ಶಾಲಾ ಪಠ್ಯ ಪರಿಷ್ಕರಣೆ ವಿವಾದ; ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಮನವಿ

Source: Vb | By I.G. Bhatkali | Published on 30th June 2022, 12:43 AM | State News |

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ವಿವಾದ ಉಂಟಾಗಿ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಸಿಎಂ ಕೂಡಲೇ ಮಧ್ಯಪ್ರವೇಶಿಸಿ, ಪರಿಷ್ಕೃತ ಪಠ್ಯವನ್ನು ತಡೆಹಿಡಿಯಬೇಕು. ವಿರೋಧ ವ್ಯಕ್ತಪಡಿಸುವವರ ಅಭಿಪ್ರಾಯವನ್ನು ಆಲಿಸಿ, ವಿವಾದ ಬಗೆಹರಿಸಲು ಕ್ರಮ ವಹಿಸಬೇಕೆಂದು ಕೋರಿ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

ಸೋಮವಾರ ಇಲ್ಲಿನ ರೇಸ್‌ ಕೋರ್ಸ್‌ ನಲ್ಲಿರುವ ಸಿಎಂ ನಿವಾಸಕ್ಕೆ ಖುದ್ದು ಭೇಟಿ ನೀಡಿದ ಕನಕ ಗುರುಪೀಠದ ನಿರಂಜನಾನಂದಪುರಿ, ಭೋವಿ ಗುರುಪೀಠದ ಇಮಡಿ ಸಿದ್ದರಾಮೇಶ್ವರ ಶ್ರೀಗಳು, ಬಸವ ಮಾಚಿದೇವ ಸ್ವಾಮಿ, ಶಾಂತವೀರಸ್ವಾಮಿ, ಮಾದಾರ ಚನ್ನಯ್ಯ ಸ್ವಾಮಿ ಹಾಗೂ ರೇಣುಕಾನಂದ ಸ್ವಾಮೀಜಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಬರಗೂರು ನೇತೃತ್ವದ ಸಮಿತಿ ಪಠ್ಯ ಪರಿಷ್ಕರಣೆ ವೇಳೆ 27 ಸಮಿತಿಗಳಿದ್ದು, 172 ಜನ ವಿಷಯ ತಜ್ಞರು ಕೆಲಸ ಮಾಡಿದ್ದಾರೆಂದು ಕೇಳಿದ್ದೇವೆ. ಆದರೆ, ಸದ್ಯ ಮರುಪರಿಷ್ಕರಣೆಗೆ ಒಂದೇ ಸಮಿತಿಯನ್ನು ನೇಮಿಸಿದ್ದು ಅದರಲ್ಲಿ ಒಬ್ಬರ ಹೊರತಾಗಿ ಎಲ್ಲರೂ ಒಂದೇ ಜನಾಂಗಕ್ಕೆ ಸೇರಿದವರೆಂದು ತಿಳಿದುಬಂದಿದ್ದು ಇದು ಅನುಚಿತ. ಪಠ್ಯ ಪರಿಷ್ಕರಣೆ ಮಾಡುವ ವೇಳೆ ವಿಶೇಷವಾಗಿ ಹಿಂದುಳಿದ ವರ್ಗ ಮತ್ತು ದಲಿತ ವರ್ಗದವರಿಗೆ ಅನ್ಯಾಯ ಮಾಡಲಾಗಿದೆ ಎಂದು ಸ್ವಾಮೀಜಿಗಳು ಆರೋಪಿಸಿದ್ದಾರೆ.

