ಕುಂದಾಪುರ: ಕುಂದಾಪುರ, ಉಳ್ಳಾಲ, ಕಾಪುವಿನಲ್ಲಿ ಕಡಲ್ಕೊರೆತ, ಮರವಂತೆಯಲ್ಲಿ ತೆಂಗಿನಮರ, ಮೀನುಗಾರಿಕಾ ಶೆಡ್‌ಗಳು ಸಮುದ್ರಪಾಲು, ಸೋಮೇಶ್ವರದಲ್ಲಿ ಆವರಣ ಗೋಡೆ ಕುಸಿತ

Source: VB | By JD Bhatkali | Published on 15th May 2021, 2:52 PM | Coastal News | State News |

ಕುಂದಾಪುರ: ವಾಯುಭಾರ ಕುಸಿತದಿಂದ ಪಶ್ಚಿಮದ ಅರಬಿ ಸಮುದ್ರದಲ್ಲಿ ಉಂಟಾದ ತೌಕ್ತೆ ಚಂಡಮಾರುತದ ಪರಿಣಾಮ ಕಡಲು ಪ್ರಕ್ಷುಬ್ಧಗೊಳ್ಳಲಾರಂಭಿಸಿದ್ದು, ಇದರಿಂದ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಹಲವು ತೀರ ಪ್ರದೇಶಗಳು ತೀವ್ರವಾದ ಕಡಲ್ಕೊರೆತಕ್ಕೆ ಸಿಲುಕಿವೆ.

ಕುಂದಾಪುರ ತಾಲೂಕಿನ ಮರವಂತೆ, ಉಪ್ಪುಂದ ಸಮೀಪದ ಮಡಿಕಲ್ ಹಾಗೂ ಪಡುವರಿ ಗ್ರಾಮದ ದೊಂಬೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿವೆ. ಒಂದು ವಾರದಿಂದ ಮಂದಗತಿಯಲ್ಲಿದ್ದ ಕೊರೆತ ನಿನ್ನೆಯಿಂದ ತೀವ್ರತೆ ಪಡೆದುಕೊಂಡಿದೆ. ದೊಂಬೆಯಲ್ಲಿ ನಿರ್ಮಿಸಿದ ತಡೆಗೋಡೆಯ ಒಂದು ಭಾಗ ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದೆ.

ಹವಾಮಾನ ವೈಪರೀತ್ಯದೊಂದಿಗೆ ಗಾಳಿಯೂ ವೇಗವಾಗಿ ಬೀಸುತ್ತಿರುವುದರಿಂದ ಕಡಲಿನಲ್ಲಿ ದೈತ್ಯ ಅಲೆಗಳ ಅಬ್ಬರ ಹೆಚ್ಚಾಗಿದೆ. ಮರವಂತೆಯ ಕಡಲ ತೀರದ ಹತ್ತಾರು ತೆಂಗಿನಮರಗಳು, ಮೀನುಗಾರಿಕಾ ಶೆಡ್‌ಗಳು ಈಗಾಗಲೇ ಸಮುದ್ರಪಾಲಾಗಿವೆ. ಮೀನುಗಾರರ ಮನೆಗಳು ಸೇರಿದಂತೆ ಇನ್ನಷ್ಟು ಅಪಾಯದಂಚಿನಲ್ಲಿವೆ. ಅಲೆಗಳು ಕಾಂಕ್ರಿಟ್ ರಸ್ತೆಗೂ ಬಂದು ಅಪ್ಪಳಿಸುತ್ತಿವೆ. ಇದರಿಂದ ರಸ್ತೆಯೂ ಅಪಾಯದಂಚಿನಲ್ಲಿದೆ.

