ಭಟ್ಕಳ: ಓಮೈಕ್ರಾನ್ ತಡೆಗೆ ಭಟ್ಕಳದಲ್ಲಿ ಚೆಕ್‍ಪೋಸ್ಟ್ ಕಾರ್ಯಾರಂಭ; ಸೋಡಿಗದ್ದೆ ಕ್ರಾಸ್, ಕುಂಟವಾಣಿಯಲ್ಲಿ ತಪಾಸಣೆ

Source: S O News | By I.G. Bhatkali | Published on 7th December 2021, 9:03 PM | Coastal News |

ಭಟ್ಕಳ:  ಕೊರೊನಾ ರೂಪಾಂತರಿ ಓಮೈಕ್ರಾನ್ ಸೋಂಕು ತಡೆಗೆ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿರುವಂತೆಯೇ, ಜಿಲ್ಲೆಯ ಗಡಿ ಪ್ರದೇಶವಾದ ಭಟ್ಕಳದಲ್ಲಿಯೂ ನಿಯಮಗಳ ಅನುಷ್ಠಾನಕ್ಕೆ ಸಿದ್ಧತೆ ಆರಂಭವಾಗಿದೆ.

ಕೇರಳ ಹಾಗೂ ಮಹಾರಾಷ್ಟ್ರಗಳಿಂದ ಬರುವ ವಾಹನಗಳ ಮೇಲೆ ನಿಗಾ ಇಡಲಾಗಿದ್ದು, ಕೊರೊನಾ ಪರೀಕ್ಷಾ ವರದಿಯ ಆಧಾರದಲ್ಲಿ ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಪಂಚಾಯತ ಹಾಗೂ ಪೊಲೀಸ್ ಸಿಬ್ಬಂದಿಗಳೊಂದಿಗೆ ಆಶಾ ಕಾರ್ಯಕರ್ತೆಯರನ್ನು ತಪಾಸಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪರ ರಾಜ್ಯದವರ ಜ್ವರ ತಪಾಸಣೆಯನ್ನು ಚೆಕ್‍ಪೋಸ್ಟಗಳಲ್ಲಿ ಮಾಡಲಾಗುತ್ತಿದೆ. ಆದರೆ ಓಮೈಕ್ರಾನ್ ಹಾವಳಿ ಇನ್ನೂ ಈ ಭಾಗದಲ್ಲಿ ಕಂಡುಬಂದಿಲ್ಲವಾದುದರಿಂದ, ವಾಹನ ತಪಾಸಣೆ ಇನ್ನಷ್ಟೇ ಬಿಗು ಸ್ವರೂಪವನ್ನು ಪಡೆದುಕೊಳ್ಳಬೇಕಿದೆ.

 ಓಮೈಕ್ರಾನ್ ಸೋಂಕು ತಡೆಯ ಬಗ್ಗೆ ಸರಕಾರದ ಮಾರ್ಗಸೂಚಿ ಅನುಷ್ಠಾನಕ್ಕೆ ಪ್ರಂiÀiತ್ನ ನಡೆದಿದೆ. ಜಿಲ್ಲೆಯ ಗಡಿ ಭಾಗಿರುವ ಗೊರಟೆ, ಕುಂಟವಾಣಿ ಭಾಗಗಳಲ್ಲಿ ಚೆಕ್‍ಪೋಸ್ಟ ತೆರೆದು ಪರ ರಾಜ್ಯದವರ ಬಗ್ಗೆ ನಿಗಾ ಇರಿಸುತ್ತೇವೆ
  - ಎಸ್.ರವಿಚಂದ್ರ, ತಹಸೀಲ್ದಾರರು, ಭಟ್ಕಳ

