ನ್ಯೂಯಾರ್ಕ್: ಭಾರತದ ವಿದ್ಯುತ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸಿದ್ದ ಚೀನಾ, ಅಕ್ಟೋಬರ್ 13ರಂದು ಮುಂಬೈನ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದ ಚೀನಿ ಹ್ಯಾಕರ್‌ಗಳು

Source: VB | By S O News | Published on 2nd March 2021, 1:15 PM | National News | Global News |

ನ್ಯೂಯಾರ್ಕ್: ಭಾರತದ ವಿದ್ಯುತ್ ಸ್ಥಾವರಗಳನ್ನು ಮತ್ತು ಬಂದರುಗಳನ್ನು ತಮ್ಮ ಸೈಬರ್ ದಾಳಿಗೆ ಗುರಿಯಾಗಿಸಿಕೊಂಡಿರುವ ಚೀನಾದ ಹ್ಯಾಕರ್‌ಗಳು ಕಳೆದ ವರ್ಷ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆಗಳ ನಾಲ್ಕು ತಿಂಗಳ ಬಳಿಕ ಮುಂಬೈ ಮಹಾನಗರಿಯಲ್ಲಿ ವಿದ್ಯುತ್ ಪೂರೈಕೆಯನ್ನು ಸ್ತಬ್ದಗೊಳಿಸುವ ಮೂಲಕ ಎಚ್ಚರಿಕೆಯ ಸಂಕೇತವನ್ನು  ರವಾನಿಸಿದ್ದರು ಎಂದು ಅಮೆರಿಕ ಮೂಲದ ಸೈಬರ್ ಇಂಟಲಿಜನ್ಸ್ ಕಂಪೆನಿ ರೆಕಾರ್ಡೆಡ್ ಪ್ಯೂಚರ್'ನ ಅಧ್ಯಯನ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದೆ.

ಅಕ್ಟೋಬರ್ 13ರಂದು ಗಲ್ವಾನ್‌ನಿಂದ 1,500 ಮೈಲುಗಳಿಗಿಂತಲೂ ಹೆಚ್ಚು ದೂರದಲ್ಲಿರುವ ಎರಡು ಕೋಟಿ ಜನರು ವಾಸವಾಗಿರುವ ಮುಂಬೈಯಲ್ಲಿ ಕೊರೋನ, ವೈರಸ್ ಸಾಂಕ್ರಾಮಿಕದ ನಡುವೆಯೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.

ರೈಲುಗಳು ಸ್ಥಗಿತಗೊಂಡಿದ್ದವು, ಶೇರು ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು ಮತ್ತು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳನ್ನು ಚಾಲೂ ಸ್ಥಿತಿಯಲ್ಲಿರಿಸಲು ತುರ್ತು ಜನರೇಟರ್‌ಗಳನ್ನು ಬಳಸಬೇಕಾಗಿ ಬಂದಿತ್ತು ಎಂದು ವರದಿಯು ಹೇಳಿದೆ.

ಭಾರತದ ವಿದ್ಯುತ್ ಗ್ರಿಡ್‌ಗಳ ವಿರುದ್ಧ ಚೀನಾದ ವ್ಯಾಪಕ ಸೈಬರ್ ಅಭಿಯಾನದ ಭಾಗವಾಗಿ ಗಲ್ವಾನ್ ಕಣಿವೆಯಲ್ಲಿನ ಸಂಘರ್ಷಕ್ಕೂ ಮುಂಬೈಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಕ್ಕೂ ಪರಸ್ಪರ ನಂಟು ಇದ್ದಿರಬಹುದು ಎಂದಿರುವ ರೆಡ್‌ಪ್ಯೂಚರ್, ಭಾರತವು ತನ್ನ ಗಡಿ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸಿದರೆ ಇಡೀ ದೇಶದಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಮತ್ತು ತನಗೆ ಆ ಸಾಮರ್ಥ್ಯವಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ಚೀನಾ ರವಾನಿಸಿರುವಂತಿದೆ ಎಂದು ಹೇಳಿದೆ.

