ಚುನಾವಣಾ ಪೊಲೀಸ್ ವೀಕ್ಷಕ ಗುರುಪ್ರೀತ್ ಸಿಂಗ್ ಗಿಲ್ ಕಂಟ್ರೋಲ್ ರೂಮಿಗೆ ಭೇಟಿ

Source: so news | By Manju Naik | Published on 18th April 2019, 12:15 AM | Coastal News | Don't Miss |

 

ಕಾರವಾರ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಪೊಲೀಸ್ ವೀಕ್ಷಕ ಗುರುಪ್ರೀತ್ ಸಿಂಗ್ ಗಿಲ್ ಅವರು ಬುಧವಾರ ಜಿಲ್ಲಾಡಳಿತ ಭವನದಲ್ಲಿರುವ ಮಾಧ್ಯಮ ಮೇಲ್ವಿಚಾರಣಾ ಕೋಶ ಮತ್ತು ಕಂಟ್ರೋಲ್ ರೂಮಿಗೆ ಭೇಟಿ ನೀಡಿ ಪರಿಶೀಲಿಸಿದರು.

ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡ ವಿವಿಧ ಕಾರ್ಯಕ್ರಮಗಳಾದ ಮಾಧ್ಯಮ ಮೇಲ್ವಿಚಾರಣೆ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸುವ ಘಟಕ, ಸಿ ವಿಜಿಲ್, ಕಂಟೋಲ್ ರೂಮ್ ದೂರು ಕೋಶ ಹಾಗೂ ಸಿಸಿಟಿವಿ ವೀಕ್ಷಣೆಯಲ್ಲಿ ಒಂದೇ ಸೂರಿನಡಿ ವ್ಯವಸ್ಥೆ ಮಾಡಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಸಿಟಿವಿ ನೇರ ವೀಕ್ಷಣೆಯನ್ನು ಕೆಲ ಹೊತ್ತು ವೀಕ್ಷಣೆ ಮಾಡಿದ ಅವರು ವಾಹನಗಳ ಅನುಮಾನಾಸ್ಪದ ಚಲನ ವಲನ ಹಾಗೂ ಮುಂದಿನ ಚೆಕ್‍ಪೋಸ್ಟ್‍ಗೆ ವರದಿ ಮಾಡುವ ಚಟುವಟಿಕೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ವಿದ್ಯುನ್ಮಾನ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳ ಮೇಲ್ವಿಚಾರಣೆ, ವರದಿ ಮಾಡುವ ವಿಧಾನದ ಬಗ್ಗೆ ಮಹಿತಿ ಪಡೆದರು. ಅಲ್ಲದೆ, ಸಿವಿಜಿಲ್‍ನಲ್ಲಿ ಈವರೆಗೆ ಎಷ್ಟು ದೂರುಗಳು ಬಂದಿವೆ ಮತ್ತು ಈ ಬಗ್ಗೆ ದೂರು ಪರಿಶೀಲಿಸಿ ಕೈಗೊಳ್ಳುವ ಕ್ರಮದ ಬಗ್ಗೆ ಖುದ್ದು ಪರಿಶೀಲಿಸಿದರು.

ಚುನಾವಣಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ್ ಪಾಟೀಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಗೋಪಾಲ್ ಬ್ಯಾಕೋಡ್ ಜತೆಯಲ್ಲಿದ್ದರು.

Read These Next