ಗಡಿಯಲ್ಲಿ ಚೆಕ್‍ಪೋಸ್ಟ ಇಲ್ಲ: 
ತಾಲೂಕಾಡಳಿತ ಹೊರಡಿಸಿರುವ ಮಾರ್ಗಸೂಚಿಯಂತೆ ಭಟ್ಕಳ ಗಡಿ ಪ್ರದೇಶವಾದ ಗೊರಟೆಯಲ್ಲಿ ಚೆಕ್‍ಪೋಸ್ಟ್ ಅಳವಡಿಸಲಾಗುತ್ತಿದೆ ಎಂದು ಹೇಳಲಾಗಿದ್ದರೂ, ವಾಸ್ತವವಾಗಿ ಗೊರಟೆಯಲ್ಲಿ ಯಾವುದೇ ಚೆಕ್‍ಪೋಸ್ಟ ಅನ್ನು ಇಲ್ಲಿಯವರೆಗೂ ಹಾಕಿಲ್ಲ. ಶಿರೂರು ಟೋಲ್‍ಗೇಟ್‍ಗೂ ಮುನ್ನ 500ಮೀ. ಅಂತರದಲ್ಲಿ ಪಕ್ಕದ ಬೈಂದೂರು ಪೊಲೀಸರು ಚೆಕ್‍ಪೋಸ್ಟನ್ನು ಹಾಕಿಕೊಂಡಿದ್ದರೂ ಅಲ್ಲಿ ಯಾವುದೇ ತಪಾಸಣೆ ಕಾರ್ಯ ರವಿವಾರ ಆರಂಭವಾಗಿಲ್ಲ. ಕುಂಟವಾಣಿಯಲ್ಲಿಯೂ ತಪಾಸಣೆ ಇನ್ನಷ್ಟೇ ಚುರುಕು ಪಡೆದುಕೊಳ್ಳಬೇಕಾಗಿದೆ. ಈ ಮೊದಲಿನಂತೆ ಸೋಡಿಗದ್ದೆ ಕ್ರಾಸ್‍ನಲ್ಲಿಯಷ್ಟೇ ಚೆಕ್‍ಪೋಸ್ಟ್ ತೆರೆಯಲಾಗಿದ್ದು, ಓಮೈಕ್ರಾನ್ ಬಿಸಿ ಇನ್ನೂ ತಟ್ಟಿಲ್ಲ. 

ಲಸಿಕಾ ವಿತರಣೆ ವೇಗಕ್ಕೆ ಕ್ರಮ: 
ಜಿಲ್ಲೆಯಲ್ಲಿ ವಿಶೇಷವಾಗಿ ಭಟ್ಕಳ ಪಟ್ಟಣ ಪ್ರದೇಶದಲ್ಲಿ ಲಸಿಕಾ ವಿತರಣೆ ಕುಂಠಿತಗೊಂಡಿರುವ ಕಾರಣ ಜಿಲ್ಲಾಧಿಕಾರಿಗಳೇ ಭಟ್ಕಳ ಪಟ್ಟಣದ ಬೆಳವಣಿಗೆಯ ಮೇಲೆ ನಿಗಾ ವಹಿಸಿದ್ದು, ಲಸಿಕೆ ವಿತರಣೆಗೆ ವೇಗ ನೀಡುವಂತೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ಮುಖಂಡರು, ಸ್ಥಳೀಯ ಕೆಲವು ಧಾರ್ಮಿಕ ಮುಖಂಡರ ಸಭೆ ನಡೆದಿದ್ದು, ಲಸಿಕೆಯ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ. ಲಸಿಕೆ ನಿರಾಕರಿಸುತ್ತ ಹೋದರೆ ಮುಂದಿನ ದಿನಗಳಲ್ಲಿ ಸರಕಾರಿ ಸವಲತ್ತುಗಳಿಗೆ ತಡೆ ನೀಡುವ ನಿರ್ಧಾರ ಹೊರ ಬರುವ ಸಾಧ್ಯತೆಯ ಬಗ್ಗೆಯೂ ಚರ್ಚಿಸಲಾಗಿದೆ. ನಂತರದ ಬೆಳವಣಿಗೆಯಲ್ಲಿ ತಂಜೀಮ್ ಮುಖಂಡರು ಕೊರೊನಾ ತಡೆ ಲಸಿಕೆ ಪಡೆಯುವಂತೆ ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದು, ಪರಿಣಾಮಗಳ ಬಗ್ಗೆ ಕಾಯಲಾಗುತ್ತಿದೆ. ಈ ನಡುವೆ ಸಂತೆ ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಲಸಿಕೆ ವಿತರಣೆ ಮುಂದುವರೆದಿದ್ದು, ಇದರಿಂದ ಹೆಚ್ಚಿನ ಫಲ ಸಿಗಬಹುದು ಎಂದು ಆರೋಗ್ಯಾಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

Read These Next