ಮತದಾರರ ಜಾಗೃತಿ ಚಟುವಟಿಕೆ ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ.

Source: so news | By Manju Naik | Published on 14th March 2019, 7:55 PM | State News | Don't Miss |


ಹಾಸನ: ಜಿಲ್ಲಾ ಮತದಾರರ ಜಾಗೃತಿ ಚಟುವಟಿಕೆಗಳು ಇನ್ನಷ್ಟು ಚುರುಕಾಗಿವೆ. ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ|| ಕೆ.ಎನ್. ವಿಜಯ ಪ್ರಕಾಶ್ ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
ಜಿಲ್ಲೆಯ ಪ್ರತಿ ನಗರ, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹತ್ತು ಹಲವು ಮತದಾರರ ಜಾಗೃತಿ ಚಟುವಟಿಕೆಗಳು ನಡೆಯುತ್ತಿವೆ.
ನಗರದ ಕೈಗಾರಿಕಾ ಬಡಾವಣೆಯ ವಿವಿಧ ಕಾರ್ಖಾನೆಗಳಲ್ಲಿ ಇಂದು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿ ಮತ್ತು ಮತಯಂತ್ರದ ಪ್ರಾತ್ಯಕ್ಷಿಕೆ ನಡೆಯಿತು.
ಜಾಕಿ ಗಾರ್ಮೆಂಟ್ಸ್ ನಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಸ್ವೀಪ್ ಸಮಿತಿ ಅದ್ಯಕ್ಷರಾದ ಡಾ|| ಕೆ.ಎನ್. ವಿಜಯಪ್ರಕಾಶ್ ಅವರು ಉದ್ಘಾಟಿಸಿ ಕಾರ್ಮಿಕರಿಗೆ ಮತದಾನದ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ, ನೈತಿಕ ಮತದಾನದ ಅಗತ್ಯಗಳ ಬಗ್ಗೆ ಮನವರಿಕೆ ಮಾಡಿ ಕೊಟ್ಟರು.
18 ವರ್ಷ ತುಂಬಿದ ಯಾವುದೇ ಅರ್ಹರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿ ಪಡಿಸಿಕೊಳ್ಳಿ ಇನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳದವರು ಹೊಸದಾಗಿ ಅರ್ಜಿ ನಮೂನೆ ಭರ್ತಿ ಮಾಡಿ ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಿ ಎಂದು ಸ್ವೀಪ್ ಸಮಿತಿಯ ಅಧ್ಯಕ್ಷರು ಹೇಳಿಸಿದರು.
ಇದೇ ವೇಳೆ ವಿದ್ಯುನ್ಮಾನ ಮತಯಂತ್ರಗಳ ಬಳಸಿ ವಿ.ವಿ ಪ್ಯಾಟ್‍ನ ಕಾರ್ಯ ನಿರ್ವಹಣೆ ಮತ್ತು ಮತ ಖಾತರಿಪಡಿಸಿಕೊಳ್ಳುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಕಾರ್ಮಿಕ ಇಲಾಖೆ ಉಪ ಆಯುಕ್ತರಾದ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಅರುಣ್ ಕುಮಾರ್, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಾದ ವಿನೋದ್ ಚಂದ್ರ, ಕಾರ್ಮಿಕ ಅಧಿಕಾರಿ ರಮೇಶ್ ಕುಮಾರ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ರವಿಕುಮಾರ್, ಮಾಸ್ಟರ್ ಟ್ರೈನರ್ ಹುಬೆದುಲ್ಲಾ, ಜಾಕಿ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಹಿಮಾಂಶು ದೇಸಾಯಿ, ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ಗಿರೀಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 300 ಕಾರ್ಮಿಕರಿಗೆ ಈ ಸಂದರ್ಭದಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಇದೇವೇಳೆ ಕಾರ್ಮಿಕರು ತಮ್ಮ ಸಂಬಂಧಿಕರಿಗೆ ಮತದಾನದ ಮಹತ್ವ ತಿಳಿಸುವ ಪತ್ರ ಅಭಿಯಾನಕ್ಕೂ ಚಾಲನೆ ನೀಡಲಾಯಿತು. ಅದೇ ರೀತಿ ನಾನು ಮತಹಾಕುತ್ತೇನೆ ಎಂದು ಖಾತರಿ ಪಡಿಸುವ ಸಹಿ ಸಂಗ್ರಹ ಕಾರ್ಯ ಕೂಡ ನಡೆಯಿತು.

Read These Next