ಭಟ್ಕಳ: ಗರ್ಭಿಣಿ ಮಹಿಳೆಯಲ್ಲಿ ಕೋವಿಡ್-19 ಸೋಂಕು ಪತ್ತೆ; ಗಲ್ಫ್ ರಿಟನ್ ಪತಿಯಲ್ಲಿಲ್ಲದ ಸೋಂಕು ಪತ್ನಿಗೆ

Source: sonews | By Staff Correspondent | Published on 8th April 2020, 3:14 PM | Coastal News |

ಭಟ್ಕಳ: ಗಲ್ಫ್ ನಿಂದ ಮರಳಿದ ವ್ಯಕ್ತಿಯಲ್ಲಿರದ ಕೋವಿಡ್ -19 ಸೋಂಕು, ಆತನ 26 ವರ್ಷದ ಗರ್ಭಿಣಿ ಪತ್ನಿಯಲ್ಲಿ ಕಾಣಿಸಿಕೊಂಡಿದ್ದು ಭಟ್ಕಳದ ಜನರಲ್ಲಿ ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ.

ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖ ರಾಗಿದ್ದಾರೆ ಎಂಬ ಶುಭ ಸಮಾಚಾರವನ್ನು  ಮಂಗಳವಾರದಂದು ಉ.ಕ.ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ನೀಡಿದ್ದು ಈ ಮಹಾಮಾರಿಯಿಂದ ಭಟ್ಕಳದ ಜನತೆ ಬಹುಬೇಗನೆ ಮುಕ್ತಿ ಪಡೆಯುತ್ತಾರೆಂಬ ಭರವಸೆಗೆ ತಣ್ಣೀರೆರಚಿದಂತಾಗಿದೆ.

ಜಿಲ್ಲೆಯಲ್ಲಿ ಭಟ್ಕಳ ಬಿಟ್ಟರೆ ಮತ್ತೇಲ್ಲೋ ಈ ಮಹಾಮಾರಿ ಇದುವರೆಗೂ ಕಾಣಿಸಿಕೊಂಡಿಲ್ಲ. ಹಾಗೆ ಸೋಂಕಿತರ ಸಂಪರ್ಕ ಇರುವವರಲ್ಲಿ ಮಾತ್ರ ಕಾಣಿಸಿತ್ತು. ಆದರೆ ಬುಧವಾರದಂದು ಬೆಳಕಿಗೆ ಬಂದಿರುವ ಹೊಸ ಪ್ರಕರಣವೊಂದು ಮತ್ತಷ್ಟು ಸವಾಲುಗಳನ್ನು ಹುಟ್ಟುಹಾಕಿದೆ. ಗಲ್ಫ್ ನಿಂದ ಮರಳಿದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಂಡಿರುವ ಈ ಸೋಂಕು ಭಟ್ಕಳದ ಸ್ಥಳಿಯರಲ್ಲಿ  ಯಾರಲ್ಲಿಯೂ ಕಾಣಿಸಿಕೊಂಡಿದ್ದಿಲ್ಲ. ಸೋಂಕಿತ ವ್ಯಕ್ತಿಯ ಕುಟುಂಬದ ಒಂದಿಬ್ಬರಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಉಳಿದಂತೆ ದುಬೈ ರಿಟನ್ ಜನರೇ ಈ ಮಹಾಮಾರಿಯ ಕ್ಯಾರಿಯರ್ ಆಗಿದ್ದರು. ಆದರೆ ಇದೊಂದು ಹೊಸ ರೀತಿಯ ಪ್ರಕಣವಾಗಿದ್ದು ಈ ಕುರಿತಂತೆ ಬಾಧಿತ ಮಹಿಳೆಯ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೆ ಎನ್ನುವುದರ ಕುರಿತಂತೆ ಜಿಲ್ಲಾಢಳಿತ ಹುಡುಕಾಟದಲ್ಲಿ ತೊಡಗಿದೆ.

ಬುಧವಾರದಂದು ಸೋಂಕು ದೃಡಪಟ್ಟಿರುವ ಮಹಿಳೆಗೆ ಇಬ್ಬರು ಮಕ್ಕಳು ಇದ್ದು, ಈಕೆಯ ಪತಿ ದುಬೈನಿಂದ ವಾಪಸ್ಸಾದವನಾಗಿದ್ದಾನೆ. ಆದರೆ, ಪತಿಯ ಗಂಟಲು ಪರೀಕ್ಷೆಯ ವರದಿ ನೆಗೆಟಿವ್ ಆಗಿದ್ದು ಪತ್ನಿಯ ವರದಿ ಪಾಸಿಟಿವ್ ಬಂದ ನಂತರ ಮತ್ತೊಮ್ಮೆ  ಪತಿಯ ಗಂಟಲು ದ್ರವನ್ನು ಪರೀಕ್ಷೆಗೆಂದು ಶಿವಮೊಗ್ಗ ರವಾನಿಸಲಾಗಿದೆ  ಎಂಬ ಮಾಹಿತಿ ಲಭ್ಯವಾಗಿದೆ.