ಕನ್ನಡ ಭಾಷಾ ಪಠ್ಯಗಳಿಂದ ಎಲ್ಲ ಹಿಂದುಳಿದ-ದಲಿತ ಬರಹಗಾರರ ಪಾಠಗಳನ್ನು ಕೈಬಿಡಲಾಗಿದ್ದು, ಬಹುಪಾಲು ಲೇಖಕಿಯರ ಪಾಠಗಳನ್ನು ತೆಗೆಯಲಾಗಿದೆ. ಕುವೆಂಪು ಅವರ 10 ಪಾಠ ಹಾಕಿದ್ದು ಸಂತೋಷದ ಸಂಗತಿ. ಹೀಗೆ ಮಾಡುವಾಗ ಹಿಂದುಳಿದ-ದಲಿತ ಬರಹಗಾರರ ಪಾಠಗಳಿಗೆ ಬದಲಾಗಿ ಹಾಕಲಾಗಿದ್ದು ಕುವೆಂಪು ಬದುಕಿದ್ದರೆ ಅವರೇ ಇದನ್ನು ಒಪ್ಪುತ್ತಿರಲಿಲ್ಲ. ಏಕೆಂದರೆ ಕುವೆಂಪು 'ಸರ್ವಜನಾಂಗದ ಶಾಂತಿಯ ತೋಟ'ದ ಪ್ರತಿಪಾದಕರಾಗಿದ್ದರು. ಕನ್ನಡ ಪಠ್ಯಗಳಲ್ಲಿ ಕುವೆಂಪು ಅವರ 10 ಪಾಠ ಹಾಕಿದ್ದಾಗಿ ಹೇಳುವವರು ಸಮಾಜ ವಿಜ್ಞಾನ ಪಠ್ಯದ ಏಕೀಕರಣ ಕುರಿತ ಪಾಠದಿಂದ ಕುವೆಂಪು ಭಾವಚಿತ್ರವನ್ನೇ ತೆಗೆದು ಹಾಕಿರುವುದು ಖಂಡನೀಯವಲ್ಲವೇ ಎಂದು ಸ್ವಾಮೀಜಿಗಳು ಪ್ರಶ್ನಿಸಿದ್ದಾರೆ.

ಹುಯಿಲಗೋಳ ನಾರಾಯಣರಾಯರು ಮತ್ತು ದಲಿತ ಸಂವೇದನೆಯ ಲೇಖಕ ದೇವನೂರ ಮಹಾದೇವ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರಗಳನ್ನು ತೆಗೆದದ್ದು ಖಂಡನೀಯವಲ್ಲವೇ? ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಮತ್ತು ಬುದ್ಧ ಗುರುವಿನ ಬಗ್ಗೆ ಇದ್ದ ಕನ್ನಡ ಪದ್ಯಗಳನ್ನು ಕಿತ್ತು ಹಾಕಲಾಗಿದ್ದು ಸರಿಯೇ? ಸಮಾಜ ವಿಜ್ಞಾನ ಪಠ್ಯಗಳಲ್ಲಿ ಹಿಂದುಳಿದ ಮತ್ತು ದಲಿತ ಸಾಧಕರಿಗೆ ಸಾಕಷ್ಟು ಅನ್ಯಾಯ ಮಾಡಲಾಗಿದೆ. ಅಂಬೇಡ್ಕರ್ ಅವರಿಗಿದ್ದ ಸಂವಿಧಾನ ಶಿಲ್ಪಿ' ಎಂಬ ಬಿರುದು ತೆಗೆಯುವ ಮೂಲಕ ಈ ಅನ್ಯಾಯ ಆರಂಭವಾಗಿದೆ ಎಂದು ಅವರು ದೂರಿದ್ದಾರೆ.

ನಾರಾಯಣ ಗುರು ಮಾತ್ರವಲ್ಲ 7ನೇ ಮತ್ತು 9ನೇ ತರಗತಿಗಳ ಸಮಾಜ ವಿಜ್ಞಾನ ಪಠ್ಯಗಳಲ್ಲಿದ್ದ ಕನಕ ದಾಸರ ಪಾಠವನ್ನು ತೆಗೆದು ಹಾಕಲಾಗಿದೆ. ಕನಕದಾಸರ ಪಾಠದ ಜೊತೆಗಿದ್ದ ಭಕ್ತಿ ಪಂಥದ ಅಕ್ಕಮಹಾದೇವಿ, ಶಿಶುನಾಳ ಶರೀಫ ಮತ್ತು ಪುರಂದರ ದಾಸರ ಪಾಠಗಳಿಗೂ ಪೂರ್ಣ ಕತ್ತರಿ ಹಾಕಲಾಗಿದ್ದು ಇದು ಭಕ್ತಿ ಪರಂಪರೆಗೆ ಮಾಡಿದ ಅನ್ಯಾಯ, ಸಮಾಜ ವಿಜ್ಞಾನದಲ್ಲಿದ್ದ ಸಾವಿತ್ರಿ ಬಾಯಿಫುಲೆ ಪಾಠವನ್ನು ತೆಗೆದು ಹಾಕಿದ್ದು ಇದು ದಲಿತ ಲೋಕದ ಧ್ರುವತಾರೆಗೆ ಮಾಡಿದ ಅನ್ಯಾಯ. ಒಟ್ಟಾರೆ ಪರಿಷ್ಠತ ಪಠ್ಯದಲ್ಲಿ ಅವೈದಿಕ ವಲಯದ ವಿಚಾರಗಳನ್ನು ಮತ್ತು ಸಾಧಕರನ್ನು ಕಡೆಗಣಿಸಲಾಗಿದೆ' ಎಂದು ಸ್ವಾಮೀಜಿಗಳು ಆಪಾದಿಸಿದ್ದಾರೆ.

