ಅಲ್ಪಸಂಖ್ಯಾತರ ರಕ್ಷಣೆ ಪ್ರಜಾಪ್ರಭುತ್ವದ ಅರ್ಥ: ಹರಿದ್ವಾರದಲ್ಲಿ ಕಸಾಯಿಖಾನೆಗಳಿಗೆ ನಿಷೇಧವನ್ನು ಪ್ರಶ್ನಿಸಿದ ಹೈಕೋರ್ಟ್

Source: VB News | By I.G. Bhatkali | Published on 19th July 2021, 11:11 AM | National News |

ನೈನಿತಾಲ: ಹರಿದ್ವಾರ ಜಿಲ್ಲೆಯಲ್ಲಿ ಕಸಾಯಿಖಾನೆಗಳನ್ನು ನಿಷೇಧಿಸಿರುವ ಕ್ರಮದ ಸಾಂವಿಧಾನಿಕತೆಯನ್ನು ಪ್ರಶ್ನಿಸಿರುವ ಉತ್ತರಾಖಂಡ ಉಚ್ಚ ನ್ಯಾಯಾಲಯವು, ನಾಗರಿಕತೆಯು ಅದು ತನ್ನ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯಿಂದ ನಿರ್ಧರಿಸಲ್ಪಡುತ್ತದೆ ಎಂದು ಹೇಳಿದೆ.

ಹರಿದ್ವಾರ ಜಿಲ್ಲೆಯಲ್ಲಿ ಕಸಾಯಿಖಾನೆಗಳ ನಿಷೇಧವನ್ನು ಪ್ರಶ್ನಿಸಿ ಮಂಗ್ಲೌರ್ ನಿವಾಸಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಾಧೀಶ ಆರ್.ಎಸ್.ಚೌಹಾಣ್ ಮತ್ತು ನ್ಯಾ.ಅಲೋಕ ಕುಮಾರ ವರ್ಮಾ ಅವರ ಪೀಠವು, ಅಲ್ಪಸಂಖ್ಯಾತರ ರಕ್ಷಣೆಯು ಪ್ರಜಾಪ್ರಭುತ್ವದ ಅರ್ಥವಾಗಿದೆ. ನಾಗರಿಕತೆಯೊಂದನ್ನು ಅದು ತನ್ನ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯಿಂದ ನಿರ್ಧರಿಸಲಾಗುತ್ತದೆ ಮತ್ತು ಹರಿದ್ವಾರದಂತಹ ನಿಷೇಧವು ತನ್ನ ಪ್ರಜೆಗಳ ಆಯ್ಕೆಗಳನ್ನು ಸರಕಾರವು ಎಷ್ಟರ ಮಟ್ಟಿಗೆ ನಿರ್ಧರಿಸಬಹುದು ಎನ್ನುವುದನ್ನು ಪ್ರಶ್ನಿಸುತ್ತದೆ ಎಂದು ಹೇಳಿತು.

ಹರಿದ್ವಾರ ಜಿಲ್ಲೆಯ ಮಂಗ್ಲೌರ್‌ನಂತಹ ಗಣನೀಯ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಪಟ್ಟಣಗಳಲ್ಲಿ ಕಸಾಯಿಖಾನೆ ನಿಷೇಧವು ಖಾಸಗಿತನದ ಹಕ್ಕು, ಜೀವಿಸುವ ಹಕ್ಕು ಮತ್ತು ಧರ್ಮವನ್ನು ಮುಕ್ತವಾಗಿ ಆಚರಿಸುವ ಹಕ್ಕುಗಳ ವಿರುದ್ಧವಾಗಿದೆ ಮತ್ತು ಮುಸ್ಲಿಮರ ವಿರುದ್ಧ ತಾರತಮ್ಯದ್ದಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ರಾಜ್ಯ ಸರಕಾರವು ಈ ವರ್ಷದ ಮಾರ್ಚ್‌ನಲ್ಲಿ ಹರಿದ್ವಾರದ ಎಲ್ಲ ಪ್ರದೇಶಗಳು ಕಸಾಯಿಖಾನೆಗಳಿಂದ ಮುಕ್ತವಾಗಿವೆ ಎಂದು ಘೋಷಿಸಿತ್ತು ಮತ್ತು ಕಸಾಯಿಖಾನೆಗಳಿಗೆ ನೀಡಿದ್ದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ರದ್ದುಗೊಳಿಸಿತ್ತು.

ನಿಷೇಧವು ನಿರಂಕುಶ ಮತ್ತು ಅಸಾಂವಿಧಾನಿಕವಾಗಿದೆ ಎಂದು ಅರ್ಜಿಯು ಪ್ರತಿಪಾದಿಸಿದೆ. ಅರ್ಜಿಯು ಗಂಭೀರ ಮೂಲಭೂತ ಪ್ರಶ್ನೆಗಳನ್ನೆತ್ತಿದೆ ಮತ್ತು ಸಾಂವಿಧಾನಿಕ ವ್ಯಾಖ್ಯಾನದ ಅಗತ್ಯವನ್ನು ಒಳಗೊಂಡಿದೆ ಎಂದು ಉಚ್ಚ ನ್ಯಾಯಾಲಯವು ಹೇಳಿತು.

ಇಂತಹುದೇ ವಿಷಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಸರ್ವೋಚ್ಚ ನ್ಯಾಯಾಲಯವು, ಮಾಂಸ ನಿಷೇಧವನ್ನು ಯಾರದೇ ಗಂಟಲಿನೊಳಗೆ ಬಲವಂತದಿಂದ ತುರುಕಲಾಗುವುದಿಲ್ಲ. ನಾಳೆ ನೀವು ಯಾರೂ ಮಾಂಸವನ್ನು ತಿನ್ನಬಾರದು ಎಂದು ಹೇಳಬಹುದು ಎಂಬ ಕಳವಳಗಳನ್ನು ವ್ಯಕ್ತಪಡಿಸಿತ್ತು ಎಂದು ಹೇಳಿದ ಉಚ್ಚ ನ್ಯಾಯಾಲಯವು, ತನ್ನ ಆಹಾರ ಕ್ರಮವನ್ನು ನಿರ್ಧರಿಸುವ ಹಕ್ಕು ಪ್ರಜೆಗಿದೆಯೇ ಅಥವಾ ಅದನ್ನು ಸರಕಾರವು ನಿರ್ಧರಿಸುತ್ತದೆಯೇ ಎನ್ನುವುದು ಪ್ರಶ್ನೆಯಾಗಿದೆ ಎಂದು ತಿಳಿಸಿತು.

ಆದಾಗ್ಯೂ,ಇದು ಹಬ್ಬಗಳಿಂದ ನಿರ್ಬಂಧಿಸಲ್ಪಟ್ಟಿರದ ಸಾಂವಿಧಾನಿಕ ವಿಷಯವಾಗಿದೆ ಮತ್ತು ಪ್ರಕರಣದಲ್ಲಿ ಸೂಕ್ತ ವಿಚಾರಣೆ ಮತ್ತು ಚರ್ಚೆಗಳು ಅಗತ್ಯವಾಗಿವೆ. ಹೀಗಾಗಿ ಜು.21ರ ಬಕ್ರೀದ್‌ಗೆ ಮುನ್ನ ಇದನ್ನು ಇತ್ಯರ್ಥಗೊಳಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಜು.23ಕ್ಕೆ ನಿಗದಿಗೊಳಿಸಿತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...