ಕೇಂದ್ರ ಸೂಚಿಸಿದರೆ ಮೇ.೧೫ ವರೆಗೂ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಲು ಮು.ಮಂ ಸಮ್ಮತಿ

Source: sonews | By Staff Correspondent | Published on 27th April 2020, 11:28 PM | State News |

ಬೆಂಗಳೂರು: ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಅನ್ನು ಮೇ 15ರವರೆಗೆ ವಿಸ್ತರಿಸುವ ಕೇಂದ್ರ ಸರಕಾರದ ಚಿಂತನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದು, ಈ ವೇಳೆ ಮದ್ಯ ಮಾರಾಟಕ್ಕೂ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ.

ಸೋಮವಾರ ಕೋವಿಡ್-19 ನಿಯಂತ್ರಣ ಹಾಗೂ ಲಾಕ್‍ಡೌನ್ ಅನುಷ್ಠಾನ ಸಂಬಂಧ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಮಾತನಾಡಿದ ಯಡಿಯೂರಪ್ಪ, ಕೊರೋನ ವೈರಸ್ ಸೋಂಕಿತರಿಲ್ಲದ ಹಸಿರು ವಲಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಬೇಕು ಎಂದು ಪ್ರಧಾನಿಗೆ ಮನವಿ ಮಾಡಿದರು.

ಸೋಂಕಿತರಿರುವ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ಅನುಷ್ಠಾನ ಕಟ್ಟುನಿಟ್ಟಾಗಿ ಮಾಡಲಾಗುವುದು. ಮೇ 15ರವರೆಗೆ ಲಾಕ್‍ಡೌನ್ ಮುಂದುವರಿಸಲು ಕೇಂದ್ರ ಸರಕಾರ ಸೂಚಿಸಿದರೆ ಅದಕ್ಕೆ ನಮ್ಮ ಸಹಮತವಿದೆ. ಈವರೆಗೂ ಕೇಂದ್ರ ಸರಕಾರದ ಎಲ್ಲ ಸೂಚನೆಗಳನ್ನು ರಾಜ್ಯ ಪಾಲಿಸಿದೆ ಎಂದು ಪ್ರಧಾನಿಗೆ, ಬಿಎಸ್‍ವೈ ಮಾಹಿತಿ ನೀಡಿದರು.

ಕೊರೋನ ಸೋಂಕಿತರಿಲ್ಲದ ಹಸಿರು ವಲಯದಲ್ಲಿರುವ ಯಾದಗಿರಿ, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಚಾಮರಾಜನಗರ, ರಾಯಚೂರು, ಹಾವೇರಿ ಹಾಗೂ ಹಾಸನ(ರಾಮನಗರ ಜಿಲ್ಲೆ ಹೊರತುಪಡಿಸಿ) ಆರ್ಥಿಕ ಚಟುವಟಿಕೆ ಮತ್ತು ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರಿಕೆಗೆ ಪ್ರಧಾನಿ ಮೋದಿ ಯಾವುದೇ ಭರವಸೆ ನೀಡಿಲ್ಲ ಎಂದು ತಿಳಿದು ಬಂದಿದೆ.

ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಆರೆಂಜ್ ಹಾಗೂ ಹಸಿರು ವಲಯಗಳಲ್ಲಿ ವಾಣಿಜ್ಯ ಚಟುವಟಿಕೆ ಆರಂಭಿಸುವ ಸಂಬಂಧ ಹೊಸ ರೀತಿಯ ಮಾರ್ಗಸೂಚಿ ರಚಿಸಲಾಗುವುದು. ಕೊರೋನ ವೈರಸ್ ಸೋಂಕು ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.

ಕೈಗಾರಿಕೆಗಳ ಆರಂಭ: ಕೊರೋನ ವೈರಸ್ ಸೋಂಕಿತರಿಲ್ಲದ 'ಹಸಿರು ವಲಯ'ದಲ್ಲಿರುವ ಯಾದಗಿರಿ, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಚಾಮರಾಜನಗರ, ರಾಯಚೂರು, ಹಾವೇರಿ ಹಾಗೂ ಹಾಸನ(ರಾಮನಗರ ಜಿಲ್ಲೆ ಹೊರತುಪಡಿಸಿ)ದಲ್ಲಿ ಆರ್ಥಿಕ ಚಟುವಟಿಕೆ ಆರಂಭಿಸುವ ದೃಷ್ಟಿಯಿಂದ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ಕಲ್ಪಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆ(ವಿಪತ್ತು ನಿರ್ವಹಣಾ ವಿಭಾಗ) ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದು, ಕಂಟೈನ್ಮೆಂಟ್ ವಲಯದಿಂದ ಹೊರಗಿರುವ ಪ್ರದೇಶಗಳಲ್ಲಿ ಕೈಗಾರಿಕೆ ಆರಂಭಕ್ಕೆ ಜಿಲ್ಲಾ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರಿಂದ ಅನುಮತಿ ಪಡೆಯಬೇಕು. ಕೈಗಾರಿಕೆ ಆರಂಭಕ್ಕೆ ಸಂಬಂಧಪಟ್ಟ ಕಾರ್ಖಾನೆ ಮಾಲಕರು ಸ್ವಯಂ ದೃಢೀಕೃತ ಪತ್ರವನ್ನು ಸರಕಾರಕ್ಕೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ಕೋವಿಡ್- 19 ಸೋಂಕಿತ ವಲಯಗಳಾದ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಮೇ 15 ರವರೆಗೆ ಲಾಕ್‍ಡೌನ್ ಮುಂದುವರಿಕೆ ಹಾಗೂ ಹಸಿರು ವಲಯಗಳಲ್ಲಿ ಆರ್ಥಿಕ ಚಟುವಟಿಕೆ ಪ್ರಾರಂಭಿಸುವ ಸಂಬಂಧ ಜನಾಭಿಪ್ರಾಯ ಸಂಗ್ರಹಿಸಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಲಾಗಿದೆ. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...