ಧಾರವಾಡ: ಎಲ್ಲ ಕಂದಾಯ ವಿಭಾಗಗಳಲ್ಲಿ ಶಿಕ್ಷಣ ಸ್ಪಂದನ ಕಾರ್ಯಕ್ರಮ; ಕಡತ ವಿಲೇವಾರಿ ಅಭಿಯಾನ ಆಯೋಜನೆ

Source: S.O. News service | By S O News | Published on 4th March 2021, 8:05 PM | State News |

ಧಾರವಾಡ: ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಸಂಬಂಧಿತ ದೂರು, ಮನವಿಗಳ ಶೀಘ್ರ ವಿಲೇವಾರಿಗಾಗಿ ರಾಜ್ಯದ ಎಲ್ಲ ಕಂದಾಯ ವಿಭಾಗಗಳಲ್ಲಿ ಶಿಕ್ಷಣ ಸ್ಪಂದನ ಹಾಗೂ ಶಿಕ್ಷಣ ಸ್ಪಂದನದಡಿ ಕಡತ ವಿಲೇವಾರಿ ಅಭಿಯಾನ ಆಯೋಜಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಮತ್ತು ಸಕಾಲ   ಸಚಿವ ಎಸ್. ಸುರೇಶಕುಮಾರ ಹೇಳಿದರು.

 ಅವರು ಇಂದು ಬೆಳಿಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಆಯುಕ್ತಾಲಯವು ಡಯಟ್ ಆವರಣದಲ್ಲಿ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಶಿಕ್ಷಣ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಶಿಕ್ಷಣ ಸ್ಪಂದನ ಒಂದು ಕಾರ್ಯಕ್ರಮವಾಗದೇ ಅದು ದಿನನಿತ್ಯದ ಕಾರ್ಯವಾಗಬೇಕು. ಶಿಕ್ಷಕರ ಸಮಸ್ಯೆ ದೂರುಗಳಿಗೆ ಸ್ಪಂದಿಸಲು ವಿಭಾಗಮಟ್ಟದಲ್ಲಿ ಶಿಕ್ಷಣ ಸ್ಪಂದನ ಕಾರ್ಯಕ್ರಮದ ಮೂಲಕ ಪ್ರಯತ್ನಿಸಲಾಗುತ್ತಿದೆ. ರಾಜ್ಯದಲ್ಲಿ ಸುಶಾಸನ ಸರಕಾರ ಇರಬೇಕು ಮತ್ತು ಅದು ಸ್ಮಾರ್ಟ್ ಸರಕಾರವೂ ಆಗಿರಬೇಕು. ಸ್ಮಾರ್ಟ್ ಸರ್ಕಾರ ಅಂದರೆ ಸರಳ, ನೈತಿಕ, ಉತ್ತರದಾಯಿತ್ವ, ಸ್ಪಂದನೆ ಹಾಗೂ ಪಾರದರ್ಶಕತೆ ಹೊಂದಿರುವುದಾಗಿದೆ ಎಂದು ಸಚಿವರು ವಿವರಿಸಿದರು.

 ಪ್ರಾಮಾಣಿಕತೆ ಎನ್ನುವುದು ಇಂದು ಅಪಹಾಸ್ಯದ ಮಾತಾಗಿದೆ, ಆದರೆ ಅದು ಗೌರವದ ಸಂಕೇತವಾಗಬೇಕು. ಪ್ರತಿಯೊಬ್ಬರು ಇಲಾಖೆಯಲ್ಲಿ ಹೆಮ್ಮೆ, ಅಭಿಮಾನ, ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟವಿದ್ದರೂ ಸರಕಾರವು ಸರಕಾರಿ ನೌಕರರಿಗೆ ಸಕಾಲದಲ್ಲಿ ಯಾವುದೇ ಕಡಿತವಿಲ್ಲದೆ ಸಂಪೂರ್ಣ ಸಂಬಳ ನೀಡಿದೆ. ಇದು ಸರಕಾರದ ಬದ್ಧತೆ. ಅದರಂತೆ ತಮ್ಮ ಪಾಲಿನ ಕರ್ತವ್ಯಗಳನ್ನು ಪ್ರಾಮಾಣಿಕತೆ, ಬದ್ಧತೆಯಿಂದ ಪ್ರತಿಯೊಬ್ಬರು ಮಾಡಬೇಕೆಂದು ಹೇಳಿದರು.

 ಶಿಕ್ಷಣ ಇಲಾಖೆಯಿಂದ ಸಮಾಜದಲ್ಲಿ ಶಕ್ತಿ ತುಂಬುವ, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಮಕ್ಕಳು ಪರೀಕ್ಷೆಗಳನ್ನು ಯಾವುದೇ ಭಯ, ಆತಂಕಗಳಿಲ್ಲದೆ ಖುಷಿಯಿಂದ ಆತ್ಮವಿಶ್ವಾಸದಿಂದ ಎದುರಿಸುವ ವಾತಾವರಣ ಬೆಳಸಬೇಕೆಂದು ಅವರು ಹೇಳಿದರು.

 ಸಮಾಜದಲ್ಲಿ ಗೌರವ ಭಾವನೆ ಹೆಚ್ಚಿಸುವಂತಹ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕೆಂದು ಸಚಿವ ಸುರೇಶ ಕುಮಾರ ತಿಳಿಸಿದರು.

 ವಿಧಾನ ಪರಿಷತ ಸದಸ್ಯ ಎಸ್.ವ್ಹಿ. ಸಂಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಹನಮಂತ ನಿರಾಣಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

 ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್, ಸ್ಲಿಪ್ ಸಂಸ್ಥೆಯ ನಿರ್ದೇಶಕ ರಘುವೀರ, ಡಿಡಿಪಿಐಗಳಾದ ಎಂ.ಎಲ್. ಹಂಚಾಟೆ, ಆರ್.ಎಸ್. ಮುಳ್ಳೂರ ಸೇರಿದಂತೆ ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿದ್ದರು.

 ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ನಿರ್ದೇಶಕಿ ಮಮತಾ ನಾಯಕ ವಂದಿಸಿದರು. ವಿದ್ಯಾ ನಾಡಿಗೇರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರು, ಪದವಿ ಪೂರ್ವ ಮಹಾವಿದ್ಯಾಲಯಗಳ ಉಪನ್ಯಾಸಕರು, ಇತರರು ಉಪಸ್ಥಿತರಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...