ಶಿಕ್ಷಕರಿಂದ ಸೈಕಲ್ ಜಾಥಾ ಮತದಾನಕ್ಕೆ ನಿರಾಸೆ,ಉದಾಸೀನತೆ ಬೇಡ; ಅದು ಪ್ರತಿಯೊಬ್ಬರ ಕರ್ತವ್ಯ:ಜಿಲ್ಲಾಧಿಕಾರಿ ದೀಪಾ ಚೋಳನ್

Source: so news | By MV Bhatkal | Published on 17th March 2019, 11:29 PM | State News | Don't Miss |

 

ಧಾರವಾಡ:ಹಿಂದಿನ ಸಾರ್ವತ್ರಿಕ ಚುನಾವಣೆಗಳ ಮತದಾನ ಪ್ರಮಾಣ ಅವಲೋಕಿಸಿದಾಗ ಶಿಕ್ಷಿತರು, ನೌಕರರು ವಾಸಿಸುವ ಪ್ರದೇಶಗಳಲ್ಲಿ ಗ್ರಾಮೀಣ ಭಾಗಕ್ಕಿಂತ ಮತದಾನ ಕಡಿಮೆಯಾಗಿದೆ. ಮತದಾನ ಮಾಡಲು ಯಾರಲ್ಲೂ ನಿರಾಸೆ, ಉದಾಸೀನತೆ ಬೇಡ. ಅದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತಪ್ಪದೇ ಮತ ಚಲಾಯಿಸಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಹೇಳಿದರು. 
ಅವರು ಇಂದು ಬೆಳಿಗ್ಗೆ ಕರ್ನಾಟಕ ಕಾಲೇಜು ಆವರಣದಲ್ಲಿ ಜಿಲ್ಲಾ ಸ್ವಿÃಪ್ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ “ನಾನು ಮತ ಹಾಕುತ್ತೆನೆ ನೀವು ಮತಹಾಕಿ ಮತ್ತು ನಿಮ್ಮವರನ್ನು ಮತದಾನಕ್ಕೆ ಕರೆತನ್ನಿ” ಎಂಬ ಘೋಷಣೆಯಡಿ ಆಯೋಜಿಸಿದ್ದ, ಮತದಾರರ ಜಾಗೃತಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. ೬೦ ರಷ್ಟು ಮತ್ತು ವಿಧಾನ ಸಭೆ ಚುನಾವಣೆಯಲ್ಲಿ ಶೇ. ೭೦ ರಷ್ಟು ಮತದಾನವಾಗಿದೆ ಅದರಲ್ಲೂ ಗ್ರಾಮೀಣ ಪ್ರದೇಶಕ್ಕಿಂತ ನಗರ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ವಿದ್ಯಾವಂತರು, ಸೇವೆಯಲ್ಲಿರುವವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಯಾವುದೇ ರೀತಿಯ ನಿರಾಶೆ ಮನೋಭಾವ, ಉದಾಸೀನತೆ ತೋರದೆ ಪ್ರತಿಯೊಬ್ಬರು ಬರುವ ಎಪ್ರಿಲ್ ೨೩ ರಂದು ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕೆಂದು ಅವರು ಹೇಳಿದರು.
