ಕಾರವಾರ: ಜಿಲ್ಲೆಯಲ್ಲಿ ಶಾಲಾ ಕಾಲೇಜು ಮಟ್ಟದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪ್ರಚಲಿತದಲ್ಲಿರುವ ಸರ್ಕಾದ ಮಾರ್ಗಸೂಚಿಗೆ ಹೆಚ್ಚುವರಿಯಾಗಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಸಂಬಂದಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿರುತ್ತಾರೆ.
ದಾಂಡೇಲಿ ನಗರ ಪ್ರದೇಶದದಲ್ಲಿನ 1ರಿಂದ 8ನೇ ತರಗತಿಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನು ಜ. 26 ರವರೆಗೆ ತರಗತಿಗಳನ್ನು ಸ್ಥಗಿತ ಮಾಡುವಂತೆ ಶಿರಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಹಾಗೂ ಪಿ ಯು ಕಾಲೇಜುಗಳಲ್ಲಿ ದ್ವಿತೀಯ ಪಿಯು ಕಾಲೇಜಿನ ವ್ಯಾಸಂಗಕ್ಕೆ ಆದ್ಯತೆ ನೀಡಿ ಪ್ರಥಮ ಪಿಯು ತರಗತಿಗಳನ್ನು 50% ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೋವಿಡ್ 19ರ ಶಿಷ್ಟಾಚಾರದನ್ವಯ ಪರ್ಯಾಯ ತರಗತಿಗಳನ್ನು ಆಯೋಜಿಸಿ ತರಗತಿಗಳನ್ನು ನಡೆಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿರುತ್ತಾರೆ.
ಅದೇ ರೀತಿ ಸರಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಒಟ್ಟಾರೆ 50% ವಿದ್ಯಾರ್ಥಿಗಳಿಗೆ ಮೀರದಂತೆ ತರಗತಿಗಳನ್ನು ನಡೆಸುವ ಬಗ್ಗೆ ಪದವಿ ಕಾಲೇಜುಗಳ ಪ್ರಾಂಶುಪಾಲರು ಕ್ರಮ ವಹಿಸಬೇಕೆಂದಿದ್ದಾರೆ.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮಾಸ್ಕ್ ಧರಿಸದೆ ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ಶಾಲಾ ಕಾಲೇಜು ಆವರಣದಲ್ಲಿ ಓಡಾಡುತ್ತಿರುವುದು ಕಂಡುಬಂದಲ್ಲಿ ಆಯಾ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯನ್ನೇ ಹೊಣೆಗಾರರನ್ನಾಗಿಸಿ ಕೋವಿಡ್ 19ರ ಶಿಷ್ಟಾಚಾರವನ್ನು ಪಾಲನೆ ಮಾಡದೆ ಇರುವ ಬಗ್ಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.