ಮರವಂತೆಯ ಮೀನುಗಾರಿಕಾ ಹೊರ ಬಂದರಿನ ತಡೆಗೋಡೆಯ ಉತ್ತರ ದಿಕ್ಕಿನ 500 ಮೀ. ಉದ್ದದ ತೀರಕ್ಕೆ ಅಪ್ಪಳಿಸುತ್ತಿರುವ ಅಲೆಗಳು ತೀರದುದ್ದಕ್ಕೂ ಇರುವ ತೆಂಗಿನಮರಗಳನ್ನು ಬುಡಸಮೇತ ಕೊಚ್ಚಿಕೊಂಡು ಕಡಲಿನ ಒಡಲು ಸೇರಿಸಿಕೊಳ್ಳುತ್ತಿವೆ.

ಮರವಂತೆಯ ಚಂದ್ರ ಖಾರ್ವಿ ಎಂಬವರ ಬೃಹತ್ ಮೀನುಗಾರಿಕಾ ಶೆಡ್ ಈಗಾಗಲೇ ಕೊಚ್ಚಿ ಹೋಗಿದೆ. ಯಕ್ಷೇಶ್ವರಿ, ಯಕ್ಷೇಶ್ವರಿ ಮಾತಾ ಅವರ ಮೀನುಗಾರಿಕಾ ಶೆಡ್‌ಗಳು, ಸುದರ್ಶನ ಖಾರ್ವಿ ಎಂಬವರಿಗೆ ಸೇರಿದ 6 ತೆಂಗಿನಮರ, ಕೆ.ಎಂ.ಕೃಷ್ಣ ಎಂಬವರ 3, ಉಮೇಶ ಖಾರ್ವಿ ಅವರ 4, ಎಂ.ಎಸ್. ಖಾರ್ವಿ ಎಂಬವರ 4 ತೆಂಗಿನಮರಗಳು ಈಗಾಗಲೇ ಸಮುದ್ರಪಾಲಾಗಿವೆ.

ಕಳೆದ ಎರಡು-ಮೂರು ದಿನಗಳಿಂದ ಇಲ್ಲಿನ ಪರಿಸರದ ಕಡಲ ತೀರದ 40ಕ್ಕೂ ಅಧಿಕ ತೆಂಗಿನಮರಗಳು ಈಗಾಗಲೇ ಸಮುದ್ರದ ಮಡಿಲು ಸೇರಿವೆ. ಒಟ್ಟಿನಲ್ಲಿ ಸಮುದ್ರ ತೀರಗಳಲ್ಲಿ ಕಟ್ಟಿರುವ ಶೆಡ್‌ಗಳು, ಅಲ್ಲಿನ ಮೀನುಗಾರಿಕಾ ಸಲಕರಣೆಗಳು, ತೆಂಗಿನಮರಗಳು ಸೇರಿದಂತೆ ಈಗಾಗಲೇ ಬಡ ಮೀನುಗಾರರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಪರಿಹಾರಕ್ಕೆ ಆಗ್ರಹ: ಮರವಂತೆಯಲ್ಲಿ ಕಡಲ್ಕೊರೆತದ ತಾತ್ಕಾಲಿಕ ತಡೆಗಾಗಿ ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿ ಈಗಾಗಲೇ ಮೀನುಗಾರಿಕಾ ಸಚಿವ ಅಂಗಾರರೊಂದಿಗೆ ಮಾತನಾಡಿದ್ದಾರೆ. ಮರವಂತೆಯಲ್ಲಿ ಆಗಾಗ ಸಂಭಸುತ್ತಿರುವ ಕಡಲ್ಕೊರೆತ ತೀರದ ನಿವಾಸಿಗಳ ನಿದ್ದೆಗೆಡಿಸಿದೆ. ಇದಕ್ಕೊಂದು ಶಾಶ್ವತ ಪರಿಹಾರ ಬೇಕೆಂಬುದು ಅವರ ಬೇಡಿಕೆಯಾಗಿದ್ದು, ಸುಮಾರು 500 ಮೀ. ಉದ್ದದ ಶಾಶ್ವತ ತಡೆಗೋಡೆಯನ್ನು ನಿರ್ಮಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೊರಡಿಸಿರುವ ಮುನ್ಸೂಚನೆಯಂತೆ ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕ ಕರಾವಳಿ ಭಾಗದಲ್ಲಿ ಮೇ 17ರವರೆಗೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದುಕೊಂಡು ವಿಪತ್ತನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳಬೇಕು, ಸಾರ್ವಜನಿಕರು ಮತ್ತು ಮೀನುಗಾರರು ನದಿ, ಸಮುದ್ರಕ್ಕೆ ಇಳಿಯದೆ ಎಚ್ಚರದಿಂದಿರಲು ಹಾಗೂ ತಗ್ಗು ಪ್ರದೇಶಗಳಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಈ ಸಂದರ್ಭ ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳನ್ನು ತಲುಪುವುದು ಸೂಕ್ತವಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳ ತುರ್ತ ಸೇವೆಗೆ ಕಂಟ್ರೋಲ್ ರೂಂ ನಂ: 1077 ಅಥವಾ 9483908000 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.

