ಮುಂಗಾರು ಮಳೆಯ ಮುನ್ನೆಚ್ಚರಿಕೆ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚನೆ.

Source: SO News | By Laxmi Tanaya | Published on 24th May 2023, 8:57 PM | Coastal News |

ಕಾರವಾರ : ಮುಂಗಾರು ಮಳೆ ಆರಂಭವಾಗಲಿರುವುದರಿಂದ ಜಿಲ್ಲಾ ಮತ್ತು ತಾಲೂಕ ಮಟ್ಟದ  ಅಧಿಕಾರಿಗಳು ಯಾವುದೇ ರೀತಿಯ ಲೋಪದೋಷಗಳು  ಆಗದಂತೆ ಕಟ್ಟುನಿಟ್ಟಾಗಿ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಂಗ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2023 ನೇ ಸಾಲಿನ ಮುಂಗಾರು ಪೂರ್ವಸಿದ್ಧತೆ ಕುರಿತು ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಹಾಗೆಯೇ ಎಲ್ಲ ಅಧಿಕಾರಿಗಳು  ಕೈಕೊಳ್ಳಬೇಕಾದ  ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಪ್ರತಿಯೊಂದು ತಾಲೂಕುಗಳ  ಪುರಸಭೆ, ನಗರಸಭೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ  ಚರಂಡಿಗಳನ್ನು  ಸ್ವಚ್ಛಗೊಳಿಸಬೇಕು ಇದರಿಂದ  ಮಳೆಗಾಲದ ಸಂದರ್ಭದಲ್ಲಿ ಮಳೆಯ ನೀರು ಸರಾಗವಾಗಿ  ಹರಿಯಲು  ಸಹಾಯಕಾರಿಯಾಗುತ್ತದೆ. ಈವರೆಗೂ  ಸ್ವಚ್ಛವಾಗದೆ ಇರುವಂಥ ಚರಂಡಿಗಳನ್ನು ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು   ಕ್ರಮ ವಹಿಸಿ  ಎರಡು ದಿನಗಳೊಳಗಾಗಿ  ಎಲ್ಲಾ ಚರಂಡಿಗಳನ್ನು  ಸ್ವಚ್ಛವಿಡಲು  ಕಟ್ಟುನಿಟ್ಟಾಗಿ ಕಾರ್ಯನಿರ್ವಹಸಬೇಕು ಒಂದು ವೇಳೆ ನಿಗದಿಪಡಿಸಿದ  ಅವಧಿಯೊಳಗೆ ಚರಂಡಿ ಸ್ವಚ್ಛವಾಗದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ವಹಿಸಲಾಗುವುದು ಎಂದರು.  

ಮಳೆಗಾಲದ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿರುವ ಅಪಾಯಕಾರಿ ಮರಗಲಳು ಜನ ಸಾಮಾನ್ಯರ ಮೇಲೆ, ವಾಹನಗಳ ಮೇಲೆ ಬೀಳುವಂತ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಅಂತಹ ಗುರುತಿಸಿ ಅವುಗಳ  ತೆರವಿಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ತೆರವುಗೊಳಿಸಬೇಕು ಇದರಿಂದ  ಆಗುವಂತ ಅನಾಹುತಗಳನ್ನು  ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಹಾಗೆಯೇ ಮಳೆಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು  ಸರ್ವೇ ಸಾಮಾನ್ಯ ಅತಿಯಾದ ಮಳೆಯಿಂದ  ನೀರು ಕಲುಶಿತವಾಗುತ್ತವೆ  ಅಂತಹ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು  ಈಗಲೇ ಅಗತ್ಯ ಕ್ರಮ ವಹಿಸಿ  ಕುಡಿಯುವ ನೀರು ಪೂರೈಕೆಗೆ ಯಾವುದೇ ಸಮಸ್ಯೆ ಆಗದಂತೆ  ನೋಡಿಕೊಳ್ಳಬೇಕು ಎಂದರು.

ಮಳೆಗಾಲದಲ್ಲಿ  ರಸ್ತೆಗಳ ಮೇಲೆ ನೀರು ನಿಲ್ಲದಂತೆ ಮತ್ತು ರಸ್ತೆ ಪಕ್ಕದಲ್ಲಿರುವ ನಾಲೆ ಹಾಗೂ ಚರಂಡಿಗಳನ್ನು  ಸರಿ ಪಡಿಸಬೇಕು  ಹಾಗೂ ರಸ್ತೆಗಳ ಮೇಲೆ ಮಳೆಯ  ನೀರು ನಿಲ್ಲದಂತೆ ಸೂಕ್ತ ಕ್ರಮ ವಹಿಸಬೇಕು ಎಂದರು.

ಮಳೆಗಾಲದಲ್ಲಿ  ಅತಿಯಾದ ಮಳೆಯಿಂದ  ಜಿಲ್ಲೆಯ ಎಲ್ಲ ಡ್ಯಾಮ್‌ಗಳು  ಭರ್ತಿಯಾಗುತ್ತವೆ ಸಂಬಂಧಪಟ್ಟ ಅಧಿಕಾರಿಗಳು  ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಡ್ಯಾಮ್ ನೀರಿನ ಪ್ರಮಾಣವನ್ನು ಅರಿತು ಹಾಗೂ ಪ್ರವಾಹ ಪರಿಸ್ಥಿತಿಗಳನ್ನು  ನೋಡಿಕೊಂಡು ಮುಂದಿನ ಕ್ರಮ ವಹಿಸಬೇಕು  ಎಂದರು.

