ಭಟ್ಕಳ: ಮುರುಡೇಶ್ವರದಲ್ಲಿ ದೋಣಿಗಳ ಸ್ಥಳಾಂತರಕ್ಕೆ ವಿರೋಧ

Source: S.O. News Service | By V. D. Bhatkal | Published on 26th November 2020, 10:45 AM | Coastal News |

ಭಟ್ಕಳ: ಪ್ರವಾಸಿ ತಾಣ ಮುರುಡೇಶ್ವರ ಸಮುದ್ರ ತೀರವನ್ನು ಅಭಿವೃದ್ಧಿ ಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ನಿರ್ಧಾರಕ್ಕೆ ಇಲ್ಲಿನ ಮೀನುಗಾರರ ವಿರೋಧ ಮುಂದುವರೆದಿದೆ.

ಸಮುದ್ರ ಬೇಲೆಯ ಮೇಲೆ ನಿಲ್ಲಿಸಲಾಗಿರುವ ಮೀನುಗಾರಿಕಾ ದೋಣಿಗಳನ್ನು ಬದಿಗೆ ಸರಿಸಿ, ಅಂಗಡಿಗಳಿಗೆ ಅವಕಾಶ ಮಾಡಿಕೊಡುವ ಪ್ರಸ್ತಾಪಕ್ಕೆ ಮೀನುಗಾರರು ಒಪ್ಪುತ್ತಲೇ ಇಲ್ಲ. ಪರಿಣಾಮವಾಗಿ ಮುರುಡೇಶ್ವರ ತೀರದಲ್ಲಿ ಸಂಘರ್ಷ ಮನೆ ಮಾಡಿರುವುದು ಕಂಡು ಬಂದಿದೆ. 

ವಿಶ್ವ ಪ್ರಸಿದ್ಧ ತಾಣವಾಗಿರುವ ಮುರುಡೇಶ್ವರವನ್ನು ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುತುವರ್ಜಿ ವಹಿಸಿ ಕಾರ್ಯಾಚರಣೆಗೆ ಇಳಿದಿದೆ. ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣದೊಂದಿಗೆ ಸಮುದ್ರ ತೀರದಲ್ಲಿಯೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಉತ್ಸುಕವಾಗಿದೆ.

ಕೊರೊನಾ, ಮಳೆಗಾಲದ ಕಾರಣದಿಂದಾಗಿ ಕಳೆದ 7-8 ತಿಂಗಳು ಪ್ರವಾಸೋದ್ಯಮ ಸಂಪೂರ್ಣವಾಗಿ ಕಳೆಗುಂದಿತ್ತಾದರೂ, ಇದೀಗ ಮತ್ತೆ ಉಸಿರಾಡುವಂತೆ ಮಾಡಲು ಪ್ರಯತ್ನ ನಡೆದಿದೆ. ಆದರೆ ಸಮುದ್ರ ಬೇಲೆಯನ್ನು ಪ್ರವಾಸೋದ್ಯಮಕ್ಕೆ ಒಪ್ಪಿಸಿದರೆ, ತಮಗೆ ಮೀನುಗಾರಿಕಾ ಚಟುವಟಿಕೆ ನಡೆಸಲು ತೊಂದರೆಯಾಗುತ್ತದೆ ಎನ್ನುವ ಆತಂಕವನ್ನು ಅಲ್ಲಿನ ಮೀನುಗಾರರು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಈಗಲೂ ವಾದ, ಪ್ರತಿವಾದ ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ಕೆಲಸ ಕಳೆದುಕೊಂಡಿದ್ದ ಅಂಗಡಿಕಾರರು ಮರಳಿ ಸಮುದ್ರ ಬೇಲೆಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೆ ಜಿಲ್ಲಾಡಳಿತವೂ ಅವಕಾಶ ಮಾಡಿಕೊಡಲು ಮನಸ್ಸು ಮಾಡಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಅಂಗಡಿಗಳಿದ್ದ ಜಾಗದಲ್ಲಿ ದೋಣಿಗಳನ್ನು ತಂದು ನಿಲ್ಲಿಸಿರುವ ಮೀನುಗಾರರು, ದೀಪಾವಳಿ ಮುಗಿದರೂ ಅಲ್ಲಿಂದ ಕದಲುವ ಲಕ್ಷಣ ಕಂಡು ಬರುತ್ತಿಲ್ಲ. ಇದು ಅಂಗಡಿಕಾರರಿಗೆ ಮಾತ್ರವಲ್ಲ, ಅಧಿಕಾರಿಗಳಿಗೂ ತಲೆ ನೋವನ್ನು ತಂದಿದೆ. 

ತಹಸೀಲ್ದಾರ ಭೇಟಿ:
ಮುರುಡೇಶ್ವರ ಸಮುದ್ರ ತೀರದಲ್ಲಿ ಅಂಗಡಿಗಳಿಗೆ ಅವಕಾಶ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ ಎಸ್. ರವಿಚಂದ್ರ, ಸಿಬ್ಬಂದಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೋಣಿಗಳ ಸ್ಥಳಾಂತರಕ್ಕೆ ಅಧಿಕಾರಿಗಳು ಮಾಡಿಕೊಂಡ ಮನವಿಗೆ ಮೀನುಗಾರರು ಒಪ್ಪಿಲ್ಲ. ಸಮುದ್ರದೊಂದಿಗೆ ನಾವು ಬದುಕು ಕಟ್ಟಿಕೊಂಡಿದ್ದೇವೆ, ನಮ್ಮನ್ನು ತೆರವುಗೊಳಿಸುವ ಹಕ್ಕು ಅಧಿಕಾರಿಗಳಿಗೆ ಇಲ್ಲ ಎಂದು ವಾದಿಸುತ್ತಿದ್ದಾರೆ. ಇದರಿಂದ ಕೆರಳಿರುವ ಅಧಿಕಾರಿಗಳು, ಮುರುಡೇಶ್ವರ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ, ಪರಸ್ಪರ ಹೊಂದಾಣಿಕೆಯ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು, ಸಮುದ್ರ ಬೇಲೆಯ ಅತ್ಯಲ್ಪ ಭಾಗವನ್ನಷ್ಟೇ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಇದರಿಂದ ಮೀನುಗಾರಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೆ ಎಲ್ಲವನ್ನೂ ಕಡೆಗಣಿಸಿ ಇಡೀ ಸಮುದ್ರ ಬೇಲೆಯ ಮೇಲೆ ಹಕ್ಕು ಚಲಾಯಿಸುವುದು ಸರಿಯಲ್ಲ, ಸಣ್ಣ ಸಣ್ಣ ವಿಷಯಕ್ಕೂ ಕಾನೂನನ್ನು ಎಳೆದು ತರಲಾಗುತ್ತಿದೆ, ಕಾನೂನು ನಮಗೂ ಗೊತ್ತು, ಪರಿಣಾಮಗಳ ಬಗ್ಗೆ ಯೋಚಿಸಿ ಎಂದು ಅಧಿಕಾರಿಗಳು ತಾಕೀತು ಮಾಡಿರುವುದು ಬಯಲಾಗಿದೆ. 

Read These Next