ದೀಪಾವಳಿ ಹಬ್ಬ ಆಚರಣೆ: ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ

Source: SO News | By Laxmi Tanaya | Published on 7th October 2020, 9:56 PM | State News | Don't Miss |

ಹಾಸನ :  ದೀಪಾವಳಿ ಹಬ್ಬ ಆಚರಣೆ ಸಂಬಂಧ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಒಳಾಂಗಣ ಕ್ರೀಡಾಂಗಣದ ಎದುರಿನ ಮೈದಾನದಲ್ಲಿ ನ.12 ರಿಂದ 16ರವರೆಗೆ ಪಟಾಕಿ ಮಾರಾಟ ಮಾಡಲು ತಾತ್ಕಾಲಿಕ ಪರವಾನಗಿಯನ್ನು ನೀಡಲು ಹಾಗೂ ಪಟಾಕಿ ಮಾರಾಟವನ್ನು ಬೆಳಿಗ್ಗೆ 9.30 ರಿಂದ ಸಂಜೆ 7.30 ರವರೆಗೆ ಮಾತ್ರ ಮಾರಾಟ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಸೂಚನೆ ನೀಡಿದ್ದಾರೆ.

ಪಟಾಕಿ ಮಾರಾಟ ಮಾಡುವ ಪ್ರದೇಶದ ಸುತ್ತ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲು ಪೊಲೀಸ್ ಇನ್ಸಪೆಕ್ಟರ್ ಡಿ.ಎಸ್.ಬಿ ಅವರಿಗೆ ಅಗತ್ಯ ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಪ್ರತಿ ವರ್ಷದ ರೀತಿ ಹಾಸನ ನಗರ ಹೊರತುಪಡಿಸಿ, ಹಾಸನ ಉಪವಿಭಾಗಾಧಿಕಾರಿಗಳು ಹಾಸನ ತಾಲ್ಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಹಾಗೂ ಸಕಲೇಶಪುರ ಉಪವಿಭಾಗಾಧಿಕಾರಿಗಳು ಸಕಲೇಶಪುರ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಕ್ಕೆ ಉಳಿದ ತಾಲ್ಲೂಕುಗಳಲ್ಲಿ ತಹಶೀಲ್ದಾರರುಗಳು ಸ್ಥಳೀಯವಾಗಿ ಪಟಾಕಿ ಮಾರಾಟದ ತಾತ್ಕಾಲಿಕ ಪರವಾನಗಿಯನ್ನು ನೀಡಿ, ಸುರಕ್ಷತಾ ಕ್ರಮದ ಕುರಿತು ಪರಿಶೀಲಿಸಬೇಕೆಂದು ಅವರು ನಿರ್ದೇಶನ ನೀಡಿದರು.

ಪೊಲೀಸ್ ಅಧೀಕ್ಷಕರು, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಆಯುಕ್ತರು, ನಗರಸಭೆ, ಹಾಗೂ ಸಹಾಯಕ ನಿರ್ದೇಶಕರು, ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಅಧಿಕಾರಿಗಳು ಪಟಾಕಿ ಮಾರಾಟ ಮಾಡಲು ತಾತ್ಕಾಲಿಕ ಪರವಾನಗಿ ನೀಡುವ ಸಂಬಂಧ ಶೀಘ್ರವಾಗಿ ಈ ಕಚೇರಿಗೆ ನಿರಾಕ್ಷೇಪಣಾ ಪತ್ರವನ್ನು ನೀಡಲು ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಹೇಳಿದರು.

ನ.15 ಹಾಗೂ 16 ರಂದು ಪಟಾಕಿ ಖರೀದಿಸಲು ಜನರು ಹೆಚ್ಚಾಗಿ ಬರುವುದರಿಂದ ಪಟಾಕಿ ಮಾರಾಟದ ಸಮಯವನ್ನು ಹೆಚ್ಚಾಗಿ ನೀಡಲು ಪಟಾಕಿ ವರ್ತಕರು ಕೋರಿದ ಮೇರೆಗೆ ನ.15 ಹಾಗೂ 16 ರಂದು ಎರಡು ದಿನ ಮಾತ್ರ ಪಟಾಕಿ ಮಾರಾಟದ ಅವಧಿಯನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಹೆಚ್ಚಿಸುವಂತೆ ಸೂಚನೆ ನೀಡಿದರು.

ಹಾಸನ ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪಟಾಕಿ ಮಾರಾಟದ ಮಳಿಗೆಗಳ ಬಳಿ ಸಾಮಾಜಿಕ ಅಂತರ ಕಾಪಾಡುವುದು. ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕೆಂದು ತಿಳಿಸಲಾಯಿತು.
ಪಟಾಕಿ ಅಂಗಡಿಗಳನ್ನು ನಿಗದಿತ ಸ್ಥಳ ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ತೆರೆಯುವಂತಿಲ್ಲ. ಒಂದು ವೇಳೆ ನಿಗದಿಪಡಿಸಿದ ಸ್ಥಳವನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಹಾಜರಿದ್ದ ಹಾಸನಾಂಬ ಪಟಾಕಿ ವರ್ತಕರ ಸಂಘದ ಎಲ್ಲಾ ಸದಸ್ಯರಿಗೆ ಸೂಚಿಸಲಾಯಿತು.

ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಿರುವ ತಾತ್ಕಾಲಿಕ ಮಳಿಗೆಗಳಲ್ಲಿ ಅನುಭವ ಹೊಂದಿರುವ ಅಧಿಕೃತ ಪರವಾಗಿದಾರರು ಮಾತ್ರ ದಾಸ್ತಾನು, ಮಾರಾಟ ಮಾಡಬಹುದು ಎಂದು ಅಪರ ಜಿಲ್ಲಾಧಿಕಾರಿಯವರು ಸೂಚಿಸಿದರು.
ತಾತ್ಕಾಲಿಕ ಪಟಾಕಿ ಮಳಿಗೆಗಳು ಎರಡು ಕಡೆಗಳಲ್ಲಿ ಸರಾಗವಾಗಿ ಗಾಳಿಯಾಡುವಂತಿರಬೇಕು ಮತ್ತು ಪ್ರತಿ ಅಂಗಡಿಗಳ ಮಧ್ಯೆ ಕನಿಷ್ಠ 8 ಅಡಿ ಅಂತರ ಖಾಲಿ ಬಿಡತಕ್ಕದ್ದು. ಹಾಗೂ ವಿದ್ಯುತ್ ಸಂಪರ್ಕವನ್ನು ಸುಸಜ್ಜಿತವಾಗಿ ಮಾಡಿರಬೇಕು ಎಂದು ಅವರು ನಿರ್ದೇಶನ ನೀಡಿದರು.

ಪ್ರತಿ ಮಳಿಗೆಗಳ ವ್ಯಾಪ್ತಿ 10*10 ಅಡಿಗೆ ಸೀಮಿತ ಇರತಕ್ಕದ್ದು ಮತ್ತು ವ್ಯವಸ್ಥಿತ ಜೋಡಣೆಯಿಂದ ಕೂಡಿದ್ದು ಹೆಚ್ಚಿನ ದಾಸ್ತಾನು ಹೊಂದಿರಬಾರದು. ಪ್ರತಿ ಮಳಿಗೆಯಲ್ಲಿ 9 ಲೀಟರ್ ಸಾಮರ್ಥ್ಯದ ವಾಟರ್ ಪ್ರೇಜರ್ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್‍ಗಳಲ್ಲಿ ನೀರನ್ನು ಮತ್ತು ಮರಳುಗಳನ್ನು ಇಟ್ಟಿರಬೇಕು. ಪ್ರತಿ ಮಳಿಗೆ ಪಕ್ಕದಲ್ಲಿ 2 ಡ್ರಂಗಳಲ್ಲಿ ಕನಿಷ್ಠ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು.
ಪಟಾಕಿ ಮಾರಾಟದ ಮಳಿಗೆಗಳಲ್ಲಿ ಕಳ್ಳತನ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮಳಿಗೆಗಳ ರಕ್ಷಣೆಗೆ ಆರಕ್ಷಕ ಇಲಾಖಾ ವತಿಯಿಂದ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಕವಿತ ರಾಜರಾಂ ಹೇಳಿದರು.

ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆಗಳಲ್ಲಿ ರಾತ್ರಿ ಯಾರು ಮಲಗಬಾರದು ಹಾಗೂ ಆಪ್ರಾಪ್ತ ವಯಸ್ಸಿನ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು.
ತಾತ್ಕಾಲಿಕ ಅಂಗಡಿ ನಿರ್ಮಿಸಿದ ದಿನಾಂಕದಿಂದ  ಅಂಗಡಿ ಮುಚ್ಚುವವರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಅಗ್ನಿಶಾಮಕ ಇಲಾಖೆಯ ಸುಸಜ್ಜಿತ ಫೈರ್ ಇಂಜಿನ್ ಸ್ಥಳದಲ್ಲಿ ನಿಲುಗಡೆ ಆಗಿರುವಂತೆ ಕ್ರಮ ವಹಿಸಲು ಅಗ್ನಶಾಮಕ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಯವರು ಸೂಚಿಸಿದರು.
ಈ ಬಾರಿ ಪಟಾಕಿ ಮಾರಾಟಕ್ಕೆ ಪರವಾನಗಿ ಪಡೆದ ಪರವಾನಗಿದಾರರು ಯಾವುದೇ ಶಬ್ದ ಬರುವ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ, ಒಂದು ವೇಳೆ ಶಬ್ದ ಬರುವ ಪಟಾಕಿಗಳನ್ನು ಮಾರಾಟ ಮಾಡುವುದು ಹಾಗೂ ದಾಸ್ತಾನು ಇಟ್ಟಿರುವುದು ಕಂಡುಬಂದಲ್ಲಿ ಹಾಗೂ ಯಾವುದೇ ನಿಯಮಬಾಹಿರ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ  ಯಾವುದೇ ಸೂಚನೆ ನೀಡದೆ ಸದರಿ ಪಟಾಕಿ ಮಾರಾಟಗಾರರ ಪಟಾಕಿ ಅಂಗಡಿಯ ಪರವಾನಿಗಿಯನ್ನು ರದ್ದುಪಡಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಅಂತಹ ವ್ಯಕ್ತಿಗಳಿಗೆ ಪಟಾಕಿ ಮಾರಾಟದ ಪರವಾನಗಿಯನ್ನು ನೀಡಲಾಗುವುದಿಲ್ಲವೆಂದು ಸಭೆಯಲ್ಲಿ ವರ್ತಕರಿಗೆ ತಿಳಿಸಲಾಯಿತು.

ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಆಗ್ಗಿಂದಾಗ್ಗೆ ಪಟಾಕಿ ಮಾರಾಟದ ಮಳಿಗೆಗಳ ತಪಾಸಣೆ ನಡೆಸಿ ಶಬ್ದ ಬರುವ ಪಟಾಕಿಗಳನ್ನು ಮಾರಾಟ ಮಾಡುವುದು ಹಾಗೂ ದಾಸ್ತಾನು ಇಟ್ಟಿರುವುದು ಕಂಡುಬಂದಲ್ಲಿ ವರದಿ ಸಲ್ಲಿಸಲು ಸಭೆಯಲ್ಲಿ ಹಾಜರಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ಕವಿತ ರಾಜರಾಂ ಅವರು ನಿರ್ದೇಶಿಸಿದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...