ಉದಯೋನ್ಮುಖ ಕವಿಗಳು ತಮ್ಮ ಕಾವ್ಯ ಯಾನವನ್ನು ನಿಸರ್ಗದ ಮಡಿಲಿಂದ ಪ್ರಾರಂಭಿಸಲಿ

Source: sonews | By Staff Correspondent | Published on 16th December 2018, 9:42 PM | State News | Don't Miss |

ಶ್ರೀನಿವಾಸಪುರ: ಉದಯೋನ್ಮುಖ ಕವಿಗಳು ತಮ್ಮ ಕಾವ್ಯ ಯಾನವನ್ನು ನಿಸರ್ಗದ ಮಡಿಲಿಂದ ಪ್ರಾರಂಭಿಸಬೇಕು. ಎಟುಕದ ವಸ್ತು ವಿಷಯಗಳ ಬಗ್ಗೆ ಕಾವ್ಯ ಕಟ್ಟುವ ಪ್ರಯತ್ನ ಮಾಡಬಾರದು ಎಂದು ಸಾಹಿತಿ ಪನಸಮಾಕನಹಳ್ಳಿ ಆರ್‌.ಚೌಡರೆಡ್ಡಿ ಹೇಳಿದರು.

  ಪಟ್ಟಣದ ಭಾವನ ಐಟಿಐ ಕಾಲೇಜಿನಲ್ಲಿ ತಾಲ್ಲೂಕು ಕನ್ನಡಸಿರಿ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ಸಾಹಿತಿ ಸಂವಾದ ಹಾಗೂ ಕಾವ್ಯ ವಾಚನ ಕಾರ್ಯಕ್ರಮ ದಲ್ಲಿ ಮಾತನಾಡಿ, ಕವಿ ಭಾವ ಜೀವಿ. ಮೃದು ಹೃದಯಿ ಎಂದು ಸಮಾಜ ಭಾವಿಸಿದೆ. ಆ ಭಾವನೆಗೆ ಕುಂದು ತರುವ ಪ್ರಯತ್ನ ಸರಿಯಲ್ಲ. ಲೇಖನಿ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಒಡೆಯುವ ಕೆಲಸ ಮಾಡಬಾರದು. ಕಾವ್ಯ ಖಡ್ಗವಾಗುವುದು ಬೇಡ. ಅದು ಸಮಾಜದಲ್ಲಿ ನೊಂದವರಿಗೆ ಸಾಂತ್ವನ ನೀಡುವ ಸಂಜೀವಿನಿಯಾಗಲಿ ಎಂದು ಹೇಳಿದರು.

ಕನ್ನಡ ಪರ ಸಂಘಟನೆಗಳು ಭಾಷೆಗೆ ಬೆನ್ನೆಲುಬಾಗಬೇಕು. ಬದುಕಿಗೆ ಬೆಂಬಲವಾಗಿ ನಿಲ್ಲಬೇಕು. ಪ್ರತ್ಯೇಕತೆಯ ಹೆಸರಲ್ಲಿ ಬಲ ಕಳೆದುಕೊಳ್ಳಬಾರದು. ಒಗ್ಗಟ್ಟು ಮುರಿದರೆ ಕನ್ನಡ ಕಾಳಜಿ ತುಂಡು ಭೂಮಿ ವ್ಯವಸಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

  ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವೈ.ವಿ.ವೆಂಕಟಾಚಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಂಗ್ಲೀಷ್‌ ವ್ಯಾಮೋಹ ಇದ್ದರೂ, ಇಂಗ್ಲೀಷ್‌ನಲ್ಲಿ ಓದಿ ಅರ್ಥೈಸಿಕೊಳ್ಳುವುದು ಮಾತ್ರ ಮಾತೃಭಾಷೆಯಲ್ಲಿ ಎಂಬುದನ್ನು ಮೆರೆಯಬಾರದು ಎಂದು ಹೇಳಿದರು.

ಸಾಹಿತ್ಯ ಕನ್ನಡ ಭಾಷೆಯ ಸೊಗಡು. ಸೊಗಡು ಆರದಂತೆ ಎಚ್ಚರ ವಹಿಸಬೇಕು. ಉತ್ತಮ ಕನ್ನಡ ಸಾಹಿತ್ಯ ಕೃತಿಗಳನ್ನು ಖರೀದಿಸಿ ಓದಿದನಂತರ ಮುಂದಿನ ಪೀಳಿಗೆಗೆ ಒಂದೆಡೆ ಕಾಯ್ದಿರಿಸಬೇಕು. ಕನ್ನಡ ಪತ್ರಿಕೆಗಳನ್ನು ಕೊಂಡು ಓದಬೇಕು. ನಿಘಂಟು ಬಳಸಿ ಇಂಗ್ಲೀಷ್‌ ಹಾಗೂ ಕನ್ನಡ ಭಾಷೆಯ ಕಠಿಣ ಪದಗಳ ಅರ್ಥ ಅರಿಯಬೇಕು. ಒಂದು ವಿಷಯವನ್ನು ಪ್ರೀತಿಸಿದಾಗ ಅದು ಸುಲಭವಾಗುತ್ತದೆ ಎಂದು ಹೇಳಿದರು. 

