ಭಟ್ಕಳ ಉಸ್ಮಾನ್‍ನಗರ ರೇಲ್ವೇ ನಿಲ್ದಾಣ ರಸ್ತೆ ಸಂಪರ್ಕಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‍ಪಾಸ್ ನಿರ್ಮಾಣಕ್ಕೆ ಆಗ್ರಹ

Source: S O News Service | By I.G. Bhatkali | Published on 21st November 2020, 1:15 PM | Coastal News |

ಭಟ್ಕಳ: ತಾಲೂಕಿನ ಉಸ್ಮಾನ್‍ನಗರ, ರೇಲ್ವೇ ನಿಲ್ದಾಣ, ಬೆಳಲಖಂಡ ಸುತ್ತಮುತ್ತಲಿನ ಪ್ರದೇಶಗಳ ಸುಲಭ ಸಂಪರ್ಕಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‍ಪಾಸ್ ನಿರ್ಮಾಣದ ಅಗತ್ಯದ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬರಲಾಗಿದ್ದು, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಆ ಭಾಗದ ಮುಖಂಡರು, ಜನರ ಬೇಡಿಕೆಯನ್ನು ಕಡೆಗಣಿಸಿ ಕಾಮಗಾರಿಯನ್ನು ಮುಂದುವರೆಸಿದ್ದೇ ಆದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಶುಕ್ರವಾರ ಸಂಜೆ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಆ ಭಾಗದ ಮುಖಂಡರು ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ತಾಲೂಕಿನ ಬೇರೆ ಬೇರೆ ಭಾಗಗಳಿಂದ ರೇಲ್ವೇ ನಿಲ್ದಾಣಕ್ಕೆ ಹೋಗುವವರು ಉಸ್ಮಾನ್‍ನಗರ, ಬೆಳಲಖಂಡ ಮಾರ್ಗದಲ್ಲಿಯೇ ಸಂಚರಿಸುತ್ತಾರೆ. ಆದ್ದರಿಂದ ಅಂಡರ್‍ಪಾಸ್ ನಿರ್ಮಾಣ ಬೆಳಲಖಂಡ, ಉಸ್ಮಾನ್‍ನಗರ ಸುತ್ತಮುತ್ತಲಿನ ಜನರಿಗೆ ಸೀಮಿತವಾಗಿರದೇ ತಾಲೂಕಿನ ಜನರ ಬೇಡಿಕೆಯಾಗಿದೆ. ಕೇವಲ ದ್ವಿಭಾಜಕದೊಂದಿಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಡೆದಲ್ಲಿ ಮುದುಕರು, ಮಹಿಳೆಯರು ಹೆದ್ದಾರಿಯನ್ನು ದಾಟುವುದು ಕಷ್ಟಕರವಾಗಲಿದೆ, ಅಪಘಾತಗಳ ಸಂಖ್ಯೆಯೂ ಹೆಚ್ಚಳವಾಗಲಿದ್ದು, ರೇಲ್ವೇ ನಿಲ್ದಾಣಕ್ಕೆ ರಿಕ್ಷಾ ಬಾಡಿಗೆಯೂ ಅನಿವಾರ್ಯವಾಗಿ ಏರಿಕೆಯಾಗಲಿದೆ, ಪಕ್ಕದ ಬೈಂದೂರು, ಶಿರೂರು ಸೇರಿದಂತೆ 35ಕಿಮೀ. ವ್ಯಾಪ್ತಿಯಲ್ಲಿ 5 ಕಡೆ ಅಂಡರ್‍ಪಾಸ್ ನಿರ್ಮಿಸಲಾಗಿದೆ, ಆದರೆ ಭಟ್ಕಳದ ಜನರು ಕಳೆದ ವರ್ಷದಿಂದಲೇ ಅಧಿಕಾರಿಗಳ ಮುಂದೆ ಬೇಡಿಕೆ ಇಡುತ್ತ ಬಂದಿದ್ದರೂ ನಿರ್ಲಕ್ಷಿಸಲಾಗಿದೆ. ತಾಲೂಕಿನ ಉಸ್ಮಾನ್‍ನಗರ ಕ್ರಾಸ್‍ಗೆ ಹೊಂದಿಕೊಂಡು ಈಗಾಗಲೇ 4.5 ಅಡಿ ಎತ್ತರದಲ್ಲಿ ಹೆದ್ದಾರಿ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಕೇವಲ 2 ರಿಂದ 2.5 ಅಡಿ ಹೆದ್ದಾರಿಯನ್ನು ಎತ್ತರಕ್ಕೇರಿಸಿ ಕಡಿಮೆ ವೆಚ್ಚದಲ್ಲಿ  ಅಂಡರ್‍ಪಾಸ್ ನಿರ್ಮಿಸಬಹುದಾಗಿದ್ದು, ಕೆಲ ದಿನಗಳ ಹಿಂದೆಯಷ್ಟೇ ಭಟ್ಕಳ ಸಹಾಯಕ ಆಯುಕ್ತರು, ಪೊಲೀಸ್ ಆಯುಕ್ತರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಯಿಸಿ ಚರ್ಚಿಸುವುದಾಗಿ ಸಹಾಯಕ ಆಯುಕ್ತರು ಭರವಸೆ ನೀಡಿದ್ದರಾದರೂ ಇನ್ನೂ ಈಡೇರಿಲ್ಲ. ಆದರೆ ಸದರಿ ಪ್ರದೇಶದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ಯಥಾ ಪ್ರಕಾರ ಮುಂದುವರೆದಿದೆ. ಪ್ರಸ್ತುತ ಸಮಸ್ಯೆಯ ಬಗ್ಗೆ ಆ ಭಾಗದ ಮುಖಂಡರಷ್ಟೇ ಅಧಿಕಾರಿಗಳ ಮುಂದೆ ಬಂದು ಮನವಿ ಸಲ್ಲಿಸುತ್ತಿದ್ದಾರೆ. ಅಧಿಕಾರಿಗಳು ನಮ್ಮ ಬೇಡಿಕೆಯನ್ನು ಕಡೆಗಣಿಸಿದರೆ ತಾಲೂಕಿನ ಜನರು ಒಟ್ಟಾಗಿ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಮೊತೇಶಮ್ ಅಹ್ಮದ್ ಸೈಬ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್, ಸತೀಶ ನಾಯ್ಕ,  ಮುಠ್ಠಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಗಣಪತಿ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...