ಉಭಯು ದೇಶಗಳ ನಡುವೆ ದ್ವಿಪಕ್ಷೀಯ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವ್ಯೂಹಾತ್ಮಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಚೀನಾದೊಂದಿಗೆ ಗುರುತಿಸಿಕೊಂಡಿರುವ 'ರೆಡ್ ಇಕೋ'ದಂತಹ ಗುಂಪುಗಳು ನಡೆಸುತ್ತಿರುವ ಸೈಬರ್ ಕಾರ್ಯಾಚರಣೆಗಳು ನಿರಂತರವಾಗಿ ಹೆಚ್ಚಬಹುದು ಎಂದು ತಾನು ನಿರೀಕ್ಷಿಸಿರುವುದಾಗಿ ರೆಡ್ ಮ್ಯೂಚರ್ ತನ್ನ ವರದಿಯಲ್ಲಿ ತಿಳಿಸಿದೆ.

ಹೈ-ವೋಲ್ವೇಜ್ ಪ್ರಸರಣ ಉಪಕೇಂದ್ರಗಳು ಮತ್ತು ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಸೇರಿದಂತೆ ಭಾರತದಾದ್ಯಂತ ವಿದ್ಯುತ್ ಪೂರೈಕೆಯನ್ನು ನಿರ್ವಹಿಸುತ್ತಿರುವ ನಿಯಂತ್ರಣ ವ್ಯವಸ್ಥೆಗಳಲ್ಲಿ ಚೀನಾದ ಮಾಲ್‌ವೇರ್‌ಗಳು ಸ್ಥಾಪನೆಗೊಂಡಿವೆ ಎನ್ನುವುದನ್ನು ಅಧ್ಯಯನವು ತೋರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಚೀನಿ ಹ್ಯಾಕರ್‌ಗಳು ಸಿಸ್ಟಮ್‌ನಲ್ಲಿ ತಮ್ಮ ಹಿಂಬಾಗಿಲ ಪ್ರವೇಶಕ್ಕಾಗಿ ಭಾರತೀಯ ನೆಟ್ ವರ್ಕ್‌ಗಳಲ್ಲಿ 'ಶಾಡೋಪ್ಯಾಡ್' ಎಂಬ ಮಾಲ್‌ವೇರ್ ನ್ನು ನುಸುಳಿಸಿದ್ದು, ಈ ಮಾಲ್‌ವೇರ್‌ನ್ನು ಇತರ ಚೀನಿ ಬೇಹುಗಾರಿಕೆ ತಂಡಗಳೂ ಬಳಸುತ್ತಿವೆ.

ಚೀನಾದ ಹೆಚ್ಚಿನ ಮಾಲ್‌ವೇರ್‌ಗಳನ್ನು ಕ್ರಿಯಾಶೀಲಗೊಳಿಸಲಾಗಿಲ್ಲ. ಭಾರತೀಯ ವಿದ್ಯುತ್ ವ್ಯವಸ್ಥೆಯಲ್ಲಿ ಪ್ರವೇಶಿಸಲು ತನಗೆ ಸಾಧ್ಯವಿಲ್ಲದ್ದರಿಂದ ದೇಶಾದ್ಯಂತ ವ್ಯೂಹಾತ್ಮಕ ವಿದ್ಯುತ್ ವಿತರಣೆ ವ್ಯವಸ್ಥೆಗಳಲ್ಲಿ ನೆಲೆಗೊಳಿಸಿರಬಹುದಾದ ಕೋಡ್‌ನ ವಿವರಗಳನ್ನು ಪರೀಕ್ಷಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಹೇಳಿರುವ ರೆಡ್ ಪ್ಯೂಚರ್,ತಾನು ಈ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ, ಆದರೆ ಮಾಲ್‌ವೇರ್‌ಗಳನ್ನು ತಾವು ಪತ್ತೆ ಹಚ್ಚಿದ್ದೇವೆಯೇ ಎಂಬ ಬಗ್ಗೆ ಅವರು ತನಗೆ ಯಾವುದೇ ಮರುಮಾಹಿತಿಯನ್ನು ಒದಗಿಸಿಲ್ಲ ಎಂದಿದೆ.