ನಾವು ಇಲ್ಲಿ ಪಟ್ಟಿ ಮಾಡಿರುವುದು ಸಾಂಕೇತಿಕ ಪಠ್ಯ ಮರುಪರಿಷ್ಕರಣೆ ತುಂಬಾ ಅಸಮತೋಲನಕ್ಕೆ ಕಾರಣವಾಗಿ ರುವುದು ಗೊತ್ತಾಗುತ್ತದೆ. ಹಿಂದುಳಿದ ಮತ್ತು ದಲಿತ ಚೇತನಗಳಿಗೆ ಅನ್ಯಾಯ ಮಾಡಲಾಗಿದೆ. ಸಂವಿಧಾನಾತ್ಮಕ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ. ಮರುಪರಿಷ್ಕರಣೆ ಆಕ್ಷೇಪ ಎತ್ತಿದವರ ಮೇಲೆ ಪ್ರತ್ಯಾರೋಪ ಮಾಡುವ ಬದಲು ಪ್ರಜಾಸತ್ತಾತ್ಮಕವಾಗಿ ಪರ್ಯಾಲೋಚನೆ ಮಾಡಬೇಕು. ಹೀಗಾಗಿ ಪಠ್ಯ ಮತ್ತು ಪರಿಷ್ಕರಣೆ ಹಿಂಪಡೆಯಬೇಕು ಎಂದು ಸ್ವಾಮೀಜಿಗಳು ಸಿಎಂಗೆ ಮನವಿ ಮಾಡಿದ್ದಾರೆ.

Read These Next

ಕೊಡಗಿನಲ್ಲಿ ಮುಂದುವರಿದ ಭಾರೀ ಮಳೆ; ಹಲವೆಡೆ ರಸ್ತೆ ಸಂಪರ್ಕ ಕಡಿತ: ಜನಜೀವನ ಅಸ್ತವ್ಯಸ್ತ

ಕೊಡಗು ಜಿಲ್ಲೆಯಲ್ಲಿ ಆಶ್ಲೇಷಾ ಮಳೆ ಆತಂಕವನ್ನು ಸೃಷ್ಟಿಸಿದೆ. ಕಳೆದ ಎರಡು ದಿನಗಳಿಂದ ಮಳೆ ತೀವ್ರತೆಯನ್ನು ಪಡೆದುಕೊಂಡಿದ್ದು, ರೆಡ್ ...

ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ; ಪ್ರಥಮ ರೆಂಕ ಅಭ್ಯರ್ಥಿ ಸಹಿತ ಎಂಟು ಮಂದಿ ಸೆರೆ

ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಲಿಖಿತ ಪರೀಕ್ಷೆಯಲ್ಲಿ ಮೊದಲನೇ ರೇಂಕ್ ಬಂದಿದ್ದ ಅಭ್ಯರ್ಥಿ ಸೇರಿ ಎಂಟು ಮಂದಿಯನ್ನು ಸಿಐಡಿ ...

ಎದೆಹಾಲು ಮಕ್ಕಳಿಗೆ ಅಮೃತ ಸಮಾನ : ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ - ಡಾ.ಟಿ.ಎ. ಶೇಪೂರ

ಧಾರವಾಡ : ಎದೆಹಾಲು ಮಕ್ಕಳಿಗೆ ಅಮೃತ ಸಮಾನ. ಪ್ರತಿ ತಾಯಿಯು ತನ್ನ ಮಗುವಿಗೆ ತಪ್ಪದೇ ಎದೆಹಾಲು ಉಣಿಸಬೇಕು. ಇದರಿಂದ ಮಗುವಿನಲ್ಲಿ ...

ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ. ಆಗಸ್ಟ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸಚಿವ ಸಿ.ಸಿ.ಪಾಟೀಲ್ ಸೂಚನೆ

ಬಳ್ಳಾರಿ : ಶಾಸಕರ ಅನುದಾನದ ಕಾಮಗಾರಿಗಳು, ಎಚ್‍ಎಸ್‍ಡಿಪಿ, ಎಸ್‍ಸಿಪಿ-ಟಿಎಸ್‍ಪಿ ಸೇರಿದಂತೆ ಇಲಾಖೆಗೆ ನಿಗದಿಯಾಗಿರುವ ಎಲ್ಲಾ ಬಾಕಿ ...