ರಾಷ್ಟ್ರಪತಿ ಚುನಾವಣೆ; ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ; ಯಶವಂತ ಸಿನ್ಹಾ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ

Source: Vb | By I.G. Bhatkali | Published on 23rd June 2022, 10:10 PM | National News |

ಹೊಸದಿಲ್ಲಿ: ಜಾರ್ಖಂಡ್‌ನ ಮಾಜಿ ರಾಜ್ಯಪಾಲರಾದ ಆದಿವಾಸಿ ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಇಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮುರ್ಮು ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಜು.18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಒಡಿಶಾದ ಆದಿವಾಸಿ ಸಮುದಾಯಕ್ಕೆ ಸೇರಿದ ಮುರ್ಮು ಅವರು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿರುವ ಯಶವಂತ ಸಿನ್ಹಾರನ್ನು ಎದುರಿಸಲಿದ್ದಾರೆ. ದೇಶದ ಅತ್ಯುನ್ನತ ಹುದ್ದೆಗೆ ಆಯ್ಕೆಯಾದರೆ ಮುರ್ಮು ಮೊದಲ ಆದಿವಾಸಿ ರಾಷ್ಟ್ರಪತಿಯಾಗಲಿದ್ದಾರೆ.

ಮುಂಬರುವ ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆದಿವಾಸಿ ಸಮುದಾಯದ ಮತಗಳ ಮೇಲೆ ಕಣ್ಣಿರಿಸಿ ಬಿಜೆಪಿ ಮುರ್ಮು ಅವರನ್ನು ತನ್ನ ಅಭ್ಯರ್ಥಿಯನ್ನಾಗಿಸಿದೆ ಎನ್ನಲಾಗಿದೆ.

2017ರಲ್ಲಿಯೂ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಗಳ ಪೈಪೋಟಿಯಲ್ಲಿದ್ದ ಮುರ್ಮು ಈ ಸಲ ರಾಷ್ಟ್ರಪತಿಯಾಗುವುದು ಬಹುತೇಕ ಖಚಿತವಾಗಿದೆ.

1958, ಜೂ.20ರಂದು ಒಡಿಶಾದ ಮಯೂರಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದಲ್ಲಿ ಜನಿಸಿದ ಮುರ್ಮು ಆದಿವಾಸಿ ಸಂತಾಲ್‌ ಸಮುದಾಯಕ್ಕೆ ಸೇರಿದ್ದಾರೆ. ಬಿರಂಚಿ ನಾರಾಯಣ ತುಡು ಅವರ ತಂದೆಯ ಹೆಸರು. ಶಿಕ್ಷಕಿಯಾಗಿ ವೃತ್ತಿಜೀವನವನ್ನು ಆರಂಭಿಸಿದ್ದ ಅವರು 1997ರಲ್ಲಿ ರಾಜಕೀಯವನ್ನು ಪ್ರವೇಶಿಸಿ ರಾಯರಂಗಪುರ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಬಿಜೆಪಿಯಲ್ಲಿ ಪರಿಶಿಷ್ಟ ವರ್ಗಗಳ ನಾಯಕಿಯಾಗಿ ಸೇವೆ ಸಲ್ಲಿಸಿದ್ದ ಅವರು 2000 ಮತ್ತು 2009ರಲ್ಲಿ ರಾಯರ೦ಗಪುರದಿಂದ ಶಾಸಕಿಯಾಗಿ ಆಯ್ಕೇಯಾಗಿದ್ದರು.

ದ್ರೌಪದಿ ಮುರ್ಮು ಅವರು ಶ್ಯಾಮಚರಣ ಮುರ್ಮುರನ್ನು ವಿವಾಹವಾಗಿದ್ದು, ದಂಪತಿಗೆ ಓರ್ವ ಪುತ್ರಿ ಮತ್ತು ಇಬ್ಬರು ಪುತ್ರರಿದ್ದರು.

ಮರ್ಮು ಅವರ ಬದುಕು ವೈಯಕ್ತಿಕ ದುರಂತಗಳಿಂದ ತುಂಬಿದ್ದು, ಪತಿ ಮತ್ತು ಇಬ್ಬರು ಪುತ್ರರನ್ನು ಕಳೆದುಕೊಂಡಿದ್ದಾರೆ.

ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರಕಾರದಲ್ಲಿ 2000, ಮಾ.6ರಿಂದ 2004, ಮೇ 16ರವರೆಗೆ ಸಚಿವೆಯಾಗಿ ಮುರ್ಮು ಅವರು ವಿವಿಧ ಅವಧಿಗಳಲ್ಲಿ ವಾಣಿಜ್ಯ ಮತ್ತು ಸಾರಿಗೆ ಹಾಗೂ ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಗಳನ್ನು ನಿಭಾಯಿಸಿದ್ದರು.

