ಭಟ್ಕಳ ಅಂಜುಮನ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Source: S O News Service | By I.G. Bhatkali | Published on 26th November 2020, 8:33 PM | Coastal News |

ಭಟ್ಕಳ : ನಮ್ಮ ಹಕ್ಕುಗಳನ್ನು ಪಡೆಯಲು ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಸಂವಿಧಾನದ ಅರಿವು ಅಗತ್ಯವೆಂದು ಭಟ್ಕಳದ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಭಾಗೀರಥಿ ನಾಯ್ಕ ಹೇಳಿದರು. ಅವರು ಭಟ್ಕಳದ ಪ್ರತಿಷ್ಠಿತ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಹಮ್ಮಿಕೊಂಡ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ, ಭಾರತೀಯ ಸಂವಿಧಾನದ ಬಗ್ಗೆ ಮಾತನಾಡುತ್ತ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸ್ಥೂಲ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು. ಭಾರತೀಯರಾದ ನಮಗೆ ಎಲ್ಲ ಧರ್ಮಗ್ರಂಥಗಳಿಗಿಂತ ಸಂವಿಧಾನ ಅತ್ಯಂತ ಪವಿತ್ರವಾಗಿದ್ದು ನಾವೆಲ್ಲ ಅತ್ಯಂತ ಗೌರವಯುತವಾಗಿ ಅದರ ಆಶಯಗಳನ್ನು ಇಡೇರಿಸಬೇಕೆಂದು ಹೇಳಿದರು.

ಕಾಲೇಜಿನ ಹಿರಿಯ ಉಪನ್ಯಾಸಕರಾದ ಪ್ರೊ. ಎಂ. ಎಂ. ಜಮಾದಾರ್, ಮಾತನಾಡುತ್ತ ಈ ದೇಶ ನಮಗೇನು ಕೊಟ್ಟಿದೆ ಎಂಬುದಕ್ಕಿಂತ ಈ ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಂಡು ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲ ಕೈಜೋಡಿಸಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಮುಸ್ತಾಕ್ ಕೆ. ಶೇಖ ಸಂವಿಧಾನ ಇಲ್ಲದಿದ್ದರೆ ದಲಿತರು, ತಳವರ್ಗದವರು, ಮಹಿಳೆಯರು, ದುರ್ಬಲರು ಬದುಕುವುದು ಕಷ್ಟವಾಗುತ್ತಿತ್ತು ಎನ್ನುತ್ತ ಸಂವಿಧಾನವು ಎಲ್ಲರಿಗೂ ಯಾವುದೇ ತಾರತಮ್ಯವಿಲ್ಲದೆ ಆತ್ಮಾಭಿಮಾನದಿಂದ ಬದುಕುವ ಹಕ್ಕನ್ನು ನೀಡಿದೆ ಎಂದು ತಿಳಿಸಿದರು.

ಎನ್ನೆಸ್ಸೆಸ್ ಘಟಕದ ಸಂಯೋಜನಾಧಿಕಾರಿ ಪ್ರೊ. ಆರ್. ಎಸ್. ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರೆ, ವಿದ್ಯಾರ್ಥಿ ಶೌಕತ್ ಅಲಿ ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಸಂವಿಧಾನದ ಪೀಠಿಕೆಯ ವಾಚನವನ್ನು ಪ್ರೊ. ಪರಶುರಾಮ ಅಚ್ಚುಕಟ್ಟಾಗಿ ನಿರ್ವಹಿಸಿದರು. ಪ್ರೊ. ದಾಮೋದರ ನಾಯ್ಕ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ವಿದ್ಯಾರ್ಥಿ ರೋಹಿತ ನಾಯ್ಕ ವಂದಿಸಿದರು. 

Read These Next

ಮುಂಡಗೋಡ: ಡಾ. ಅಂಬೇಡ್ಕರ ಅಸ್ಪøಶ್ಯರಿಗೆ ಪ್ರತ್ಯೇಕವಾದ ಮತದಾನದ ಹಕ್ಕು ಹಾಗೂ ಪ್ರತ್ಯೇಕ ಮತಕ್ಷೇತ್ರ ಕೇಳಿದ್ದರು

ಜನ ಸಂಖ್ಯಾಧಾರಿತ ಮೇಲೆ ಮೀಸಲಾತಿಯನ್ನು ಹೆಚ್ಚಿಸಬೇಕು. ಮೀಸಲಾತಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರದ ಪ್ರಮುಖ ...