ಹೊಸದಿಲ್ಲಿ: ಐಟಿ ಕಾನೂನುಗಳ ಅನುಸರಣೆ: ಪಾರದರ್ಶಕತೆಯೆಡೆಗೆ ದೊಡ್ಡ ಹೆಜ್ಜೆ ಫೇಸ್‌ಬುಕ್, ಗೂಗಲ್, ಇನ್‌ಸ್ಟಾಗ್ರಾಂಗೆ ಸಚಿವ ರವಿಶಂಕರ್ ಪ್ರಸಾದ್ ಪ್ರಶಂಸೆ

Source: VB | By S O News | Published on 5th July 2021, 7:11 PM | National News |

ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ಐಟಿ ಕಾನೂನುಗಳ ಜಾರಿಯ ಬಳಿಕ ಗೂಗಲ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮತ್ತಿತರ ಬೃಹತ್ ಸಾಮಾಜಿಕ ಜಾಲತಾಣಗಳು ತಮ್ಮಲ್ಲಿ ಪ್ರಸಾರವಾದ ನಿಂದನಾತ್ಮಕ ವಿಷಯಗಳ ಪೋಸ್ಟ್ಗಳನ್ನು ತೆಗೆದುಹಾಕುತ್ತಿರುವುದು ಪಾರದರ್ಶಕತೆಯೆಡೆಗೆ ಇರಿಸಿರುವ ಅತಿ ದೊಡ್ಡ ಹೆಜ್ಜೆಯೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಶನಿವಾರ ತಿಳಿಸಿದ್ದಾರೆ.

ನೂತನ ಐಟಿ ಕಾನೂನುಗಳು ಜಾರಿಗೊಂಡ ಬಳಿಕ, ಫೇಸ್‌ಬುಕ್ ಮೇ 15ರಿಂದ ಜೂನ್ 15ರವರೆಗೆ 3 ಕೋಟಿಗೂ ಅಧಿಕ ಪೋಸ್ಟ್‌ಗಳ ವಿರುದ್ಧ ಕ್ರಮಗಳನ್ನು ಕೈಗೊಂಡಿದ್ದರೆ, ಅದೇ ಸಂಸ್ಥೆಯ ಮಾಲಕತ್ವದ ಫೋಟೋಶೇರಿಂಗ್ ಆ್ಯಪ್ ಇನ್‌ಸ್ಟಾಗ್ರಾಂ ಸುಮಾರು ಇಪ್ಪತ್ತು ಲಕ್ಷ ಪೋಸ್ಟ್‌ಗಳನ್ನು ಕಿತ್ತುಹಾಕಿದೆ.

ಜಗತ್ತಿನ ನಂ.1 ಸರ್ಚ್ ಇಂಜಿನ್ ಗೂಗಲ್, ಯೂಟ್ಯೂಬ್ ಸೇರಿದಂತೆ ತನ್ನ ವಿವಿಧ ಸೇವೆಗಳಿಂದ 59,350 ಲಿಂಕ್‌ಗಳನ್ನು ಕಿತ್ತುಹಾಕಿದೆ. ಈ ಮಧ್ಯೆ ಸ್ವದೇಶಿ ಸಾಮಾಜಿಕ ಜಾಲತಾಣ ಆ್ಯಪ್ 'ಕೂ' ಕೂಡಾ, ತನ್ನಲ್ಲಿ ಪ್ರಸಾರವಾದ ವಿಷಯಗಳ ವಿರುದ್ಧ ಬಂದಿರುವ 5,502 ದೂರುಗಳ ಪೈಕಿ 1,253 ದೂರುಗಳಿಗೆ ಸಂಬಂಧಿಸಿ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

ದೊಡ್ಡ ಹೆಜ್ಜೆ

ಗೂಗಲ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಂತಹ ಮಹತ್ವದ ಸಾಮಾಜಿಕ ಜಾಲತಾಣ ಫ್ಲ್ಯಾಟ್‌ ಫಾರಂಗಳು ನೂತನ ಐಟಿ ಕಾನೂನುಗಳನ್ನು ಅನುಸರಿಸುವುದು ಶ್ಲಾಘನೀಯವಾಗಿದೆ. ಐಟಿ ಕಾನೂನುಗಳಿಗೆ ಅನುಗುಣವಾಗಿ ತಮ್ಮಲ್ಲಿ ಪ್ರಕಟವಾದ ನಿಂದನಾತ್ಮಕ ಪೋಸ್ಟ್‌ಗಳನ್ನು ಸ್ವಯಂಪ್ರೇರಿತವಾಗಿ ತೆಗೆದುಹಾಕಿರುವ ಕುರಿತ ಪ್ರಥಮ ಅನುಸರಣಾ ವರದಿಯು ಪಾರದರ್ಶಕತೆಯೆಡೆಗೆ ಇಡಲಾದಂತಹ ಅತಿ ದೊಡ್ಡ ಹೆಜ್ಜೆ ಎಂದು ರವಿಶಂಕರ ಪ್ರಸಾದ್‌ ಟ್ವೀಟಿಸಿದ್ದಾರೆ.

ಆದರೆ ತನ್ನ ಟ್ವಿಟ್‌ನಲ್ಲಿ ರವಿಶಂಕರ್ ಅವರು ಟ್ವಿಟರ್‌ನ ಉಲ್ಲೇಖ ಮಾಡಿಲ್ಲ. ಭಾರತದಲ್ಲಿ ನೂತನ ಐಟಿ ಕಾಯ್ದೆಗಳ ಅನುಸರಣೆಗಾಗಿ ಟ್ವಿಟರ್ ಇತ್ತೀಚೆಗೆ ಜಾಗತಿಕ ಕಾನೂನು ನೀತಿ ನಿರ್ದೇಶಕ ಜೆರೆಮಿ ಕೆಸೆಲ್ ಅವರನ್ನು ನೇಮಿಸಿದ ಬೆನ್ನಲ್ಲೇ ರವಿಶಂಕರ್ ಈ ಟ್ವಿಟ್‌ಮಾಡಿದ್ದಾರೆ.

ನೂತನ ಐಟಿ ಕಾನೂನುಗಳು ಜಾರಿಗೊಂಡ ಬಳಿಕ ಬಳಕೆದಾರರು ಆಕ್ಷೇಪಕಾರಿ ವಿಷಯಗಳನ್ನು ಪ್ರಕಟಿಸಿದ್ದಕ್ಕಾಗಿ ಟ್ವಿಟರ್ ವಿರುದ್ಧ ಉತ್ತರಪ್ರದೇಶದಲ್ಲಿ ಎರಡು, ಮಧ್ಯಪ್ರದೇಶ ಹಾಗೂ ದಿಲ್ಲಿಯಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದ್ದವು. 62.40 ಕೋಟಿಗೂ ಅಧಿಕ ಬಳಕೆದಾರರೊಂದಿಗೆ, ಭಾರತವು ಜಗತ್ತಿನಲ್ಲೇ ಗರಿಷ್ಠ ಸಂಖ್ಯೆಯ ಅಂತರ್ಜಾಲ ಬಳಕೆದಾರರನ್ನು ಹೊಂದಿರುವ ದೇಶವಾಗಿದೆ. ಭಾರತದಲ್ಲಿ 44.80 ಕೋಟಿಗೂ ಅಧಿಕ ಮಂದಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆಂದು ಅಂದಾಜಿಸಲಾಗಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...