ಸೈಬರ್ ದಾಳಿಗೂ ಉಭಯ ದೇಶಗಳ ನಡುವಿನ ಇತ್ತೀಚಿನ ಗಡಿ ಉದ್ವಿಗ್ನತೆಗೂ ತಳುಕು ಹಾಕಿರುವ ರೆಡ್ ಪ್ಯೂಚರ್, ಚೀನಾದ ಸೈಬರ್ ಅಭಿಯಾನವು ತನ್ನ ದಾಳಿಗೆ ಗುರಿಯಾಗಿಸಿಕೊಂಡಿರುವ ಭಾರತದ 10 ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಕೇಂದ್ರಗಳನ್ನು ಹಾಗೂ ಎರಡು ಬಂದರುಗಳನ್ನು ತಾನು ಗುರುತಿಸಿರುವುದಾಗಿ ತಿಳಿಸಿದೆ.

ಭಾರತವೂ ಸೈಬರ್ ಬೇಹುಗಾರಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿರುವ ವರದಿಯು ಭಾರತ ಸರಕಾರದಿಂದ ಪ್ರಾಯೋಜಿತವೆಂದು ಶಂಕಿಸಲಾಗಿರುವ 'ಸೈಡ್‌ವಿಂಡರ್‌' ಗುಂಪು 2020ರಲ್ಲಿ ಚೀನಿ ಸೇನೆ ಮತ್ತು ಸರಕಾರಿ ಸಂಸ್ಥೆಗಳನ್ನು ಗುರಿಯಾಗಿ ಸಿಕೊಂಡು ದಾಳಿಗಳನ್ನು ನಡೆಸಿತ್ತು ಎಂದಿದೆ.

ಗಡಿ ಉದ್ವಿಗ್ನತೆಯನ್ನು ಶಮನಗೊಳಿಸಲು ಭಾರತ ಮತ್ತು ಚೀನಾ ಇತ್ತೀಚೆಗೆ ಒಪ್ಪಿಕೊಂಡಿವೆಯಾದರೂ ಬೇಹುಗಾರಿಕೆಯನ್ನು ನಡೆಸಲು ಅಥವಾ ನೆಟ್‌ವರ್ಕ್‌ಗಳನ್ನು ಪ್ರವೇಶಿಸಲು ಅವು ತಮ್ಮ ಸೈಬರ್ ಕಾರ್ಯಾಚರಣೆಗಳನ್ನು ಮುಂದುವರಿಸಲಿವೆ ಎಂದಿರುವ ವರದಿಯು, ದಕ್ಷಿಣ, ಪಶ್ಚಿಮ, ಪೂರ್ವ ಮತ್ತು ಈಶಾನ್ಯ ಭಾರತಗಳಲ್ಲಿನ ಪ್ರಾದೇಶಿಕ ಲೋಡ್ ಡಿಸ್ಪ್ಯಾಚಿಂಗ್ ಸೆಂಟರ್ (ಎಲ್‌ಡಿಸಿ)ಗಳು,ದಿಲ್ಲಿ ಮತ್ತು ತೆಲಂಗಾಣಗಳಲ್ಲಿಯ ರಾಜ್ಯ ಎಲ್ ಡಿಸಿಗಳು ಹಾಗೂ ಕರ್ನಾಟಕದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೂಡಿಗಿ ಗ್ರಾಮದಲ್ಲಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ ಟಿಪಿಸಿ )ದ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಅನ್ನು ಚೀನಾ ಗುರಿಯಾಗಿಸಿಕೊಂಡಿದೆ ಎಂದಿದೆ. ಇದೇ ರೀತಿ ಮುಂಬೈ ಪೋರ್ಟ್ ಟ್ರಸ್ಟ್ ಮತ್ತು ತಮಿಳುನಾಡಿನ ತೂತ್ತುಕುಡಿ ಬಂದರುಗಳು ಚೀನಿ ಹ್ಯಾಕರ್‌ಗಳ ಗುರಿಯಾಗಿವೆ ಎಂದು ಅದು ತಿಳಿಸಿದೆ.

ಕಳೆದ ಅಕ್ಟೋಬರ್‌ನಲ್ಲಿ ಥಾಣೆ ಜಿಲ್ಲೆಯ ಪಢಾಘ ಎಲ್ ಡಿಸಿಯಲ್ಲಿ ವೈಫಲ್ಯದಿಂದಾಗಿ ಮುಂಬೈಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿ ತಗೊಂಡಿದ್ದಾಗ ಸ್ಥಳೀಯ ಮಾಧ್ಯಮವೊಂದು ಅಲ್ಲಿ ಪತ್ತೆಯಾಗಿದ್ದ ಮಾಲ್‌ವೇರ್‌ನೊಂದಿಗೆ ಅದನ್ನು ತಳುಕು ಹಾಕಿದ್ದನ್ನು ವರದಿಯು ಉಲ್ಲೇಖಿಸಿದೆ.

