ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ತೆರೆ; ಮುಖ್ಯಮಂತ್ರಿಯಾಗಿ ಶಿಂದೆ; ಡಿಸಿಎಂ ಸ್ಥಾನಕ್ಕೆ ಫಡ್ನವೀಸ್ ತ್ಯಪ್ತಿ

Source: Vb | By I.G. Bhatkali | Published on 1st July 2022, 10:48 AM | National News |

ಮುಂಬೈ: ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂದೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಮತ್ತು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡವೀಸ್ ಅವರು ಉಪಮುಖ್ಯಮಂತ್ರಿಯಾಗಿ ಗುರುವಾರ ಸಂಜೆ ಪ್ರಮಾಣವಚನವನ್ನು ಸ್ವೀಕರಿಸಿದರು. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ನಡೆದಿದ್ದ 'ಮಹಾ'ರಾಜಕೀಯ ನಾಟಕಕ್ಕೆ ಕೊನೆಗೂ ತೆರೆ ಬಿದ್ದಿದೆ.

ಕುತೂಹಲದ ಅಂಶವೆಂದರೆ ಸಂಜೆ 4:30ರ ಸುಮಾರಿಗೆ ಸುದ್ದಿಗೋಷ್ಠಿಯಲ್ಲಿ,ತಾನು ಸರಕಾರದಿಂದ ಹೊರಗಿರುತ್ತೇನೆ ಮತ್ತು ಅದು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆ. ಇಂದು ಸಂಜೆ ಕೇವಲ ಏಕನಾಥ್ ಶಿಂದೆ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ ಎಂದು ಪ್ರಕಟಿಸಿದ್ದ ಫಡ್ನವೀಸ್ ನಂತರ ಮೂರು ಗಂಟೆ ಕಳೆಯುವಷ್ಟರಲ್ಲಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿರುವುದು.

'ಫಡ್ನವೀಸ್ ಉಪ ಮುಖ್ಯ ಮಂತ್ರಿ ಯಾಗಲೇ ಬೇಕು, ನಾನು ಅವರಿಗೆ ವೈಯಕ್ತಿಕವಾಗಿ ಮನವಿ ಮಾಡಿಕೊಳ್ಳುತ್ತೇನೆ' ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇದಕ್ಕೂ ಮುನ್ನ ಹೇಳಿದ್ದರು.

ಪ್ರಧಾನಿ ಮೋದಿ, ಫಡ್ನವೀಸ್ ಮತ್ತು ಇತರ ಬಿಜೆಪಿ ನಾಯಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಶಿಂದೆ, 'ಇದು ಅವರ ದೊಡ್ಡತನ. ಅವರು ದೊಡ್ಡ ಜನಾದೇಶವನ್ನು ಹೊಂದಿದ್ದರೂ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಯಾರು ಇದನ್ನು ಮಾಡುತ್ತಾರೆ?' ಎಂದು ಹೇಳಿದರು.

ಅಪರಾಹ್ನ ಫಡ್ನವೀಸ್ ಮತ್ತು ಶಿಂದೆ ರಾಜ್ಯಪಾಲ ಭಗತ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಿದ್ದರು. ಸರ್ವೋಚ್ಚ ನ್ಯಾಯಾಲಯವು ಬುಧವಾರ ರಾತ್ರಿ ಉದ್ಧವ್ ಠಾಕ್ರೆ ಅವರು ಗುರುವಾರ ರಾಜ್ಯ ತನ್ನ ಬಹುಮತವನ್ನು ಸಾಬೀತು ಮಾಡಲೇಬೇಕು ಎಂದು ತೀರ್ಪು ನೀಡಿತ್ತು. ಇದರ ಬೆನ್ನಿಗೇ ಠಾಕ್ರೆ ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು.

