಪ್ರಾಧಿಕಾರದಿಂದ ರೂ. 33 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ರೂ. 24 ಲಕ್ಷ ಅನುದಾನ ಬಳಕೆಯಾಗಿದ್ದು, ರೂ. 9 ಲಕ್ಷ ಅನುದಾನವು ಉಳಿಕೆಯಾಗಿದೆ ಎಂದು ಮಾಹಿತಿ ನೀಡಿದರು.

   ಹೊಸಕೋಟೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕಾಗಿ ರೂ. 5 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಅಂದಾಜು ವೆಚ್ಚ ಸಲ್ಲಿಸಿ ಕಾಮಗಾರಿ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.

  ಸಂಸ್ಕೃತಿ ಮತ್ತು ಪ್ರಗತಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಕನ್ನಡ ಸಂಸ್ಕ್ರತಿಯನ್ನು ಉಳಿಸಿ, ಬೆಳೆಸಲು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲು ಹೊಸಕೋಟೆಯ 4 ಸಂಸ್ಥೆಗಳಿಗೆ ತಲಾ ರೂ. 1 ಲಕ್ಷದಂತೆ ಒಟ್ಟು ರೂ. 4 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ಶೀಘ್ರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವಂತೆ ತಿಳಿಸಿದರು. 

  ಹೊಸಕೋಟೆ ತಾಲ್ಲೂಕಿನ ಗಡಿ ಭಾಗದ ಕನ್ನಡ ಶಾಲೆಗಳಿಗೆ ಭೇಟಿ ನೀಡಿ, ಕನ್ನಡ ಶಿಕ್ಷಕರ ಕೊರತೆ, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಇನ್ನಿತರ ಸ್ಥಿತಿಗತಿಗಳನ್ನು ಪರಿಶೀಲಿಸಿ, ವರದಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರಲ್ಲದೆ, ತಿಂಗಳಿಗೊಮ್ಮೆ ಜಿಲ್ಲೆಯ ಗಡಿ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿ, ಗ್ರಾಮ ವಾಸ್ತವ್ಯ ಮಾಡಬೇಕು ಎಂದು ತಿಳಿಸಿದರು.

  ಗಡಿ ಭಾಗದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಕೈಗೊಂಡು, ವರದಿ ನೀಡುವಂತೆ ಜಿಲ್ಲಾ ಸಾಂಖ್ಯಿಕ ಅಧಿಕಾರಿಗೆ ಸೂಚಿಸಿದರು. ಅಲ್ಲದೆ, ಯುವಕರು, ಯುವತಿಯರಿಗೆ ಕೌಶಲ್ಯಾಭಿವೃದ್ದಿ ತರಬೇತಿ ನೀಡಿ, ಉದ್ಯೋಗ ಮೇಳ ಆಯೋಜಿಸಬೇಕೆಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಯುವಜನ ಸೇವಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು. 

  ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟಗಾರರು, ಕನ್ನಡಪರ ಹೋರಾಟಗಾರರು, ದಾರ್ಶನಿಕರು, ಸಾಹಿತಿಗಳ ಸ್ಮಾರಕಗಳನ್ನು ರಕ್ಷಿಸಿ, ಅಭಿವೃದ್ಧಿ ಪಡಿಸುವಂತೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

  ಅನ್ಯ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗಡಿ ಪ್ರದೇಶ ಸಂಘರ್ಷ, ಭಾಷೆ ಸಂಘರ್ಷ, ದೌರ್ಜನ್ಯ ಸಮಸ್ಯೆ ಕಂಡುಬಂದಿಲ್ಲ. ಆದಾಗ್ಯೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕ್ರತಿಕ ಪ್ರಕ್ರಿಯೆಗಳನ್ನು ಹೆಚ್ಚಿಸಿ, ಪ್ರೋತ್ಸಾಹಿಸಲು ಕಾಮಗಾರಿಗಳಿಗೆ ಸಾಂಸ್ಕೃತಿಕ ಸ್ಪರ್ಶ ನೀಡಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.

   ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ರೇವಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀಕಂಠ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ,. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನಮ್ರತಾ, ಯುವಜನ ಸೇವೆ ಮತ್ತು ಕ್ರೀಡಾ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಚೆಲುವಾಂಬ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಹೊಸಕೋಟೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...