ಭಾರತೀಯ ಜನತಾ ಪಕ್ಷದ ದುರ್ಬಲ ಕೊಂಡಿ

Source: sonews | By Staff Correspondent | Published on 26th September 2017, 11:05 PM | State News | National News | Don't Miss |

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಗ್ರಾಮೀಣ ಭಾರತವನ್ನು ನಿರ್ಲಕ್ಷ್ಯ ಮಾಡುತ್ತಿದ್ದು ಅದಕಾಗಿ ಅದು ವಿತ್ತೀಯ ಮತ್ತು ರಾಜಕೀಯ ಬೆಲೆಯನ್ನು ತೆರಬೇಕಾಗುತ್ತದೆ.

ರಾಜಸ್ಥಾನದ ರೈತರು ಸತತ ಹೋರಾಟ ನಡೆಸಿ ಅಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರದಿಂದ ೨೦,೦೦೦ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮನ್ನಾ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಳೆದ ನಾಲಕ್ಕು ತಿಂಗಳಲ್ಲಿ ಈ ರೀತಿ ನಾಲಕ್ಕು ರಾಜ್ಯಗಳು ಸಾಲಮನ್ನಾವನ್ನು ಘೋಷಿಸಿವೆ. ಅಷ್ಟೇ ಅಲ್ಲ. ಇದೇ ಬಗೆಯ ರೈತ ಹೋರಾಟಗಳು ದೇಶದ ಇನ್ನೂ ಹಲವು ಕಡೆ ಹರಡಿಕೊಳ್ಳುವ ಸಾಧ್ಯತೆಗಳಿವೆ. ಇವೆಲ್ಲವೂ ಆ ರಾಜ್ಯಗಳಲ್ಲಿ ವಿತ್ತೀಯ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ಸೃಷ್ಟಿಸಲಿವೆ. ಹಾಗಿದ್ದರೆ ಇದು ಬಿಜೆಪಿ ಅತ್ಯಂತ ಹೆಗ್ಗಳಿಕೆಯಿಂದ ಮುಂದುವರೆಸಿದ್ದ ಆರ್ಥಿಕ ಸುಧಾರಣೆ ಕ್ರಮಗಳಿಂದ  ಹಿಂದೆಸರಿಯುವಂತೆ ಮಾಡಬಹುದೇ?

