ದುಬೈ: ಬ್ಯಾರೀಸ್ ಕಲ್ಚರಲ್ ಫೋರಂ-ಇಫ್ತಾರ್ ಮೀಟ್ -2017

Source: arshad | By Arshad Koppa | Published on 10th June 2017, 9:43 PM | Gulf News | Special Report | Don't Miss |

ದುಬೈ, ಜೂ ೧೦: ಬ್ಯಾರಿ ಬಾಂಧವರ ಸಂಘಟನೆಯಾದ ಬಿಸಿಎಫ್ ಅಥವಾ ಬ್ಯಾರೀಸ್ ಕಲ್ಚರಲ್ ಫೋರಂ ದುಬೈ ಘಟಕದಿಂದ ಜೂನ್ ೯ ರ ಶುಕ್ರವಾರ ಸಂಜೆ ನಗರದ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.

ನಾಡಿನಲ್ಲಿ ವ್ಯಾಸಾಂಗ ಮಾಡುತ್ತಿರುವ, ಜಾತಿ ಮತ ಪಂಗಡಗಳ ಬೇಧವಿಲ್ಲದೇ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ನಿಟ್ಟಿನಲ್ಲಿ ಇಫ್ತಾರ್ ಬಳಿಕದ ಸಭೆಯಲ್ಲಿ ಪ್ರಾಯೋಜಕರಿಂದ ದೇಣಿಗೆಯನ್ನು ಕೋರಲಾಯಿತು.

ಇಫ್ತಾರ್ ಕಾರ್ಯಕ್ರಮಕ್ಕೂ ಮುನ್ನ ಕೆಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳು ಕುರಾನ್ ಪ್ರವಚನದ ಮೂಲಕ ಪ್ರತಿಭೆಯನ್ನು ಮೆರೆದರು. ಪ್ರವಚನ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಇಬ್ರಾಹಿಂ ದುಬಾಲ್ ರವರು ’ಇಸ್ಲಾಮಿಕ್ ಕ್ವಿಜ್’ ರಸಪ್ರಶ್ನೆ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. 

ಕಳೆದ ಹದಿನೇಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಬಿಸಿಎಫ್ ಸ್ಕಾರಲ್ ಶಿಪ್ ವಿತರಣೆಯ ಕಿರುಚಿತ್ರವನ್ನು ಡಾ. ಮೊಹಮ್ಮದ್ ಕಾಪುರವರು ಪವರ್ ಪಾಯಿಂಟ್ ಸ್ಲೈಡ್ ಷೋ ಮೂಲಕ ಪ್ರದರ್ಶಿಸಿ ಸಭಿಕರಿಗೆ ಅಮೂಲ್ಯ ಮಾಹಿತಿಯನ್ನು ಒದಗಿಸಿದರು.

ಕೆಸಿಎಫ್ ಸಂಘಟನೆಯ ಅಧ್ಯಕ್ಷರಾದ ಮೌಲಾನಾ ಮಹಬೂಬ್ ಸಖಾಫಿಯವರು ಕನ್ನಡದಲ್ಲಿ ನೀಡಿದ ಧಾರ್ಮಿಕ ಪ್ರವಚನದ ಮೂಲಕ ರಮಧಾನ್ ತಿಂಗಳ ಮಹತ್ವವನ್ನು ಮನದಟ್ಟು ಮಾಡಿಸಿದರು. ಉಪವಾಸಿಗನಿಗೆ ಉಪವಾಸವನ್ನು ಆಚರಿಸುವ ಮೂಲಕ ಲಭ್ಯವಾಗುವ ಎರಡು ಪ್ರಯೋಜನಗಳನ್ನು ವಿವರಿಸಿದರು. ಉಪವಾಸ ಸಂಪನ್ನಗೊಳಿಸುವಾಗ ಲಭಿಸುವ ಸಂತಸ ಹಾಗೂ ತನ್ನ ಸುತ್ತ ಮುತ್ತಲ ಜನರ ಹಸಿವನ್ನು ಅರಿತುಕೊಂಡು ಅದಕ್ಕೆ ಸ್ಪಂದಿಸುವ ಅವಕಾಶ ಲಭಿಸುತ್ತದೆ ಎಂದು ತಿಳಿಸಿದರು. ಇಸ್ಲಾಂ ನ ತತ್ವಗಳು ಸದಾ ಶಾಂತಿ ಮತ್ತು ಸೌಹಾರ್ದತೆಯನ್ನೇ ಸಾರುತ್ತವೆ ಎಂದು ಪ್ರವಾದಿಯವರ ಸಮಯದ ದೃಷ್ಟಾಂತವೊಂದನ್ನು ಉದಾಹರಿಸಿ ವಿವರಿಸಿದರು.