 

ಮುಸೋಡಿಯಲ್ಲಿ ಎರಡು ಮನೆಗಳಿಗೆ ಹಾನಿ

ಮಂಜೇಶ್ವರ: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ತೌಕ್ತೆ ಚಂಡಮಾರುತದ ಪರಿಣಾಮ ತೀರ ಪ್ರದೇಶದಲ್ಲಿ ಕಡಲ್ಗೊರೆತದ ಅಬ್ಬರ ಹೆಚ್ಚಾಗಿದ್ದು, ಉಪ್ಪಳ ಮುಸೋಡಿಯಲ್ಲಿ ಕಡಲ್ಕೊರೆತದಿಂದ ಎರಡು ಮನೆಗಳು ಹಾನಿಗೊಂಡಿದೆ. ಹತ್ತರಷ್ಟು ಮನೆಗಳು ಅಪಾಯದಲ್ಲಿವೆ.

ಮುಸೋಡಿ ಕಡಪ್ಪುರದ ಮರಿಯಮ್ಮ, ತಸ್ಲೀಮಾ ಮೂಸಾ ಎಂಬವರ ಮನೆಗಳು ಹಾನಿಗೊಂಡಿವೆ. ಈ ಪ್ರದೇಶದಲ್ಲಿ ಕೆಲದಿನಗಳಿಂದ ಕಡಲಬ್ಬರ ತೀವ್ರಗೊಂಡಿದೆ. ಕುಂಬಳೆ ಕೊಯಿಪಾಡಿ, ಕಾಸರಗೋಡು ಕಡಪ್ಪುರ ಮೊದಲಾಡೆಗಳಲ್ಲೂ ಕಡಲ್ಕೊರೆತ ತೀವ್ರಗೊಂಡಿದೆ.

