ಮಾದಕ ವಸ್ತುಗಳಿಗೆ ದಾಸರಾಗಿ ಜೀವನ ವ್ಯರ್ಥ ಮಾಡದಿರಿ: ಯುವಜನರಿಗೆ ಕರೆ

Source: so news | Published on 17th November 2019, 11:41 PM | Coastal News | Don't Miss |

 

ಉಡುಪಿ: ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೆಚ್ಚಾಗಿ ಮಾದಕ ವಸ್ತುಗಳ ದಾಸರಾಗಿ, ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳಿಗೆ ಬಲಿಯಾಗಲು ಮನಸ್ಸು ಮುಖ್ಯ ಕಾರಣ. ಯುವ ಜನತೆ ಮನಸ್ಸನ್ನು ನಿಗ್ರಹಿಸಿದರೆ ಮಾದಕ ವ್ಯಸನದಿಂದ ದೂರವಾಗಬಹುದು ಎಂದು ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರ ಉದ್ಯಾವರದ ಪ್ರಾಂಶುಪಾಲ ಜೋನ್ ಜಿ ಎಂ ಡಿಸೋಜಾ ಹೇಳಿದರು.
ಅವರು ಉದ್ಯಾವರ ಟ್ರಿನಿಟಿ ಐಟಿಐ ಕಾಲೇಜಿನಲ್ಲಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ, ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರ ಉದ್ಯಾವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯುವ ಜನಾಂಗದ ಮೇಲೆ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
 ಯುವ ಜನತೆ ದೇಶದ ಅಮೂಲ್ಯ ಸಂಪತ್ತು. ಆದರೆ ಇಂದಿನ ಯುವ ಜನತೆ ಮಾದಕ ವಸ್ತುಗಳತ್ತ ಆಕರ್ಷಿತರಾಗಿ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಹೆಚ್ಚಾಗಿ ಯುವ ಜನತೆ ಹಾಗೂ ವಿದ್ಯಾರ್ಥಿಗಳನ್ನೆ ಗುರಿಯಾಗಿಟ್ಟುಕೊಂಡಿದ್ದಾರೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಜಾಲದಲ್ಲಿ ಸಿಲುಕದೇ, ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವದರ ಜೊತೆಗೆ ತಮ್ಮ ಸುತ್ತಮುತ್ತಲಿನ ಜನರು ಮಾದಕತೆಗೆ ಬಲಿಯಾಗುವುದನ್ನು ತಡೆಯಬೇಕು ಎಂದು ಜೋನ್ ಜಿ ಎಂ ಡಿಸೋಜಾ ಹೇಳಿದರು. 
 ಉದ್ಯಾವರ ಎಸ್ಡಿಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಗಿರಿಧರ್ ಎಂ. ಕಂಟಿ ಮದ್ಯಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಉಪನ್ಯಾಸ ನೀಡಿ,  ಇತ್ತೀಚಿಗೆ ಮಾದಕ ವಸ್ತುಗಳ ಜಾಲದಲ್ಲಿ 14 ರಿಂದ 25 ವರ್ಷದ ಯುವಕ ಯುವತಿಯರೇ ಹೆಚ್ಚಾಗಿ ಬಲಿಯಾಗುತ್ತಿರುವುದು ವಿಷಾಧನೀಯ. ಯೌವನಾವಸ್ಥೆಯಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅನೇಕ ಬದಲಾವಣೆಗಳಾಗುತ್ತದೆ. ಇಂತಹ ಸಂಧರ್ಭದಲ್ಲಿ ಮದ್ಯಪಾನ ಹಾಗೂ ಇನ್ನಿತರ ಮಾದಕ ವ್ಯಸನಗಳ ಸೇವನೆ ಮಾಡುವುದರಿಂದ ಯುವಜನತೆ ಏಕಾಗ್ರತೆ ಕಳೆದುಕೊಂಡು ವಿದ್ಯಾಭ್ಯಾಸದಲ್ಲಿ ಹಿನ್ನಡೆ ಅನುಭವಿಸುತ್ತಾರೆ, ಪ್ರಾರಂಭದಲ್ಲಿ ಶೋಕಿಗಾಗಿ ಅರಂಭಿಸುವ ಈ ಚಟಗಳು ದೇಹದಲ್ಲಿನ ಆರೋಗ್ಯಕ್ಕೆ ಪೂರಕವಾದ ಜೀವಕೋಶಗಳನ್ನು ನಾಶಪಡಿಸುತ್ತವೆ. ನಾವು ಸೇವಿಸುವ ಆಹಾರದಲ್ಲಿ ಯಾವುದನ್ನೂ ನಮ್ಮ ಹೊಟ್ಟೆ ಹೀರಿಕೊಳ್ಳುವುದಿಲ್ಲ. ಆದರೆ, ಸೇವನೆ ಮಾಡಿದ ಮದ್ಯದಲ್ಲಿ ಶೇ.20 ರಷ್ಟು ಹೀರಿಕೊಳ್ಳುತ್ತದೆ. ಇದರಿಂದ ದೇಹದಲ್ಲಿನ ಲಿವರ್, ಕಿಡ್ನಿ ಅಲ್ಲದೇ ಹೃದಯಕ್ಕೂ ಸಹ  ಹಾನಿಯಾಗಲಿದೆ ಎಂದು ತಿಳಿಸಿದರು. 
