ಬೆಂಗಳೂರು: ನಮ್ಮ ನಿರೀಕ್ಷೆಗೂ ಮೀರಿ ಸೋಂಕು ಹಬ್ಬುತ್ತಿದೆ : ಸುಧಾಕರ್ ಆತಂಕ

Source: VB | By S O News | Published on 19th April 2021, 5:05 PM | State News |

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಮಿತಿ ಮೀರುತ್ತಿದ್ದು, ನಮ್ಮ ನಿರೀಕ್ಷೆಗೂ ಮೀರಿ ಹಬ್ಬುತ್ತಿದೆ. ಸೋಂಕು ಸಮುದಾಯಕ್ಕೂ ವ್ಯಾಪಿಸಿದೆ. ಹೀಗಾಗಿ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎ.19ರಂದು ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಬೆಂಗಳೂರು ನಗರ ಪ್ರತಿನಿಧಿಸುವ ಸಚಿವರು, ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುವ ಬಗ್ಗೆ ಎಲ್ಲರ ಸಲಹೆ-ಸೂಚನೆಗಳನ್ನು ಆಧರಿಸಿ ತೀರ್ಮಾನಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರದಲ್ಲಿ ಸೋಂಕು ನಿಯಂತ್ರಣದ ದೃಷ್ಟಿಯಿಂದ ವಿಶೇಷವಾದ ಕಠಿಣ ಕ್ರಮ ಅನಿವಾರ್ಯವಾಗಿದೆ. ಈಗಾಗಲೇ ಸಾಕಷ್ಟು ಸಮಸ್ಯೆಗಳು ಎದುರಾಗಿವೆ.

ಸಾರ್ವಜನಿಕರು ಕೊರೋನ ಮಾರ್ಗಸೂಚಿ ಪಾಲನೆ ಮಾಡದ ಕಾರಣ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಸರಕಾರ ಏನೇ ಬಿಗಿ ಕ್ರಮ ಕೈಗೊಂಡರೂ ಸಾರ್ವಜನಿಕರ  ಸಹಕಾರವಿಲ್ಲದಿದ್ದರೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಬೇಸರ  ವ್ಯಕ್ತಪಡಿಸಿದರು.

ಕೊರತೆ ಇದೆ: ಕೊರೋನ ಸೋಂಕಿನ ಪ್ರಮಾಣ ದಿನದಿಂದ  ದಿನಕ್ಕೆ ಹೆಚ್ಚುತ್ತಿರುವುದರಿಂದ  ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಕೊರತೆ ಎದುರಾಗಿದೆ. ಆದರೂ, ಪ್ರತಿಯೊಬ್ಬರಿಗೂ ಉತ್ತಮ ಚಿಕಿತ್ಸೆ ಕೊಡಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಐಸಿಯು ಹಾಸಿಗೆ ಸಾಮರ್ಥ್ಯಕ್ಕಿಂತ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಅವರು ತಿಳಿಸಿದರು.

ಪ್ರತಿನಿತ್ಯ ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಲು ಕ್ರಮ ಕೈಗೊಂಡಿದ್ದೇವೆ. ಸಾರ್ವಜನಿಕರ ಉದಾಸೀನ ಹಾಗೂ ನಮ್ಮ ಕೆಲವು ನ್ಯೂನತೆ ಇವೆ. ಆಸ್ಪತ್ರೆಯಲ್ಲಿ ಉಂಟಾಗಿರುವ ಪ್ರಮಾದಗಳನ್ನು ಸರಿಪಡಿಸಲು ಬಿಬಿಎಂಪಿ ವಲಯವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುತ್ತಿದ್ದೇವೆ. ಐಎಎಸ್, ಐಪಿಎಸ್, ಬಿಬಿಎಂಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇದರಲ್ಲಿ ಇರುತ್ತಾರೆ. ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳ ಲಾಗುವುದು ಎಂದು ಹೇಳಿದರು.

ನಗರದಲ್ಲಿ ಏಕಾಏಕಿ ರೋಗಿಗಳ ಸಂಖ್ಯೆ ಏರಿಕೆಯಾಗಿದ್ದರಿಂದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿದೆ. ಎಷ್ಟು ಲಭ್ಯವಿದೆಯೋ ಅಷ್ಟನ್ನು ಬಳಸಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ. ಕೊರತೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಕರ್ನಾಟಕದಲ್ಲೇ 800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ್ಯವಿದೆ. ಪ್ರಸ್ತುತ ನಮ್ಮಲ್ಲಿ 300 ಮೆಟ್ರಿಕ್ ಟನ್ ಆಕ್ಸಿಜನ್ ಲಭ್ಯವಿದೆ. ಸದ್ಯಕ್ಕೆ ನಮಗೆ 200 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗಿದೆ. ಹೆಚ್ಚುವರಿ ಆಕ್ಸಿಜನ್ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...