ಹುಬ್ಬಳ್ಳಿ ಕಿಮ್ಸ್ ನಲ್ಲಿ ಕೋವಿಡ್ ಲಸಿಕಾಕರಣಕ್ಕೆ ಚಾಲನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂವಾದ

Source: SO News | By Laxmi Tanaya | Published on 16th January 2021, 7:11 PM | State News | Don't Miss |

ಹುಬ್ಬಳ್ಳಿ :‌ ಕೋವಿಡ್ ತಡೆಯಲು ಇಂದಿನಿಂದ  ದೇಶದಾದ್ಯಂತ  ಪ್ರಾರಂಭವಾದ ಕೋವಿಶೀಲ್ಡ್ ಲಸಿಕಾಕರಣ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಹೆಸರಾಗಿರುವ  ಹುಬ್ಬಳ್ಳಿ ಕಿಮ್ಸ್  ಸೇರಿದಂತೆ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಚಾಲನೆ ದೊರೆಯಿತು.

ನವದೆಹಲಿಯ ನಿರ್ಮಾಣ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ಲಸಿಕಾಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣವನ್ನು  ವರ್ಚುವಲ್ ವೇದಿಕೆಯ ಮೂಲಕ ವೀಕ್ಷಿಸಲಾಯಿತು.

ಬೃಹತ್ ,ಮಧ್ಯಮ ಕೈಗಾರಿಕೆ ,ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರು ಕಿಮ್ಸ್ ನಲ್ಲಿ ಏರ್ಪಡಿಸಿದ್ದ ಈ ಚಾರಿತ್ರಿಕ ಮಹತ್ವದ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ  ನೇತೃತ್ವದಲ್ಲಿ ಇಂದು ಕೊರೊನಾ ವಿರುದ್ಧ ಹೋರಾಡಲು ಲಸಿಕಾಕರಣಕ್ಕೆ ಚಾಲನೆ ದೊರೆತಿದೆ. ಕೊರೊನಾ ವೈರಾಣು ಮೊದಲ ಬಾರಿಗೆ ದೇಶದಲ್ಲಿ ಕಾಣಿಸಿಕೊಂಡ ಕೂಡಲೇ ಲಾಕ್ ಡೌನ್ ಮೂಲಕ ಈ ಬೃಹತ್ ದೇಶದಲ್ಲಿ ಜನಜಾಗೃತಿ ಮೂಡಿಸಲಾಯಿತು.ದೇಶದ ವೈದ್ಯಕೀಯ ವಿಜ್ಞಾನಿಗಳು ಈ ಕಾರ್ಯವನ್ನು  ಸವಾಲಿನಂತೆ ಸ್ವೀಕರಿಸಿ ಲಸಿಕೆ ಅಭಿವೃದ್ಧಿ ಪಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಸಾವಿರ ಕೋವಿಡ್ ಲಸಿಕೆಗಳು ಸ್ವೀಕಾರವಾಗಿವೆ. 25,366 ಸರ್ಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರನ್ನು ಲಸಿಕಾಕರಣಕ್ಕೆ ಗುರುತಿಸಲಾಗಿದೆ.ಮೊದಲ ದಿನವಾದ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಸುಮಾರು 560 ಲಸಿಕೆ ನೀಡುವ ಗುರಿ ಇದೆ.ಸೋಮವಾರದಿಂದ ಜಿಲ್ಲೆಯ 70 ಕೇಂದ್ರಗಳಲ್ಲಿ ಲಸಿಕಾಕರಣ ನಡೆಯಲಿದೆ. ಚುನಾವಣೆ ಕರ್ತವ್ಯದ ಮಾದರಿಯಲ್ಲಿ ಅತ್ಯಂತ ಶಿಸ್ತಿನಿಂದ ಈ ಪ್ರಕ್ರಿಯೆ ನಡೆಯಲಿದೆ. ಎರಡನೇ ಹಂತದಲ್ಲಿ
50 ವರ್ಷ ಮೇಲ್ಪಟ್ಟ ವಯೋಮಾನದ ವಿವಿಧ ಖಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಬಂದ ಬಳಿಕ ಕೋವಿಡ್ ಶೂನ್ಯಕ್ಕೆ ಇಳಿಯುವವರೆಗೂ   ಸುರಕ್ಷತಾ ಕ್ರಮಗಳು ಮುಂದುವರೆಯಬೇಕು  ಎಂದರು.  

