“ಸೊಲನೇಸಿ ತರಕಾರಿ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ”

Source: sonews | By Staff Correspondent | Published on 4th August 2020, 7:35 PM | State News |

ಕೋಲಾರ; ತರಕಾರಿ ಬೆಳೆಯಲು ಪ್ರಸಿದ್ಧಿ ಹೊಂದಿದ್ದು, ಈಗ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ಈ ಅವಧಿಯಲ್ಲಿ ತರಕಾರಿ ಬೆಳೆಗಳಿಗೆ ಬರುವಂತಹ ರೋಗಗಳ ಸಮಗ್ರ ನಿರ್ವಹಣೆಯ ಕುರಿತು ರೈತರಲ್ಲಿ ಅರಿವು ಮೂಡಿಸುವ ಅಂತರ್ಜಾಲ ಕಾರ್ಯಾಗಾರವನ್ನು ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ  ದಿನಾಂಕ 04.08.2020 ರಂದು “ಸೊಲನೇಸಿ ತರಕಾರಿ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ” ಬಗ್ಗೆ ಆಯೋಜಿಸಲಾಗಿತ್ತು.  

ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಸಸ್ಯ ರೋಗಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಎನ್. ನಾಗರಾಜ್‍ರವರು ಮಾತನಾಡಿ ಸೊಲನೇಸಿ ತರಕಾರಿ ಬೆಳೆಗಳಲ್ಲಿ ಬರುವಂತಹ ಮುಖ್ಯವಾದ ರೋಗಗಳಾದ ಮೊದಲ ಅಂಗಮಾರಿ ರೋಗ, ಕೊನೆಯ ಅಂಗಮಾರಿ ರೋಗ, ದುಂಡಾಣು ಸೊರಗು ರೋಗ, ಶಿಲೀಂದ್ರದಿಂದ ಬರುವ ಸೊರಗು ರೋಗ, ನಂಜಾಣುವಿನಿಂದ ಮತ್ತು ಜಂತುಹುಳುವಿನಿಂದ ಬರುವ ರೋಗಗಳ ಬಗ್ಗೆ ಮತ್ತು ರೋಗಾಣುಗಳ ಹಾಗೂ ಅವುಗಳ ಹರಡುವಿಕೆ ಬಗ್ಗೆ ಮಾಹಿತಿ ನೀಡಿದರು

ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಅವುಗಳೆಂದರೆ ಸ್ವಚ್ಚ ಬೇಸಾಯ ಕೈಗೊಳ್ಳುವುವದು, ತಾಕುವಿನ ಸುತ್ತಲೂ ಮೆಕ್ಕೆ ಜೋಳವನ್ನು ತಡೆಬೆಳೆಯಾಗಿ ಬೆಳೆಯವುದು, ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನು ಬಳಸುವುದು. ಜೈವಿಕ ಪೀಡೆ ನಾಶಕಗಳಿಂದ ಮಣ್ಣನ್ನು ಉಪಚರಿಸುವುದರಿಂದ ಮಣ್ಣಿನಿಂದ ಬರುವಂತಹ ರೋಗಗಳನ್ನು ತಡೆಯಲು, ಬಲೆ ಬೆಳೆಯಾಗಿ 16 ಸಾಲಿನ ಮುಖ್ಯ ಬೆಳೆಯಲ್ಲಿ 1 ಸಾಲಿನಂತೆ ಚೆಂಡು ಹೂವನ್ನು ಬೆಳೆಯುವುದು, ಕಳೆ ಸಸಿಗಳನ್ನು ಕಿತ್ತು ಹಾಕುವುದು, ಬೆಳೆ ಪರಿವರ್ತನೆ ಮಾಡುವುದು, ಸ್ಪರ್ಶ ಮತ್ತು ಅಂತರ್‍ವ್ಯಾಪಿ ಶಿಲೀಂದ್ರ ನಾಶಕಗಳ ಬಳಕೆಯ ಬಗ್ಗೆ, ಭಾರತೀಯ ತೊಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಮ್ ಉಪಯೋಗ ಮತ್ತು ಬಳಕೆಯ ಬಗ್ಗೆ ವಿವರಿಸಿದರು.

ಅಂತರ್ಜಾಲ ಕಾರ್ಯಾಗಾರದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಂದೇಹವನ್ನು ನಿವಾರಿಸಿಕೊಂಡರು. ಡಾ. ಅಂಬಿಕಾ ಡಿ.ಎಸ್, ವಿಜ್ಞಾನಿ (ಸಸ್ಯ ಸಂರಕ್ಷಣೆ) ಕಾರ್ಯಾಗಾರವನ್ನು ಸಂಯೋಜಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಕೆ. ತುಳಸಿರಾಮ್, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಡಾ. ಅನಿಲ್‍ಕುಮಾರ್ ಎಸ್, ವಿಜ್ಞಾನಿ (ಮಣ್ಣು ವಿಜ್ಞಾನ), ಡಾ. ಜ್ಯೋತಿ ಕಟ್ಟೆಗೌಡರ್, ವಿಜ್ಞಾನಿ (ತೋಟಗಾರಿಕೆ), ಡಾ. ಶಶಿಧರ್ ಕೆ.ಆರ್, ವಿಜ್ಞಾನಿ (ರೇಷ್ಮೆ ಕೃಷಿ), ಡಾ. ಚಿಕ್ಕಣ್ಣ ಜಿ.ಎಸ್, ವಿಜ್ಞಾನಿ (ಗೃಹ ವಿಜ್ಞಾನ), ಸ್ವಾತಿ ಜಿ.ಆರ್, ಕೃಷಿ ಹವಾಮಾನ ತಜ್ಞೆ ಭಾಗವಹಿಸಿದ್ದರು. 

 ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next