ರಾಜಸ್ಥಾನದ ಶೆಕಾವತ್ ಪ್ರಾಂತ್ಯದ ಸಿಕಾರ್, ಜುನ್‌ಜುನು ಮತ್ತು ಚುರು ಜಿಲ್ಲೆಯ ರೈತರು ೨೦೧೭ರ ಸೆಪ್ಟೆಂಬರ್ ೧ ರಂದು ಸಿಕಾರ್ ನಲ್ಲಿ ಸಭೆ ಸೇರಿ ಅನಿರ್ದಿಷ್ಟ ಧರಣಿಯನ್ನು ಪ್ರಾರಂಭಿಸಿದರು. ನೋಟು ನಿಷೇಧದ ನಂತರದಲ್ಲಿ ಕುಸಿದ ಬೆಲೆಯ ಸಮಸ್ಯೆಗಳನ್ನೂ ಒಳಗೊಂಡಂತೆ ಆ ಪ್ರದೇಶದಲ್ಲಿ ಕೃಷಿಯು ಎದುರಿಸುತ್ತಿದ್ದ ಹಲವಾರು ಸಮಸ್ಯೆಗಳಿಂದ ರೈತರು ತತ್ತರಿಸಿದ್ದರು, ಹೀಗಾಗಿ ೨೦೧೭ರ ಜೂನ್‌ನಿಂದಲೇ ಇದರ ಬಗ್ಗೆ ದೊಡ್ಡ ಹೋರಾಟಗಳನ್ನು ನಡೆಸುವ ಹಲವಾರು ಪ್ರಯತ್ನಗಳೂ ಕೂಡ ನಡೆದು ವಿಫಲವಾಗಿದ್ದವು. ಎಂದಿನಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವು ರೈತಾಪಿಯ ಸಮಸ್ಯೆಗಳನ್ನು ಅರಿಯುವ ಗೋಜಿಗೇ ಹೋUಲಿಲ್ಲ. ಬದಲಿಗೆ, ರೈತರ ಪ್ರತಿಭಟನೆಯನ್ನು ಮತ್ತು ಐಕ್ಯತೆಯನ್ನು ಮುರಿಯುವ ಸಂಚುಗಳಲ್ಲಿ ತೊಡಗಿತು. ಆದರೆ ಈ ಪ್ರಯತ್ನಗಳನ್ನು ಸಿಪಿಎಂ ಪಕ್ಷದ ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್)ನೇತೃತ್ವದಲ್ಲಿ ಗಟ್ಟಿಯಾಗಿ ಮುಂದುವರೆಯುತ್ತಲೇ ಹೋದ ಪ್ರತಿರೋಧವು ವಿಫಲಗೊಳಿಸಿತು. ಈ ಬೃಹತ್ ಪ್ರತಿರೋಧದಲ್ಲಿ ಸಾಮಾನ್ಯ ಜನರೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳತೊಡಗಿದರು. ಜನ ಸಾಮಾನ್ಯರು,  ಉದ್ಯಮಿಗಳು, ಜಿಲ್ಲಾ ಕೇಂದ್ರಗಳ ವರ್ತಕರು, ಸಣ್ಣಪುಟ್ಟ ಪಟ್ಟಣಗಳಲ್ಲಿನ ಸೇವಾ ವಲಯದ ಹಲವಾರು ಕಾರ್ಮಿಕ ಸಂಘಟನೆಗಳು ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ, ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಬೀದಿಗಿಳಿದರು. ಹಳ್ಳಿ ಮತ್ತು ಪಟ್ಟಣಗಳಲ್ಲಿ ಜನರು ವಿಧಿಸಿದ್ದ ಕರ್ಫ್ಯೂ ಮತ್ತು ಸಂಪೂರ್ಣ ಬಂದ್‌ಗಳು ಯಶಸ್ವಿಯಾಗಿ ಜಾರಿಯಾಗುವಂತೆ ನೋಡಿಕೊಂಡರು. ಈ ವರ್ಷ ದೇಶದ ಇತರೆಡಗಳಲ್ಲಿ ಭುಗಿಲೆದ್ದ ರೈತ ಪ್ರತಿಭಟನೆಗಳಿಗಿಂತ ಭಿನ್ನವಾಗಿ ರಾಜಸ್ಥಾನದ ಈ ರೈತ ಹೋರಾಟವನ್ನು ಗ್ರಾಮೀಣ ಸಮಾಜದ ಎಲ್ಲಾ ವರ್ಗಗಳು ಪಾಲ್ಗೊಳ್ಳುವಂತೆ ಸಂಘಟಿಸಲಾಗಿತ್ತು. ಇದು ದೇಶದಲ್ಲಿ ಮುಂದುವರೆಯುತ್ತಲೇ ಇರುವ ಗ್ರಾಮೀಣ ಸಂಕ್ಷೋಭೆಯ ಸರಣಿಯಲ್ಲಿ ಒಂದು ಮಹತ್ತರ ಬದಲಾವಣೆಯನ್ನು ಕೂಡಾ ಸೂಚಿಸುತ್ತದೆ.

ಬಿಜೆಪಿಯ ಆರ್ಥಿಕಾ ಸುಧಾರಣ ಕಾರ್ಯಸೂಚಿಯಲ್ಲಿ ಗ್ರಾಮೀಣ ಭಾರತವು  ಚರ್ಚೆಯ ಪ್ರಧಾನ ವಿಷಯವಾಗಿದ್ದು ಬಹಳ ಅಪರೂಪ. ಆ ಪಕ್ಷದ ರಾಜಕೀಯ ಚಟುವಟಿಕೆಗಳು ಮೊದಲಿಂದಲೂ ನಗರ ಮತ್ತು ಪಟ್ಟಣಗಳಿಗೆ ಮಾತ್ರ ಸೀಮಿತವಾಗಿತ್ತು. ಮತ್ತು ಈಗಲೂ ದೇಶವ್ಯಾಪಿ ನಗರ ಮತ್ತು ಪಟ್ಟಣಗಳ ಸಣ್ಣ ಮತ್ತು ದೊಡ್ಡ ಬಜಾರುಗಳು ಮತ್ತು ಮಂಡಿಗಳ ಮೇಲೆ ಪ್ರಭಾವ ಬೀರುವಷ್ಟು ಶಕ್ತರಾಗಿರುವ ಬ್ರಾಹ್ಮಣರು ಮತ್ತು ಬನಿಯಾಗಳೇ ಅದರ ಮುಖ್ಯ ಕಾರ್ಯಕರ್ತಗಣದಲ್ಲಿ ಪ್ರಧಾನವಾಗಿದ್ದಾರೆ.  ೨೦೧೪ರ ತನಕ ಗ್ರಾಮೀಣ ಪ್ರದೇಶದಲ್ಲಿ ಅದಕ್ಕೆ ಬಲವಾದ ಬೇರುಗಳಿರಲಿಲ್ಲ. ಆದರೆ ಮೋದಿ ಅಲೆಯಿಂದಾಗಿ ೨೦೧೪ರಲ್ಲಿ ರಾಜಸ್ಥಾನದ ಗ್ರಾಮೀಣ ರೈತಾಪಿಯು ನಿರ್ಣಾಯಕವಾಗಿ ಬಿಜೆಪಿಯ ಪರ ವಾಲಿದರು ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಗ್ರಾಮೀಣ ಬೆಂಬಲ ಬಿಜೆಪಿಯ ಕೈ ತಪ್ಪುತ್ತಿರುವಂತಿದೆ. ಪ್ರಾಯಶಃ ಬಿಜೆಪಿಯ ಆರ್ಥಿಕ ಸುಧಾರಣ ಯೋಜನೆಗಳಲ್ಲಿ ಗ್ರಾಮೀಣ ವೆಂಬುದು ಎಂದಿಗೂ ಒಂದು ಅಂತರ್ಗತ ಭಾಗವಾಗದಿರುವುದು ಇದಕ್ಕೆ ಕಾರಣವಾಗಿರಬಹುದು.