ಈ ಮಧ್ಯೆ ಹಲವಾರು ತಜ್ಞರು ಭಾರತದ ವಿದ್ಯುತ್ ಕ್ಷೇತ್ರದಲ್ಲಿಯ ಮತ್ತು ರೈಲ್ವೆ ವ್ಯವಸ್ಥೆಯಲ್ಲಿನ ಚೀನಿ ನಿರ್ಮಿತ ಹಾರ್ಡ್‌ವೇರ್‌ಗಳನ್ನು ಬದಲಿಸುವಂತೆ ನರೇಂದ್ರ ಮೋದಿ ಸರಕಾರಕ್ಕೆ ತಮ್ಮ ಕರೆಯನ್ನು ಪುನರುಚ್ಚರಿಸಿದ್ದಾರೆ.

ನಾವಿನ್ನೂ ವಿದೇಶಿ ಹಾರ್ಡ್‌ವೇರ್ ಮತ್ತು ವಿದೇಶಿ ಸಾಫ್ಟ್ವೇರ್ ಗಳ ಅವಲಂಬನೆಯಿಂದ ಹೊರಬರಲು ಸಾಧ್ಯವಾಗಿಲ್ಲ ಎನ್ನುವುದೇ ಸಮಸ್ಯೆಯಾಗಿದೆ ಎಂದಿದ್ದಾರೆ ಸೈಬರ್‌ ತಜ್ಞರೂ ಆಗಿರುವ ನಿವೃತ್ತ ಲೆ.ಜ.ಡಿ.ಎಸ್.ಹೂಡಾ.

ಚೀನಿ ಕಂಪೆನಿಗಳು ಸೇರಿದಂತೆ ಭಾರತದ ಐಟಿ ಗುತ್ತಿಗೆಗಳನ್ನು ಪುನರ್ ಪರಿಶೀಲಿಸಲಾಗುತ್ತಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಟುಸತ್ಯವೆಂದರೆ ಹಾಲಿ ಇರುವ ಮೂಲಸೌಕರ್ಯಗಳಿಂದ ಕಳಚಿಕೊಳ್ಳುವುದು ತುಂಬ ದುಬಾರಿಯ ಮತ್ತು ಕಷ್ಟದ ಕೆಲಸವಾಗಿದೆ.

ಸೀರಮ್, ಭಾರತ್ ಬಯೋಟೆಕ್‌ಗೂ ಚೀನಿ ಸೈಬರ್ ದಾಳಿ: 'ಸೆಫರ್ಮಾ' ಸ್ಫೋಟಕ ಮಾಹಿತಿ

ಹೊಸದಿಲ್ಲಿ: ಚೀನಾ ಸರಕಾರದ ಬೆಂಬಲಿತ ಹ್ಯಾಕಿಂಗ್ ಗುಂಪೊಂದು ಭಾರತದಲ್ಲಿ ಕೊರೋನ ವೈರಸ್ ವಿರುದ್ಧ ಲಸಿಕೆಗಳನ್ನು ತಯಾರಿಸುತ್ತಿರುವ ಸೀರಮ್ ಇನ್ ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕಂಪೆನಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿದೆ ಎಂದು ಸೈಬರ್‌ ಬೇಹುಗಾರಿಕೆ ಸಂಸ್ಥೆ 'ಸೈಫರ್ಮಾ' ತಿಳಿಸಿದೆ. ಗೋಲ್ಡ್ಮನ್ ಸ್ಯಾಚ್ ಬೆಂಬಲಿತ ಸೈಫರ್ಮಾ ಸಿಂಗಾಪುರ ಮತ್ತು ಟೋಕಿಯೊಗಳಲ್ಲಿ ನೆಲೆಗಳನ್ನು ಹೊಂದಿದೆ.

ಚೀನಾ ಮತ್ತು ಭಾರತ ಹಲವಾರು ದೇಶಗಳಿಗೆ ಕೋವಿಡ್-19 ಲಸಿಕೆಗಳನ್ನು ಮಾರಾಟ ಮಾಡಿವೆ ಅಥವಾ ಉಚಿತವಾಗಿ ಪೂರೈಸಿವೆ. ವಿಶ್ವದಲ್ಲಿ ಲಭ್ಯ ಲಸಿಕೆಗಳಲ್ಲಿ ಭಾರತದ ಪಾಲು ಶೇ.60ಕ್ಕೂ ಹೆಚ್ಚಿದೆ.

