ಜಮ್ಮು: ಭಾರತೀಯ ಸೇನಾನೆಲೆಯ ಮೇಲೆ, ಡ್ರೋನ್ ದಾಳಿ, ಜಮ್ಮುವಾಯುನೆಲೆಯಲ್ಲಿ ಅವಳಿ ಬಾಂಬ್ ಸ್ಫೋಟ; ಇಬ್ಬರಿಗೆ ಗಾಯ

Source: VB | Published on 28th June 2021, 12:36 PM | National News |

ಜಮ್ಮು: ಜಮ್ಮುವಿನಲ್ಲಿ ವಾಯುಪಡೆ ಬಳಸುವ ವಿಮಾನನಿಲ್ದಾಣದಲ್ಲಿ ರವಿವಾರ 2 ಬಾಂಬ್ ಸ್ಫೋಟಿಸಿದ್ದು ಡ್ರೋನ್ ಬಳಸಿ ಭಾರತದ ಸೇನಾನೆಲೆಯ ಮೇಲೆ ನಡೆದ ಪ್ರಥಮ ದಾಳಿ ಇದಾಗಿದೆ. ಪಾಕಿಸ್ತಾನ ಮೂಲದ ಲಷ್ಕರೆ ತಯ್ಯಿಬಾ ಉಗ್ರ ಸಂಘಟನೆ ಡ್ರೋನ್ ಮೂಲಕ ಸ್ಫೋಟಕಗಳನ್ನು ವಾಯುನೆಲೆಯ ಮೇಲೆ ಬೀಳಿಸಿದ್ದು ಬಾಂಬ್ ಸ್ಫೋಟದಲ್ಲಿ ವಾಯುಪಡೆಯ ಇಬ್ಬರು ಸಿಬ್ಬಂದಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಲಡಾಖ್‌ಗೆ ಮೂರು ದಿನಗಳ ಭೇಟಿಗೆ ಆಗಮಿಸುವ ಕೆಲವೇ ಗಂಟೆಗಳ ಮೊದಲು ಈ ಸ್ಫೋಟ ನಡೆದಿದೆ. ಪಾಕಿಸ್ತಾನದ ಗಡಿಯಿಂದ ಸುಮಾರು 16 ಕಿ.ಮೀ. ದೂರದ, ಬಿಗಿ ಭದ್ರತೆಯ ವಾಯುನೆಲೆಯಲ್ಲಿ ರವಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಎರಡು ಸ್ಫೋಟ ಸಂಭವಿಸಿದ್ದು ವಾಯುಪಡೆಯ ಇಬ್ಬರು ಸಿಬ್ಬಂದಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ.

ಈ ವಿಮಾನ ನಿಲ್ದಾಣ ವಾಯುಪಡೆಯ ಅಧೀನದಲ್ಲಿದ್ದು ಸೇನಾಪಡೆ ವಿಮಾನದ ಜೊತೆಗೆ

ಜಮ್ಮುವಿನಲ್ಲಿ ಮತ್ತೊಂದು ಸ್ಫೋಟಕ ಪತ್ತೆ

ಜಮ್ಮು: ಜಮ್ಮುವಿನ ವಾಯುಪಡೆ ವಿಮಾನನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಫೋಟಿಸಿದ ಕೆಲವೇ ಗಂಟೆಗಳಲ್ಲಿ ಸುಮಾರು 6 ಕಿ.ಗ್ರಾಂನಷ್ಟು ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಪತ್ತೆಹಚ್ಚಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಈ ಸ್ಫೋಟಕವನ್ನು ಜನಜಂಗುಳಿಯ ಪ್ರದೇಶದಲ್ಲಿ ಸ್ಫೋಟಿಸುವ ಉದ್ದೇಶದಿಂದ ಲಷ್ಕರ್ ತಯ್ಯಿಬಾ ಉಗ್ರರು ರವಾನಿಸಿರುವ ಶಂಕೆಯಿದೆ. ಸ್ಫೋಟಕವನ್ನು ಸಕಾಲದಲ್ಲಿ ಪತ್ತೆ ಹಚ್ಚಿರುವುದರಿಂದ ವಿಮಾನನಿಲ್ದಾಣದ ಅವಳಿಸ್ಫೋಟದ ಬೆನ್ನಿಗೇ ಭಾರೀ ಸ್ಫೋಟ ನಡೆಸುವ ಉಗ್ರರ ಸಂಚು ವಿಫಲವಾಗಿದೆ. ಭದ್ರತಾ ಪಡೆಗಳು ತನಿಖೆ ಆರಂಭಿಸಿದ್ದು ಶಂಕಿತರನ್ನು ಶೀಘ್ರ ಬಂಧಿಸುವ ವಿಶ್ವಾಸವಿದೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ವಾಗ್ ಸಿಂಗ್ ಹೇಳಿದ್ದಾರೆ.