ಅತಿಯಾದ ಮಳೆಯಿಂದ ಪ್ರವಾಹದಂತ ಪರಿಸ್ಥಿತಿ ಉಂಟಾದಾಗ ಪ್ರವಾಹ ಪರಿಸ್ಥಿಯನ್ನು ಎದುರಿಸಲು  ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಗತ್ಯ ಬೋಟುಗಳ  ಸಂಗ್ರಹಣೆ, ಜೀವ ರಕ್ಷಕ ಕವಚಗಳ  ನಿರ್ವಹಣೆ, ಎಮರ್ಜೆನ್ಸಿ ಕಿಟ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಮಳೆಗಾಲದಲ್ಲಿ ಮೀನುಗಾರಿಕೆ ತುಂಬಾ ಅಪಾಯಕಾರಿಯಾಗಿರುವುದರಿಂದ  ಕದ್ದು ಮುಚ್ಚಿ ಜನ ಮೀನುಗಾರಿಕೆಗೆ ಇಳಿಯುತ್ತಾರೆ. ಇದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಕೊಳ್ಳಬೇಕು ಸಂಬಂಧ ಪಟ್ಟ ಇಲಾಖೆಯವರು ಮೀನುಗಾರರ ಸಂಘದೊಂದಿಗೆ ಸಭೆ ಕರೆದು ಮಳೆಯಿಂದ ಆಗುವಂತ  ತೊಂದರೆಗಳನ್ನು  ವಿವರಿಸಬೇಕು. 10 ಹೆಚ್ ಪಿ ಕ್ಕಿಂತ ಕಡಿಮೆ ಎಂಜಿನ್ ಹೊಂದಿರುವ ಟ್ರೇಡಿಷನಲ್ ಬೋಟುಗಳ ಮೀನುಗಾರಿಕೆಗೆ  ಶರತುಗಳನ್ನು ವಿಧಿಸಬೇಕು. ಮಳೆಗಾಲದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮ ವಹಿಸಬೇಕು ಎಂದರು.

ಗ್ರಾಮ ಪಂಚಾಯತಗಳಲ್ಲಿ  ವಿಪತ್ತು ನಿರ್ವಹಣಾ ತಂಡಗಳನ್ನು  ರಚನೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಎಲ್ಲಲ್ಲಿ ದೋಣಿಗಳ ಅವಶ್ಯಕತೆ ಇದೆಯೋ ಅಲ್ಲಿ ಸ್ಥಳೀಯ ದೋಣಿಗಳನ್ನು  ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸುವುದು. ಪ್ರತಿ ಗ್ರಾಮ ಪಂಚಾಯತಗಳಲ್ಲಿ ಅಗತ್ಯ ಕಾಳಜಿ ಕೇಂದ್ರಗಳನ್ನು  ತೆರೆಯಬೇಕು  ಮತ್ತು ಅಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು  ಕಲ್ಪಿಸಬೇಕು ಎಂದರು. ಪ್ರತಿ ತಾಲೂಕಗಳಲ್ಲಿ  ಕಂಟ್ರೋಲ್ ರೂಮ್ ಸ್ಥಾಪಿಸಿ 24×7 ಕೆಲಸ ನಿರ್ವಹಿಸಬೇಕು. ಹಾಗೆಯೇ ಅನುಮತಿಯಿಲ್ಲದೇ ಅಧಿಕಾರಿಗಳು  ಕೇಂದ್ರ ಸ್ಥಳ ಬಿಟ್ಟು ಹೋಗುವಂತಿಲ್ಲ ಎಲ್ಲರೂ  ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದರು.

ಸಭೆಯಲ್ಲಿ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಈಶ್ವರ ಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ,   ಡಿ ಎಫ್ ಒ ಪ್ರಶಾಂತ್, ಹೆಚ್ಚುವರಿ ಎಸ್ ಪಿ ಜಯರಾಜ್, ಶಿರಸಿ ಉಪವಿಭಾಗಾಧಿಕಾರಿ ದೇವರಾಜ್, ಭಟ್ಕಳ್ ಉಪವಿಭಾಗಧಿಕಾರಿ  ಮಮತಾ, ಕುಮಟಾ ಉಪವಿಭಾಗಧಿಕಾರಿ ರಾಘವೇಂದ್ರ ಜಗಲಾಸರ್ ಹಾಗೂ  ಜಿಲ್ಲಾ  ಮತ್ತು ತಾಲೂಕು ಮಟ್ಟದ  ಅಧಿಕಾರಿಗಳು, ನೇವಿ ಅಧಿಕಾರಿಗಳು, ಕೋಸ್ಟ್ ಗಾರ್ಡ್ ಅಧಿಕಾರಿಗಳು ಮತ್ತು ಕೈಗಾ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...