ಆರಂಭದಲ್ಲಿ ಮದ್ಯಪಾನ ಹಾಗೂ ಮಾದಕ ವ್ಯಸನಗಳು ಹಿತ ಎನಿಸಿದರೂ, ಅಂತಿಮವಾಗಿ ನಮ್ಮನ್ನು ನಾವೇ ಮರೆಯುವಂತೆ ಮಾಡುತ್ತದೆ. ಹೀಗಾಗಿ ಮಾದಕ ವಸ್ತುಗಳಿಂದ ದೂರವಿದ್ದು, ಯುವಜನತೆ ಜೀವನದಲ್ಲಿ ನೆಮ್ಮದಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಹಾಗೂ ಯುವ ಜನತೆ ಸ್ವಯಂ ಪ್ರೇರಿತರಾಗಿ ಮುಂದೆ ಬಂದು, ಮಾದಕ ವಸ್ತುಗಳ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪಣ ತೊಡಬೇಕು ಎಂದು ಹೇಳಿದರು.
ತಾನು ವೈದ್ಯನಾಗಿ 100 ಕ್ಕೂ ಹೆಚ್ಚು ಶವ ಪರೀಕ್ಷೆ ನಡೆಸಿದ್ದು, ದೇಹದ ಅಂಗಾಂಗಗಳ ಸ್ಥಿತಿ  ವೀಕ್ಷಿಸಿ, ವ್ಯಕ್ತಿಯ ಸಾವಿಗೆ ಕಾರಣ ಮತ್ತು ಆತನ ಜೀವನ ಶೈಲಿಯನ್ನು ಕರಾರುವಕ್ಕಾಗಿ ತಿಳಿಯಬಹುದಾಗಿದೆ, ಇತ್ತೀಚೆಗೆ 70 ವರ್ಷದ ವೃದ್ದ ಮತ್ತು 30 ವರ್ಷ ಯುವಕರ ಮೃತದೇಹ ಪರೀಕ್ಷೆ ನಡೆಸಿದ ವೈದ್ಯರ ವರದಿಯಂತೆ ಮೃತ 30 ವರ್ಷದ ಯುವಕನ ಅಂಗಾಂಗ ಮತ್ತು 70 ವರ್ಷದ ವೃದ್ದನ ಅಂಗಾಗಗಳು ಒಂದೇ ಸ್ಥಿತಿಯಲ್ಲಿದ್ದವು, ಕಾರಣ ವೃದ್ದನ ಅಂಗಾಂಗಗಳು ವಯೋ ಸಹಜದಿಂದ ಸೊರಗಿದ್ದರೆ, ಯುವಕನ ಅಂಗಾಂಗಗಳು ಮಾದಕ ವಸ್ತುಗಳ ಸೇವನೆಯ ಪರಿಣಾಮ ಹಾಳಾಗಿದ್ದವು, ಅಮೇರಿಕಾದಲ್ಲಿ ಇತ್ತೀಚೆಗೆ ನಡೆದ ಸಂಶೋದನೆ ಪ್ರಕಾರ ಪ್ರತಿ 6 ನಿಮಿಷಕ್ಕೊಮ್ಮೆ ಮಾದಕ ವಸ್ತುವಿಗೆ ದಾಸರಾದವರು ಸಾವನಪ್ಪುತ್ತಿದ್ದಾರೆ. ಅದರಲ್ಲಿ 18 ರಿಂದ 25 ವಯೋಮಾನದ ಯುವಜನತೆಯೇ ಹೆಚ್ಚು, ಆದ್ದರಿಂದ ಯುವ ಜನತೆ ಯಾವುದೇ ಕಾರಣಕ್ಕೂ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳದಂತೆ ಡಾ. ಗಿರಿಧರ ಕಂಟಿ ಎಚ್ಚರಿಸಿದರು.
  ಉದ್ಯಾವರ ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕಿ ಮರಿಯಾ ಪಿರೇರಾ ಅಧದಯಕ್ಷತಡ ವಹಿಸಿದ್ದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಪ್ರಕಾಶ್ ಸುವರ್ಣ ಕಟಪಾಡಿ ನಿರೂಪಿಸಿದರು. 
ಜಾಥಾಗೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ: ಇದಕ್ಕೂ ಮೊದಲು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಜಾಥಾವನ್ನು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಚಾಲನೆ ನೀಡಿದರು. ಉದ್ಯಾವರ ಮುಖ್ಯ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿವರೆಗೆ ನಡೆದ ಜಾಥಾದಲ್ಲಿ ಜಿ.ಪಂ. ಅಧ್ಯಕ್ಷರು ಸ್ವತ: ಪಾಲ್ಗೊಂಡು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...