'ಸ್ಪೇನ್ ಪಂಡಾ' ಎಂದೂ ಕರೆಯಲಾಗುವ ಚೀನಿ ಹ್ಯಾಕಿಂಗ್ ಗುಂಪು ಎಪಿಟಿ10 ಭಾರತ್ ಬಯೊಟೆಕ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಐಟಿ ಮೂಲಸೌಕರ್ಯ ಮತ್ತು ಪೂರೈಕೆ ಸರಪಳಿ ಸಾಫ್ಟ್‌ವೇರ್‌ನಲ್ಲಿ ಲೋಪಗಳನ್ನು ಮತ್ತು ದೌರ್ಬಲ್ಯಗಳನ್ನು ಗುರುತಿಸಿದೆ ಎಂದು ಸೈಫರ್ಮಾ ತಿಳಿಸಿದೆ.

ಬೌದ್ಧಿಕ ಆಸ್ತಿಗಳ ಕಳ್ಳತನ ಮತ್ತು ಭಾರತೀಯ ಔಷಧಿ ತಯಾರಿಕೆ ಕಂಪೆನಿಗಳಿಗಿಂತ ಹೆಚ್ಚಿನ ಸ್ಪರ್ಧಾತ್ಮಕ ಲಾಭವನ್ನು ಪಡೆಯುವುದು ಈ ಕುತಂತ್ರದ ನಿಜವಾದ ಉದ್ದೇಶವಾಗಿದೆ ಎಂದು ಸೈಫರ್ಮಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುಮಾರ ರಿತೇಶ್ ಹೇಳಿದರು.

ಎಪಿಟಿ10 ಸಕ್ರಿಯವಾಗಿ ಸೀರಮ್ ಅನ್ನು ಗುರಿಯಾಗಿ ಸಿಕೊಳ್ಳುತ್ತಿದೆ. ಕಂಪೆನಿಯ ಹಲವಾರು ಪಬ್ಲಿಕ್ ಸರ್ವ‌್ರಗಳು ದುರ್ಬಲವಾಗಿವೆ ಎನ್ನುವುದು ಅವರಿಗೆ ಗೊತ್ತಾಗಿದೆ. ದುರ್ಬಲ ವೆಬ್ ಅಪ್ಲಿಕೇಷನ್ ಹಾಗೂ ದುರ್ಬಲ ಕಂಟೆಂಟ್ ಮ್ಯಾನೇಜ್ ಮೆಂಟ್ ಸಿಸ್ಟಮ್‌ನ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ ಎಂದು ಹ್ಯಾಕರ್‌ಗಳನ್ನು ಪ್ರಸ್ತಾಪಿಸಿ ರಿತೇಶ್ ಹೇಳಿದರು.

ಭಾರತದಲ್ಲಿ ಆಸ್ವಾಝನೆಕಾದ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುತ್ತಿರುವ ಸೀರಮ್ ಕಂಪೆನಿ ಸದ್ಯವೇ ಅಮೆರಿಕದ ನೊವೊವ್ಯಾಕ್ಸ್ ಕಂಪೆನಿಯು ಅಭಿವೃದ್ಧಿಗೊಳಿಸಿರುವ ಕೊರೋನ ವೈರಸ್ ಲಸಿಕೆಯ ಸಗಟು ತಯಾರಿಕೆಯನ್ನು ಆರಂಭಿಸಲಿದೆ.

ಸೈಫರ್ಮಾದ ವರದಿಗೆ ಚೀನಿ ವಿದೇಶಾಂಗ ಸಚಿವಾಲಯವು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ಸೀರಮ್ ಮತ್ತು ಭಾರತ ಬಯೋಟೆಕ್ ಕೂಡ ಪ್ರತಿಕ್ರಿಯಿಸಲು ನಿರಾಕರಿಸಿವೆ.