ಕರಾವಳಿಯಲ್ಲಿ ಭಾರೀ ಗಾಳಿ-ಮಳೆ ಸಾಧ್ಯತೆ

ಮಂಗಳೂರು: ಅರಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಕಾಣಿಸಿಕೊಂಡಿರುವ ತೌಕ್ತೆ ಚಂಡಮಾರುತದ ಪರಿಣಾಮವು ಪಶ್ಚಿಮ ಕರಾವಳಿ ತೀರದ ಮೇಲೆ ಆಗುತ್ತಿದೆ. ಕಳೆದ 2-3 ದಿನಗಳ ಹಿಂದೆ ಕರಾವಳಿಯಲ್ಲಿ ಒಂದಷ್ಟು ಪರಿಣಾಮ ಬೀರಿದ್ದ ಈ ಚಂಡಮಾರುತವು ಶನಿವಾರ ಪೂರ್ಣ ಪ್ರಮಾಣದಲ್ಲಿ ತನ್ನ ಆರ್ಭಟ, ಶಕ್ತಿ ತೋರಿಸಿ ಚಲನೆ ಮುಂದುವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ವಾಯುಭಾರ ಕುಸಿತವಾಗಿದ್ದು, ಇದೀಗ ಈ ಚಂಡಮಾರುತವು ಲಕ್ಷ ದ್ವೀಪವನ್ನು ಕೇಂದ್ರೀಕರಿಸಿದೆ. ಮಧ್ಯಾಹ್ನ ವೇಳೆಗೆ ಕೇರಳದ ಕಣ್ಣೂರಿನಿಂದ 360 ಕಿ.ಮೀ. ಪಶ್ಚಿಮ ಮತ್ತು ನೈರುತ್ಯ ಭಾಗದಲ್ಲಿ ಚಂಡಮಾರುತ ತನ್ನ ಚಲನೆ ಮುಂದುವರಿಸಿದೆ. ಗಂಟೆಗೆ 90-100 ಕಿ.ಮೀ.ವೇಗದಲ್ಲಿ ಉತ್ತರ ದಿಕ್ಕಿನತ್ತ ಸಂಚರಿಸಲಿರುವ ಈ ಚಂಡಮಾರುತ ಮೇ 18ರ ವೇಳೆಗೆ ಗುಜರಾತ್‌ ತೀರಕ್ಕೆ ತಲುಪುವ ಸಾಧ್ಯತೆ ಇದೆ.

ಇನ್ನೂ 2-3 ದಿನ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತವು ಪರಿಣಾಮ ಬೀರಲಿದ್ದು, ಗುಡುಗು, ಮಿಂಚು ಸಹಿತ ಭಾರೀ ಗಾಳಿಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ತೀರ ಪ್ರದೇಶದಲ್ಲಿ ಅಲೆಗಳ ಅಬ್ಬರವೂ ಬಿರುಸು ಪಡೆದಿದೆ. ಉಳ್ಳಾಲ, ಸೋಮೇಶ್ವರ, ಪಣಂಬೂರು, ಮೀನಕಳಿಯ ಮತ್ತಿತರ ತೀರದಲ್ಲಿ ಕಡಲು ಪ್ರಕ್ಷುಬ್ಧವಾಗಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ಮುಂದಿನ ದಿನಗಳಲ್ಲಿ 2.9ರಿಂದ 4.2 ಮೀ. ಎತ್ತರದ ಅಲೆಗಳು ತೀರದತ್ತ ಅಪ್ಪಳಿಸಲಿವೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ತೀರದಿಂದ ಕೆಲವು ಮೀಟರ್‌ಗಳಷ್ಟು ದೂರವಿದ್ದ ಕಡಲು, ಇದೀಗ ತೀರಕ್ಕೆ ಸಮೀಪವಾಗುತ್ತಿದೆ. ಈ ಮಧ್ಯೆ ಕಡಲ್ಕೊರೆತದ ಭೀತಿಯೂ ಎದುರಾಗಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ.

ಶುಕ್ರವಾರ ಅಪರಾಹ್ನದ ಬಳಿಕ ಗಾಳಿಯ ಅಬ್ಬರ ಹೆಚ್ಚಳವಾಗಿದ್ದು, ಬಲವಾದ ಗಾಳಿಯೂ ಬೀಸತೊಡಗಿವೆ. ದಟ್ಟ ಮೋಡಗಳ ಚಲನೆಯೂ ಕಂಡು ಬಂದಿದೆ. ಶನಿವಾರ ಗಂಟೆಗೆ 50-60 ಕಿ.ಮೀ. ನಿಂದ 70 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತೌಕ್ತೆ ಚಂಡಮಾರುತ ಪರಿಣಾಮ