ಉದಾರೀಕರಣದ ೨೭ ವರ್ಷಗಳ ನಂತರವೂ ಗ್ರಾಮೀಣ ಅರ್ಥಿಕತೆಯ ಪ್ರಧಾನ ಭಾಗ ಕೃಷಿಯೇ ಆಗಿದೆ. ಆರ್ಥಿಕತೆಯ ಮೂಲಭೂತ ಬದಲಾವಣೆಗಳು ದೇಶದ ಶ್ರಮಶಕ್ತಿಯ ಸ್ವರೂಪದಲ್ಲಿ ಯಾವ ಬದಲಾವಣೆಗಳನ್ನು ತಂದಿಲ್ಲ. ದೇಶದ ಶ್ರಮಶಕ್ತಿಯ ಶೇ.೬೦ ಭಾಗ ಕೃಷಿಯಲ್ಲಿ ತೊಡಗಿದ್ದರೂ, ಒಟ್ಟಾರೆ ಅಂತರಿಕ ಉತ್ಪನ್ನದಲ್ಲಿ ಕೃಷಿಯ ಭಾಗ ಕೇವಲ ಶೇ.೧೫ ಮಾತ್ರ. ಕೃಷಿಯೇತರ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗದಿರುವುದು, ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಾಗದಿರುವುದು ಮತ್ತು ಬಡವರ ಕಲ್ಯಾಣ ಯೋಜನೆಗಳ ಮೇಲಿನ ವೆಚ್ಚ ದಿನೇದಿನೇ ಕಡಿಮೆಯಾಗುತ್ತಿರುವುದರಿಂದ ಕೊಟ್ಯಾಂತರ ಶ್ರಮಜೀವಿಗಳು ಕೃಷಿ ಮತ್ತು ಕೃಷಿಯಾಧಾರಿತ ಸೇವೆಗಳಲ್ಲೇ ಬಂಧಿತರಾಗಿದ್ದಾರೆ. ಹೀಗಾಗಿ ಕೃಷಿಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಇಡೀ ಗ್ರಾಮೀಣ ಆರ್ಥಿಕತೆಯನ್ನೇ ನಿರ್ಲಕ್ಷ್ಯ ಮಾಡಿದಂತಾಗಿದೆ.