ಇಫ್ತಾರ್ ಸಮಯದಲ್ಲಿ ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಅಧ್ಯಕ್ಷರಾದ ಶೈಖುನಾ ಥಾಹಾ ತಂಞಳ್ ರವರಿಂದ ದುವಾ ನೆರವೇರಿತು.

ಇಪ್ತಾರ್ ಬಳಿಕ ಮಗ್ರಿಬ್ ನಮಾಜಿನ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿತ್ತು.

 

ಮಗ್ರಿಬ್ ನಮಾಜಿನ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷರಾದ ಡಾ. ಬಿ.ಕೆ ಯೂಸುಫ್ ರವರು ವಹಿಸಿದ್ದರು. ಇವರೊಂದಿಗೆ ವೇದಿಕೆಯಲ್ಲಿ ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಅಧ್ಯಕ್ಷರಾದ ಶೈಖುನಾ ಥಾಹಾ ತಂಞಳ್, ಕೆಸಿಎಫ್ ಸಂಘಟನೆಯ ಅಧ್ಯಕ್ಷರಾದ ಮೌಲಾನಾ ಮಹಬೂಬ್ ಸಖಾಫಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸುಗಂಧರಾಜ ಬೇಕಲ್, ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಸಂಸ್ಥೆಯ ಮಾಲಿಕರಾದ ಶ್ರೀ ಹರೀಶ್ ಶೇರಿಗಾರ್, ಬಿಸಿಎಫ್  ಉಪಾಧ್ಯಕ್ಷರು ಹಾಗೂ ಇಫ್ತಾರ್ ಸಮಿತಿಯ ಚೇರ್ಮನ್ನರಾದ ಅಬ್ದುಲ್ ಲತೀಫ್ ಮುಲ್ಕಿ, ಬಿಸಿಎಫ್ ಸ್ಥಾಪಕ ಸದಸ್ಯರಾದ ಜನಾಬ್ ಎಂ.ಇ.ಮೂಳೂರು, ಕರ್ನಾಟಕ ಎನ್ನಾರೈ ಫೋರಂ ಕಾರ್ಯದರ್ಶಿಗಳಾದ ಶ್ರೀ ಪ್ರಭಾಕರ ಅಂಬಲ್ತೆರೆ, ದುಬೈ ಕರ್ನಾಟಕ ಸಂಘದ ಪ್ರತಿನಿಧಿ ಶ್ರೀ ಕೃಷ್ಣರಾಜ ತಂತ್ರಿ, ಫ್ಯಾಂಟಾಸ್ಟಿಕ್ ರೂಫ್ ಸಂಸ್ಥೆಯ ಶ್ರೀ ಅನಿಲ್, ಶಾರ್ಜಾ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷರುಗಳಾದ ಶ್ರೀ ನೋಯೆಲ್ ಆಲ್ಮೇಡಾ ಹಾಗೂ ಶ್ರೀ ಬಿ.ಕೆ ಗಣೇಶ್ ರೈ, ಮ್ಯಾಂಗಲೂರ್ ಕೊಂಕಣ್ಸ್ ಸಂಸ್ಥೆಯ ಜೇಮ್ಸ್ ಮೆಂಡೋನ್ಸಾ, ಜನಾಬ್ ಅಬ್ದುಲ್ ಖಾದರ್ ಬಜ್ಪೆ, ಮ್ಯಾಂಗಲೂರ್ ಕೊಂಕಣ್ಸ್ ಸಂಸ್ಥೆಯ ಅಧ್ಯಕ್ಶ ಆಲ್ವಿನ್ ಪಿಂಟೋ, ಇಂಡಿಯನ್ ಕಾನ್ಸುಲೇಟ್ ಪ್ರತಿನಿಧಿ ಶ್ರೀ ಎನ್. ಮೋಹನ್, ಕನ್ನಡ ಪಾಠಶಾಲೆಯ ಶ್ರೀ ಶಶಿಧರ್ ನಾಗರಾಜಪ್ಪ, ಶ್ರೀ ಜೋಸೆಫ್ ಮಥಾಯಿಸ್, ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಸದಸ್ಯರಾದ ಜನಾಬ್ ಯೂಸುಫ್ ಅರ್ಲಪದವು, ಜನಾಬ್ ರಫೀಕ್ ಹುಸೇನ್, ಜನಾಬ್ ಕೆ.ಎಂ. ಅಶ್ರಫ್, ಮರ್ಕಜುಲ್ ಹುದಾ ಸಂಸ್ಥೆಯ ಜನಾಬ್ ಶುಕೂರ್ ಹಾಗೂ ಜನಾಜ್ ಬಾವಾ ಹಾಜಿಯವರು ಉಪಸ್ಥಿತರಿದ್ದರು. 