ಉಳ್ಳಾಲ: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉದ್ಭವಿಸಿರುವ ತೌಕ್ತೆ ಚಂಡಮಾರುತದ ಪರಿಣಾಮ ಉಳ್ಳಾಲ ಸೋಮೇಶ್ವರದಲ್ಲಿ ಕಡಲಿನಬ್ಬರ ತೀವ್ರಗೊಂಡಿದೆ. ಸೋಮೇಶ್ವರ ಹಿಂದೂ ರುದ್ರಭೂಮಿ ಕಾಂಪೌಂಡ್ ಗೋಡೆಗೆ ಸಮುದ್ರದ ಅಲೆಗಳು ರಭಸವಾಗಿ ಅಪ್ಪಳಿಸಲಾರಂಭಿಸಿದೆ. ಇದರಿಂದ ಆವರಣ ಗೋಡೆಯ ಒಂದು ಪಾರ್ಶ್ವ ಕುಸಿದಿದೆ.

ಸೋಮೇಶ್ವರ ನಿವಾಸಿ ಮೋಹನ್ ಎಂಬವರ ಮನೆಯ ಗೋಡೆಗೂ ದೈತ್ಯ ಅಲೆಗಳು ಅಪ್ಪಳಿಸಲಾರಂಭಿಸಿವೆ. ಇದರಿಂದ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.

ಸೋಮೇಶ್ವರ, ಉಚ್ಚಿಲ, ಪೆರಿಬೈಲ್ ಬೆಟ್ಟಂಪಾಡಿ ಮುಂತಾದಡೆಗಳಲ್ಲೂ ಕಡಲ ಅಬ್ಬರ ತೀವ್ರಗೊಂಡಿದೆ.

ಬೆಟ್ಟಂಪಾಡಿಯಿಂದ ಉಚ್ಚಿಲವರೆಗೆ ಕಡಲ್ಕೊರೆತ ತಡೆಗೆ ಹಾಕಿರುವ ಕಲ್ಲುಗಳು ಸಮುದ್ರದ ಒಡಲು ಸೇರಲಾರಂಭಿಸಿದೆ. ಸೋಮೇಶ್ವರ ಹಿಂದೂ ರುದ್ರಭೂಮಿ ಬಳಿ ತಡೆಗೋಡೆ ಇಲ್ಲದ ಕಾರಣ ಕಾಂಪೌಂಡ್ ಗೋಡೆಗೆ ಅಲೆ ಜೋರಾಗಿ ಅಪ್ಪಳಿಸುತ್ತಿದೆ. ಇದರಿಂದ ಆವರಣ ಗೋಡೆ ಒಂದು ಕಡೆ ಕುಸಿದಿದೆ.

ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ, ತಹಶೀಲ್ದಾರ್‌ ಗುರುಪ್ರಸಾದ್ ಹಾಗೂ ಬಂದರ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಪು: ಅರಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ತೌಕ್ತೆ ಚಂಡಮಾರುತದ ಪರಿಣಾಮ ಕಾಪು ತೀರದಲ್ಲೂ ಕಾಣಿಸಿ ಕೊಂಡಿದ್ದು, ಲೈಟ್‌ಹೌಸ್ ಬಳಿ ಕಡಲ್ಕೊರೆತ ಉಂಟಾಗಿದೆ. ಇಲ್ಲಿನ ಲೈಟ್‌ಹೌಸ್ ಬಂಡೆಯ ಸುತ್ತ ನೀರು ಆವೃತವಾಗಿದೆ. ಇದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

ಕಾಪು ತಾಲೂಕಿನ ಪಡುಬಿದ್ರೆ, ಹೆಜಮಾಡಿ, ಬಡಾ, ಮೂಳೂರು, ತೆಂಕದಲ್ಲೂ ಕಡಲ್ಕೊರೆತ ತೀವ್ರಗೊಂಡಿದೆ. ಸಮುದ್ರದಲ್ಲಿ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ.

ಪಡುಬಿದ್ರೆಯ ನಡಿಪಟ್ಟದಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ. ಕಳೆದ ಮಳೆಗಾಲದಲ್ಲಿ ಕಡಲ್ಕೊರೆತಕ್ಕೆ ಹಾಕಲಾದ ಬೃಹತ್ ಗಾತ್ರದ ಕಲ್ಲುಗಳು ಸಮುದ್ರದ ಒಡಲು ಸೇರುತ್ತಿವೆ.