ಪ್ರಜೆಗಳೆ ನೇರವಾಗಿ ತಮ್ಮ ನಾಯಕರನ್ನು ಆಯ್ಕೆಮಾಡಿಕೊಳ್ಳುವ ಸುವರ್ಣ ಅವಕಾಶವನ್ನು ಭಾರತದ ಸಂವಿಧಾನ ಮಾತ್ರ ನೀಡಿದೆ. ಮತದಾರರು ವಾಸಿಸುವ ಗರಿಷ್ಠ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಭಾರತ ಚುನಾವಣಾ ಆಯೋಗ ಸ್ಥಾಪಿಸಿರುವ ಉಚಿತ ಸಹಾಯವಾಣಿ ೧೯೫೦ಕ್ಕೆ ಕರೆಮಾಡಿ ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು, ಮಾಹಿತಿ ನೀಡಲು ನಾಗರಿಕರ ಅನುಕೂಲಕ್ಕಾಗಿ ಭಾರತ ಚುನಾವಣಾ ಆಯೋಗ ಸಿವಿಜಿಲ್ ಎಂಬ ಮೋಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಆ ಮೂಲಕ ದೂರ ಸಲ್ಲಿಸಿದ ನೂರು ನಿಮಿಷಗಳಲ್ಲಿ ಪರಿಹಾರ ಸಿಗಲಿದೆ. ಮಾಹಿತಿ ನೀಡುವ ನಾಗರಿಕರ ಮಾಹಿತಿ ಗೌಪ್ಯವಾಗಿರುತ್ತದೆ. ಇದು ಚುನಾವಣೆಯನ್ನು ಪಾರದರ್ಶಕವಾಗಿ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಅನುಕೂಲವಾಗಿದೆ. ಆದ್ದರಿಂದ ಎಲ್ಲ ನಾಗರಿಕರು ಸಿವಿಜಿಲ್ ಆ್ಯಪ್ ಡೌನಲೊಡ್ ಮಾಡಿಕೊಂಡು ಬಳಸುವ ಮೂಲಕ ನಿಷ್ಪಪಕ್ಷಪಾತ ಚುನಾವಣೆಗೆ ಸಹಕಾರ ನೀಡಬೇಕು, ಸಿವಿಜಿಲ್ ಆ್ಯಪ್ ಜನಪ್ರಿಯಗೊಳಿಸಿ ಹೆಚ್ಚು ಹೆಚ್ಚು ಜನ ಬಳಸುವಂತೆ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಮತದಾನದ ದಿನದಂದು ಮತಚಲಾಯಿಸಿ ಸೆಲ್ಫಿ ಫೋಟೋ ಕಳಿಸುವ ಹೊಸ ಯುವ ಮತದಾರರ ಉತ್ತಮ ಛಾಯಾಚಿತ್ರಕ್ಕೆ ಜಿಲ್ಲಾ ಸ್ವಿಪ್ ಸಮಿತಿಯಿಂದ ಬಹುಮಾನ ನೀಡಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ೧೮ ರಿಂದ ೧೯ ವರ್ಷದೊಳಗಿನ ೩೫ ಸಾವಿರ ನೂತನ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿದ್ದಾರೆ. ಉಳಿದವರು ಎನ್‌ವಿಪಿ (ನ್ಯಾಶನಲ್ ವೋರ‍್ಸ್ ಪೋರ್ಟಲ್) ಮೂಲಕ ತಮ್ಮ ಹೆಸರನ್ನು ಮತದಾರ ಪಟ್ಟಿಗೆ ಸೇರಿಸಬೇಕೆಂದು ಅವರು ಹೇಳಿದರು.
ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷರಾಗಿರುವ, ಜಿಲ್ಲಾ ಪಂಚಾಯತ ಸಿ.ಇ.ಒ ಡಾ.ಬಿ.ಸಿ.ಸತೀಶ ಮಾತನಾಡಿ, ಬರುವ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅಧಿಕ ಮತದಾನ ಮಾಡಿಸುವ ಗುರಿ ಹೊಂದಲಾಗಿದೆ. ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಮತದಾನ ಜಾಗೃತಿಗಾಗಿ ಇ.ವಿ.ಎಂ, ವಿವಿಪ್ಯಾಟ್ ತಿಳುವಳಿಕೆ ಮತದಾನ ಪ್ರಾತ್ಯಕ್ಷಿಕೆ, ಮಾಧ್ಯಮ ಕಾರ್ಯಾಗಾರ, ಮತದಾರರಿಗಾಗಿ ವಿವಿಧ ರಚನಾತ್ಮಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಸೈಕಲ್ ಜಾಥಾ ಮೂಲಕ ನಗರ ಪ್ರದೇಶಗಳಲ್ಲಿ ಮತದಾನ ಕುರಿತು ಹೆಚ್ಚಿನ ಅರಿವು ಮೂಡಿಸಲು ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಸೈಕಲ್ ಜಾಥಾ ಮಾಡಿ ಮತದಾ ರರ ಜಾಗೃತಿಗೆ ಶ್ರಮಿಸಿದ ಅಂಜುಮನ್ ಕಾಲೇಜಿನ ವಿದ್ಯಾರ್ಥಿ ಸಚಿನ್ ಹಾಗೂ ತಂಡದವರಿಗೆ ಪ್ರಮಾಣಪತ್ರ ನೀಡಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಸಿ.ಇ.ಓ ಅಭಿನಂದಿಸಿದರು.