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಡಾ. ಬಿ.ಕೆ ಯೂಸುಫ್ ರವರು ರಮಧಾನ್ ತಿಂಗಳಲ್ಲಿ ಮಾಡುವ ದಾನ ಧರ್ಮಗಳಿಗೆ ಅತಿ ಹೆಚ್ಚಿನ ಪ್ರತಿಫಲವಿದ್ದು ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಅಗತ್ಯವುಳ್ಳವರಿಗೆ ನೆರವು ನೀಡುವುದೇ ಬಿಸಿಫ್ ನ ಪ್ರಮುಖ ಉದ್ದೇಶವಾಗಿದೆ. ಈ ಉದ್ದೇಶಗಳಲ್ಲಿ ವಿದ್ಯಾರ್ಥಿವೇತನ ನೀಡುವುದೂ ಒಂದಾಗಿದೆ. ಈ ಕಾರ್ಯಕ್ರಮಗಳಿಗೆ ಬೆಂಬಲ ನೀಡುವ ಮೂಲಕ ಬಿಸಿಎಫ್ ನ ಜಾತಿಮತಬೇಧವಿಲ್ಲದ ಸಮಾಜಸೇವೆಯನ್ನು ಇನ್ನಷ್ಟು ಹೆಚ್ಚಾಗಿ ನೀಡುವಂತಾಗಲಿ ಎಂದು ಕರೆ ನೀಡಿದರು.

ಬಳಿಕ ಮಾತನಾಡಿದ ಬಿಸಿಎಫ್ ಉಪಾಧ್ಯಕ್ಷರು ಹಾಗೂ ಬಿಸಿಎಫ್ ಇಫ್ತಾರ್ ಸಮಿತಿಯ ಚೇರ್ಮನ್ನರಾದ ಅಬ್ದುಲ್ ಲತೀಫ್ ಮೂಲ್ಕಿಯವರು ಈ ರಮಧಾನ್ ತಿಂಗಳಲ್ಲಿ ನಮ್ಮ ಪಾಪಗಳಿಗೆ ಕೋರುವ ಕ್ಷಮೆಯನ್ನು ಅಲ್ಲಾಹನು ಮನ್ನಿಸುತ್ತಾನೆ. ರಮಧಾನ್ ತಿಂಗಳ ಉಪವಾಸ ಎಲ್ಲರಿಗೂ ಲಭಿಸುವಂತಾಗಲಿ. ಬಿಸಿಎಫ್ ನ ಈ ಇಫ್ತಾರ್ ಕೂಟಕ್ಕೆ ಬಂದಿರುವವರೆಲ್ಲರೂ ಜಾತಿ ಮತ ಬೇಧವನ್ನು ಮೀರಿರುವ ಕೇವಲ ಕನ್ನಡಿಗರಾಗಿದ್ದು ನಮ್ಮ ನಡುವೆ ಸಹೋದರತ್ವ ಹಾಗೂ ಪ್ರೀತಿ ವಿಶ್ವಾಸಗಳು ಹಿಂದಿನಿಂದಲೂ ಇರುವಂತೆ ಎಂದೆಂದೂ ಇರಲಿ ಎಂದು ಹಾರೈಸಿದರು. ಕಳೆದ ಹದಿನೇಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಆಗ್ರಹಿಸಿದ ಅವರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನೂ ಅರ್ಪಿಸಿದರು.