ಕಾಡಿಪಟ್ಟ ಹಾಗೂ ಪಡುಬಿದ್ರೆ ಬೀಚ್‌ನಲ್ಲೂ ಕಡಲಬ್ಬರ ಜೋರಾಗಿದೆ. ಮೂಳೂರಿನಲ್ಲೂ ಕಡಲ್ಕೊರೆತದ ಭೀತಿ ಉಂಟಾಗಿದೆ.

Read These Next

ಕಾರವಾರ: ಟ್ಯಾಬ್ ನೊಂದಿಗೆ ಭವಿಷ್ಯ ಕೂಡ ವಿದ್ಯಾರ್ಥಿ ಕೈಯಲ್ಲೇ ಇದೆ : ಶಾಸಕಿ ರೂಪಾಲಿ ನಾಯ್ಕ

“ಇಂದು ವಿತರಿಸಲಾಗುತ್ತಿರುವ ಟ್ಯಾಬ್‍ನೊಂದಿಗೆ ಭವಿಷ್ಯ ಕೂಡ ನಿಮ್ಮ ಕೈಯಲ್ಲೇ ಇದೆ, ವಿದ್ಯಾರ್ಥಿಗಳು ಸರಕಾರ ನೀಡಿರುವ ಟ್ಯಾಬ್ ಪಿಸಿ ...

ಕೋಲಾರ: ಡಿಸಿಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಸೇವೆಯ ಅನಾವರಣ, ಸಮಾಜದ ಕಟ್ಟಕಡೆ ವ್ಯಕ್ತಿಗೂ ಸೇವೆ; ಬ್ಯಾಲಹಳ್ಳಿ ಗೋವಿಂದಗೌಡ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ತಲುಪಿಸುವ ಸಂಕಲ್ಪದೊಂದಿಗೆ ಡಿಜಟಲೀಕರಣದ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ...

ಬೆಂಗಳೂರು: ಕೋವಿಡ್ 3ನೇ ಅಲೆ ಆತಂಕ, ಮಧ್ಯಂತರ ವರದಿ ಸಲ್ಲಿಸಿದ ತಜ್ಞರ ಸಮಿತಿ, ಹಂತ ಹಂತವಾಗಿ ಶಾಲಾ-ಕಾಲೇಜು ತೆರೆಯಲು ಶಿಫಾರಸು

ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ...

ಶ್ರೀನಿವಾಸಪುರ: ಜನ ಪ್ರತಿನಿಧಿಗಳು ನಾಗರಿಕರ ಮನವೊಲಿಸಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಬೇಕು ಎಂದು ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹೇಳಿದರು.

ಜನ ಪ್ರತಿನಿಧಿಗಳು ನಾಗರಿಕರ ಮನವೊಲಿಸಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಬೇಕು ಎಂದು ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹೇಳಿದರು. ...

ಕೋಲಾರ: ಮಾವು ಬೆಳೆಗಾರರ ನೆರವಿಗೆ ಬರಲು ಸಿಎಂ, ಸಚಿವರಿಗೆ ಮನವಿ ಟನ್ ಮಾವಿಗೆ 10 ಸಾವಿರ ಬೆಂಬಲ ಬೆಲೆ ನೀಡಿ -ಡಾ ವೈ.ಎ. ನಾರಾಯಣಸ್ವಾಮಿ

ಬೆಲೆ ಕುಸಿತದಿಂದ ಸಂಕಷ್ಟಕ್ಕೊಳಗಾಗಿರುವ ಮಾವು ಬೆಳೆಗಾರರ ನೆರವಿಗೆ ಕೂಡಲೇ ರಾಜ್ಯ ಸರ್ಕಾರ ಧಾವಿಸಬೇಕು ಮತ್ತು ಪ್ರತಿ ಟನ್ ಮಾವಿಗೆ ...