ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ; ಸಂವಿಧಾನದತ್ತವಾದ ಕರ್ತವ್ಯಗಳನ್ನು ನಿರ್ವಹಿಸುತ್ತ ಹಕ್ಕುಗಳನ್ನು ಪಡೆಯಬೇಕು

Source: S O News | By I.G. Bhatkali | Published on 27th November 2022, 1:04 AM | Coastal News |

ಭಟ್ಕಳ: ಅಂಬೇಡ್ಕರ್ ಮೊದಲಾದ ಅನೇಕ ತಜ್ಞರು, ನಾನಾ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ರಚಿಸಿದ ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಮತ್ತು ಬೃಹತ್ತಾದ ಸಂವಿಧಾನವಾಗಿದೆ. ಈ ಸಂವಿಧಾನ ಕೊಡಮಾಡಿದ ಹಕ್ಕುಗಳ ಮೂಲಕ ನಾವು ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ನಮ್ಮ ಸ್ವಾತಂತ್ರ್ಯವನ್ನು ಅನುಭವಿಸುತ್ತ ನೆಮ್ಮದಿಯ ಬದುಕು ಸಾಗಿಸಬಹುದು. ಇದಕ್ಕೆ ಮೂಲಭೂತವಾಗಿ ಸಂವಿಧಾನದ ಅರಿವು ಇರಬೇಕಾಗುತ್ತದೆ. ಕೇವಲ ಹಕ್ಕುಗಳ ಬಗ್ಗೆ ಮಾತ್ರ ಅರಿವಿದ್ದರೆ ಸಾಲದು, ದೇಶದ ಪ್ರಜೆಯಾದ ನಮಗೆ ನಮ್ಮ ಜವಾಬ್ದಾರಿಗಳ ಅರಿವೂ ಇರಬೆಕಾಗುತ್ತದೆ ಎಂದು ಶಿರಾಲಿಯ ಜನತಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ರವಿ ಕುಂಬಾರ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶ್ರೀ ರವಿ ಕುಂಬಾರ್ ಸ್ಥಳೀಯ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡ ಸಂವಿಧಾನ ದಿನಾಚರಣೆಯ ಮುಖ್ಯ ಅತಿಥಿಯಾಗಿದ್ದು, ಈ ಮೇಲಿನಂತೆ ಕರೆನೀಡಿದರು. ಸಂವಿಧಾನ ದಿನಾಚರಣೆಯ ಮಹತ್ವವನ್ನು ಹೇಳುತ್ತಲೇ ಸಂವಿಧಾನ ರಚನೆಯ ಸಂದರ್ಭದಲ್ಲಿ ಬೇರೆ ಬೇರೆ ವಿದ್ವಾಂಸರುಗಳು ನಾನಾ ಕಾರಣಗಳಿಂದ ಹಿಂದೆ ಸರಿದರೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮಾತ್ರ ಒಂದು ವೃತದಂತೆ ಸಂವಿಧಾನ ರಚನೆಯಲ್ಲಿ ಸಂಪೂರ್ಣ ತಮ್ಮನ್ನು ಅರ್ಪಿಸಿಕೊಂಡು ವಿಶ್ವದ ಅನೇಕ ಕಾನೂನು ತಜ್ಞರು ಮೆಚ್ಚಿಕೊಳ್ಳುವಂತೆ ಸಂವಿಧಾನ ರಚಿಸಿದ್ದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮುಸ್ತಾಕ್ ಕೆ. ಶೇಖ್ ಅವರು ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ಸುವ್ಯವಸ್ಥಿತವಾದ ಸಂವಿಧಾನವಾಗಿದೆ. ಈ ಸಂವಿಧಾನದ ಬಲದಿಂದ ಎಲ್ಲರಿಗೂ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸುತ್ತ ನೆಮ್ಮದಿಯಿಂದ ಬದುಕಲವಕಾಶವಿದೆ. ಆದರೆ ಆಳುವ ವರ್ಗ ಸಂವಿಧಾನವನ್ನು ಗಾಳಿಗೆ ತೂರಿ ತಳವರ್ಗದವರು, ದೀನತಲಿತರು, ಮಹಿಳೆಯರು ನೆಮ್ಮದಿಯಿಂದ ಬದುಕಲು ಪರಿದಾಡುವಂತೆ ಮಾಡುತ್ತಿದ್ದಾರೆ. ಜಾತ್ಯತೀತ ರಾಷ್ಟ್ರದಲ್ಲಿ ಹೆಜ್ಜೆಹೆಜ್ಜೆಗೂ ಜಾತಿ ಧರ್ಮದ ಕಾರಣಕ್ಕಾಗಿ ಕಲಹಗಳು ನಡೆಯುತ್ತಲಿವೆ, ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಆಳುವವರನ್ನು ವಿರೋಧಿಸುತ್ತಾರೆ ಎಂಬ ಏಕೈಕ ಕಾರಣಕ್ಕಾಗಿ ಹೋರಾಟಗಾರರನ್ನು ಜೈಲಿಗೆ ತಳ್ಳುವುದು ಹೆಚ್ಚುತ್ತಲಿದೆ. ಅಧಿಕಾರಶಾಹಿಯ ದರ್ಪದಿಂದಾಗಿ ಜೈಲಿನಲ್ಲಿ ಕೊಳೆಯುತ್ತಿರುವ ಸಾಮಾಜಿಕ ಹೊರಾಟಗಾರರಿಗೆ ಜಾಮೀನು ಸಹ ಸಿಗದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. 