ಪ್ರಯಾಣಿಕರ ವಿಮಾನಗಳೂ ಇಲ್ಲಿಂದ ಕಾರ್ಯಾಚರಿಸುತ್ತವೆ. 1:37 ಗಂಟೆಗೆ ಮೊದಲ ಸ್ಫೋಟ, 1:43ಕ್ಕೆ 2 ನೇ ಸ್ಫೋಟ ಸಂಭವಿಸಿದ್ದು ಸುಮಾರು 1 ಕಿ.ಮೀ. ದೂರದವರೆಗೂ ಶಬ್ದ ಕೇಳಿಸಿದೆ. ಒಂದು ಬಾಂಬ್ ಬಯಲು ಪ್ರದೇಶದಲ್ಲಿ ಬಿದ್ದರೆ ಮತ್ತೊಂದು ಬಾಂಬ್ ಸ್ಫೋಟದಿಂದ ಕಟ್ಟಡದ ಛಾವಣಿಗೆ ಹಾನಿಯಾಗಿದೆ. ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿರುವ ವಾಯುಪಡೆ ವಿಮಾನ ದಾಳಿಯ ಗುರಿಯಾಗಿತ್ತು ಎಂದು ಮೂಲಗಳು ಹೇಳಿವೆ.

ಇದೇ ಪ್ರದೇಶದಲ್ಲಿ ಮತ್ತೊಂದು ಕಚ್ಚಾ ಬಾಂಬ್ ಪತ್ತೆಯಾಗಿದ್ದು ಬಹುಶಃ ಲಷ್ಕರೆ ಸಂಘಟನೆಯ ಸದಸ್ಯರಿಗೆ ಇದನ್ನು ತಲುಪಿಸಿ ಜನನಿಬಿಡ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ನಡೆಸುವ ಸಂಚು ಹೂಡಲಾಗಿತ್ತು ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಈ ಮಧ್ಯೆ, ಜಮ್ಮುವಿನ ನರ್ವಾಲ್‌ನಲ್ಲಿ ಸ್ಫೋಟಕಗಳ ಸಹಿತ ಉಗ್ರನೊಬ್ಬನನ್ನು ಬಂಧಿಸಿರುವ ಪ್ರಕರಣಕ್ಕೂ ಈ ಬಾಂಬ್ ಸ್ಫೋಟಕ್ಕೂ ಸಂಬಂಧವಿರುವುದು ಇದುವರೆಗೆ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಾಂಬ್ ಸ್ಫೋಟದಿಂದ ವಿಮಾನನಿಲ್ದಾಣದ ಕಾರ್ಯಾಚರಣೆಗೆ ತೊಡಕಾಗಿಲ್ಲ ಎಂದು ವಿಮಾನನಿಲ್ದಾಣದ ನಿರ್ದೇಶಕ ಪ್ರವತ್ ರಂಜನ್ ಬ್ಯುರಿಯಾ ಹೇಳಿದ್ದಾರೆ.