ಶಾಸಕ ಅಮೃತ ದೇಸಾಯಿ , ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ,ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ,ಆರೋಗ್ಯ ಇಲಾಖೆಯ ಅಪರ ನಿರ್ದೇಶಕ ಡಾ.ಅಪ್ಪಾಸಾಹೇಬ ನರಹಟ್ಟಿ, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಪ್ರಭು ಬಿರಾದಾರ,ಆರೋಗ್ಯ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ.ಗೀತಾ ಬಾಲಿ,  ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ , ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ಎಸ್.ಎಂ.ಹೊನಕೇರಿ,ಡಾ.ಜಿ.ಬಿ.ಸತ್ತೂರ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

  ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್ ಚವ್ಹಾಣ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಸಮುದಾಯ ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ಲೋಕರೆ, ಉಪವೈದ್ಯಕೀಯ ಅಧೀಕ್ಷಕರಾದ ಡಾ.ರಾಜಶೇಖರ ದ್ಯಾಬೇರಿ, ಡಾ.ಎಸ್.ವೈ.ಮುಲ್ಕಿಪಾಟೀಲ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅಯ್ಯನಗೌಡ ಪಾಟೀಲ, ಹುಬ್ಬಳ್ಳಿ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಸ್.ಹಿತ್ತಲಮನಿ , ತಹಸೀಲ್ದಾರ ಶಶಿಧರ ಮಾಡ್ಯಾಳ, ಜಿಲ್ಲಾ ಎನ್ ಐ ಸಿ ಅಧಿಕಾರಿ ಮೀನಾಕುಮಾರಿ ಮತ್ತಿತರರು ಇದ್ದರು.

*ಶ್ರೀನಿವಾಸ ಬಳ್ಳಾರಿ ಹಾಗೂ ಡಾ.ನಾರಾಯಣ ಹೆಬಸೂರ ಅವರಿಗೆ ಮೊದಲ ಲಸಿಕೆ*

ಮೊದಲ ಹಂತದಲ್ಲಿ ಲಸಿಕಾಕರಣಕ್ಕೆ ಪ್ರಥಮ ಫಲಾನುಭವಿಯಾಗಿ ಗುರುತಿಸಿದ ಕಿಮ್ಸ್  ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಗ್ರೂಪ್ ಡಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ಬಳ್ಳಾರಿ ಹಾಗೂ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ.ನಾರಾಯಣ ಹೆಬಸೂರ ಅವರಿಗೆ ಸಚಿವರು ಹಾಗೂ ಗಣ್ಯರ ಸಮ್ಮುಖದಲ್ಲಿ ಕೋವುಶೀಲ್ಡ್ ಲಸಿಕೆ ನೀಡಲಾಯಿತು.

*ಲಸಿಕೆ ಪಡೆದವರ ಅಭಿಪ್ರಾಯಗಳು*

ಕಳೆದ ಏಳೆಂಟು ತಿಂಗಳುಗಳಿಂದ ನಮ್ಮ ಪ್ರಾಣವನ್ನೂ ಲೆಕ್ಕಿಸದೇ ಕೊರೊನಾ ವಿರುದ್ಧ ಹೋರಾಡಿದ್ದೇವೆ,ಇದೀಗ ಮೊದಲ ಹಂತದಲ್ಲಿಯೇ ಲಸಿಕೆ ನೀಡಲು ,ನಮ್ಮನ್ನು ಗುರುತಿಸಿರುವುದು ಸಂತಸ ತಂದಿದೆ. ಮೊದಲಿಗೆ ಒಂದು ಸಣ್ಣ ಮಟ್ಟದ ಆತಂಕ ಇತ್ತು ಕಿಮ್ಸ್ ವೈದ್ಯರು ತಿಳುವಳಿಕೆ ನೀಡಿ ,ಭರವಸೆ ನೀಡಿದರು.ಲಸಿಕೆ ಪಡೆದು ಅರ್ಧಗಂಟೆಯಾಗಿದೆ ಯಾವುದೇ ಸಮಸ್ಯೆ ಇಲ್ಲ ಆರಾಮವಾಗಿದ್ದೇನೆ .
- ಶ್ರೀನಿವಾಸ ಬಳ್ಳಾರಿ
 ಹುಬ್ಬಳ್ಳಿ ಕಿಮ್ಸ್ ನಲ್ಲಿ ಮೊಟ್ಟ ಮೊದಲ ಲಸಿಕೆ ಪಡೆದ ಹೊರಗುತ್ತಿಗೆ ನೌಕರ

ಲಸಿಕೆಯು ಕೊರೊನಾ ತಡೆಯಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಂಪೂರ್ಣ ಪೂರಕವಾಗಿದೆ.ಕರ್ತವ್ಯ ನಿರ್ವಹಿಸುತ್ತಿರುವ ಮಾತೃ ಸಂಸ್ಥೆಯಲ್ಲಿಯೇ ಲಸಿಕೆ ಪಡೆದಿರುವುದು ಹೆಮ್ಮೆ ಮೂಡಿಸಿದೆ.ವೈದ್ಯನಾಗಿ ಸ್ವತಃ ಲಸಿಕೆ ಹಾಕಿಸಿಕೊಂಡಾಗ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಬರಲಿದೆ ಆದ್ದರಿಂದ ಸ್ವ ಇಚ್ಛೆಯಿಂದ ಇಂದು ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವೆ.
- ಡಾ.ನಾರಾಯಣ ಹೆಬಸೂರ
ಪ್ರಾಧ್ಯಾಪಕರು, ಶಸ್ತ್ರಚಿಕಿತ್ಸೆ ವಿಭಾಗ
ಕಿಮ್ಸ್ , ಹುಬ್ಬಳ್ಳಿ

Read These Next

ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್​ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು

ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್​ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು