ವೈದ್ಯರ ನಡೆ‌ ಹಳ್ಳಿಯತ್ತ ಸಾಗಲಿ : ಮುರುಗೇಶ‌ ನಿರಾಣಿ

Source: SO News | By Laxmi Tanaya | Published on 5th June 2021, 8:38 PM | State News | Don't Miss |

ಕಲಬುರಗಿ : ಕೋವಿಡ್ ಕಾರಣ ಜನರು ಭಯದಿಂದ ಚಿಕಿತ್ಸೆ ಪಡೆಯಲು‌ ಮುಂದೆ ಬರುತ್ತಿಲ್ಲ. ಹೀಗಾಗಿ ವೈದ್ಯ ತಂಡ ಹಳ್ಳಿಗೆ ಹೋಗಿ ತಪಾಸಣೆ‌ ಮಾಡಿ ಜನರಿಗೆ ಚಿಕಿತ್ಸೆ ನೀಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಬೆಂಗಳೂರಿನಿಂದ ಝೂಮ್ ಮೀಟ್ ಮೂಲಕ ಕಲಬುರಗಿ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್-19 ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.

ಮಹಾಮಾರಿ ಸೋಂಕಿನಿಂದ ಗ್ರಾಮೀಣ ಜನರಲ್ಲಿ ಭಯ ಮನೆ ಮಾಡಿದೆ. ಇದನ್ನು ಹೋಗಲಾಡಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕಾದ ಅವಶ್ಯಕತೆ ಈಗ ಹೆಚ್ಚಿದೆ ಎಂದ ಅವರು ಸರ್ಕಾರವು 18-44 ವಯಸ್ಸಿನ ಆದ್ಯತಾ ಗುಂಪೆಂದು ಪರಿಗಣಿಸಿರುವ ಎಲ್ಲರಿಗೂ ಕೋವಿಡ್ ಲಸಿಕೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದ ನಿರ್ವಹಣೆ ಕಾರ್ಯಕ್ಕೆ ಲಭ್ಯವಿರುವ ಡಿ.ಎಂ.ಎಫ್. ನಿಧಿಯಲ್ಲಿ ಶೇ.33ರಷ್ಟು ಅನುದಾನ ಬಳಸಿಕೊಳ್ಳಬೇಕು. ಈ ಅನುದಾನದಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ, ಔಷಧಿ, ಕನ್ಸುಮೇಬಲ್ಸ್ , ವೈದ್ಯಕೀಯ ಉಪಕರಣಗಳ ಖರೀದಿಗೆ ಮುಂದಾಗಬೇಕು ಎಂದು ಸಚಿವರು ತಿಳಿಸಿದರು.

ಲಾಕ್ ಡೌನ್ ಕಾರಣ ಜನರು ನಗರದಿಂದ ಹಳ್ಳಿಗಳಿಗೆ ವಾಪಸ್ಸಾಗಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ದಿಲೀಷ್ ಶಶಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶಿಸಿದರು.

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು. ಜಾನುವಾರುಗಳಲ್ಲಿ ರೋಗ ಬಾರದಂತೆ ಅಗತ್ಯ ಲಸಿಕೆ ನೀಡಬೇಕು. ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಡಾ. ಅವಿನಾಶ ಜಾಧವ್ ಅವರ ಮನವಿಗೆ ಸ್ಪಂದಿಸಿದ ಸಚಿವ ಮುರುಗೇಶ್ ನಿರಾಣಿ ಅವರು ಗ್ರಾಮ ಪಂಚಾಯತ ಮಟ್ಟದಲ್ಲಿ ರೈತರಿಗೆ ಬೀಜ ವಿತರಣೆಗೆ ಜಿಲ್ಲಾಧಿಕಾರಿಗಳು ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದರು.

ವಿಷನ್-2050 ಅಭಿಪ್ರಾಯ ಸಂಗ್ರಹಣೆ: ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಷನ್-2050 ದೃಷ್ಟಿಕೋನದಿಂದ ಏನೆಲ್ಲಾ ಅಭಿವೃದ್ಧಿ ಮಾಡಬೇಕು ಎಂಬುದರ ಕುರಿತು ವಿವಿಧ ಕ್ಷೇತ್ರದ ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಲು ಜುಲೈ ಮೊದಲನೇ ವಾರದಲ್ಲಿ ಜಿಲ್ಲೆಯಲ್ಲಿ ಸಭೆ ನಡೆಸಲಾಗುವುದು. ಕೃಷಿ, ಕೈಗಾರಿಕೆ ನಿರುದ್ಯೋಗ ಹೀಗೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ‌ ಬೆಳಕು ಚೆಲ್ಲಲಾಗುವುದು ಎಂದರು.

