ಪಾಕಿಸ್ತಾನ: ಅಸೆಂಬ್ಲಿ ವಿಸರ್ಜನೆ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕೃತ; ಮೂರು ತಿಂಗಳಲಿ ಚುನಾವಣೆ?

Source: Vb | By I.G. Bhatkali | Published on 4th April 2022, 11:13 AM | Global News |

ಇಸ್ಲಾಮಾಬಾದ್: ಪ್ರಧಾನಿ ಇಮ್ರಾನ್ ಖಾನ್ ಸಲಹೆಯ ಮೇರೆಗೆ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಆಳ್ವಿಯವರು ರವಿವಾರ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿದ್ದಾರೆ. ಖಾನ್ ಪಾಕಿಸ್ತಾನದಲ್ಲಿ ಹೊಸದಾಗಿ ಚುನಾವಣೆಗಳಿಗೂ ಕರೆ ನೀಡಿದ್ದಾರೆ.

ರವಿವಾರ ಬೆಳಗ್ಗೆ ರಾಷ್ಟ್ರೀಯ ಅಸೆಂಬ್ಲಿಯ ಉಪಸ್ಪೀಕರ್ ಕಾಸಿಮ್ ಸೂರಿ ಅವರು ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದರು. ನಿರ್ಣಯವು ದೇಶಕ್ಕೆ ನಿಷ್ಠೆ ಮತ್ತು ಸಂವಿಧಾನಕ್ಕೆ ವಿಧೇಯತೆಗೆ ಸಂಬಂಧಿಸಿದ ದೇಶದ ಸಂವಿಧಾನದ ವಿಧಿ 5ನ್ನು ಉಲ್ಲಂಘಿಸಿದೆ ಎಂದು ಅವರು ಹೇಳಿದರು.

ಅವಿಶ್ವಾಸ ನಿರ್ಣಯವನ್ನು ಪ್ರತಿಪಕ್ಷಗಳು ಮಾ.8ರಂದು ಮಂಡಿಸಿದ್ದವು ಮತ್ತು ರಾಷ್ಟ್ರೀಯ ರವಿವಾರದ ಅಸೆಂಬ್ಲಿಯ ಅಧಿವೇಶನದಲ್ಲಿ ಅದರ ಮೇಲೆ ಮತದಾನ ನಡೆಯಬೇಕಿತ್ತು. ಎರಡು ಮಿತ್ರಪಕ್ಷಗಳು ಸಮ್ಮಿಶ್ರ ಸರಕಾರಕ್ಕೆ ಬೆಂಬಲವನ್ನು ಹಿಂದೆಗೆದು ಕೊಂಡಿದ್ದರಿಂದ ರವಿವಾರದ ಅಧಿವೇಶನಕ್ಕೆ ಮುನ್ನವೇ ಖಾನ್ ಸರಕಾರವು ಬಹುಮತವನ್ನು ಕಳೆದುಕೊಂಡಿತ್ತು.

ಈ ನಡುವೆ ಖಾನ್ ನೇತೃತ್ವದ ಸರಕಾರವನ್ನು ಉರುಳಿಸಲು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅಗತ್ಯ ಸದಸ್ಯಬಲ ತಮ್ಮ ಬಳಿಯಿತ್ತು ಎಂದು ಪ್ರತಿಪಕ್ಷಗಳು ಪ್ರತಿಪಾದಿಸಿವೆ. ಉಪಸ್ಪೀಕರ್ ನಿರ್ಧಾರವನ್ನು ಅಸಾಂವಿಧಾನಿಕ ಎಂದು ಬಣ್ಣಿಸಿರುವ ಅವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಲು ನಿರ್ಧರಿಸಿವೆ.

ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ದೇಶದ ಪ್ರಜೆಗಳನ್ನು ಅಭಿನಂದಿಸಿದ ಖಾನ್, ವಿದೇಶಿ ಅಜೆಂಡಾದ ಕುಮ್ಮಕ್ಕಿನಿಂದ ಆಡಳಿತ ವನ್ನು ಬದಲಿಸಲು ಪ್ರತಿಪಕ್ಷಗಳು ನಡೆಸಿದ ಪ್ರಯ ತವನ್ನು ಉಪಸ್ಪೀಕರ್ ತಿರಸ್ಕರಿಸಿದ್ದಾರೆ ಎಂದು ಬೆಟ್ಟು ಮಾಡಿದರು.

ತನ್ನ ಸರಕಾರವನ್ನು ಉರುಳಿಸಲು ಪ್ರಯತ್ನಗಳ ಮೂಲಕ ದೇಶ ದ್ರೋಹವನ್ನು ಎಸಗಲಾಗುತ್ತಿದೆ ಎಂಬ ಚಿಂತೆಯನ್ನು ವ್ಯಕ್ತಪಡಿಸಿರುವ ಹಲವಾರು ಜನರಿಂದ ಸಂದೇಶಗಳನ್ನು ತಾನು ಸ್ವೀಕರಿಸಿದ್ದೇನೆ ಎಂದ ಖಾನ್, 'ಘಬರಾನಾ ನಹೀ ಹೈ (ಹೆದರಬೇಡಿ), ದೇವರು ಪಾಕಿಸ್ತಾನವನ್ನು ಗಮನಿಸುತ್ತಿದ್ದಾನೆ' ಎಂದು ಹೇಳಿದರು.

