ಭಟ್ಕಳದಲ್ಲಿ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ ಕೆಸರಾದ ರಸ್ತೆಗಳು, ತಗ್ಗು ಪ್ರದೇಶಗಳಿಗೆ ಹರಿದ ನೀರು

Source: S O News service | Published on 15th June 2021, 1:10 AM | Coastal News |

ಭಟ್ಕಳ: ತಾಲೂಕಿನಲ್ಲಿ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ರವಿವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆ 8 ಗಂಟೆಯ ಅವಧಿಯಲ್ಲಿ 74ಮಿಮೀ. ಮಳೆ ದಾಖಲಾಗಿದ್ದು, ಇದರೊಂದಿಗೆ ಜೂನ್ 2 ವಾರ ಕಳೆಯುವುದರ ಒಳಗೆ ಒಟ್ಟೂ ಮಳೆಯ ಪ್ರಮಾಣ ( 1058.8ಮಿಮೀ) 1000ಮೀಮೀ. ದಾಟಿದೆ.

ತಾಲೂಕಿನಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹೊಳೆ, ಹಳ್ಳಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಭಟ್ಕಳದ ಜೀವ ನದಿ ಕಡವಿನಟ್ಟೆ ಹೊಳೆಗೆ ಜೀವ ಕಳೆ ಬಂದಿದೆ. ತಾಲೂಕಿನಲ್ಲಿ ರಸ್ತೆಯ ಮೇಲೆ ನೀರು ಹರಿದು ಹೋಗುತ್ತಿದ್ದು, ಅಲ್ಲಲ್ಲಿ ರಸ್ತೆಗಳು ಕೆಸರು ಗುಂಡಿಯಾಗಿ ಪರಿವರ್ತನೆ ಹೊಂದಿವೆ. ಕೆಲವೆಡೆ ಪಾದಚಾರಿಗಳು ರಸ್ತೆಯಲ್ಲಿ ನಡೆದಾಡಲೂ ಕಷ್ಟ ಪಡುತ್ತಿರುವುದು ಕಂಡು ಬಂದಿದೆ. ಭಟ್ಕಳ ಪಟ್ಟಣ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಬಿದ್ದ ಮಳೆಗೆ ರಸ್ತೆಯಲ್ಲಿ ಮಣ್ಣು ಕುಸಿದು ಹೊಂಡಗಳನ್ನು ಸೃಷ್ಟಿಸಿದೆ. ಪರಿಣಾಮವಾಗಿ ಪಾದಚಾರಿಗಳು ಮಾತ್ರವಲ್ಲ, ವಾಹನ ಸವಾರರೂ ನೆಲಕ್ಕೆ ಬೀಳುವ ಆತಂಕವನ್ನು ಎದುರಿಸುತ್ತಿದ್ದಾರೆ. 

ಮಳೆಯಿಂದಾಗಿ ಪೇಟೆಗೆ ಬಂದವರಿಗೆ ಕಿರಿಕಿರಿ:
ಸೋಮವಾರ ಬೆಳಿಗ್ಗೆಯಿಂದಲೇ ಮಳೆ ಸುರಿದಿದ್ದು, ಲಾಕ್‍ಸಡಿಲಿಕೆ ಹಿನ್ನೆಲೆಯಲ್ಲಿ ಅವಶ್ಯಕ ವಸ್ತುಗಳ ಖರೀದಿಗೆ ಪೇಟೆಗೆ ಬಂದವರು ಕಿರಿಕಿರಿ ಅನುಭವಿಸಿದರು. ಪೇಟೆಯ ತುಂಬೆಲ್ಲ ಕೊಡೆ, ರೇನ್‍ಕೋಟ್‍ಗಳೇ ಕಂಡು ಬಂದವು. ಖರೀದಿಸಿದ ದಿನಸಿಗಳನ್ನು ನೀರು ತಾಕಿಸದೇ ಮನೆಗೆ ಕೊಂಡೊಯ್ಯಲು ಜನರು ಹೆಣಗಾಡುತ್ತಿದ್ದುದು ಕಂಡು ಬಂತು. ಮಳೆ ಬಿಡುವಿನ ನಿರೀಕ್ಷೆಯಲ್ಲಿದ್ದವರು ನೀರಿನಲ್ಲಿ ನೆನೆದುಕೊಂಡು ಓಡಾಡುತ್ತಿದ್ದರು. 

ಕೃಷಿ ಚಟುವಟಿಕೆ ಚುರುಕು:  
ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿದೆ. ನಾಟಿ ಕೆಲಸಕ್ಕಾಗಿ ಗದ್ದೆಗಳನ್ನು ಹದಗೊಳಿಸುವ ಕಾರ್ಯದಲ್ಲಿ ರೈತರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂದಿನ ಒಂದು ವಾರ ಇದೇ ರೀತಿ ಮಳೆ ಸುರಿದರೆ ನಾಟಿ ಕಾರ್ಯಕ್ಕೂ ಚಾಲನೆ ಸಿಗಲಿದೆ. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...