ಭಾರತ, ಕೆನಡಾ, ಫ್ರಾನ್ಸ್, ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಕೋವಿಡ್-19 ಲಸಿಕೆ ತಯಾರಿಕೆ ಕಂಪೆನಿಗಳನ್ನು ಗುರಿಯಾಗಿಸಿಕೊಂಡು ರತ್ಯ ಮತ್ತು ಉತ್ತರ ಕೊರಿಯಾದಿಂದ ಸೈಬರ್ ದಾಳಿಗಳನ್ನು ತಾನು ಪತ್ತೆ ಹಚ್ಚಿರುವುದಾಗಿ ಮೈಕ್ರೋಸಾಫ್ಟ್ ಕಳೆದ ವರ್ಷದ ನವೆಂಬರ್‌ನಲ್ಲಿ ಟ ಹೇಳಿತ್ತು. ಚೀನಿ ಹ್ಯಾಕರ್‌ಗಳು ಭಾರತೀಯ ಕಂಪೆನಿಗಳಿಂದ ಲಸಿಕೆ ಸಂಬಂಧಿತ ಯಾವ ಮಾಹಿತಿಯನ್ನು ಕದ್ದಿರಬಹುದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ರಿತೇಶ್ ತಿಳಿಸಿದರು.

Read These Next

ಓವೈಸಿ ಮನೆ ಮೇಲೆ ದಾಳಿ: ಐವರ ಬಂಧನ

ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಅವರ ಇಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದ ಆರೋಪದ ಮೇರೆಗೆ ಹಿಂದೂ ಸೇನಾದ ಐವರನ್ನು ...

ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ; ಚರಣ್‌ಜೀತ್ ಸಿಂಗ್ ಚನ್ನಿಗೆ ಸಿಎಂ ಪಟ್ಟ, ಇಂದು ಪ್ರಮಾಣ

ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್, ದಲಿತ ಸಿಖ್ ಸಮುದಾಯದ ...

ಕಾಬೂಲ್: ಅಫ್ಘಾನಿಸ್ತಾನ: ಕಂದಹಾರ್‌ಗೆ ತಾಲಿಬಾನ್ ಲಗ್ಗೆ ಭಾರತದಿಂದ ರಾಯಭಾರ ಕಚೇರಿ ತೆರವು

ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತದ ಕಂದಹಾರ್ ನಲ್ಲಿ ಇನ್ನಷ್ಟು ಪ್ರದೇಶ ತಾಲಿಬಾನ್ ಪಡೆಗಳ ನಿಯಂತ್ರಣಕ್ಕೆ ಬಂದಿದ್ದು ನಗರದಲ್ಲಿ ...

ರಿಯೊಡಿಜನೈರೊ: ಕೋವ್ಯಾಕ್ಸಿನ್ ಖರೀದಿ ಒಪ್ಪಂದ ವಿವಾದ: ಬ್ರೆಝಿಲ್ ಅಧ್ಯಕ್ಷರ ವಿರುದ್ಧ ತನಿಖೆಗೆ ಸುಪ್ರೀಂ ಒಪ್ಪಿಗೆ

ಭಾರತದಿಂದ ಕೋವ್ಯಾಕ್ಸಿನ್ ಲಸಿಕೆ ಖರೀದಿ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಎದುರಿಸುತ್ತಿರುವ ಬ್ರೆಝಿಲ್ ಅಧ್ಯಕ್ಷ ಜೈರ್ ...

ಹಜ್ಜ್ ಯಾತ್ರೆಗೆ ಹೊರಗಿನವರಿಗೆ ಪರ್ವೇಶ್ ವಿಲ್ಲಾ; ಈ ವರ್ಷವು ಸೀಮಿತ್ ಮಂದಿಗೆ ಅವಕಾಶ'

ಕೊರೊನಾ ಸೋಂಕಿನಿಂದಾಗಿ ಈ ಬಾರಿ ಹಜ್ ಯಾತ್ರೆಗೆ ಸೌದಿ ಅರೇಬಿಯಾದ  60 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಿ ಸೌದಿ ಅರೇಬಿಯಾ ಸರ್ಕಾರ ...

ಏ.10 ರಿಂದ 20 ರ ವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಕರ್ಫ್ಯೂಜಾರಿ-ಜಿಲ್ಲಾಧಿಕಾರಿ

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂದಿಸಿದಂತೆ ಜಿಲ್ಲಾಡಳಿತ ಎಲ್ಲಾ ಅವಶ್ಯ ಕ್ರಮಗಳನ್ನು ...