ಮದ್ರಸಾ ಸಮೀಕ್ಷೆ ನಡೆಸುವ ನೆಪದಲ್ಲಿ ಮುಸ್ಲಿಮರಿಗೆ ಬಿಜೆಪಿ ಭೀತಿಯೊಡ್ಡುತ್ತಿದೆ; ಮಾಯಾವತಿ

Source: Vb | By I.G. Bhatkali | Published on 10th September 2022, 11:25 AM | National News |

ಹೊಸದಿಲ್ಲಿ: ಬಿಜೆಪಿಯು ಸಮೀಕ್ಷೆಯ ನೆಪದಲ್ಲಿ ಉತ್ತರ ಪ್ರದೇಶದಲ್ಲಿ ಖಾಸಗಿ ಮದ್ರಸಾಗಳ ನಿರ್ವಹಣೆಯಲ್ಲಿ ಮಧ್ಯಪ್ರವೇಶಿಸುತ್ತಿದೆ ಮತ್ತು ಮುಸ್ಲಿಮರಿಗೆ ಭೀತಿಯನ್ನೊಡ್ಡುತ್ತಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರು ಶುಕ್ರವಾರ ಆರೋಪಿಸಿದರು.

'ಮುಸ್ಲಿಮ್ ಸಮುದಾಯವನ್ನು ಶೋಷಿಸಲಾಗುತ್ತಿದೆ, ನಿರ್ಲಕ್ಷಿಸಲಾಗುತ್ತಿದೆ ಮತ್ತು ಗಲಭೆಗಳಿಂದ ಅವರು ತತ್ತರಿಸುತ್ತಿದ್ದಾರೆ ಎಂಬ ದೂರುಗಳು ಕಾಂಗ್ರೆಸ್ ಕಾಲದಿಂದಲೂ ಸಾಮಾನ್ಯವಾಗಿವೆ ಮತ್ತು ತುಷ್ಟಿಕರಣದ ಹೆಸರಿನಲ್ಲಿ ಸಂಕುಚಿತ ರಾಜಕೀಯವನ್ನು ಮಾಡುವ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿಯು ಈಗ ಮುಸ್ಲಿಮರನ್ನು ದಮನಿಸುತ್ತಿದೆ ಮತ್ತು ಅವರಿಗೆ ಬೆದರಿಕೆಯನೊಡುತ್ತಿದೆ. ಇದು ದುಃಖಕರ ಮತ್ತು ಖಂಡನೀಯವಾಗಿದೆ' ಎಂದು ಮಾಯಾವತಿ ಟ್ವೀಟಿಸಿದ್ದಾರೆ.

ಉ.ಪ್ರದೇಶದ ಮದ್ರಸಾಗಳ ಕುರಿತು ಬಿಜೆಪಿಯು ದುಷ್ಟ ಉದ್ದೇಶವೊಂದನ್ನು ಹೊಂದಿದೆ. ಸಮೀಕ್ಷೆಯ ಹೆಸರಿನಲ್ಲಿ ಸಮುದಾಯದ ದೇಣಿಗೆಗಳಿಂದ ನಡೆಯುವ ಖಾಸಗಿ ಮದ್ರಸಾಗಳ ನಿರ್ವಹಣೆಯಲ್ಲಿ ಮಧ್ಯಪ್ರವೇಶಿಸುವ ಪ್ರಯತ್ನಗಳು ಸೂಕ್ತವಲ್ಲ. ಅವರು ಸರಕಾರಿ ಮತ್ತು ಸರಕಾರಿ ಅನುದಾನಿತ ಮದ್ರಸಾಗಳ ಸ್ಥಿತಿಯನ್ನು ಉತ್ತಮಗೊಳಿಸಲು ಗಮನವನ್ನು ಕೇಂದ್ರೀಕರಿಸಬೇಕು ಎಂದು ಮಾಯಾವತಿ ಹೇಳಿದ್ದಾರೆ.

ಶಿಕ್ಷಕರ ಸಂಖ್ಯೆ, ಪಠ್ಯಕ್ರಮ ಮತ್ತು ಲಭ್ಯ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ರಾಜ್ಯದಲ್ಲಿಯ ಮಾನ್ಯತೆ ಹೊಂದಿರದ ಮದ್ರಸಾಗಳ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಉ.ಪ್ರ. ಸರಕಾರವು ಇತ್ತೀಚೆಗೆ ಪ್ರಕಟಿಸಿತ್ತು.

ಮದ್ರಸಾಗಳಲ್ಲಿಯ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳ ಲಭ್ಯತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಗತ್ಯಕ್ಕೆ ಅನುಗುಣವಾಗಿ ಸರಕಾರವು ಸಮೀಕ್ಷೆಯನ್ನು ನಡೆಸಲಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯಸಚಿವ ದಾನಿಷ್ ಆಝಾದ್ ಅನ್ಸಾರಿ ಹೇಳಿದರು.

ಸಮೀಕ್ಷೆಯ ಬಳಿಕ ನೂತನ ಮದ್ರಸಾಗಳಿಗೆ ಮಾನ್ಯತೆ ನೀಡುವ ಪ್ರಕ್ರಿಯೆಯನ್ನು ರಾಜ್ಯ ಸರಕಾರವು ಆರಂಭಿಸಲಿದೆಯೇ ಎಂಬ ಪ್ರಶ್ನೆಗೆ ಅನ್ಸಾರಿ, ಕೇವಲ ಮಾನ್ಯತೆ ಹೊಂದಿರದ ಮದ್ರಸಾಗಳ ಕುರಿತು ಮಾಹಿತಿಗಳನ್ನು ಸಂಗ್ರಹಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಉತ್ತರಿಸಿದರು.

ಸಮೀಕ್ಷೆ ಕ್ರಮವನ್ನು ಇತ್ತೀಚೆಗೆ ಟೀಕಿಸಿದ್ದ ಜಮೀಯತ್ ಉಲಮಾ-ಇ-ಹಿಂದ್, ಇದು ಶಿಕ್ಷಣ ವ್ಯವಸ್ಥೆಗೆ ಕೆಟ್ಟ ಹೆಸರು ತರುವ ದುರುದ್ದೇಶಪೂರಿತ ಪ್ರಯತ್ನವಾಗಿದೆ ಎಂದು ಹೇಳಿತ್ತು.

ಪ್ರಸಕ್ತ ಉ.ಪ್ರದೇಶದಲ್ಲಿ ಒಟ್ಟು 16,461 ಮದ್ರಸಾಗಳಿದ್ದು, ಈ ಪೈಕಿ 560 ಸರಕಾರಿ ಅನುದಾನಗಳನ್ನು ಪಡೆಯುತ್ತಿವೆ.

ರಾಜ್ಯದಲ್ಲಿ ಕಳೆದ ಆರು ವರ್ಷಗಳಲ್ಲಿ ನೂತನ ಮದ್ರಸಾಗಳನ್ನು ಅನುದಾನ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...