ಸಂಸದ ಡಾ.ಉಮೇಶ ಜಾಧವ ಅವರು ಮಾತನಾಡಿ, ಜಿಲ್ಲೆಯಾದ್ಯಂತ ಹೊಸ ತಾಲೂಕು ಒಳಗೊಂಡಂತೆ ಎಲ್ಲಾ ತಾಲೂಕುಗಳಲ್ಲಿ 500 ಎಲ್.ಪಿ.ಎಂ. ಆಕ್ಸಿಜನ್ ಜನರೇಷನ್ ಪ್ಲಾಂಟ್ ಸ್ಥಾಪಿಸಬೇಕು. ಜಿಲ್ಲೆಯಾದ್ಯಂತ ಉತ್ತಮ‌ ಮಳೆಯಾಗುತ್ತಿರುವುದರಿಂದ ರೈತರಿಗೆ ಉತ್ತಮ‌ ಬೀಜ ಮತ್ತು ಗೊಬ್ಬರ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ತಾವು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯಲ್ಲಿ‌ ತುಂಬಾ ಬದಲಾವಣೆ  ಕಾಣಲಾಗುತ್ತಿದೆ. ಕೋವಿಡ್ ಸೋಂಕು ಕಡಿಮೆಯಾಗುತ್ತಾ ಬಂದಿದೆ. ಸಂಪೂರ್ಣ‌ ನಿಯಂತ್ರಣಕ್ಕೆ‌ ಲಸಿಕೆ ಅವಶ್ಯಕತೆವಿದ್ದು, ಜನಸಂಖ್ಯೆ ಅನುಗುಣವಾಗಿ ಇದನ್ನು ಪೂರೈಸುವಲ್ಲಿ   ಸಚಿವರು ಹೆಚ್ಚು ಗಮನಹರಿಸಬೇಕು ಮತ್ತು ಹಳ್ಳಿಗಳಲ್ಲಿ ಲಸಿಕೆ ಆಂದೋಲನ ರೂಪದಲ್ಲಿ ಆಗಬೇಕು ಎಂದರು.

ಶಾಸಕ ಡಾ.ಅಜಯ ಸಿಂಗ್ ಮಾತನಾಡಿ, ರಾಜ್ಯದ ಕಲಬುರಗಿ, ರಾಯಚೂರು, ಚಾಮರಾಜನಗರ ಜಿಲ್ಲೆಯ‌ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದೆ. ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿ ಗುರಿಯಾಗಿರುವ ಕಾರಣ ಅಪೌಷ್ಠಿಕತೆ ನಿವಾರಣೆಗೆ ಹೆಚ್ಚು ಗಮನಹರಿಸಬೇಕು ಎಂದರು. 

ವಿಧಾನ‌ ಪರಿಷತ್ತಿನ ಶಾಸಕ ಶಶೀಲ ಜಿ. ನಮೋಶಿ ಮಾತನಾಡಿ ರಾಜ್ಯ ಸರ್ಕಾರ ಶಿಕ್ಷಕರನ್ನು ಲಸಿಕೆ ವಿತರಣೆಗೆ ಫ್ರಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಿದೆ. ಆದರೆ ಹಲವರು ಇನ್ನೂ ಲಸಿಕೆಯಿಂದ ವಂಚಿತರಾಗಿದ್ದು, ಎಲ್ಲಾ‌ ಶಿಕ್ಷಕರಿಗೂ ಲಸಿಕೆ ದೊರೆಯುವಂತಾಗಬೇಕು ಎಂದರು.

ಶಾಸಕ ಡಾ.ಅವಿನಾಶ ಜಾದವ ಮಾತನಾಡಿ ಜಿಲ್ಲೆಯಲ್ಲಿ ಚಿಂಚೋಳಿ ಹೆಚ್ಚು ಮಳೆಯಾಗುವ ಪ್ರದೇಶ. ಇಲ್ಲಿ ಸೋಯಾಬಿನ್ ಬೆಳೆ ಹೆಚ್ಚಿಗೆ ಬೆಳೆಯಲಾಗುತ್ತಿದೆ. ಆದರೆ ರೈತರು ಸೋಯಾಬಿನ್ ಬೀಜದ ಕೊರತೆ ಎದುರಿಸುತ್ತಿದ್ದು, ಕೃಷಿ ಸಚಿವರನ್ನು ಮಾತಾಡಿ ಈ ಸಮಸ್ಯೆ ಬಗೆಹರಿಸಬೇಕು ಎಂದರು.

ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಮಾತನಾಡಿ  ಕಳೆದ 7 ದಿನಗಳಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.3ಕ್ಕೆ ಇಳಿದಿದೆ. ಇಪ್ಪತ್ತು ದಿನಗಳ ಹಿಂದೆ ಪ್ರತಿದಿನ 15 ರಿಂದ 20 ಜನರು ಕೋವಿಡ್ ನಿಂದ ನಿಧನರಾಗುತ್ತಿದ್ದರು. ಇದೀಗ ಇದರ ಪ್ರಮಾಣ 2 ರಿಂದ 5ಕ್ಕೆ ಇಳಿಕೆಯಾಗಿದೆ. ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಸಿದ್ಧತೆ ಆರಂಭಿಸಿದ್ದು, ತಜ್ಞರ‌ ಸಭೆ ಕರೆದು ಅಗತ್ಯ ಸಲಹೆಗಳನ್ನು ಪಡೆಯಲಾಗಿದೆ. ಜಿಲ್ಲೆಯಲ್ಲಿ 0-6 ವಯಸ್ಸಿನ 3.6 ಲಕ್ಷ, 7-11 ವಯಸ್ಸಿನ 2.8 ಲಕ್ಷ ಹಾಗೂ 12-14 ವಯಸ್ಸಿನ 1.64 ಲಕ್ಷ ಮಕ್ಕಳಿದ್ದು, ಇವರ ಬಗ್ಗೆ ನಾವು ಹೆಚ್ಚಿನ ಗಮನಹರಿಸಬೇಕಿದೆ. ತಾಲೂಕಾ ಆಸ್ಪತ್ರೆಯಲ್ಲಿ ಈಗಿರುವ 50 ಆಕ್ಸಿಜನೇಟೆಡ್ ಹಾಸಿಗೆಯನ್ನು 100ಕ್ಕೆ ಹೆಚ್ಚಿಸಲಾಗುತ್ತಿದೆ. ಇದರಲ್ಲಿ 30 ಮಕ್ಕಳಿಗೆ ಮೀಸಲಿಟ್ಟು, ಅದರಲ್ಲಿ 5 ಐ.ಸಿ.ಯೂ ಹಾಸಿಗಳನ್ನಾಗಿ ಮಾಡಲಾಗುವುದು. ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವರ ಗಮನಕ್ಕೆ‌ ತಂದರು.

ಜಿಲ್ಲಾ‌ ಪಂಚಾಯತ್‌ ಸಿ.ಇ.ಓ ಡಾ.ದಿಲೀಷ್  ಶಶಿ ಅವರು ನರೇಗಾ‌ ಅನುಷ್ಠಾನ ಮತ್ತು ಪ್ರಗತಿ ಬಗ್ಗೆ ವಿವರಿಸಿದರು.

ಶಾಸಕರಾದ ಪ್ರಿಯಾಂಕ ‌ಖರ್ಗೆ, ಬಸವರಾಜ‌ ಮತ್ತಿಮೂಡ, ಎಂ.ಎಲ್.ಸಿ. ಬಿ.ಜಿ.ಪಾಟೀಲ ಅವರು ಮಾತನಾಡಿದರು.

ಝೂಮ ಮೀಟ್ ನಲ್ಲಿ ಕಲ್ಯಾಣ‌ ಕರ್ನಾಟಕ ಪ್ರದೇಶಾಭಿವೃದ್ಧಿ‌ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ,
ಶಾಸಕಿ ಕನೀಜ್ ಫಾತಿಮಾ, ಕಲಬುರಗಿ‌ ನಗರ ಪೊಲೀಸ್ ಆಯುಕ್ತ ಡಾ.ವೈ.ಸಿ.ರವಿಕುಮಾರ್, ಎಸ್.ಪಿ. ಡಾ.ಸಿಮಿ ಮರಿಯಮ್ ಜಾರ್ಜ್,  ಜೆಸ್ಕಾಂ ಎಂ.ಡಿ.ರಾಹುಲ ಪಾಂಡ್ವೆ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಶರಣಬಸಪ್ಪ‌ ಗಣಜಲಖೇಡ್, ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ್, ಇ.ಎಸ್.ಐ.ಸಿ. ಡೀನ್ ಡಾ.ಇವಾನೋ‌ ಲೊಬೋ, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ರಮೇಶ ಕೋಲಾರ‌ ಸೇರಿದಂತೆ  ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...