ಬಳಿಕ ಮಾತನಾಡಿದ ಜನಾಬ್ ಎಂ.ಇ. ಮೂಳೂರು ರವರು ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರೂ ಕನ್ನಡಿಗರಾಗಿ ಆಗಮಿಸಿದ್ದೀರಿ. ಇಲ್ಲಿ ಜಾತಿ ಮತ ಬೇಧವಿಲ್ಲ. ಇದೇ ಬಿಸಿಎಫ್ ನ ಹೆಮ್ಮೆಯ ವಿಷಯವಾಗಿದೆ. ಇಂದಿನ ಜಗತ್ತಿನಲ್ಲಿ ಈ ಸಾಮರಸ್ಯದ ಅಗತ್ಯವಿದೆ. ಇಸ್ಲಾಂ ಪ್ರವರ್ಧಮಾನಕ್ಕೆ ಬರುವ ಮುನ್ನ ಜನರನ್ನು ಜಾತಿಯ ಮೂಲಕ ಅಳೆಯಲಾಗುತ್ತಿತ್ತು. ಆದರೆ ಪ್ರವಾದಿಯವರು "ಲಕುಂ ದೀನುಕುಂ ವಲಿಯದೀನ್" ಅಥವಾ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ತತ್ವವನ್ನು ಅಳವಡಿಸಿದರು. ಈ ತತ್ವವನ್ನೇ ಬಿಸಿಎಫ್ ತನ್ನ ಕಾರ್ಯಸೂಚಿಯಲ್ಲಿ ಅಳವಡಿಸಿದ್ದು ಕಳೆದ ಹದಿನೇಳು ವರ್ಷಗಳಿಂದ ಸಮಾಜದ ಎಲ್ಲಾ ವರ್ಗಗಳ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅರ್ಹ ಅಂಗವಿಕಲರಿಗೆ ಗಾಲಿಕುರ್ಚಿ, ಹೊಲಿಗೆಯಂತ್ರ, ಕನ್ನಡಕ ಮೊದಲಾದವುಗಳನ್ನು ವಿತರಿಸುತ್ತಾ ಬಂದಿದೆ. ಇದುವರೆಗೆ ಹದಿಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಆಗಸ್ಟ್ ಹದಿಮೂರರಂದು ಮಂಗಳೂರಿನ ಸೆಂಟ್ ಅಲೋಯ್ಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಆ ಸಮಯ ಊರಿನಲ್ಲಿದ್ದವರು ಈ ಕಾರ್ಯಕ್ರಮಕ್ಕೆ ಖಂಡಿತಾ ಆಗಮಿಸಲು ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಮುಸ್ಲಿಮರು ಪಾರ್ಥಿಸಿದರೆ ಅವರ ಪ್ರಾರ್ಥನೆಗಳು ಈಡೇರುವ ಮೂರು ಸಂದರ್ಭಗಳನ್ನು ಅವರು ವಿವರಿಸಿದರು. ಮೊದಲನೆಯದಾಗಿ ವೃದ್ದಾಪ್ಯದಲ್ಲಿ ತಂದೆ ತಾಯಿಗಳ ಸೇವೆ, ಎರಡನೆಯದಾಗಿ ಅನಾಥ ಮಕ್ಕಳ ಸಂರಕ್ಷಣೆ ಹಾಗೂ ಮೂರನೆಯದಾಗಿ ಇಫ್ತಾರ್ ಸಮಯದಲ್ಲಿ ಮಾಡಿದ ದುವಾ ಖಂಡಿತಾ ನೆರವೇರುತ್ತದೆ ಎಂದು ತಿಳಿಸಿದರು.

ಬಳಿಕ ಎಲ್ಲಾ ಕನ್ನಡಿಗರ ಪರವಾಗಿ ಮಾತನಾಡಿದ ಶ್ರೀ ಸರ್ವೋತ್ತಮ ಶೆಟ್ಟಿಯವರು ಉಪವಾಸದ ಮೂಲಕ ಕೇವಲ ರಮಧಾನ್ ಮಾಸದಲ್ಲಿ ಮಾತ್ರವಲ್ಲ, ಇಡಿಯ ವರ್ಷದಲ್ಲಿ ಮನಸ್ಸು ಮತ್ತು ದೇಹವನ್ನು ನಿಯಂತ್ರಿಸಬಹುದು. ಇಫ್ತಾರ್ ಒಂದು ಸಂತಸದ ಘಳಿಗೆಯಾಗಿದ್ದು ಕೇವಲ ಮುಸ್ಲಿಮರಿಗೆ ಮಾತ್ರವಲ್ಲ, ಎಲ್ಲರಿಗೂ ಶುಭ ಘಳಿಗೆಯಾಗಿದೆ. ಈ ಘಳಿಗೆಯಲ್ಲಿ ಎಲ್ಲರಿಗೂ ಒಳ್ಳೆಯದೇ ಆಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದರು. 

ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಹೇಳಿದ ಮಾತುಗಳನ್ನು ಅವರು ಈ ಸಂದರ್ಭದಲ್ಲಿ ಉಚ್ಛರಿಸಿದರು.

"ಇವನಾರವ, ಇವನಾರವ ಎಂದೆನ್ನದಿರಯ್ಯ
ಇವ ನಮ್ಮವ, ಇವ ನಮ್ಮವ ಎಂದೆನ್ನಿರಯ್ಯ"

ಸಾಮಾಜಿಕ ಸಮಾನತೆಗೆ ಅಂದಿನ ದಿನದಲ್ಲಿಯೇ ಒತ್ತು ನೀಡಲಾಗಿತ್ತು. ಪ್ರವಾದಿಯವರ ಮಾತುಗಳೂ ಇದೇ ರೀತಿಯಾಗಿದ್ದು ಎಲ್ಲಾ ಧರ್ಮಗಳೂ ಒಳ್ಳೆಯದನ್ನೇ ಬೋಧಿಸುತ್ತವೆ, ದೇವರು ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ ಎಂದು ಹಾರೈಸಿದರು.

ಬಳಿಕ ಮಾತನಾಡಿದ ಕರ್ನಾಟಕ ಎನ್ನಾರೈ ಫೋರಂ ಕಾರ್ಯದರ್ಶಿಗಳಾದ ಶ್ರೀ ಪ್ರಭಾಕರ ಅಂಬಲ್ತೆರೆಯವರು ಭಾವೈಕ್ಯತೆಯನ್ನು ಬಿಂಬಿಸುವ ಕೆಲವು ಘಟನೆಗಳನ್ನು ಉದಾಹರಿಸಿ ಬಿಸಿಎಫ್ ನ ಸಮಾಜಸೇವೆ ಸದಾ ಈ ಮಣ್ಣಿಗೆ ಲಭಿಸುವಂತಾಗಲಿ ಎಂದು ಹಾರೈಸಿದರು.

ಬಳಿಕ ಈ ಕಾರ್ಯಕ್ರಮ ನಡೆಸಿಕೊಡಲು ಅಪಾರವಾದ ನೆರವು ನೀಡಿದ ಫ್ಯಾಂಟಾಸ್ಟಿಕ್ ರೂಫ್ ಸಂಸ್ಥೆಯ ಮಾಲಿಕರಾದ ಶ್ರೀ ಅನಿಲ್ ರವರಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.  

ಬಳಿಕ ಮಾತನಾಡಿದ ಅವರು ಇದು ತನ್ನ ನಾಲ್ಕನೆಯ ವರ್ಷವಾಗಿದ್ದು ಪ್ರತಿ ಬಾರಿಯೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಬಿಸಿಎಫ್ ಕಾರ್ಯಗಳಿಗೆ ನೆರವಾಗಲು ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದರು.

ಬಳಿಕ ಶ್ರೀ ಹರೀಶ್ ಶೇರಿಗಾರ್ ರವರ ನಿರ್ಮಾಣದ ಕನ್ನಡ ಚಲನಚಿತ್ರ ’ಮಾರ್ಚ್ ೨೨’ ದ ಆಡಿಯೋ ರಿಲೀಸ್ ದಿನಾಂಕವನ್ನು ಜುಲೈನಲ್ಲಿ ಮಾಡಲಾಗುತ್ತಿದೆ. ಧಾರ್ಮಿಕ ಸಾಮರಸ್ಯದ ವಿಷಯವಿರುವ ಈ ಚಲನಚಿತ್ರವನ್ನು ಖಂಡಿತಾ ವೀಕ್ಷಿಸಿ ಎಂದು ಕರೆ ನೀಡಿದರು.

