ಜಿಲ್ಲಾಧಿಕಾರಿಗಳೊಂದಿಗೆ ಪಿಎಂ ಮೋದಿ ಸಂವಾದ: ಲಸಿಕೆ ವ್ಯರ್ಥವಾಗದಂತೆ ತಡೆಯಲು ಸಲಹೆ

Source: PTI | Published on 20th May 2021, 3:28 PM | National News |

ನವದೆಹಲಿ: ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 10 ರಾಜ್ಯಗಳ ಆಯ್ದ 54 ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು. ಈ ವೇಳೆ ಅವರು ಲಸಿಕೆ ವ್ಯರ್ಥವಾಗದಂತೆ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು.

ಕೊರೊನಾ ವೈರಸ್‌ ಅಗೋಚರ ಹಾಗೂ ಪದೇಪದೇ ರೂಪಾಂತರಗೊಳ್ಳುವುದರಿಂದ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಹೀಗಾಗಿ ಈ ವೈರಸ್ ವಿರುದ್ಧದ ಕಾರ್ಯತಂತ್ರವು ಕ್ರಿಯಾಶೀಲವಾಗಿರಬೇಕು ಹಾಗೂ ಹೊಸತನದಿಂದ ಕೂಡಿರಬೇಕು ಎಂದು ಪ್ರತಿಪಾದಿಸಿದರು.

‘ಮಕ್ಕಳು ಹಾಗೂ ಯುವಜನರು ಈಗ ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದ ಅವರು, ‘ನಿಮ್ಮ ಜಿಲ್ಲೆಗಳಲ್ಲಿ ಮಕ್ಕಳು ಹಾಗೂ ಯುವಜನರಲ್ಲಿ ಕೊರೊನಾ ಸೋಂಕು ಹರಡುತ್ತಿರುವುದು ಹಾಗೂ ಅದರ ಗಂಭಿರತೆ ಬಗ್ಗೆ ನಿಗಾ ಇಡಬೇಕು. ಈ ಕುರಿತ ಮಾಹಿತಿಯನ್ನು ದಾಖಲಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಲಸಿಕೆ ವ್ಯರ್ಥವಾಗುವುದನ್ನು ತಡೆಯಬೇಕು. ವ್ಯರ್ಥವಾಗುವ ಪ್ರತಿ ಡೋಸ್‌, ಸೋಂಕಿನ ವಿರುದ್ಧ ಒಬ್ಬ ವ್ಯಕ್ತಿಗೆ ನೀಡಬೇಕಾಗಿದ್ದ ರಕ್ಷಣೆಯನ್ನು ನಿರಾಕರಿಸಿದಂತೆ’ ಎಂದೂ ಅವರು ಹೇಳಿದರು.

‘ಕೋವಿಡ್‌–19 ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದರೂ, ನಮ್ಮ ಮುಂದಿರುವ ಸವಾಲು ಕೊನೆಗೊಂಡಿಲ್ಲ. ಅಲ್ಪ ಪ್ರಮಾಣದ ಸೋಂಕು ಉಳಿದಿದ್ದರೂ ಅದನ್ನು ನಿರ್ಲಕ್ಷಿಸುವಂತಿಲ್ಲ. ಪ್ರಕರಣಗಳು ಕಡಿಮೆಯಾಗಿವೆ ಎಂದು ಮೈಮರೆಯುವಂತಿಲ್ಲ. ಕೋವಿಡ್‌–19 ನಿರ್ವಹಣೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದರು.

ಅಧಿಕಾರಿಗಳೊಂದಿಗೆ  ಪ್ರಧಾನಿ ನಡೆಸಿದ ಎರಡನೇ ಸಂವಾದ ಇದಾಗಿದೆ. ಆಯ್ದ ರಾಜ್ಯಗಳ ಅಧಿಕಾರಿಗಳೊಂದಿಗೆ ಮಂಗಳವಾರ ಮೊದಲ ಸಂವಾದ ನಡೆಸಿದ್ದರು.

ಗುರುವಾರ ನಡೆದ ಸಂವಾದದಲ್ಲಿ ಛತ್ತೀಸಗಡ, ಹರಿಯಾಣ, ಕೇರಳ, ಮಹಾರಾಷ್ಟ್ರ, ಒಡಿಶಾ, ಪುದುಚೇರಿ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಷಿಮ ಬಂಗಾಳ ಹಾಗೂ ಆಂಧ್ರಪ್ರದೇಶದ ಆಯ್ದ ಜಿಲ್ಲೆಗಳ ಅಧಿಕಾರಿಗಳು ಭಾಗಿಯಾಗಿದ್ದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...