ಬಿಜೆಪಿ ಆಡಳಿತದ ಮೂರು ರಾಜ್ಯಗಳು ಸಾಕ್ಷಿಯಾಗಿದ್ದ ಬಂಡಾಯದ ಬಳಿಕ ಶಿವಸೇನೆ ಮುಖ್ಯಸ್ಥ ಠಾಕ್ರೆ ಬಳಿ ಕೇವಲ 13 ಶಾಸಕರು ಉಳಿದುಕೊಂಡಿದ್ದರು. ಶಿಂದೆ ನೇತೃತ್ವದಲ್ಲಿ ಬಂಡುಕೋರ ಶಾಸಕರ ಗುಂಪು ಮೊದಲು ಐಷಾರಾಮಿ ಬಸ್‌ಗಳಲ್ಲಿ ಗುಜರಾತಿನ ಸೂರತ್‌ಗೆ ತೆರಳಿತ್ತು. ಬಳಿಕ ಅವರನ್ನು ಬಾಡಿಗೆ ವಿಮಾನಗಳ ಮೂಲಕ ಅಸ್ಸಾಮಿನ ಗುವಾಹಟಿಗೆ ಕರೆದೊಯ್ಯಲಾಗಿತ್ತು. ಸಂಭಾವ್ಯ ಬಲಾಬಲ ಪರೀಕ್ಷೆಗೆ ಸಜ್ಜಾಗಲು ಈ ಗುಂಪು ಗುರುವಾರ ಸಂಜೆ ಗೋವಾಕ್ಕೆ ಪ್ರಯಾಣಿಸಿ ಅಲ್ಲಿ ಉಳಿದುಕೊಂಡಿತ್ತು.

ತಾವು ಪಕ್ಷನಿಷ್ಠೆಯನ್ನು ಬದಲಿಸಿ ಬಿಜೆಪಿ ಜೊತೆಗೆ ಕೈಜೋಡಿಸಿದ್ದಕ್ಕೆ ಸಿದ್ಧಾಂತ ಕಾರಣವಾಗಿತ್ತೇ ಹೊರತು ಒಳ್ಳೆಯ ಹುದ್ದೆಗಳ ಲಾಲಸೆಯಲ್ಲ ಎಂದು ಬಂಡುಕೋರ ಶಿವಸೇನೆ ಶಾಸಕರ ವಕ್ತಾರ ದೀಪಕ ಕೇಸರಕ‌ ಒತ್ತಿ ಹೇಳಿದರು. ಬಂಡುಕೋರ ಶಾಸಕರು ಉದ್ದವ ಠಾಕ್ರೆಯವರನ್ನು ವಂಚಿಸಿಲ್ಲ ಮತ್ತು ಈಗಲೂ ಅವರ ಬಗ್ಗೆ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದಾರೆ. ಶಿವಸೇನೆಯ ಯಾರೂ ಠಾಕ್ರೆ ಕುಟುಂಬಕ್ಕೆ ವಿರುದ್ಧವಾಗಿಲ್ಲ ಎಂದರು.

ಉದ್ಧವ ಠಾಕ್ರೆಯವರು ಪಕ್ಷದಲ್ಲಿ ಬಹುಮತವನ್ನು ಕಳೆದುಕೊಂಡಿ ರುವುದರಿಂದ ಈಗ ಬಂಡುಕೋರ ಬಣವೇ ಶಿವಸೇನೆಯಾಗಿದೆ ಎಂದು ಹೇಳಿದ ಕೇಸರಕರ್, 'ಯಾರದು ನಿಜವಾದ ಶಿವಸೇನೆ ಎನ್ನುವುದು ಪ್ರಶ್ನೆಯಲ್ಲ. ಕಾನೂನುಬದ್ಧವಾಗಿ ನಾವು ಬಹುಮತವನ್ನು ಹೊಂದಿದ್ದೇವೆ ಮತ್ತು ನಮ್ಮದು ಶಾಸಕಾಂಗ ಪಕ್ಷವಾಗಿದೆ 'ಎಂದರು.

ಬಂಡುಕೋರ ಶಾಸಕರಿಗೆ ರಕ್ಷಣೆ ಮತ್ತು ಸೌಲಭ್ಯಗಳನ್ನು ಒದಗಿಸಿದ್ದರೂ ಬಿಜೆಪಿಯು ಶಿವಸೇನೆ ಬಂಡಾಯದಲ್ಲಿ ತನ್ನ ಪಾತ್ರವನ್ನು ನಿರಾಕರಿಸಿದೆ. ಬಿಕ್ಕಟ್ಟಿನ ಸಂದರ್ಭ ಫಡ್ನವೀಸ್ ಅವರು ಪಕ್ಷದ ನಾಯಕತ್ವದೊಡನೆ ಎರಡು ಬಾರಿ ಸಭೆ ನಡೆಸಿದ್ದರು. ಮೂರನೇ ಸಭೆಯ ಸಂದರ್ಭದಲ್ಲಿ ಫಡ್ನವೀಸ್ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆಗಾಗಿ ಶಿಂದೆ ಅವರನ್ನು ವಿಮಾನದಲ್ಲಿ ವಡೋದರಾಕ್ಕೆ ಕರೆದೊಯ್ಯಲಾಗಿತ್ತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...