ಕನ್ನಡಸಿರಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ನರಸಿಂಹಮೂರ್ತಿ ಮಾತನಾಡಿ, ಕನ್ನಡಿಗರಿಗೆ ಕನ್ನಡ ಕೃತಿಗಳನ್ನು ಪರಿಚಯಿಸುವುದು, ವಿದ್ಯಾರ್ಥಿಗಳಲ್ಲಿ ಕಾವ್ಯಾಸಕ್ತಿ ಮೂಡಿಸುವುದು ಹಾಗೂ ಸಾಹಿತ್ಯ ರಚನೆಯನ್ನು ಪ್ರೋತ್ಸಾಹಿಸುವುದು ಕನ್ನಡಸಿರಿ ಸಾಹಿತ್ಯ ಪರಿಷತ್ತಿನ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯ ಗಡಿ ಭಾಗದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ, ಅಲ್ಲಿನ ಜನರಲ್ಲಿ ಕನ್ನಡ ಕಾಳಜಿ ಉಂಟುಮಾಡಲಾಗುವುದು ಎಂದು ಹೇಳಿದರು.

  ವಾರಕ್ಕೊಂದು ಕನ್ನಡ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದು, ಮೊದಲ ಕಾರ್ಯಕ್ರಮವಾಗಿ ಸಾಹಿತಿ ಸಂವಾದ ಹಾಗೂ ಕಾವ್ಯ ವಾಚನ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ನಡೆಸಲಾಗುವುದು.. ಶಾಲಾ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ಭಾಷಾ ವಿಷಯದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಜ್ಞಾನಜ್ಯೋತಿ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿ ಶ್ರೀನಿವಾಸಯ್ಯ ಮಾತನಾಡಿ, ಸಾಹಿತ್ಯ ಶಿಸ್ತು ರೂಪಿಸುವ ಒಂದು ಸಾಧನ. ವಿದ್ಯಾರ್ಥಿಗಳು ಮೊಬೈಲ್‌ ಗೀಳು ಬಿಟ್ಟು ಸಾಹಿತ್ಯ ಕೃಷಿಯಲ್ಲಿ ತೊಡಬೇಕು. ಉತ್ತಮ ಕೃತಿಗಳನ್ನು ಓದುವುದರ ಜೊತೆಗೆ, ಅತ್ಯುತ್ತಮ ಕೃತಿಗಳನ್ನು ಬರೆಯಲು ಪ್ರಯತ್ನಿಸಬೇಕು. ಹಿರಿಯ ಸಾಹಿತಿಗಳಿಂದ ಪ್ರೇರಣೆ ಪಡೆಯಬೇಕು ಎಂದು ಹೇಳಿದರು.

ಭಾವನ ಐಟಿಐ ಕಾಲೇಜಿನ ಪ್ರಾಂಶುಪಾಲೆ ಎಸ್‌.ಎನ್‌.ಪ್ರತಿಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಭಾವ ಜೀವಿಗಳಾದ ಕವಿಗಳಿಗೆ ಹೆಚ್ಚಿನ ಗೌರವ ಇದೆ. ಕನ್ನಡ ಸಾಹಿತಿಗಳು ತಮ್ಮ  ನಿರಂತರ ಕೃಷಿಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಶ್ರೇಷ್ಠ ಕೃತಿಗಳನ್ನು ನೀಡಿದ್ದಾರೆ. ವಿದ್ಯಾರ್ತಿಗಳಿಗೆ ಸಾಹಿತಿಗಳನ್ನು ಪರಿಚಯಿಸುವ ಕಾರ್ಯಕ್ರಮ ಶಾ್ಲಘನೀಯ ಎಂದು ಹೇಳಿದರು. 

ಸಾಹಿತಿ ಪನಸಮಾಕನಹಳ್ಳಿ ಆರ್‌.ಚೌಡರೆಡ್ಡಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕವನ ವಾಚನ ಮಾಡಿದರು. ಸಂವಾದ ನಡೆಸುವುದರ ಮೂಲಕ ತಮಗಿದ್ದ ಅನುಮಾನಗಳನ್ನು ನಿವಾರಿಸಿಕೊಂಡರು.

ಡಾ. ಆರ್‌.ರವಿಕುಮಾರ್‌, ಯೋಗ ಶಿಕ್ಷಕ ವೆಂಕಟೇಶ ಬಾಬು, ಉಪನ್ಯಾಸಕರಾದ ಆರ್.ಹರೀಶ್‌, ಕೆ.ಎಂ.ಶಿವಕುಮಾರ್‌, ವಿ.ನವೀನ್‌, ಎಸ್‌.ಚಂದ್ರಿಕ, ಎಸ್‌.ರಂಗನಾಥ್‌, ಎಸ್‌.ಇಂದ್ರಮ್ಮ ಇದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...