ವಿವರ: ದುಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಈಕೆಯ ಪತಿ, ಮಾರ್ಚ್ 17ರಂದು ಮುಂಬೈಗೆ ವಿಮಾನದ ಮೂಲಕ ಬಂದಿಳಿದಿದ್ದ. ಮುಂಬೈನಲ್ಲಿ ಸುಮಾರು ನಾಲ್ಕು ದಿನ ಉಳಿದಿದ್ದ ಈತ, ಆನಂತರ ರೈಲಿನಲ್ಲಿ ಭಟ್ಕಳಕ್ಕೆ ಬಂದಿದ್ದ. ಭಟ್ಕಳ ರೈಲು ನಿಲ್ದಾಣದಿಂದ ಸ್ನೇಹಿತನ ಬೈಕ್ ನಲ್ಲಿ ಮನೆಗೆ ತೆರಳಿದ್ದ. ದುಬೈನಿಂದ ಬಂದವನಾಗಿದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಈತನ ಕೈಗೆ ಹೋಂ ಕ್ವಾರಂಟೈನ್ ಮುದ್ರೆ ಹಾಕಿದ್ದರು. ಮಾ.31ರಂದು ಗರ್ಭಿಣಿ ಪತ್ನಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಆಕೆಯನ್ನು ಈತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ.

ಆದರೆ, ಆಸ್ಪತ್ರೆಯ ಸಿಬ್ಬಂದಿ ಪತಿಯ ಕೈ ಮೇಲೆ ಕ್ವಾರಂಟೈನ್ ಮುದ್ರೆ ಇರುವುದನ್ನು ಗಮನಿಸಿ ವೈದ್ಯರ ಗಮನಕ್ಕೆ ತಂದಿದ್ದಾರೆ. ನಂತರ ಇಬ್ಬರನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಈ ವೇಳೆ ಪತ್ನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪತಿಯ ವರದಿ ನೆಗೆಟಿವ್ ಬಂದಿದೆ. ಇದೀಗ ಪತಿಯ ಗಂಟಲಿನ ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಸೋಂಕಿತ ಗರ್ಭಿಣಿ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. ಇನ್ನೊಮ್ಮೆ ಕಳುಹಿಸಲಾದ ಪತಿಯ ಗಂಟಲಿನ ದ್ರವದ ಮಾದರಿಯ ವರದಿ ಬರಬೇಕಿದ್ದು, ಅಲ್ಲಿಯವರೆಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿಡಲಾಗಿದೆ.ಗರ್ಭಿಣಿಯ ಪತಿಯ ದೇಹದಲ್ಲಿ ಕೊರೋನಾ ವೈರಾಣು ಇದ್ದು, ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದರಿಂದ ಅದು ಆತನಲ್ಲಿ ಕಾಣಿಸಿಕೊಳ್ಳದೇ ಇರಬಹುದು ಅಥವಾ ಆತನಲ್ಲಿದ್ದ ವೈರಾಣು ನಾಶವಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆತ 14 ದಿನಗಳ ಕ್ವಾರಂಟೈನ್ ಪೂರೈಸಿದ ಬಳಿಕ ಪತ್ನಿಯೊಂದಿಗೆ ಸಂಪರ್ಕ ಹೊಂದಿದ್ದು, ಈ ವೇಳೆ  ಆಕೆಗೆ ಸೋಂಕು ತಗುಲಿರುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ.

ಗರ್ಭಿಣಿ ಮಹಿಳೆಯು ಇಲ್ಲಿನ ವಿವಿಧ ಆಸ್ಪತ್ರೆಗಳಲ್ಲಿ ದೈನಂದಿನ ಚೆಕ್ಅಪ್ ಮಾಡಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದು ಆ ಮಹಿಳೆಯ ಯಾರೆಲ್ಲ ಮಹಿಳೆಯರೊಂದಿಗೆ ಅಥವಾ ವೈದ್ಯರೊಂದಿಗೆ ಸಂಪರ್ಕಿಸಿದ್ದರು ಎನ್ನುವ ಕುರಿತಂತೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.

Read These Next