90 ದಿನಗಳಲ್ಲಿ ದೇಶದಲ್ಲಿ ಹೊಸದಾಗಿ ಚುನಾವಣೆಗಳು ನಡೆಯಲಿವೆ ಎಂದು ಪಾಕಿಸ್ತಾನದ ಸಹಾಯಕ ವಾರ್ತಾ ಮತ್ತು ಪ್ರಸಾರ ಸಚಿವ ಫಾರೂಖ್ ಹಬೀಬ್ ಟೀಟಿಸಿದ್ದಾರೆ. ಆದರೆ ಈ ವಿಷಯದಲ್ಲಿ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ.

ಅವಿಶ್ವಾಸ ನಿರ್ಣಯದ ಮೇಲೆ ಮತದಾನಕ್ಕೆ ಅವಕಾಶ ನೀಡದೆ ಸರಕಾರವು ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಹೇಳಿದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಝರ್ದಾರಿಯವರು, 'ಸಂಯುಕ್ತ ವಿರೋಧ ಪಕ್ಷವು ಸಂಸತ್ತನ್ನು ತೊರೆಯುವುದಿಲ್ಲ. ನಮ್ಮ ವಕೀಲರು ಈಗಾಗಲೇ ಸರ್ವೋಚ್ಚ ನ್ಯಾಯಾಲಯಕ್ಕೆ ತೆರಳಿದ್ದಾರೆ. ಪಾಕಿಸ್ತಾನದ ಸಂವಿಧಾನವನ್ನು ರಕ್ಷಿಸುವಂತೆ, ಎತ್ತಿ ಹಿಡಿಯುವಂತೆ ಮತ್ತು ಕಾರ್ಯಗತಗೊಳಿಸುವಂತೆ ನಾವು ಎಲ್ಲ ಸಂಸ್ಥೆಗಳಿಗೆ ಕರೆ ನೀಡುತ್ತೇವೆ' ಎಂದರು.

ಖಾನ್ ಅತ್ಯಂತ ಹೆಚ್ಚಿನ ದೇಶದ್ರೋಹವನ್ನು ಎಸಗಿದ್ದಾರೆ ಎಂದು ಹೇಳಿದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ನಾಯಕ ಶಹಬಾಝ್ ಶರೀಫ್ ಅವರು, ಸಂವಿಧಾನವನ್ನು ಎತ್ತಿ ಹಿಡಿಯುವಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ಪಾತ್ರವನ್ನು ನಿರ್ವಹಿಸುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಖಾನ್ ದೇಶದ ಸಂವಿಧಾನವನ್ನು ಬುಡಮೇಲುಗೊಳಿಸಿದ್ದಾರೆ ಎಂದು ಪಾಕಿಸ್ತಾನ ಮುಸ್ಲಿಮ್ ಲೀಗ್ -ನವಾಝ್ನ ಸಂಸದ ಅಹ್ವಾನ್ ಇಟ್ಬಾಲ್ ಆರೋಪಿಸಿದರು.

Read These Next

ಪೇಶಾವರ ಮಸೀದಿಯೊಂದರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ೪೦ ಮಂದಿ ಸಾವು; ೧೦೦ಕ್ಕೂ ಹೆಚ್ಚು ಗಂಭೀರ

ಪಾಕಿಸ್ತಾನದ ಪೇಶಾವರದಲ್ಲಿ ಸೋಮವಾರ ಮಸೀದಿಯೊಂದರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ೪೦ ಮಂದಿ ಸಾವನ್ನಪ್ಪಿದ್ದು ೧೦೦ ಕ್ಕೂ ಹೆಚ್ಚು ...

ತಾಂತ್ರಿಕ ದೋಷ: ಅಮೆರಿಕದಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ; ಸೈಬರ್ ದಾಳಿಯಲ್ಲ, ಶ್ವೇತಭವನ ಸ್ಪಷ್ಟನೆ

ಪ್ರಮುಖ ಪೈಲಟ್ ಅಧಿಸೂಚನೆಯ ವೈಫಲ್ಯದಿಂದಾಗಿ ಬುಧವಾರ ಬೆಳಗ್ಗೆ ಅಮೆರಿಕದಾದ್ಯಂತ ಎಲ್ಲಾ ವಿಮಾನಗಳೂ ಹಾರಾಟ ಸ್ಥಗಿತಗೊಳಿಸಿವೆ ಎಂದು ...

ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: ಡಬ್ಲ್ಯುಎಚ್‌ಒ ಎಚ್ಚರಿಕೆ; ಕೆಮ್ಮಿನ ನಾಲ್ಕು ಸಿರಪ್‌ಗಳ ಕುರಿತು ಕೇಂದ್ರದ ತನಿಖೆ

ಹರ್ಯಾಣದ ಔಷಧಿ ಕಂಪೆನಿಯೊಂದು ತಯಾರಿಸಿರುವ ನಾಲ್ಕು ಕೆಮ್ಮಿನ ಸಿರಪ್ ಗಳಿಗೂ ಗ್ಯಾಂಬಿಯಾದಲ್ಲಿ ಸಂಭವಿಸಿರುವ 66 ಮಕ್ಕಳ ಸಾವಿಗೂ ...