ಪಾಕ್ ಕೈವಾಡ ಶಂಕೆ

ಕಳೆದ 2 ವರ್ಷಗಳಲ್ಲಿ ಪಾಕಿಸ್ತಾನ ಸೇನೆ ಡ್ರೋನ್ ಬಳಸಿ ಗಡಿಯುದ್ದಕ್ಕೂ ಶಸ್ತ್ರಾಸ್ತ್ರಗಳನ್ನು ಕೆಳಕ್ಕೆಸೆದಿರುವ ಹಲವು ಘಟನೆಗಳು ವರದಿಯಾಗಿವೆ. 2019ರ ಆಗಸ್ಟ್‌ನಲ್ಲಿ ಪಂಜಾಬ್‌ನ ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಒಂದು ಪತನಗೊಂಡಿತ್ತು. ಸೆಪ್ಟೆಂಬರ್‌ನಲ್ಲಿ ಡ್ರೋನ್ ಮೂಲಕ 8 ಬಾರಿ ಕಾರ್ಯಾಚರಣೆ ನಡೆಸಿ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳನ್ನು ಪಂಜಾಬ್ ನ ಕೆಲವೆಡೆ ಇಳಿಸಿರುವುದನ್ನು ಬಂಧಿತ ಉಗ್ರರು ಬಹಿರಂಗಗೊಳಿಸಿದ್ದರು.

ಕಳೆದ ವರ್ಷದ ಜೂನ್ 20ರಂದು ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಶಂಕಿತ ಪಾಕ್ ಡ್ರೋನ್ ಒಂದನ್ನು ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದರು. ಜುಲೈಯಲ್ಲಿ ಗಡಿಭಾಗದ ಬಳಿ ಹಲವು ಸುರಂಗಗಳನ್ನು ಪತ್ತೆಹಚ್ಚಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಜಮ್ಮುವಿನ ಅಖ್ನೂರ್ ಗ್ರಾಮದಲ್ಲಿ ಡ್ರೋನ್ ಮೂಲಕ ನೆಲಕ್ಕಿಳಿಸಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಪತ್ತೆಹಚ್ಚಿದ್ದರು.

ಪಂಜಾಬ್‌ನಲ್ಲಿ ಕಟ್ಟೆಚ್ಚರ

ಅಮೃತಸರ: ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆಯ ವಾಯುಪಡೆ ವಿಮಾನ ನಿಲ್ದಾಣದಲ್ಲಿ 2 ಬಾಂಬ್ ಸ್ಫೋಟಿಸಿದ ಘಟನೆಯ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯದಲ್ಲಿ ಪಾಕಿಸ್ತಾನದ ಗಡಿಭಾಗದ ಸಮೀಪವಿರುವ ಪಠಾಣ್‌ಕೋಟ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

5 ವರ್ಷದ ಹಿಂದೆ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪಠಾಣ್‌ಕೋಟ್‌ನ ಪ್ರಮುಖ ಕಟ್ಟಡ ಹಾಗೂ ಸಂಸ್ಥೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ತಿರುಗಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಜೊತೆಗೆ, ರಾಜ್ಯದ ಗಡಿಭಾಗದಲ್ಲೂ ಸಂಚಾರದ ಮೇಲೆ ನಿಗಾ ವಹಿಸಲಾಗಿದ್ದು ವಿಶೇಷ ಕಮಾಂಡೋ ಪಡೆ ಹಾಗೂ ಪಂಜಾಬ್ ಪೊಲೀಸರ ಎಸ್‌ಡಬ್ಲ್ಯು ಎಟಿ ತಂಡಗಳನ್ನು ನಿಯೋಜಿಸಲಾಗಿದೆ. ಜಮ್ಮುವಿನತ್ತ ತೆರಳುವ ಮತ್ತು ಜಮ್ಮು-ಕಾಶ್ಮೀರ ಕಡೆಯಿಂದ ಪಠಾಣ್‌ಕೋಟ್‌ಗೆ ಬರುವ ವಾಹನಗಳನ್ನು ಕೂಲಂಕಷ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಪಠಾಣ್‌ಕೋಟ್‌ನ ಹಿರಿಯ ಪೊಲೀಸ್ ಅಧೀಕ್ಷಕ ಸುರೇಂದ್ರ ಲಾಂಬಾ ಹೇಳಿದ್ದಾರೆ.
 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...