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ಆರ್. ಎಸ್. ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಎಸ್. ಎ. ಇಂಡಿಕರ್, ಡಾ. ವಿನಾಯಕ ಕಾಮತ್ ಉಪಸ್ಥಿತರಿದ್ದರು. ಆರಂಭದಲ್ಲಿ ಕುಮಾರ ಮಾವಿಯಾ ಪ್ರಾರ್ಥಿಸಿದರೆ, ಕುಮಾರಿ ರೂಪಾ ಆಚಾರ್ಯ ಸರ್ವರನ್ನೂ ಸ್ವಾಗತಿಸಿದಳು. ಕೊನೆಯಲ್ಲಿ ಕುಮಾರಿ ವಿದ್ಯಾ ವಂದಿಸಿದರು. ಪ್ರಿಯಾ ಸುಬ್ಬುಮನೆ ಅತಿಥಿಗಳನ್ನು ಪರಿಚಯಿಸಿದರು. ಪೂಜಾ ನಾಯ್ಕ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳಾದ ವಸಂತಿ ನಾಯ್ಕ ಮತ್ತು ಪೂಜಾ ನಾಯ್ಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಎಂದಿನಂತೆ ಎನ್.ಎಸ್.ಎಸ್. ಘಟಕದ ಸ್ವಯಂ ಸೇವಕರು ಎಲ್ಲ ರೀತಿಯ ನೆರವು ನೀಡಿದರು.

Read These Next

ಪಾತಾಳಕ್ಕೆ ಕುಸಿದ ವ್ಯಕ್ತಿಯನ್ನು ಮೇಲೆತ್ತುವ ಸಾಮರ್ಥ್ಯ ಗುರುವಿಗೆ:ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಪಾತಾಳಕ್ಕೆ ಕುಸಿದ ವ್ಯಕ್ತಿಯನ್ನು ಮೇಲೆತ್ತುವ ಸಾಮರ್ಥ್ಯ ಗುರುವಿಗೆ:ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಜನಸಾಮಾನ್ಯರ ಮಕ್ಕಳೂ ಕೂಡಾ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಗುರಿ:ಸಚಿವ ಕೋಟ ಶ್ರೀನಿವಾಸ ಪೂಜಾರಿ

ಜನಸಾಮಾನ್ಯರ ಮಕ್ಕಳೂ ಕೂಡಾ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಗುರಿ:ಸಚಿವ ಕೋಟ ಶ್ರೀನಿವಾಸ ಪೂಜಾರಿ