ಶಿಕ್ಷಕ ಹಾಗೂ ಜಾನಪದ ಕಲಾವಿದರಾದ ಎಫ್.ಬಿ.ಕಣವಿ, ಸಿ.ಎಂ.ಕೆಂಗಾರ, ಪ್ರಮೀಳಾ ಜಕ್ಕಣ್ಣವರ ಹಾಗೂ ತಂಡದ ಸದಸ್ಯರು ಮತದಾನ ಜಾಗೃತಿ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ಈ ಸಂದರ್ಭದದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಬಿ.ಮನ್ನಿಕೇರಿ, ಕ್ಷೆತ್ರ ಶಿಕ್ಷಣಾಧಿಕಾರಿಗಳಾದ ಶ್ರಿಶೈಲ ಕರಿಕಟ್ಟಿ, ಎಸ್.ಎಂ ಹುಡೆದಮನಿ, ಎ.ಎ.ಖಾಜಿ, ಕೆ.ಎಂ.ಶೇಖ್, ಸ್ವಿಪ್ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ವಿಷಯ ಪರಿವೀಕ್ಷಕ ಬಿ.ಬಿ.ದುಬ್ಬನಮರಡಿ, ಎಸ್.ಬಿ.ಕೇಸರಿ ಸೇರಿದಂತೆ ವಿವಿಧ ಅಧಿಕಾರಿಗಳು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು.
ಸೈಕಲ್ ಜಾಥಾದಲ್ಲಿ ೨೦೦ಕ್ಕೂ ಹೆಚ್ಚು ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮತದಾರ ಜಾಗೃತಿ ಸೈಕಲ್ ಜಾಥಾವು ಕರ್ನಾಟಕ ಕಾಲೇಜು ಆವರಣದಿಂದ ಪ್ರಾರಂಭಗೊಂಡು ಜ್ಯುಬಿಲಿ ವೃತ್ತ, ವಿವೇಕಾನಂದ ವೃತ್ತ, ಹಳೆ ಎಸ್.ಪಿ. ಕಚೇರಿ, ಉಪನಗರ ಪೋಲಿಸ್ ಠಾಣೆ, ಜರ್ಮನ್ ಆಸ್ಪತ್ರೆ ವೃತ್ತ, ಸಾಧನಕೇರಿ, ಸಂಪಿಗೆ ನಗರ, ಶ್ರಿನಗರ ವೃತ್ತ, ಸಪ್ತಾಪುರ ಬಾವಿ ಮಾರ್ಗವಾಗಿ ಮರಳಿ ಕರ್ನಾಟಕ ಕಾಲೇಜು ಆವರಣಕ್ಕೆ ಬಂದು ತಲುಪಿತು.
ಸೈಕಲ್ ಜಾಥಾ ಸಂದರ್ಭದಲ್ಲಿ ಮತದಾನ ಜಾಗೃತಿಗಾಗಿ ಘೋಷಣೆ, ಕರಪತ್ರ ವಿತರಣೆ ಮೂಲಕ ಸೈಕಲ್ ಸವಾರರು ಮತದಾರರಿಗೆ ಮಾಹಿತಿ ನೀಡಿದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...