ಕೊರೋನಾ ರಾಜ್ಯದಲ್ಲಿ ಸಮುದಾಯ ಹಂತ ತಲುಪಿದೆ: ಸಚಿವ ಮಾಧುಸ್ವಾಮಿ

Source: uni | Published on 8th July 2020, 12:35 AM | State News | Don't Miss |

ತುಮಕೂರು: ಮಹಾಮಾರಿ ಕೊರೋನಾ ವೈರಸ್ ಕರ್ನಾಟಕದಲ್ಲಿ ಸಮುದಾಯದಲ್ಲಿ ಹಂತ ತಲುಪಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿಯವರು ಸೋಮವಾರ ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವುದಷ್ಟೇ ಚಿಂತೆಗೆ ಎಡೆಮಾಡಿಕೊಟ್ಟಿಲ್ಲ. ಸಮುದಾಯ ಹಂತ ತಲುಪಿದೆಯೇ ಎಂಬ ಆತಂಕ ಶುರುವಾಗಿದೆ. ಕೊರೋನಾ ನಿಯಂತ್ರಿಸಲು ನಾವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಆದರೆ ಆದಾವುದೂ ಸಹಾಯಕ್ಕೆ ಬರುತ್ತಿಲ್ಲ. ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಜಿಲ್ಲೆಗಳನ್ನು ತಲುಪಲು ಯತ್ನಿಸುತ್ತಿದ್ದೇವೆ. ಸೋಂಕು ನಿಯಂತ್ರಿಸಲು ಸಾಕಷ್ಟು ಯತ್ನಗಳನ್ನು ನಡೆಸಲಾಗುತ್ತಿದೆ. ಆದರೂ ಪರಿಸ್ಥಿತಿ ಕೈಮೀರಿರುವ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ. 
ತುಮಕೂರು ಕೊರೋನಾ ಆಸ್ಪತ್ರೆಯಲ್ಲಿ ದಾಖಲಾದ ಕೊರೋನಾವೈರಸ್ ಸೋಂಕಿತ 8 ಮಂದಿಯ ಸ್ಥಿತಿ ಗಂಭೀರವಾಗಿದೆ. ನಮಗೆ ಬಂದಿರುವ ಮಾಹಿತಿಗಳ ಪ್ರಕಾರ ಆ ಎಂಟು ಮಂದಿ ಬದುಕುಳಿಯುವ ಭರವಸೆಗಳು ಕಡಿಮೆಯಿದೆ. ಎಲ್ಲೋ ಒಂದು ರಾಜ್ಯದಲ್ಲಿ ಕೊರೋನಾ ವೈರಸ್ ಸಮುದಾಯ ಹಂತಕ್ಕೆ ತಲುಪಿದೆಯೇ ಎಂಬ ಅನುಮಾನಗಳೂ ಮೂಡತೊಡಗಿವೆ ಎಂದು ತಿಳಿಸಿದ್ದಾರೆ. 
ಸೋಂಕಿನ ಲಕ್ಷಣಗಳು ಕಂಡು ಬರುತ್ತಿದ್ದಂತೆಯೇ ಜನರು ಆರಂಭದಲ್ಲಿಯೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದೇ ಹೋದರೆ, ಪರಿಸ್ಥಿತಿ ಎದುರಿಸಲು ನಾವು ಅಸಹಾಯಕರಾಗಬೇಕಾಗುತ್ತದೆ. ರಾಜ್ಯದ ಹಲವು ಜಿಲ್ಲೆಗಳ ಪರಿಸ್ಥಿತಿ ಆತಂಕ ಸೃಷ್ಟಿಸುತ್ತಿದೆ ಎಂದಿದ್ದಾರೆ. 
ರೋಗಿಗಳು ತಡವಾಗಿ ಆಸ್ಪತ್ರೆಗೆ ದಾಖಲಾದರೆ ಅಧಿಕಾರಿಗಳು ಅವರ ಜೀವದ ಕುರಿತು ಭರವಸೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ರೋಗಿಗಳು ಗುಣಮುಖರಾಗಿ ಪರೀಕ್ಷೆ ನೆಗೆಟಿವ್ ಬಂದರೂ ಕೂಡ ಅವರನ್ನು ಕೆಲ ದಿನಗಳ ಕಾಲ ಕ್ವಾರಂಟೈನ್ ನಲ್ಲಿಡಬೇಕು ಎಂದು ಇದೇ ವೇಳೆ ಸಲಹೆಯನ್ನೂ ನೀಡಿದ್ದಾರೆ. 
ಜಿಲ್ಲಾ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗಾಗಿ 200 ಹಾಸಿಗೆಗಳ ವ್ಯವಸ್ಥೆಯಿದ್ದು, ಹೆಚ್ಚಿವರಿಯಾಗಿ 150 ಸೇರಿ ಒಟ್ಟು 350 ಹಾಸಿಗೆಗಳ ಹಾಗೂ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಟ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ವೈದ್ಯಕೀಯ ಕಾಲೇಜುಗಳಲ್ಲಿ 500 ಹಾಸಿಗೆಗಳು ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಿಗೂ ಹಾಸಿಗೆಗಳ ವ್ಯವಸ್ಥೆ ಒದಗಿಸಲು ಮನವಿ ಮಾಡಲಾಗಿದೆ ಎಂದಿದ್ದಾರೆ.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...