ಆರ್ಥಿಕ ಗಣತಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಮಹತ್ವ ನೀಡಿ -ಜಿಲ್ಲಾ ಸಾಂಖ್ಯಿಕ ಅಧಿಕಾರಿ ಹೆಚ್.ವೈ. ಮೀಶಿ

Source: so news | Published on 18th November 2019, 12:00 AM | Coastal News |

ಹಾವೇರಿ:  ಆರ್ಥಿಕ ಗಣತಿ ಮಾಡುವಾಗ ಗಣತಿದಾರರು ಗ್ರಾಮೀಣ ಭಾಗದಲ್ಲಿರುವ  ಕೃಷಿಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಿ ದಾಖಲೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳಾದ ಹೆಚ್.ವೈ.ಮೀಶಿ ಅವರು ಹೇಳಿದರು. 
ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಿಎಸ್‍ಸಿ ಇ-ಗವರನ್ಸ್ ಸರ್ವಿಸ್‍ಸ್ ಇಂಡಿಯಾ ಲಿಮಿಟೆಡ್ ಇವರ ಸಹಯೋಗದಲ್ಲಿ  7ನೇ ಆರ್ಥಿಕ ಗಣತಿಯ ತಾಲೂಕಾ ಮಟ್ಟದ ತರಬೇತಿ ಕಾರ್ಯಾಗಾರ  ಉದ್ಘಾಟಿಸಿ ಅವರು ಮಾತನಾಡಿದರು. 
ಹಳ್ಳಿಗಳಲ್ಲಿ ನಮಗೆ ಗೊತ್ತಿಲ್ಲದೇ ಎಷ್ಟೋ ಮನೆಗಳಲ್ಲಿ ಕೃಷಿಯೇತರ ಉದ್ಯಮಗಳಾದ ಹೈನುಗಾರಿಕೆ, ಟೈಲರಿಂಗ್, ಹೂ ಕಟ್ಟುವುದು, ಬಿಡಿ ಕಟ್ಟುವುದು, ಟ್ಯೂಶನ್ ಹೇಳುವುದು, ಗಿರಣಿ ನಡೆಸುವುದು, ಇಂತಹವುಗಳನ್ನು ಗಮನಿಸಿ ದಾಖಲೆ ಮಾಡಬೇಕು. ಕೆಲವೊಮ್ಮೆ ಇವುಗಳನ್ನು ಬಿಟ್ಟು ಆರ್ಥಿಕ ಗಣತಿ ಮಾಡಲಾಗುತ್ತದೆ. ಆಗ ಗಣತಿ ಅಪೂರ್ಣವಾದಂತಾಗುತ್ತದೆ. ಈ ನಿಟ್ಟಿನಲ್ಲಿ ಸರಿಯಾದ ಮಾಹಿತಿ ಕಲೆ ಹಾಕಿ ನಿಖರವಾದ ಮಾಹಿತಿಯನ್ನು ಸಲ್ಲಿಸಬೇಕು ಎಂದು ಹೇಳಿದರು.
ಪ್ರತಿ ಮನೆಗೂ ಭೇಟಿ ನೀಡಿ ಮಹಳೆಯರು ಮಾಡುವ ಚಟುವಟಿಕೆಗಳನ್ನು ಗುರುತಿಸಬೇಕು. ಏಳನೇ ಆರ್ಥಿಕ ಗಣತಿಯಲ್ಲಿ ಮೊಬೈಲ್ ಆ್ಯಪ್ ಬಳಸಿಕೊಂಡು ಮೊದಲ ಬಾರಿಗೆ ಅಂಕಿ-ಅಂಶಗಳನ್ನು ದಾಖಲಿಸಲಾಗುತ್ತದೆ. ಇದರಿಂದ ತ್ವರಿತಗತಿಯಲ್ಲಿ ಮಾಹಿತಿ ದೊರೆಯುವುದಲ್ಲದೇ ಕ್ರೂಢೀಕರಣವು ಸಹ ಸುಲಭವಾಗುತ್ತದೆ ಎಂದು ಅವರು ಹೇಳಿದರು. 
 ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಎನ್‍ಎಸ್‍ಎಸ್‍ಓ ಅಧಿಕಾರಿ ಬಿ.ಎಸ್.ಭಂಗಿ ಅವರು ಮಾತನಾಡಿ ಗಣತಿದಾರರು ದೇಶದ ಆರ್ಥಿಕ ಗಣತಿಯ ಜವಾಬ್ದಾರರು. ಆರ್ಥಿಕ ಗಣತಿಯಲ್ಲಿ ಗಣತಿದಾರರ ಕಾರ್ಯ ಬಹಳ ಮುಖ್ಯ. ಜನರೊಟ್ಟಿಗೆ ಆತ್ಮೀಯವಾಗಿ ಮಾತನಾಡಿ ಸರಿಯಾದ ಮಾಹಿತಿ ಪಡೆದು ನಿಖರ ಹಾಗೂ ಸ್ಪಷ್ಟ ಮಾಹಿತಿಯನ್ನು ಸಲ್ಲಿಸಬೇಕು. ಆರ್ಥಿಕ ಗಣತಿಯಲ್ಲಿ ತಪ್ಪು ಮಾಹಿತಿ ನೀಡಿದರೆ ದಂಡವನ್ನು ಕಟ್ಟಬೇಕಾಗುತ್ತದೆ. ನಿಮ್ಮಲ್ಲಿ ಗೊಂದಲಗಳಿದ್ದರೇ  ತರಬೇತಿಯಲ್ಲಿಯೇ ಬಗೆಹರಿಸಿಕೊಂಡು ತರಬೇತಿಯ ಸದುಪಯೋಗ ಪಡಿಸಿಕೊಳ್ಳಿರಿ ಎಂದು ಹೇಳಿದರು.   
 ಜಿಲ್ಲಾ ಸಹಾಯಕ ಸಾಂಖ್ಯಿಕ ಅಧಿಕಾರಿ ಜೆ.ಆರ್.ಪಾಟೀಲ್  ಉಪನ್ಯಾಸ ನೀಡಿದರು. ಹಾವೇರಿ, ಹಾನಗಲ್, ಬ್ಯಾಡಗಿ ತಾಲೂಕಿನ ಗಣತಿದಾರರು ಹಾಗೂ ಮೇಲ್ವಿಚಾರಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
 ಕಾರ್ಯಕ್ರಮದಲ್ಲಿ ಹಾವೇರಿಯ ಸಿಎಸ್‍ಸಿಯ ಜಿಲ್ಲಾ ವ್ಯವಸ್ಥಾಪಕರಾದ ಕೃಷ್ಣಕಾಂತ್ ಆಡೂರು ಹಾಗೂ ಮೋಹನ್ ಕಡಸಾಲಿ, ಜಿಲ್ಲಾ ಸಂಯೋಜಕರಾದ ಚೇತನ ಗುಡೇನಕಟ್ಟಿ ಮತ್ತಿತರರು ಉಪಸ್ಥಿತರಿದ್ದರು

 

Read These Next