ಆ ಬಳಿಕ ವೇದಿಕೆಯನ್ನು ಅಲಂಕರಿಸಿದ ಬಿಸಿಎಫ್ ಸ್ಕಾಲರ್ ಶಿಪ್ ಸಮಿತಿಯ ಕಾರ್ಯದರ್ಶಿ ಡಾ. ಮೊಹಮ್ಮದ್ ಕಾಪುರವರು ವಿವಿಧ ಶೈಕ್ಷಣಿಕ ಕೋರ್ಸುಗಳನ್ನು ವಿವರಿಸಿ ಇವುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ ನೆರವಿನ ಪ್ರಮಾಣವನ್ನು ಘೋಷಿಸಿ ದಾನಿಗಳಿಂದ ನೆರವನ್ನು ಯಾಚಿಸಿದರು. ಈ ಪ್ರಕಾರ ಪಿಯುಸಿ-೫೦೦೦ ರೂ, ಬಿ.ಕಾಮ್, ಬಿಎ, ಬಿಎಸ್ಸಿ, ೫೦೦೦ರೂ, ಡಿಪ್ಲೋಮಾ ಇನ್ ಟೆಕ್ನಾಲಜಿ-೫೦೦೦ ರೂ, ಕುರಾನ್ ಹಾಫಿಜ್ ಕೋರ್ಸ್-೫೦೦೦ರೂ, ಬಿಇ-ಹತ್ತು ಸಾವಿರ ರೂ, ಡಿಪ್ಲೊಮಾ ಇನ್ ಫೈನಾನ್ಸ್/ಅಕೌಂಟ್ಸ್-೫೦೦೦ರೂ, ಬಿಸಿಎ-೮೦೦೦ರೂ, ಬಿಬಿಎಂ-೫೦೦೦ರೂ, ಎಂಬಿಎ-೬೦೦೦ರೂ, ಎಂಎಸ್ ಡಬ್ಲ್ಯೂ-೬೦೦೦ ರೂ, ಡಿ. ಇನ್ ಎಜುಕೇಶನ್-೫೦೦೦ ರೂ, ಪತ್ರಿಕೋದ್ಯಮ-೬೦೦೦ರೂ, ಉಲೇಮಾ ಕೋರ್ಸ್-೫೦೦೦ ರೂ, ಎಂಬಿಬಿಎಸ್-೪೦,೦೦೦ ರೂ, ಬಿಎ ಎಮ್ ಎಸ್, ೨೦,೦೦೦ ರೂ, ಬಿಡಿಎಸ್, ೧೮,೦೦೦ ರೂ, ಎಂಎಸ್ಸಿ-೮೦೦೦ ರೂ, ನರ್ಸಿಂಗ್-೬೦೦೦ ರೂ, ವಿಶೇಷ ಆದ್ಯತೆಯ ಮಕ್ಕಳಿಗೆ-೫೦೦೦ ರೂ, ಡಿ ಇನ್ ಸ್ಪೋರ್ಟ್ಸ್-೫೦೦೦ ರೂ ಎಂದು ವಿವರಿಸಿ ಪ್ರತಿ ಕೋರ್ಸ್ ನಲ್ಲಿ ವ್ಯಾಸಾಂಗ ಮಾಡುತ್ತಿರುವವರಿಗೆ ನೆರವಾಗಲು ದಾನಿಗಳಿಂದ ನೆರವನ್ನು ಕೋರಿದರು. ಈ ಸಂದರ್ಭದಲ್ಲಿ ಆಗಮಿಸಿದ ಬಹಳಷ್ಟು ದಾನಿಗಳು ತೆರೆದ ಹೃದಯದಿಂದ ತಮ್ಮ ಬೆಂಬಲವನ್ನು ಪ್ರಕಟಿಸಿ ವಿದ್ಯಾರ್ಥಿಗಳ ಬಾಳು ಬೆಳಗಲು ನೆರವಾದರು.

ಕಾರ್ಯಕ್ರಮದ ಕಡೆಯದಾಗಿ ಹಾಫಿಜ್ ಹುಸೇನ್ ರವರು ವಂದನಾರ್ಪಣೆ ಸಲ್ಲಿಸಿದರು.
 

ಸ್ವಾದಿಷ್ಟ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
 


ಚಿತ್ರ, ವರದಿ: ಅರ್ಶದ್ ಹುಸೇನ್ ಎಂ.ಹೆಚ್, ದುಬೈ.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...