ಮುರ್ಮು ಜಾರ್ಖಂಡ್‌ನ ಪ್ರಥಮ ಮಹಿಳಾ ರಾಜ್ಯಪಾಲರಾಗಿದ್ದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಒಡಿಶಾದಿಂದ ರಾಜ್ಯಪಾಲರಾಗಿ ನೇಮಕಗೊಂಡ ಪ್ರಥಮ ಆದಿವಾಸಿ ವ್ಯಕ್ತಿ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ.

ಯಶವಂತ ಸಿನ್ಹಾ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಸಚಿವರಾಗಿದ್ದ ಯಶವಂತ ಸಿನ್ಹಾ ಅವರು ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮಂಗಳವಾರ ಹೆಸರಿಸಲ್ಪಟ್ಟಿದ್ದಾರೆ.

ಸಂಸತ್‌ ಸಂಕೀರ್ಣದಲ್ಲಿ ಎನ್‌ ಸಿಪಿ ವರಿಷ್ಠ ಶರದ್‌ ಪವಾರ್ ಅವರು ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿಪಕ್ಷ ನಾಯಕರು ಸಿನ್ಹಾ ಅವರ ಹೆಸರನ್ನು ಒಮ್ಮತದಿಂದ ಒಪ್ಪಿಕೊಂಡರು.

''ಮುಂಬರುವ ರಾಷ್ಟ್ರಪತಿ ಚುನಾವಣೆಗೆ ನಮ್ಮ ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸಲು ಮತ್ತು ಮೋದಿ ಸರಕಾರವು ಇನ್ನಷ್ಟು ಹಾನಿ ಮಾಡುವುದನ್ನು ತಡೆಯಲು ನಾವು ನಿರ್ಧರಿಸಿದ್ದೇವೆ. ಇಂದು ನಡೆದ ಸಭೆಯಲ್ಲಿ ಯಶವಂತ ಸಿನ್ಹಾರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ. ಸಿನ್ಹಾರಿಗೆ ಮತ ನೀಡುವಂತೆ ನಾವು ಎಲ್ಲ ರಾಜಕೀಯ ಪಕ್ಷಗಳನ್ನು ಕೋರುತ್ತಿದ್ದೇವೆ' ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪ್ರತಿಪಕ್ಷಗಳ ಜಂಟಿ ಹೇಳಿಕೆಯನ್ನು ಓದಿ ಹೇಳಿದರು. 'ಮೌಲ್ಯಯುತ ರಾಷ್ಟ್ರಪತಿ ಅವಿರೋಧವಾಗಿ ಆಯ್ಕೆಯಾಗುವಂತಾಗಲು' ಸಿನ್ಹಾ ಅವರ ಉಮೇದುವಾರಿಕೆಯನ್ನು ಬೆಂಬಲಿಸುವಂತೆ ಜಂಟಿ ಹೇಳಿಕೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಕೋರಲಾಗಿದೆ.

'ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿಗಾಗಿ ಮೋದಿ ಸರಕಾರವು ಗಂಭೀರ ಪ್ರಯತ್ನ ಮಾಡದಿರುವ ಬಗ್ಗೆ ನಾವು ವಿಷಾದಿಸುತ್ತೇವೆ ' ಎಂದು ರಮೇಶ್ ಹೇಳಿದರು.

ಪ್ರತಿಪಕ್ಷಗಳ ಹೆಚ್ಚಿನ ಒಗ್ಗಟ್ಟಿಗಾಗಿ ತಾನು ಟಿಎಂಸಿ ಉಪಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಮಂಗಳವಾರ ಬೆಳಗ್ಗೆ ಟ್ವಿಟಿಸುವ ಮೂಲಕ ಸಿನ್ಹಾ ತಾನು ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗುವ ಸುಳಿವನ್ನು ನೀಡಿದ್ದರು.

ಇದಕ್ಕೂ ಮುನ್ನ ಮಾಜಿ ಪ.ಬಂಗಾಳ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ, ಎನ್‌ ಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದರು.

ನೂತನ ರಾಷ್ಟ್ರಪತಿ ಆಯ್ಕೆಗೆ ಪ್ರಕ್ರಿಯೆಯು ಜೂ.1ರಂದು ಆರಂಭಗೊಂಡಿದ್ದು, ಜೂ.29 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಗತ್ಯವಾದರೆ ಮತದಾನ ನಡೆಯಲಿದೆ ಮತ್ತು ಜು.21ರಂದು ಮತಎಣಿಕೆ ನಡೆಯಲಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...