ತಿಂಗಳ ಎರಡನೇ ಭಾನುವಾರ ಪೊಲೀಸ್ ಠಾಣೆಯಲ್ಲಿ`ದಲಿತರ ದಿನ’ಆಚರಣೆಗೆ ಡಿಸಿ ಸೂಚನೆ

Source: S.O. News Service | By MV Bhatkal | Published on 25th June 2019, 8:56 PM | Coastal News | Don't Miss |

ಕಾರವಾರ: ಪ್ರತಿ ತಿಂಗಳ ಎರಡನೇ ಭಾನುವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜಾನಾಂಗಗಳ ಸಮಸ್ಯೆ, ದೂರು ಇತ್ಯರ್ಥಗಳ ಕುರಿತು ಎಲ್ಲ ಪೊಲೀಸ್ ಠಾಣೆಗಳಲ್ಲಿ ದಲಿತರ ದಿನ” ಎಂದು ಆಚರಿಸಲು ಕಾರ್ಯಕ್ರಮ ರೂಪಿಸುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು, ದಲಿತ ಸಮುದಾಯದಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಅವರ ಸಮಸ್ಯೆ ಆಲಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಂಬಂಧ ಪೊಲೀಸ್ ಇಲಾಖೆ ಪ್ರತಿ ತಿಂಗಳ ಎರಡನೇ ಭಾನುವಾರ ದಲಿತರ ದಿನ ಎಂದು ಆಚರಿಸುವಂತೆ ಸರ್ಕಾರ ಆದೇಶಿಸಿದೆ. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯಲ್ಲೂ ದಲಿತರ ದಿನ ಕಾರ್ಯಕ್ರಮ ರೂಪಿಸುಂವಂತೆ ಅವರು ಪೊಲೀಸ್ ಇಲಾಖೆಗೆ ಸೂಚಿಸಿದರು.
ಪ್ರತಿ ತಿಂಗಳ ಎರಡನೇ ಭಾನುವಾರ ಪೊಲೀಸ್ ಠಾಣೆಯಲ್ಲಿ ದಲಿತರ ದಿನ ಕಾರ್ಯಕ್ರಮ ಏರ್ಪಡಿಸಿ ಆ ಭಾಗದ ದಲಿತ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಅವರ ಸಮಸ್ಯೆಗಳನ್ನು ಆಲಿಸಿ ಅಲ್ಲಿಯೇ ಇತ್ಯರ್ಥಪಡಿಸುವುದಾದಲ್ಲಿ ಕ್ರಮವಹಿಸುವುದು ಹಾಗೂ ಮೇಲಧಿಕಾರಿಗಳ ಮಟ್ಟದ್ದಾಗಿದ್ದರೆ ಠಾಣಾಧಿಕಾರಿ ಪೊಲೀಸ್ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ನಂತರ ತಿಂಗಳ ಕೊನೆಯ ಭಾನುವಾರ ನಡೆಯುವ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ವರದಿ ಕುರಿತು ಕ್ರಮಕ್ಕೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳ ಕ್ರಮ ವಹಿಸಬೇಕಿದೆ. ಆದ್ದರಿಂದ ಕೂಡಲೆ ಪೊಲೀಸ್ ಇಲಾಖೆ ಸರ್ಕಾರದ ಆದೇಶದಂತೆ ದಲಿತರ ದಿನ ಆಚರಣೆಗೆ ಕಾರ್ಯಕ್ರಮ ರೂಪಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಉತ್ತರ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಸ್ಯೆಗಳನ್ನು ಏಕಗವಾಕ್ಷಿ ಪದ್ಧತಿಯಲ್ಲಿ ದೂರು ಸ್ವೀಕರಿಸಿ ಬಗೆಹರಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಇಲಾಖೆಯಿಂದ ದೌರ್ಜನ್ಯ ತಡೆ ಕಾಯ್ದೆ ಕುರಿತು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಅವರು ತಿಳಿಸಿದರು.
ಸುಳ್ಳು ದಾಖಲೆ ಸೃಷ್ಟಿಸಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದ 49 ಜಾತಿ ಪ್ರಮಾಣ ಪತ್ರಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಪ್ರಕರಣಗಳು ಇತ್ಯರ್ಥವಾದ ಬಳಿಕ ಇನ್ನುಳಿದ ಪ್ರಕರಣಗಳಲ್ಲಿಯೂ ಸೂಕ್ತ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ದೌರ್ಜನ್ಯ ನಿಯಂತ್ರಣ ಕಾಯ್ದೆ 1995 ನಿಯಮ 17ರಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದ್ದು ಸಮಿತಿಯಲ್ಲಿ ಜಿಲ್ಲಾಧಿಕಾರಿಯವರು ಅಧ್ಯಕ್ಷರಾಗಿರುತ್ತಾರೆ, ಜಿಲ್ಲೆಯ ಚುನಾಯಿತ ಸಂಸತ್ ಮತ್ತು ರಾಜ್ಯ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪೊಲೀಸ್ ಆಧೀಕ್ಷಕರು, ಜಿಲ್ಲಾ ಸರ್ಕಾರಿ ಅಭಿಯೋಜಕರು, ಹಳಿಯಾಳ ತಾಲೂಕಿನ ದಿಯೋಗ ಸಿದ್ದಿ, ಕುಮಟಾ ತಾಲೂಕಿನ  ಮಂಜುನಾಥ ಕುಮಾರ್ ಅಗೇರ, ಮುಂಡಗೋಡ ತಾಲೂಕಿನ ಎಸ್.ಫಕೀರಪ್ಪ (ಸಣ್ಣ ಫಕೀರಪ್ಪ ಹರಿಜನ), ಶಿರಸಿ ತಾಲೂಕಿನ ಗೀತಾ ರಾಮಣ್ಣಾ ಭೋವಿ, ಡಿ.ಬಂಗಾರಪ್ಪ, ಡಾ.ವೆಂಕಟೇಶ್ ನಾಯ್ಕ್ (ಸಹ್ಯಾದ್ರಿ ಸಮುದಾಯ ಅಭಿವೃದ್ಧಿ ಮತ್ತು ಮಹಿಳಾ ಸಶಕ್ತಿಕರಣ ಸಂಸ್ಥೆ, ಶಿರಸಿ) ಹೊನ್ನಾವರ ತಾಲೂಕಿನ ತುಳಸೀದಾಸ ಗಣಪತಿ ಪಾವುಸ್ಕರ್, ಕಾರವಾರದ ಯಮುನಾ ಗಾಂವ್ಕರ್ (ರಾಜ್ಯ ಕಾರ್ಯದರ್ಶಿ, ಸಿಐಟಿಯು ಪೆನ್ಷನರ್ಸ್ ಹೋಮ್) ಸದಸ್ಯರಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುರುಷೋತ್ತಮ ಸದಸ್ಯ ಕಾರ್ಯದರ್ಶಿಯಾಗಿದ್ದು, ಚುನಾಯಿತ ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಎಲ್ಲರೂ ಸಭೆಯಲ್ಲಿ ಉಪಸ್ಥಿತರಿದ್ದರು. 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...