ಬಿಜೆಪಿಯ ಇತ್ತೀಚಿನ ಮೂರು ನೀತಿಗಳಾದ ಗೋಹತ್ಯಾ ನಿಷೇಧ, ನೋಟು ನಿಷೇಧ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ)ಗಳು ರೈತಾಪಿಯನ್ನು ಮತ್ತು ಗ್ರಾಮೀಣ ಆರ್ಥಿಕತೆಯನ್ನು ನೇರವಾಗಿ ಘಾಸಿಗೊಳಿಸಿದೆ. ನೋಟು ನಿಷೇಧವು ಗ್ರಾಮೀಣ ಮಾರುಕಟ್ಟೆ ಮತ್ತು ರೈತಾಪಿಯ ಚಲನೆಗೆ ಅತ್ಯಗತ್ಯವಾಗಿ ಬೇಕಾಗಿದ್ದ ಚಾಲ್ತಿ ನಗದನ್ನೇ ನಾಶಮಾಡಿತು. ಹೀಗಾಗಿ ಬಂಪರ್ ಬೆಳೆ ಬಂದ ವರ್ಷದಲ್ಲೂ ಬೆಲೆ ಕುಸಿತ ಉಂಟಾಗಿದ್ದರಿಂದ ರೈತಾಪಿಯ ಆದಾಯ ಕುಸಿಯಿತು. ಅದು ಮುಂದಿನ ಬೆಳೆಗೆ ಬಿತ್ತನೆಯನ್ನೂ ಮಾಡದ ಪರಿಸ್ಥಿತಿಗೆ ರೈತಾಪಿಯನ್ನು ದೂಡಿತು. ಈ ವಿದ್ಯಮಾನವೇ ದೇಶಾದ್ಯಂತ ರೈತಾಪಿಯು ಸಾಲಮನ್ನ ಮಾಡಬೇಕೆಂದು ಮಾಡುತ್ತಿರುವ ಒಕ್ಕೊರಲ ಬೇಡಿಕೆಗೆ ಕಾರಣವನ್ನು ವಿವರಿಸುತ್ತದೆ. ಹಾಗೆ ನೋಡಿದರೆ, ಸಾಲಮನ್ನವು ಮುಂದಿನ ಬೆಳೆಗೆ ಸಾಲ ತೆಗೆದುಕೊಳ್ಳಲು ರೈತಾಪಿಯನ್ನು ಅರ್ಹಗೊಳಿಸುತ್ತದಷ್ಟೆ. ಎರಡನೆಯದಾಗಿ, ಬಿಕ್ಕಟ್ಟಿನ ಕಾಲದಲ್ಲಿ ತಮ್ಮಲ್ಲಿರುವ ಜಾನುವಾರುಗಳನ್ನು ಮಾರುವ ಮೂಲಕ ರೈತಾಪಿ ತಮ್ಮ ತುರ್ತು ಬಿಕ್ಕಟ್ಟುಗಳಿಂದ ಪಾರಾಗುತ್ತಾರೆ. ಆದರೆ, ಜಾನುವಾರು ಹತ್ಯಾ ಮತ್ತು ಗೋ ಮಾಂಸ ಮಾರಾಟ ನಿಷೇಧಗಳು ಹಾಗೂ ಗೋ ರಕ್ಷಣೆಯ ಹೆಸರಿನಲ್ಲಿ ಪುಂಡಾಟಿಕೆ ಮತ್ತು ಹಿಂಸಾಚಾರಗಳನ್ನು ನಡೆಸುವವರ ಹಾವಳಿಯಿಂದಾಗಿ ಈ ಮಾರುಕಟ್ಟೆಯೇ ಸಂಪೂರ್ಣವಾಗಿ ಕುಸಿದು ಬೀಳುವಂತಾಯಿತು. ಜಾನುವಾರುಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದರಿಂದ ಬೀಡಾಡಿ ಹಸು- ದನಗಳ ಸಂಖ್ಯೆ  ಹೆಚ್ಚುತ್ತಿದ್ದು ಅವು ರೈತರ ಬೆಳೆಯನ್ನೂ ನಾಶಮಾಡುತ್ತಿವೆ. ಇದನ್ನು ನಿಯಂತ್ರಿಸಬೇಕೆಂಬುದು ಸಹ ರಾಜಸ್ಥಾನದ ರೈತರ ಬೇಡಿಕೆಗಳಲ್ಲಿ ಒಂದಾಗಿತ್ತು. ಮೂರನೆಯದಾಗಿ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಸಣ್ಣ ಉತ್ಪಾದಕರು ಮತ್ತು ಸೇವಾ ಪೂರೈಕೆದಾರರ ಭವಿಷ್ಯಕ್ಕೆ ದೊಡ್ಡ ಪೆಟ್ಟುಕೊಟ್ಟಿದ್ದು ರೈತಾಪಿಯ ಹೊರಾಟಕ್ಕೆ ಮತ್ತಷ್ಟು ಬೆಂಬಲ ಹರಿದು ಬರುವಂತಾಯಿತು. ಅಷ್ಟು ಮಾತ್ರವಲ್ಲದೆ ಜಿಎಸ್‌ಟಿಯಿಂದ ರೈತಾಪಿಯ ಹೂಡಿಕಾ ವೆಚ್ಚವೂ ಹೆಚ್ಚಾಗಲಿದೆ. ಈ ಸದ್ಯಕ್ಕೆ ಈ ಮೂರೂ ತಥಾಕಥಿತ ಸುಧಾರಣೆಗಳ ಬಗ್ಗೆ ಸಾರ್ವಜನಿಕ ಚರ್ಚೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದಂತೆ ಕಾಣುತ್ತಿದ್ದರೂ ವಾಸ್ತವದಲ್ಲಿ ಅದರಿಂದ ಉಂಟಾಗುತ್ತಿರುವ ಪರಿಣಾಮಗಳು ಈ ಗ್ರಹಿಕೆಗಳನ್ನು ಬಹಳ ಬೇಗ ಬದಲಿಸಲಿವೆ.

ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ಘೋಷಿಸಲಾಗಿರುವ ಸಾಲಮನ್ನಾಗಳು ಆಯಾ ವಿಧಾನಸಭಾ ಚುನಾವಣೆಗಳಲ್ಲಿ ನೀಡಲಾದ ಭರವಸೆಗಳ ಭಾಗವಾಗಿ ಜಾರಿಗೆ ಬಂದ ಯೋಜನೆಗಳಾಗಿವೆ. ಅವುಗಳನ್ನು ಹೊರತುಪಡಿಸಿ ನೋಡಿದಲ್ಲಿ, ಈ ಗ್ರಾಮೀಣ-ಕೃಷಿ ಪ್ರತಿರೋಧದ ಅಲೆಯನ್ನು ಸಂಘಟಿಸಿ ಪ್ರತಿನಿಧಿಸಿದ ಏಕೈಕ ವಿರೋಧ ಪಕ್ಷವೆಂದರೆ ಸಿಪಿಎಂ ಪಕ್ಷವಾಗಿದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ನಡೆದ ಸಾಮೂಹಿಕ ಧರಣಿಗಳು, ರೂಪಿಸಲಾದ ಹಕ್ಕೊತ್ತಾಯಗಳು, ಸರ್ಕಾರದೊಂದೊಗೆ ನಡೆಸಿದ ಮಾತುಕತೆಗಳಲ್ಲಿ ಆಲ್ ಇಂಡಿಯಾ ಕಿಸಾನ್ ಸಭ (ಎಐಕೆಎಸ್) ಮುಂಚೂಣಿಯಲ್ಲಿದ್ದು, ಇದೀಗ ಹರ್ಯಾಣದಲ್ಲೂ ಹೋರಾಟವನ್ನು ಮುನ್ನೆಡೆಸಲು ಅಣಿಯಾಗುತ್ತಿದೆ. ಈ ಅಸಂಘಟಿತ ಮತ್ತು ಅನೌಪಚಾರಿಕ ಉದ್ಯೋಗಗಳ ಯುಗದಲ್ಲಿ ಸಾಂಪ್ರದಾಯಿಕ ಟ್ರೇಡ್ ಯೂನಿಯನ್ ಹೋರಾಟಗಳು ಗರಿಗೆದರುತ್ತಾ ಕಾರ್ಮಿಕ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಬಗ್ಗಿಸಿರುವ ಈ ಪರಿ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಈ ಹೋರಾಟಗಳನ್ನು ರಾಜಕೀಯ ಗಳಿಕೆಯಾಗಿ ಪರಿವರ್ತಿಸಿಕೊಂಡು ಕುಸಿಯುತ್ತಲೇ ಇರುವ ತನ್ನ ಚುನಾವಣಾ ಸಾಧನೆಗಳನ್ನು ಉತ್ತಮಪಡಿಸಿಕೊಳ್ಳುವುದು ಹೇಗೆ ಎಂಬುದೇ ಇಂದು ಎಡಪಕ್ಷಗಳ ಮುಂದಿರುವ ಸವಾಲಾಗಿದೆ. ಮತ್ತೊಂದುಕಡೆ  ತನ್ನ ನವ ಭಾರತ ದ ಪರಿಪ್ರೇಕ್ಷ್ಯದಲ್ಲಿ ಗ್ರಾಮೀಣವನ್ನು ಹೇಗೆ ಒಳಗೊಳ್ಳುವುದು ಎಂಬುದೇ ಬಿಜೆಪಿಯ ಮುಂದಿರುವ ಸವಾಲಾಗಿದೆ. 

 ಕೃಪೆ:        Economic and Political Weekly                                                                                     ಅನು: ಶಿವಸುಂದರ್

 

                         

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...